ಸತ್ಯಜಿತ್ ಸುರತ್ಕಲ್ ಅವರನ್ನು ಬಂಧಿಸಿದರೆ ಉಳ್ಳಾಲದಲ್ಲಿ ಖಾದರ್ ಸೇಫ್!

22440

ಸತ್ಯಜಿತ್ ಸುರತ್ಕಲ್ ಅವರ ಮನೆಗೆ ಮಧ್ಯರಾತ್ರಿ ಪೊಲೀಸರು ನುಗ್ಗಿ ಅವರನ್ನು ಬಂಧಿಸಲು ಇಡೀ ಮನೆಯನ್ನು ಜಾಲಾಡಿದರು. ಸತ್ಯಜಿತ್ ಸುರತ್ಕಲ್ ಸಿಗಲಿಲ್ಲ. ಹೆಂಗಸರು ಇರುವ ಮನೆಯನ್ನು ಶೋಧಿಸಲು ಹೊರಡುವ ಪೊಲೀಸರು ಅವರೊಂದಿಗೆ ಕನಿಷ್ಟ ಓರ್ವ ಮಹಿಳಾ ಪೊಲೀಸ್ ಕಾನ್ಸಟೇಬಲ್ ಅವರನ್ನು ಕರೆದುಕೊಂಡು ಹೋಗಬೇಕಾಗಿರುವುದು ನಿಯಮ. ಆದರೆ ಕರೆದುಕೊಂಡು ಹೋಗಿರಲಿಲ್ಲ, ಇದನ್ನು ಸತ್ಯಜಿತ್ ಅವರ ಪತ್ನಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಹರೀಶ್ ಪೂಂಜಾ, ಶರಣ್ ಪಂಪ್ ವೆಲ್, ಪ್ರದೀಪ್ ಪಂಪ್ ವೆಲ್, ಮುರಳಿಕೃಷ್ಣ ಹಂಸತಡ್ಕ ಮುಂತಾದ ಸಂಘಪರಿವಾರದ ಯುವಕರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಸಿಕ್ಕಿದೆ. ಈ ಮೂಲಕ ಶೀಘ್ರದಲ್ಲಿ ತಾವು ಯಾರನ್ನೂ ಅಂದರೆ ಯಾವ ಹಿಂದೂ ಮುಖಂಡರನ್ನು ಕೂಡ ಬಿಡುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ರಾಜ್ಯಕ್ಕೆ ಅದರಲ್ಲಿಯೂ ಮುಸಲ್ಮಾನರಿಗೆ ಕೊಡಲಾಗಿದೆ. ಈ ಮೂಲಕ ಮತ್ತೆ ಅಧಿಕಾರಕ್ಕೆ ಬಂದರೆ ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಬಂಧಿಸುತ್ತೇವೆ ಎಂದು ಹೇಳಲು ಒಂದು ಅವಕಾಶವನ್ನು ಕಾಂಗ್ರೆಸ್ ಸೃಷ್ಟಿಸಿಕೊಂಡಿದೆ.

ಕಾಂಗ್ರೆಸ್ ಮೃಧು ಹಿಂದೂತ್ವದ ಧೋರಣೆಯನ್ನು ಹೊಂದಿದೆ ಎಂದು ಕಳೆದ ಕೆಲವು ತಿಂಗಳುಗಳಿಂದ ಎಸ್ಡಿಪಿಐ, ಪಿಎಫ್ಐ ಮುಖಂಡರು ಹೇಳುತ್ತಲೇ ಬರುತ್ತಿದ್ದರು. ಈ ಮೂಲಕ ನಿರಂತರವಾಗಿ ಕಾಂಗ್ರೆಸ್ಸನ್ನು ಕೆಣಕುತ್ತಲೇ ಬರುತ್ತಿದ್ದರು. ಇಂತಹ ಹೇಳಿಕೆ ಕೊಟ್ಟು ತಾವು ಮುಸಲ್ಮಾನರಲ್ಲಿ ಹೀರೋ ಆಗುವ ಕನಸನ್ನು ಕಾಣುತ್ತಲೇ ಇದ್ದರು. ಒಂದು ವೇಳೆ ತಮ್ಮ ಮಾತನ್ನು ಕಾಂಗ್ರೆಸ್ ತಕ್ಷಣ ಸುಳ್ಳು ಮಾಡಲು ಯಾವುದಾದರೂ ಹಿಂದೂ ನಾಯಕರನ್ನು ಬಂಧಿಸಿಯೇ ಬಂಧಿಸುತ್ತದೆ ಎನ್ನುವುದು ಅವರ ಉದ್ದೇಶವಾಗಿತ್ತು. ಎಸ್ಡಿಪಿಐಯಂತಹ ಸಂಘಟನೆಗಳಿಗೆ ಹಿಂದೂ ಮುಖಂಡರನ್ನು ಬಂಧಿಸುವುದರಿಂದ ಆಗಬೇಕಾಗಿರುವುದು ಏನೂ ಇಲ್ಲ. ಆದರೆ ಕಾಂಗ್ರೆಸ್ ಹಿಂದೂಗಳನ್ನು ಬಂಧಿಸುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಬಗ್ಗೆ ಮುಸಲ್ಮಾನರಿಗೆ ಇರುವ ಕೋಪವನ್ನು ಎನ್ ಕ್ಯಾಶ್ ಮಾಡಲು ಅದು ಪ್ರಯತ್ನಿಸುತ್ತಲೇ ಇರುತ್ತದೆ. ಒಂದು ವೇಳೆ ಯಾವುದಾದರೂ ತಳಮಟ್ಟದ ಹಿಂದೂ ಯುವಕರನ್ನು ಬಂಧಿಸಿದರೆ ಆಗಲೂ ಎಸ್ಡಿಪಿಐ, ಪಿಎಫ್ಐ ಏನು ಹೇಳುತ್ತಿತ್ತು ಎಂದರೆ ದೊಡ್ಡ ನಾಯಕರನ್ನು ಬಂಧಿಸಲು ಧೈರ್ಯ ಇಲ್ಲ. ಅದಕ್ಕೆ ಪಾಪದ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಅದೇ ಹಿಂದೂ ಸಂಘಟನೆಯ ಮುಖಂಡರನ್ನು ಬಂಧಿಸಿದರೆ ಅವರಿಗೆ ಗ್ಯಾರಂಟಿ ಗೊತ್ತು, ಮತ್ತೊಮ್ಮೆ ಸಂಘಟನೆಯ ಹುಡುಗರು ಬೀದಿಗೆ ಇಳಿಯುತ್ತಾರೆ. ಅದರಿಂದ ಮತ್ತೆ ಆಂತರಿಕ ಕ್ಷೊಭೆ ಉಂಟಾಗುತ್ತದೆ. ಆಗ ಮತ್ತೆ ರಾಜ್ಯ ಸರಕಾರವನ್ನು ತೆಗಳಲು ವಿಷಯ ಸಿಕ್ಕಿದಂತೆ ಆಗುತ್ತದೆ. ಆದರೆ ಎಸ್ ಡಿಪಿಐ, ಮುಸ್ಲಿಂ ಲೀಗ್ ಪಕ್ಷಗಳ ಈ ತಂತ್ರವನ್ನು ಅರಿಯದ ಕಾಂಗ್ರೆಸ್ ಗಲಾಟೆಯಲ್ಲಿ ಇಲ್ಲದಿದ್ದರೂ ಪರವಾಗಿಲ್ಲ, ದೊಡ್ಡ ದೊಡ್ಡ ನಾಯಕರನ್ನು ಬಂಧಿಸಿ ಎಂದು ಬೆಂಗಳೂರಿನಲ್ಲಿ ಕುಳಿತು ಮುಖ್ಯಮಂತ್ರಿಗಳು ಪೊಲೀಸರಿಗೆ ಸೂಚನೆ ಕೊಡುತ್ತಾರೆ. ಆದರೆ ಯಾವ ನಾಯಕರನ್ನು ಬಂಧಿಸುವುದು ಎನ್ನುವ ಪಟ್ಟಿಯನ್ನು ಮಾಡುವುದು ಯಾರು?

ಅದಕ್ಕೆ ಎರಡು ಸಚಿವರು ಕುಳಿತು ತಮಗೆ ಮುಂದಿನ ಬಾರಿ ಯಾವ ನಾಯಕನಿಂದ ಗೆಲ್ಲಲು ಸಂಚಕಾರ ಇದೆ ಎಂದು ಲೆಕ್ಕ ಹಾಕುತ್ತಾರೆ. ಆಗ ಮೊದಲು ಕಂಡು ಬರುವ ಹೆಸರು ಸತ್ಯಜಿತ್ ಸುರತ್ಕಲ್. ಉಳ್ಳಾಲ ಅಂದರೆ ಮಂಗಳೂರು ವಿಧಾನಸಭಾ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯಥರ್ಿ ಎಂದೆ ಗುರುತಿಸಲಾಗಿರುವ ಸತ್ಯಜಿತ್ ಅವರನ್ನು ಹೆಡೆಮುರಿ ಕಟ್ಟಿ ಒಳಗೆ ಹಾಕಿದರೆ ಅವರ ಮೇಲೆ ಐಪಿಸಿ 307 ಸೆಕ್ಷನ್ ಹಾಕಿದರೆ ತನಗೆ ಸುಲಭವಾಗುತ್ತದೆ ಎಂದು ಅಂದುಕೊಂಡಿರುವ ಸನ್ಮಾನ್ಯ ಆಹಾರ ಸಚಿವ ಯು. ಟಿ. ಖಾದರ್ ಈ ದಾಳವನ್ನು ಯಶಸ್ವಿಯಾಗಿ ಉರುಳಿಸಿದ್ದಾರೆ. ಈ ಮೂಲಕ ತನ್ನ ಕ್ಷೇತ್ರದ ಮೇಲೆ ಕಣ್ಣು ಹಾಕುವ ವ್ಯಕ್ತಿಯನ್ನು ತಾನು ಯಾವ ಕಾರಣಕ್ಕೂ ಬಿಡುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

LEAVE A REPLY