ಮಂಗಳೂರಿನ ಮುಸ್ಲಿಮರ “ಕೈ”ಗೆ ಕಲರ್ ಕಾಗೆ ಇಟ್ಟ ಕಾಂಗ್ರೆಸ್
ಹಿಂದೆ ಕಾಂಗ್ರೆಸ್ಸಿನಲ್ಲಿ ಒಂದು ಮಾತು ಚಲಾವಣೆಯಲ್ಲಿತ್ತು. “ಮುಸ್ಲಿಮರೇನು ಬುದ್ಧಿವಂತರಲ್ಲ, ಅವರಿಗೇನೂ ಗೊತ್ತಾಗಲ್ಲ ಬಿಡಿ”..
ಕಾಲ ಬದಲಾದಂತೆ ಯುವ ಮುಸ್ಲಿಂ ನಾಯಕರು ಕಾಂಗ್ರೆಸ್ ಸೇರಿದರು. ಒಬ್ಬರಾದ ಮೇಲೆ ಒಬ್ಬರು ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿ ಬೆಳೆಯಲಾರಂಭಿಸಿದರು. ಆದರೆ ಕಾಂಗ್ರೆಸ್ ನಲ್ಲಿ ಈಗಾಗಲೇ ಪ್ರಬಲವಾಗಿರುವ ನಾಯಕರಿಗೆ ಇದು ಅಪಾಯಕಾರಿ ಮುನ್ಸೂಚನೆ ಆಗಿ ಪರಿಣಮಿಸಿತೇನೋ, ಬೆಳೆಯುತ್ತಿದ್ದ ಯುವ ಮುಸ್ಲಿಮರನ್ನು ಚಿವುಟಿ ಹಾಕಿದರು. ಪರಿಣಾಮವಾಗಿ ಸಮರ್ಥರು ಮೂಲೆ ಗುಂಪಾಗಿ ಓಟು ಹಾಕೋಕೆ ಮಾತ್ರ ಉಪಯೋಗವಾದರು.
ಆದರೂ ಛಲ ಬಿಡದೇ ಮಂಗಳೂರಿನ ಮೇಯರ್ ಗದ್ದುಗೆವರೆಗೆ ತಲುಪಿದ ಖ್ಯಾತಿ ಅಶ್ರಫ್ ರದ್ದು. ಆದರೆ ಸಮುದ್ರದ ಅಲೆಗೆ ವಿರೋಧವಾಗಿ ಎಷ್ಟು ಸಮಯ ಈಜಬಹುದು? ಅಶ್ರಫ್ ರನ್ನು ರಾಜಕೀಯವಾಗಿ ಮುಗಿಸೇ ಬಿಟ್ಟರು ಶಾಸಕ ಲೋಬೋ. ಕಾಂಗ್ರೆಸ್ ಪಕ್ಷಕ್ಕಾಗಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದ ಅಶ್ರಫ್ ಕಾಂಗ್ರೆಸ್ಸನ್ನೇ ಬಿಟ್ಟು ಜೆಡಿಎಸ್ ಸೇರ್ಪಡೆಯಾಗುವಂತಾಯಿತು. ಅಲ್ಲಿಗೆ ಮುಸ್ಲಿಂ ಧ್ವನಿಯೊಂದರ ಸದ್ದಡಗಿತು. ಈಗ ಕಾಂಗ್ರೆಸ್ಸಿನಲ್ಲಿ ಮುಸ್ಲಿಮರ ಯಾವ ಆಟವೂ ನಡೆಯುವುದಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿದ್ದು ಇತ್ತೀಚಿನ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹುದ್ದೆಯ ಲಾಬಿ.
ನ್ಯಾಯವಾಗಿ ಮುಸ್ಲಿಮರಿಗೆ ಸಿಗಬೇಕಾಗಿದ್ದ ಮೇಯರ್ ಸ್ಥಾನವನ್ನು ರಮಾನಾಥ ರೈ, ಯು.ಟಿ.ಖಾದರ್ ಹಾಗೂ ಶಾಸಕ ಲೋಬೋ ಅವರು ಕುತಂತ್ರದಿಂದ ಕಿತ್ತುಕೊಂಡು ಮೊಯ್ಲಿಗೆ ನೀಡಿದ್ದಾರೆ ಎಂದು ಮುಸ್ಲಿಂ ಕಾರ್ಯಕರ್ತರ ಬೇಸರದಲ್ಲಿದ್ದರೆ, ಇದು ತಮ್ಮ ಸಮುದಾಯಕ್ಕಾದ ಅವಮಾನ ಎಂದು ರಾಜೀನಾಮೆ ನೀಡಿದ್ದಾರೆ ಯುವ ಕಾಂಗ್ರೆಸ್ ಪ್ರಭಾವೀ ಮುಸ್ಲಿಂ ಮುಖಂಡರಾದ ಮಹಮ್ಮದ್ ಶಾಹಿಕ್. ಅಲ್ಲದೇ ಮುಂದಿನ ದಿನಗಳಲ್ಲಿ ತನ್ನೊಂದಿಗೆ ಇನ್ನೂ ನೂರಾರು ಕಾರ್ಯಕರ್ತರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದೂ ಸಹ ಹೇಳಿದ್ದಾರೆ.
ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಕಾಂಗ್ರೆಸ್ ನಾಯಕರು “ಇವರು ರಾಜೀನಾಮೆಗೆ ನೀಡಿದರೂ ಪಕ್ಷಕ್ಕೇನೂ ಡ್ಯಾಮೇಜ್ ಇಲ್ಲ ಬಿಡಿ” ಎಂದು ಒಳಗೊಳಗೆ ಗೊಣಗುತ್ತಿದ್ದಾರೆ.
ಪಕ್ಷದ ನಿಷ್ಠಾವಂತ ಮುಸ್ಲಿಂ ಕಾರ್ಯಕರ್ತರು ಬೇಸರಗೊಂಡಾಗ ಸಮಾಧಾನ ಪಡಿಸುವುದು ಬಿಟ್ಟು ಏನೂ ಡ್ಯಾಮೇಜ್ ಇಲ್ಲ ಬಿಡಿ ಎಂದು ಕೊಂಡರೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿಯೇ ಸಿದ್ಧ ಎಂದು ತೊಡೆತಟ್ಟಿ ನಿಂತಿದ್ದಾರೆ ಈ ಯುವ ಮುಸ್ಲಿಂ ನಾಯಕರು.
ಇದೇ ಅವಕಾಶವನ್ನು ಬಳಸಿಕೊಂಡು ಕಾಂಗ್ರೆಸ್ ನಿಂದ ಹೊರ ಬರುವ ಯುವಕರಿಗೆ ಎಸ್.ಡಿ.ಪಿ.ಐ ಬೆಂಬಲ ನೀಡಿ ಸೆಳೆದುಕೊಳ್ಳುತ್ತಿದೆ. ಇದರಿಂದ ಎಸ್.ಡಿ.ಪಿ.ಐ ಬಲಿಷ್ಠಗೊಳ್ಳುತ್ತಿದೆ.
ಒಟ್ಟಿನಲ್ಲಿ ಮಂಗಳೂರು ಕಾಂಗ್ರೆಸ್ ನಾಯಕರು ಮುಸ್ಲಿಮರಿಗೆ ಮೇಯರ್ ಸ್ಥಾನ ನೀಡುವ ವಿಷಯದಲ್ಲಿ ಸರಿಯಾದ ಹೆಜ್ಜೆ ಇಡದೇ ಮಾಡಿಕೊಂಡ ಎಡವಟ್ಟಿನ ಪರಿಣಾಮ ಇನ್ನೆರಡು ತಿಂಗಳಿನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಭಾರೀ ಆಘಾತ ಅನುಭವಿಸುವುದು ಗ್ಯಾರಂಟಿ ಎಂದು ರಾಜಕೀಯ ವಿಶ್ಲೇಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ.
Leave A Reply