ಕಾಂಗ್ರೆಸ್ ಫ್ಲೆಕ್ಸ್, ಹೋರ್ಡಿಂಗ್ಸ್, ಬ್ಯಾರಿಕೇಡ್ಸ್ ನೀತಿ ಸಂಹಿತೆ ಒಳಗೆ ಬರಲ್ವಾ?
ಚುನಾವಣೆ ಘೋಷಣೆಯಾಗಿ ಐದು ದಿನಗಳಾಗುತ್ತಾ ಬಂತು. ಅತ್ತ ಮತದಾನದ ದಿನಾಂಕ ಘೋಷಣೆಯಾದ ತಕ್ಷಣ ಆಯಾ ಜಿಲ್ಲಾಧಿಕಾರಿಗಳು ಅದೇಶ ಹೊರಡಿಸಿ ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು ತಮ್ಮ ಪ್ರಚಾರಕ್ಕಾಗಿ ಹಾಕಿದ ಫ್ಲೆಕ್ಸ್, ಹೋರ್ಡಿಂಗ್ಸ್ ಗಳನ್ನು ಕೂಡಲೇ ತೆಗೆಯಬೇಕು ಎಂದಿದ್ದಾರೆ. ಆದರೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಗೊತ್ತು. ತಾವು ಹೇಳಿದ ತಕ್ಷಣ ಯಾವ ರಾಜಕೀಯ ಫುಡಾರಿ ಕೂಡ ಸ್ವಯಂಪ್ರೇರಿತವಾಗಿ ಹೋಗಿ ತಮ್ಮ ಹೋರ್ಡಿಂಗ್ಸ್, ಫ್ಲೆಕ್ಸ್ ತೆಗೆಯಲ್ಲ. ಹೆಚ್ಚಿನ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಒಂದೆರಡು ದಿನ ನೋಡುತ್ತಾರೆ. ನಂತರ ತಮ್ಮ ಸಿಬ್ಬಂದಿಗಳನ್ನು ಕರೆದು ತೆಗೆಯಲು ಸೂಚಿಸುತ್ತಾರೆ.
ನಾನು ಹೇಳುವುದೆನೆಂದರೆ ” ನಿಮ್ಮ ಫ್ಲೆಕ್ಸ್, ಹೋರ್ಡಿಂಗ್ಸ್ ನಿಲ್ಲಿಸಲು ನಾವು ಅನುಮತಿ ಕೊಡುತ್ತೇವೆ, ಆದರೆನೀತಿಸಂಹಿತೆ ಜಾರಿಗೆ ಬಂದ ತಕ್ಷಣ ನೀವು ಕೂಡಲೇ ಅದನ್ನು ತೆಗೆಸುವ ವ್ಯವಸ್ಥೆ ಮಾಡಬೇಕು. ನಾವು ಹೇಳುವ ತನಕ ಕಾಯಬಾರದು, ಒಂದು ವೇಳೆ ನೀವು ತೆಗೆಯದಿದ್ದರೆ ನಾವು ತೆಗೆಯುವ ತನಕ ಕಾದರೆ ನಮಗೆ ಆದ ಖರ್ಚಿನ ನಾಲ್ಕು ಪಟ್ಟು ನಾವು ವಸೂಲಿ ಮಾಡುತ್ತೇವೆ” ಎಂದು ಫ್ಲೆಕ್ಸ್ ಹಾಕಿಸಲು ಅನುಮತಿ ಕೇಳಲು ರಾಜಕಾರಣಿಗಳ ಬಾಲಗೋಂಚಿಗಳು ಬರುತ್ತಾರಲ್ಲ, ಆವಾಗಲೇ ಹೇಳಿಬಿಡಬೇಕು. ಒಂದು ವೇಳೆ ಫ್ಲೆಕ್ಸ್, ಹೋರ್ಡಿಂಗ್ಸ್ ಯಾವುದಾದರೂ ಜಾಹೀರಾತು ಏಜೆನ್ಸಿಯವರು ರಾಜಕಾರಣಿಗಳ ಪರವಾಗಿ ನಿಲ್ಲಿಸುವುದಿದ್ದರೆ ಅವರಿಗೂ ಕಟ್ಟುನಿಟ್ಟಿನ ಸೂಚನೆ ಕೊಡಬೇಕು. ಒಂದು ವೇಳೆ ನೀತಿ ಸಂಹಿತೆ ಬಂದ ಕೂಡಲೇ ನೀವು ತೆಗೆಯದಿದ್ದರೆ ನಿಮ್ಮ ಸಂಸ್ಥೆಯ ವಿರುದ್ಧ ನೋಟಿಸ್ ಜಾರಿ ಮಾಡುತ್ತೇವೆ ಎಂದು ಎಚ್ಚರಿಕೆ ಕೊಡಬೇಕು. ಇಲ್ಲದಿದ್ದರೆ ಫ್ಲೆಕ್ಸ್, ಹೋರ್ಡಿಂಗ್ಸ್ ನ ಏಜೆನ್ಸಿಯವರು ಹಣ ತೆಗೆದುಕೊಂಡು ಫ್ಲೆಕ್ಸ್ ನಿಲ್ಲಿಸುವುದು ನಂತರ ಸರಕಾರ ಅದನ್ನು ತೆಗೆಯಲು ಜನರ ತೆರಿಗೆಯ ಹಣ ಖರ್ಚು ಮಾಡುವುದು, ಹೀಗೆ ನಡೆಯುತ್ತಾ ಇರುತ್ತದೆ.
ಐವನ್ ಡಿಸೋಜಾ ಸ್ಟೈಲ್ ಬೇರೆ….
ಕೆಲವು ರಾಜಕಾರಣಿಗಳು ಚಾಪೆಯ ಕೆಳಗೆ ಜಾರಿದರೆ ಐವನ್ ಡಿಸೋಜಾ ಅಂತಹ ಜನಪ್ರತಿನಿಧಿಗಳು ರಂಗೋಲಿಯ ಕೆಳಗೆ ಅಡಗಿ ತಮಾಷೆ ನೋಡುತ್ತಾ ಇರುತ್ತಾರೆ. ಯಾವ ರೀತಿಯಲ್ಲಿ ವಿಭಿನ್ನವಾಗಿ ತಮ್ಮ ಹೆಸರು ಯಾವಾಗಲೂ ಚಾಲ್ತಿಯಲ್ಲಿರಬೇಕು ಎನ್ನುವುದನ್ನು ಐವನ್ ಡಿಸೋಜಾ ಅವರ ಹತ್ತಿರ ಕಲಿಯಬೇಕು. ಎಲ್ಲ ರಾಜಕಾರಣಿಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ಫ್ಲೆಕ್ಸ್, ಹೋರ್ಡಿಂಗ್ಸ್ ನಿಲ್ಲಿಸಿದರೆ ಐವನ್ ಡಿಸೋಜಾ ತಮ್ಮ ಕಿಸೆಯಿಂದ ಒಂದು ರೂಪಾಯಿ ಕೂಡ ಖರ್ಚು ಮಾಡದೇ ಭರಪೂರ ಪ್ರಚಾರ ಪಡೆಯುವುದನ್ನು ನೋಡಿ ಲೋಬೋ ಬೆಂಬಲಿಗರು ಒಳಗೊಳಗೆ ಮತ್ಸರ ಪಡುತ್ತಿದ್ದಾರೆ. “ಸರ್, ನಿಮ್ಮ ಅನುದಾನದಲ್ಲಿಯೂ ಹೀಗೆ ಬ್ಯಾರಿಕೇಡ್ ಗಾಗಿ ಸರಕಾರದಿಂದ ಹಣ ತಂದು ದೊಡ್ಡದಾಗಿ ನಿಮ್ಮ ಹೆಸರು ಬರೆದು ಅಲ್ಲಲ್ಲಿ ನಿಲ್ಲಿಸಿದರೆ ಎಷ್ಟು ಒಳ್ಳೆಯ ಪ್ರಚಾರ ಸಿಗುತ್ತಿತ್ತು. ಅಷ್ಟೇ ಅಲ್ಲ, ಈ ನೀತಿ ಸಂಹಿತೆ ಜಾರಿಗೆ ಬಂದ ನಂತರ ಅದನ್ನು ತೆಗೆಯಬೇಕು ಎಂದು ಯಾರಿಗೂ ತಲೆಗೆ ಹೋಗುತ್ತಿರಲಿಲ್ಲ” ಎಂದು ಲೋಬೊ ಬೆಂಬಲಿಗರು ತಮ್ಮ ನಾಯಕನಿಗೆ ಹೇಳುತ್ತಿದ್ದರೆ ಲೋಬೋ ಈ ಐಡಿಯಾ ತಮಗೆ ಬರಲಿಲ್ಲವಲ್ಲ ಎಂದು ಒಳಗೊಳಗೆ ಬೇಸರಪಡುತ್ತಿರಬಹುದು.
ಆದರೆ ಎಂಎಲ್ ಸಿ ಐವನ್ ಡಿಸೋಜಾ ಅವರು ತಮ್ಮ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ಕೊಟ್ಟಿರುವ ಬ್ಯಾರಿಕೇಡ್ ಗಳನ್ನು ರಸ್ತೆಯಲ್ಲಿ ಹಾಗೆ ಬಿಡುವ ಕೆಲಸ ಜಿಲ್ಲಾಡಳಿತ ಮಾಡಬಾರದು. ಯಾಕೆಂದರೆ ಅದು ಕೂಡ ಒಂದು ರೀತಿಯಲ್ಲಿ ಪ್ರಚಾರ. ಆ ಬ್ಯಾರಿಕೇಡುಗಳನ್ನೆಲ್ಲಾ ಎಲ್ಲೆಲ್ಲಿ ಇದೆಯೋ ಅಲ್ಲಿಂದ ತೆಗೆದು ಪಾಲಿಕೆಯ ಹಿಂದೆ ಎಲ್ಲಿಯಾದರೂ ಒಂದು ಕಡೆ ಜೋಡಿಸಿ ಇಡಲಿ, ಚುನಾವಣೆ ಮುಗಿದ ನಂತರ ಬೇಕಾದರೆ ಪುನ: ಪೆಂಟ್ ಹೊಡೆದು ನಿಲ್ಲಿಸಲಿ. ಅಲ್ಲಿಯ ತನಕ ಅದನ್ನು ಹಾಗೆ ರಸ್ತೆಯಲ್ಲಿ ಬಿಟ್ಟು ಕಾಂಗ್ರೆಸ್ಸಿಗೆ ಮತ್ತು ಐವನ್ ಅವರಿಗೆ ಫ್ರೀಯಾಗಿ ಪ್ರಚಾರ ಕೊಡುವುದು ಬೇಡಾ.
ಇನ್ನು ಕಾಂಗ್ರೆಸ್ ಕಚೇರಿಯ ಹೊರಗೆ ನಾನು ಇವತ್ತು ಪೋಸ್ಟ್ ಮಾಡಿರುವ ಫೋಟೋ ನೋಡಿದರೆ ನಿಮಗೆ ಗೊತ್ತಾಗುತ್ತದೆ, ರಾಹುಲ್ ಗಾಂಧಿಯವರ ಫೋಟೋ ಇರುವ ಹೋರ್ಡಿಂಗ್ ಹಾಗೆ ಇದೆ. ಅದನ್ನು ತೆಗೆಯುವ ಕೆಲಸ ಯಾರು ಕೂಡ ಮಾಡಿಲ್ಲ. ಅದನ್ನು ಅಲ್ಲಿಂದ ತೆಗೆಯಲು ಜಿಲ್ಲಾಧಿಕಾರಿಗಳಿಗೆ ಹೆದರಿಕೆ ಇದೆ ಎಂದಾದರೆ ಒಂದು ಪೇಪರ್ ಸ್ಟೇಟ್ ಮೆಂಟ್ ಕೊಟ್ಟು ” ಕಾಂಗ್ರೆಸ್ ಕಚೇರಿಯ ಹೊರಗೆ ಇರುವ ಕಾಂಗ್ರೆಸ್ ಪಕ್ಷದ ಹೋರ್ಡಿಂಗ್ ಮುಟ್ಟಲು ತಮಗೆ ಹೆದರಿಕೆ ಇದೆ. ಆದ್ದರಿಂದ ಯಾರಾದರೂ ತೆಗೆದರೆ ಅನುಕೂಲವಾಗುತ್ತದೆ” ಎಂದು ಬೇಕಾದರೆ ಹೇಳಲಿ. ನಮ್ಮಲ್ಲಿ ಎಂಟೆದೆಯ ಭಂಟರು ತುಂಬಾ ಜನ ಇದ್ದಾರೆ. ಡಿಸಿ ಹಾಗೆ ಹೇಳಿದ ಗಂಟೆಯೊಳಗೆ ಆ ಹೋರ್ಡಿಂಗ್ ತೆಗೆಯಲಾಗುತ್ತದೆ.
ಬಿಜೆಪಿಯವರು ಮಾಡಿದರೂ ಅದು ತಪ್ಪು…
ಇನ್ನು ಕೊಟ್ಟಾರ ಚೌಕಿ, ಆಡು ಮರೋಳಿ ಎನ್ನುವ ಪ್ರದೇಶಗಳು ಅಮೇರಿಕಾದಲ್ಲಿ ಇಲ್ಲ. ನಮ್ಮ ಮಂಗಳೂರಿನಲ್ಲಿಯೇ ಇವೆ. ಆ ಏರಿಯಾಗಳಲ್ಲಿ ಶಾಸಕ ಜೆ ಆರ್ ಲೋಬೋ ಅವರ ಫ್ಲೆಕ್ಸ್, ಹೋರ್ಡಿಂಗ್ಸ್ ಗಳಿವೆ. ಅದನ್ನು ತೆಗೆಯಲು ಯಾಕೆ ಅವರಾಗಲೀ, ಜಿಲ್ಲಾಧಿಕಾರಿಗಳಾಗಲಿ ಮುಂದಾಗಿಲ್ಲ ಎನ್ನುವುದು ಸದ್ಯದ ಪ್ರಶ್ನೆ. ಹಾಗಂತ ಬಿಜೆಪಿಯವರು ಕೂಡ ಪ್ರಚಾರದ ಭರಾಟೆಯಲ್ಲಿ ಅಲ್ಲಲ್ಲಿ ಗೋಡೆಗಳ ಮೇಲೆ ಈ ಬಾರಿ ಬಿಜೆಪಿ ಎಂದು ಬರೆಯುತ್ತಿದ್ದಾರೆ. ಅದನ್ನು ಕೂಡ ಅವರು ತೆಗೆಯಬೇಕು. ಐಡಿಯಾ ಏನೋ ಒಳ್ಳೆಯದಿದೆ, ನಾವು ಚಿಕ್ಕದಿರುವಾಗ ಹೀಗೆ ಬರೆದೇ ಪ್ರಚಾರ ನಡೆಸಲಾಗುತ್ತಿತ್ತು. ಆದರೆ ಈಗ ಇದು ಕೂಡ ತಪ್ಪು. ಅದನ್ನು ಹಾಗೆ ಬರೆದರೆ ಅದನ್ನು ಅಭ್ಯರ್ಥಿಯ ಖರ್ಚಿನ ಲೆಕ್ಕದಲ್ಲಿ ತೋರಿಸಬೇಕಾಗುತ್ತದೆ. ಕೊನೆಯದಾಗಿ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿ ವೋಟ್ ಕೇಳುವುದರಿಂದ ಹಾಗೆ ಮಾಡುವ ಅಭ್ಯರ್ಥಿಗಳು ಗೆಲ್ಲುತ್ತಾರೋ ಇಲ್ವೋ, ಆದರೆ ನಮ್ಮ ಮಂಗಳೂರಿನ ಸೌಂದರ್ಯ ಹಾಳಾಗುತ್ತದೆ. ಪ್ರಾರಂಭದಲ್ಲಿ ಮದನ್ ಹೀಗೆ ಅಂಟಿಸುತ್ತಾ ಬಂದರು. ಅವರ ಪಕ್ಕದಲ್ಲಿ ಸುನೀಲ್ ಕುಮಾರ್ ಬಜಾಲ್ ಅಂಟಿಸುತ್ತಾ ಹೋದರು. ಈಗ ಧರ್ಮೇಂದ್ರ ಅವರ ಸರದಿ. ಅವರಿಗೆ ಜಾಗ ಇಲ್ಲವೇನೋ, ಅವರು ಮದನ್ ಅವರ ಪೋಸ್ಟರ್ ಮೇಲೆ ತಮ್ಮ ಪೋಸ್ಟರ್ ಅಂಟಿಸುತ್ತಿದ್ದಾರೆ. ಇವರ ಪೋಸ್ಟರ್ ಭರಾಟೆಯಿಂದ ಒಂದು ಕಾಲದಲ್ಲಿ ಎಷ್ಟು ಚೆಂದ ಕಾಣುತ್ತಿದ್ದ ಲೇಡಿಹಿಲ್ ಬಸ್ ಸ್ಟಾಪ್ ಯೌವನದಲ್ಲಿ ಬಿಳಿಕೂದಲು ಬಂದ ಹುಡುಗಿಯ ಸ್ಥಿತಿಗೆ ಬಂದಿದೆ. ಧರ್ಮೇಂದ್ರ ಅವರು ಚುನಾವಣೆಗೆ ಸ್ಪರ್ಧಿಸಲು ನಾವು ಆಕ್ಷೇಪ ಹಾಕುವಂತಿಲ್ಲ. ಆದರೆ ಮಂಗಳೂರಿನ ಗೋಡೆಗಳು ಯಾರ ಆಸ್ತಿಯೂ ಅಲ್ಲ!!
Leave A Reply