ರೈಲ್ವೆ ಇಲಾಖೆ ಇತಿಹಾಸ: 3 ದಶಕದಲ್ಲೇ ಅತಿ ಕಡಿಮೆ ರೈಲ್ವೆ ಅಪಘಾತ
ದೆಹಲಿ: ಭಾರತ ಸಂಚಾರದ ಜೀವನಾಡಿಯಾಗಿರುವ ಮತ್ತು ಅತಿ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೆ ಅಪಘಾತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಗಣನೀಯವಾಗಿ ಕಡಿಮೆಯಾಗಿದೆ. ಪದೇ ಪದೆ ಹಳಿ ತಪ್ಪುವುದು, ಅಪಘಾತ, ಬಿರುಕು ಬಿಡುವ ಹಳಿಗಳಿಂದ ಭಾರಿ ಪ್ರಮಾಣದ ಸಾವು ನೋವು ಸಂಭವಿಸಿ ತೀವ್ರ ಟೀಕೆಗೆ ರೈಲ್ವೆ ಇಲಾಖೆ ಗುರಿಯಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರೈಲ್ವೆ ಸುರಕ್ಷೆತೆ ದೃಷ್ಟಿಯಿಂದ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಮತ್ತು ಕ್ರಮಬದ್ಧವಾದ ಜಾರಿಯಿಂದ ಸಾವು ನೋವುಗಳಲ್ಲಿ ಗಣನೀಯ ಇಳಿಕೆಯಾಗಿದೆ.
ರೈಲ್ವೆ ಇಲಾಖೆ ರೈಲು ಸುರಕ್ಷತೆ ದೃಷ್ಟಿಯಿಂದ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಮೂರು ದಶಕಗಳಲ್ಲೇ ಕಾಣದಂತ ಹೊಸ ದಾಖಲೆ ಸೃಷ್ಟಿಸಿದೆ. ಕಳೆದ 35 ವರ್ಷಗಳಲ್ಲೇ ಮೊದಲ ಬಾರಿಗೆ ರೈಲ್ವೆ ಅಪಘಾತಗಳ ಪ್ರಮಾಣ ಎರಡಂಕಿಗೆ ಇಳಿದಿದೆ.
2017-18ನೇ ಹಣಕಾಸು ವರ್ಷದಲ್ಲಿ ಮಾ.31ರವರೆಗೆ ಕೇವಲ 73 ಅಪಘಾತ ಸಂಭವಿಸಿದ್ದು, ಈ ಸಂಖ್ಯೆ ಕಳೆದ 35 ವರ್ಷಗಳಲ್ಲೇ ಅತಿ ಕಡಿಮೆ ಅಪಘಾತ ಸಂಭವಿಸಿದ ಸಂಖ್ಯೆಯಾಗಿದೆ. 2016-2017ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟು 104 ಅಪಘಾತ ಸಂಭವಿಸಿದ್ದವು. 2017-18ರಲ್ಲಿ ಅಪಘಾತಗಳ ಪ್ರಮಾಣ ಶೇ.29ರಷ್ಟುಇಳಿಕೆಯಾಗಿದೆ. ರೈಲ್ವೆ ಹಳಿ ತಪ್ಪುವಿಕೆ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ 39ಕ್ಕೆ ಇಳಿಕೆಯಾಗಿರುವುದು ಗಮನಾರ್ಹ ಸಂಗತಿ.
1968-1969ರಲ್ಲಿ ಮೊದಲ ಬಾರಿಗೆ ರೈಲ್ವೆ ಅಪಘಾತಗಳ ಸಂಖ್ಯೆ 1000ಕ್ಕಿಂತ ಕೆಳಗೆ ಇಳಿದಿತ್ತು. ಆ ವರ್ಷ ಅಪಘಾತದ ಪ್ರಮಾಣ 908ಕ್ಕೆ ಇಳಿಕೆಯಾಗಿತ್ತು. ಅದಕ್ಕೂ ಮುನ್ನ ಪ್ರತಿ ವರ್ಷ 1000ಕ್ಕೂ ಹೆಚ್ಚು ಅಪಘಾತಗಳು ನಡೆಯುವುದು ಸಾಮಾನ್ಯ ಎನಿಸಿತ್ತು. ಕೆಲ ವರ್ಷದಿಂದ ರೈಲ್ವೆ ಸುರಕ್ಷತೆಗೆ ಆದ್ಯತೆ ನೀಡಿರುವುದು ಅಪಘಾತ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೇಲ್ವೆ ಸುರಕ್ಷೆಗೆ 7,267 ಕೋಟಿ ರು.ಗಳನ್ನು ಮೀಸಲಿಟ್ಟಿರುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದು ಗಮನಾರ್ಹ ಸಂಗತಿ.
Leave A Reply