ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗಿಲ್ಲ ಬೆಲೆ!

2603

ರೂಪಾ ಎತ್ತಂಗಡಿ ಮಾಡಿಸಿದ ಕಾಣದ “ಕೈ” ಯಾವುದು?

ಕೊನೆಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ನಾವು ಪ್ರಾಮಾಣಿಕ ಅಧಿಕಾರಿಗಳನ್ನು ಬಿಡುವುದಿಲ್ಲ ಎಂದು ಸಾಬೀತು ಪಡಿಸಿದೆ. ರಾಜ್ಯ ಸರಕಾರದ ಈ ವರ್ತನೆಗೆ ತಾಜಾ ಉದಾಹರಣೆ ಕಾರಾಗ್ರಹ ಇಲಾಖೆಯ ಡಿಐಜಿಯಾಗಿದ್ದ ಶ್ರೀಮತಿ ಡಿ ರೂಪಾ ಅವರನ್ನು ಆ ಪೋಸ್ಟಿನಿಂದ ಎತ್ತಂಗಡಿ ಮಾಡಿ ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆಯ ವ್ಯವಸ್ಥೆಗೆ ಎತ್ತಂಗಡಿ ಮಾಡಲಾಗಿದೆ. ಈ ಮೂಲಕ ನೀವು ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ ನಿಮ್ಮ ಪ್ರಾಮಾಣಿಕತನ ಮನೆಯಲ್ಲಿರಲಿ, ಅದನ್ನು ಕೆಲಸದ ಸ್ಥಳದಲ್ಲಿ ತೋರಿಸಬೇಡಿ ಎಂದು ರಾಜ್ಯ ಸರಕಾರ ಪರೋಕ್ಷವಾಗಿ ತಾಕೀತು ಮಾಡಿದ್ದಂತೆ ಆಗಿದೆ. ಅಷ್ಟಕ್ಕೂ ರೂಪಾ ಅವರು ಮಾಡಿದ್ದೇನು?

ಸಿಂಪಲ್, ಕಾರಾಗ್ರಹದ ಡಿಜಿಪಿ ಸತ್ಯ ನಾರಾಯಣ ರಾವ್ ಅವರು ತಮಿಳುನಾಡಿನ ಮಾಜಿ ಸಿಎಂ ಆಪ್ತೆ ಶಶಿಕಲಾ ಅವರಿಂದ 2 ಕೋಟಿ ರೂಪಾಯಿ ಲಂಚ ಪಡೆದು ಜೈಲಿನೊಳಗೆ ಒಳ್ಳೆಯ ಸೌಲಭ್ಯಗಳನ್ನು ಕೊಡುತ್ತಿದ್ದಾರೆ ಎಂದು ರೂಪಾ ಆರೋಪಿಸಿದ್ದರು. ಅದರಿಂದಲೇ ಈಗ ಅವರ ತಲೆದಂಡವಾಗಿದೆ ಹಾಗೂ ಸತ್ಯನಾರಾಯಣ ರಾವ್ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಸತ್ಯನಾರಾಯಣ ರಾವ್ ಅವರು “ಸೌಲಭ್ಯಕ್ಕಾಗಿ ಲಂಚ” ತೆಗೆದುಕೊಂಡಿದ್ದಾರೋ ಇಲ್ಲವೋ ಎನ್ನುವುದು ಮೊದಲ ವಿಷಯ. ಅದರೊಂದಿಗೆ ಯಾವುದೇ ಅಧಿಕಾರಿ ಲಂಚವನ್ನು ತೆಗೆದುಕೊಂಡು ಸೌಲಭ್ಯ ಕೊಡಬೇಕು ಎಂದರೆ ಅದರ ಪಾಲು ದೊಡ್ಡಮಟ್ಟದಲ್ಲಿ ಆ ಇಲಾಖೆಯ ಹೊಣೆ ಹೊತ್ತುಕೊಂಡಿರುವ ಸಚಿವರಿಗೆ ಮತ್ತು ರಾಜ್ಯವನ್ನು ಆಳುವವರಿಗೆ ಹೋಗಿಯೇ ಹೋಗುತ್ತದೆ. ಆದ್ದರಿಂದ ಈಗ ಉಳಿದಿರುವ ಪ್ರಶ್ನೆ, ರೂಪಾ ಅವರ ಬಳಿ ಸತ್ಯನಾರಾಯಣ ರಾವ್ ಅವರು ಲಂಚ ತೆಗೆದುಕೊಂಡದ್ದಕ್ಕೆ ಸಾಕ್ಷಿ ಇದೆಯಾ ಎನ್ನುವುದು. ಸಾಕ್ಷಾಧಾರಗಳು ಇಲ್ಲದೆ ಹೀಗೆ ಓರ್ವ ಐಪಿಎಸ್ ಅಧಿಕಾರಿ ತನ್ನ ಮೇಲಾಧಿಕಾರಿಯ ಮೇಲೆ ಆರೋಪ ಹಾಕುವುದಿಲ್ಲ. ಯಾಕೆಂದರೆ ಹಾಗೆ ಸುಳ್ಳು ಆರೋಪ ಹಾಕಿದರೆ ಅದರಿಂದ ತೊಂದರೆಯಾಗುವುದು ಇವರ ಕೆರಿಯರ್ ಗೆ ಮಾತ್ರ ಎನ್ನುವುದು ಆರೋಪ ಹಾಕುತ್ತಿರುವವರಿಗೆ ಗೊತ್ತಿದೆ. ಹಾಗಾದರೆ ಹಾಕಿರುವ ಆರೋಪದಲ್ಲಿ ಸತ್ಯಾಂಶ ಖಂಡಿತ ಇರಬಹುದು. ಈಗ ಆ ಆರೋಪವನ್ನು ತನಿಖೆ ಮಾಡಲು ಶುರು ಮಾಡಿದರೆ ಅದರ ಮೂಲ ಎಲ್ಲಿಯಾದರೂ ರಾಜಕಾರಣದ ಪಡಸಾಲೆಯಲ್ಲಿ ಇರುವವರತ್ತ ಬೆರಳು ತೋರಿಸುತ್ತದೆ ಎನ್ನುವುದು ಟ್ರಾನ್ಸಫರ್ ಮಾಡಲು ಒತ್ತಡ ಹಾಕಿದ ಕೈಗಳಿಗೆ ಗೊತ್ತಿರುವ ಸಂಗತಿ. ಹಾಗಾಗಿ ಅದನ್ನು ತಪ್ಪಿಸಲು ಹೀಗೆ ಪ್ರಾಮಾಣಿಕರನ್ನು ಎತ್ತಂಗಡಿ ಮಾಡಲಾಗುತ್ತದೆ.

ಪೊಲೀಸ್ ಇಲಾಖೆ ಸಹಿತ ಯಾವುದೇ ಇಲಾಖೆಯಲ್ಲಿ ಹೀಗೆ ವಿವಾದ, ಆರೋಪಗಳು ಉದ್ಘವಿಸಿದಾಗ ಆರೋಪ ಹಾಕಿದವರನ್ನು ಮತ್ತು ಆರೋಪಕ್ಕೆ ಒಳಗಾದವರನ್ನು ಬೇರೆ ಜವಾಬ್ದಾರಿಗೆ ಅಥವಾ ರಜೆಯ ಮೇಲೆ ಕಳುಹಿಸುವುದು ಮೊದಲ ಬಾರಿಯೇನಲ್ಲ. ಆದರೆ ಅವರನ್ನು ಬೇರೆ ಕಳುಹಿಸುವ ಮೂಲಕ ಮೂಲ ಸಾಕ್ಷಾಧಾರಗಳನ್ನು ಮುಚ್ಚಿಹಾಕುವ ಕೆಲಸ ನಡೆಯಬಾರದು ಎನ್ನುವುದು ಸಹೃದಯಿ ನಾಗರಿಕರ ಕೋರಿಕೆ.

ರೂಪಾ ಹಾಕಿರುವ ಆರೋಪದ ತನಿಖೆಯಾಗಬೇಕು. ಸತ್ಯನಾರಾಯಣ ರಾವ್ ಅವರಿಗೆ ಹಾಗೆ ಲಂಚ ತೆಗೆದುಕೊಳ್ಳಲು ಪ್ರೇರೆಪಿಸಿದ ರಾಜಕಾರಣಿ ಮತ್ತು ಪಾಲು ತೆಗೆದುಕೊಂಡ ರಾಜಕಾರಣಿಗಳ ಹೆಸರು ಕೂಡ ಬಹಿರಂಗಗೊಳ್ಳಬೇಕು. ಇಲ್ಲಿ ಇನ್ನೊಂದು ಸಾಧ್ಯತೆ ಕೂಡ ಇದೆ, ಅದೇನೆಂದರೆ ತಮಗೆ ಅದರಲ್ಲಿ ಪಾಲು ಸಿಗದ ಬೇರೆ ಸಚಿವರು ರೂಪಾ ಅವರನ್ನು ಪ್ರೇರೆಪಿಸಿ ತಮ್ಮ ದಾಳವನ್ನು ಮಾಡಿಕೊಂಡು ತಮ್ಮದೇ ಪಕ್ಷದ ಇನ್ನೊಬ್ಬ ಸಚಿವರನ್ನು ತೊಂದರೆಗೆ ಸಿಲುಕಿಸಿದರಾ? ಎನ್ನುವುದು ಕೂಡ “ತನಿಖೆ” ಆದರೆ ಸತ್ಯ ಹೊರಗೆ ಬರುತ್ತದೆ. ಇನ್ನು ಶಶಿಕಲಾ ಅವರ ಮಟ್ಟಿಗೆ ಎರಡು ಕೋಟಿ ತುಂಬಾ ಚಿಕ್ಕ ಮೊತ್ತ. ಬಹುಶ: ಡೀಲಿಂಗ್ ದೊಡ್ಡ ಮಟ್ಟದಲ್ಲಿ ನಡೆದಿರಬಹುದು ಅದರೊಂದಿಗೆ ತೆಲಗಿ ಪ್ರಕರಣದಲ್ಲಿ ಸ್ವತ: ಬೇರೆ ಬೇರೆ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದರಿಂದ ಅದರಿಂದ ಹೊಸತನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

LEAVE A REPLY