ಶೆಟ್ಟಿ ಎಂದಿದ್ದ ಕಡೆ ಪಿಂಟೋ, ರಾಡ್ರಿಗಸ್, ಡಿಸೋಜಾ, ಡಿಸಿಲ್ವ ಎಂದಿದ್ದಲ್ಲಿ ಲೋಬೋ ತಡೆಯಾಜ್ಞೆ ತರುತ್ತಿದ್ದರಾ?!
ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿವಾದ ಮತ್ತೆ ಜೀವ ಪಡೆದಿದೆ. ಈ ಪ್ರಕರಣದಲ್ಲಿ ತಮಗೆ ಮಧ್ಯ ಪ್ರವೇಶಿಸಲು ಅನುಮತಿ ಕೊಡಬೇಕು ಎಂದು ಸಂತ ಎಲೋಶಿಯಸ್ ಕಾಲೇಜು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಈ ಮೂಲಕ ಈ ಪ್ರಕರಣದಲ್ಲಿ ತಾವು ಕೂಡ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಸಾರಿದೆ. ಈಗ ಎದ್ದಿರುವ ಪ್ರಶ್ನೆ ಏನೆಂದರೆ ಈಗ ಇಷ್ಟೆಲ್ಲ ಮಾಡುತ್ತಿರುವ ಎಲೋಶಿಯಸ್ ಕಾಲೇಜಿನವರು ಆವತ್ತು ಈ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ಹೆಸರಿಡುತ್ತೇವೆ, ಯಾರಾದರೂ ಆಕ್ಷೇಪ ಸಲ್ಲಿಸುವುದಾದರೆ ಸಲ್ಲಿಸಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆ ಕಡೆಯಿಂದ ಪತ್ರಿಕೆಗಳಲ್ಲಿ ಜಾಹೀರಾತು ಬಂದಾಗ ಎಲ್ಲಿದ್ದರು ಎನ್ನುವುದು ಪ್ರಶ್ನೆ. ಹಾಗಂತ ಯಾವುದೇ ಪತ್ರಿಕೆಗಳಲ್ಲಿ ಜಾಹೀರಾತು ಕೊಡದೇ ಪಾಲಿಕೆ ಕಾನೂನು ಪ್ರಕ್ರಿಯೆ ಮಾಡಲು ಸಾಧ್ಯವೇ ಇಲ್ಲ. ಅದಲ್ಲದೆ ಪತ್ರಿಕೆ ನೋಡಿದ ನಾಗರಿಕರೊಬ್ಬರು ಪಾಲಿಕೆಗೆ ಆಕ್ಷೇಪ ಕೂಡ ಸಲ್ಲಿಸಿದ್ದರು. ಅವರ ಆಕ್ಷೇಪ ಏನಿತ್ತು ಎಂದರೆ “ನೀವು ಸುಂದರರಾಮ ಶೆಟ್ಟಿ ರಸ್ತೆ ಎಂದು ಹೆಸರಿಡಲು ಹೊರಟಿದ್ದಿರಿ. ನಮ್ಮ ಬಂಟ ಸಮುದಾಯದಲ್ಲಿ ಸುಂದರರಾಮ ಶೆಟ್ಟಿ ಎನ್ನುವವರು ಹಲವಾರು ಜನ ಇದ್ದಾರೆ. ಆದ್ದರಿಂದ ನೀವು ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ಹೆಸರಿಡಬಹುದು” ಎಂದು ಹೇಳಿದ್ದರು. ನಂತರ ಅದನ್ನು ಪರಿಗಣಿಸಿ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿತ್ತು. ಆವಾಗಲಾದರೂ ಕಾಲೇಜಿನವರು ಆಕ್ಷೇಪ ಸಲ್ಲಿಸಬಹುದಿತ್ತು ಆದರೆ ಸಲ್ಲಿಸಿಲ್ಲ. ಹೇಗೂ ನಮ್ಮದೇ ಧರ್ಮದ ಶಾಸಕರು ನಮ್ಮ ಕ್ಷೇತ್ರದಲ್ಲಿದ್ದಾರೆ. ನಮ್ಮ ಆರ್ಶೀವಾದದಿಂದ ತಾನೆ ಅವರು ಗೆದ್ದಿರುವುದು, ಅವರು ಇರುವಾಗ ನಾವು ಯಾವಾಗ ಎದ್ದರೂ ಅವರು ಬೆಂಗಳೂರಿಗೆ ಹೋಗಿ ತಡೆಯಾಜ್ಞೆ ತರಬೇಕು ಎನ್ನುವ ಆಲೋಚನೆ ಏನಾದರೂ ಮನಸ್ಸಿನಲ್ಲಿ ಇತ್ತಾ?
ಹಿನ್ನಲೆ ಗೊತ್ತಿದ್ದರೆ ಆಕ್ಷೇಪ ಎತ್ತುತ್ತಿರಲಿಲ್ಲ…
ಬಹುಶ: ಎಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯವರಿಗೆ ಮೂಲ್ಕಿ ಸುಂದರರಾಮ ಶೆಟ್ಟಿಯವರ ಬಗ್ಗೆ ಗೊತ್ತಿದ್ದರೆ ಅವರ ಹೆಸರು ತಮ್ಮ ಕಾಲೇಜು ಕಟ್ಟಡ ಇರುವ ರಸ್ತೆಗೆ ಇಡುತ್ತಿರುವುದು ತಮ್ಮ ಭಾಗ್ಯ ಎಂದೇ ಅಂದುಕೊಳ್ಳುತ್ತಿದ್ದರು. ಇನ್ನು ಶಾಸಕರಾಗಿದ್ದ ಜೆ ಆರ್ ಲೋಬೋ ಅವರಿಗೆ ಮೂಲ್ಕಿ ಸುಂದರರಾಮ ಶೆಟ್ಟಿಯವರ ಬಗ್ಗೆ ಗೊತ್ತಿದ್ದರೆ ಅವರೇ ಕಾಲೇಜಿನವರನ್ನು ಕನ್ವಿನ್ಸ್ ಮಾಡಿ ತಾವು ಶಾಸಕರಾಗಿ ಮಾಡಿದ ಒಳ್ಳೆಯ ಕಾರ್ಯ ಎಂದು ನೆನಪಿನಲ್ಲಿ ಇಟ್ಟುಕೊಳ್ಳಬಹುದಿತ್ತು. ಆದರೆ ಲೋಬೋ ಅವರು ಕಾಲೇಜಿನವರ ಪರ ನಿಂತರು. ಒಂದು ವೇಳೆ ಲೋಬೋ ಅವರು ಆ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲು ಯಾರೇ ಅಡ್ಡ ಬಂದಿದ್ದರೂ ಎದುರಿಸಿ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದೇ ನಾಮಕರಣವಾಗಲು ಕಾರಣರಾಗುತ್ತಿದ್ದಲ್ಲಿ ಅವರು ಬಂಟ ಸಮುದಾಯದ ರಾಜಕೀಯದ ಭಾಷೆಯಲ್ಲಿಯೇ ಹೇಳುವುದಾದರೆ ವೋಟ್ ಬ್ಯಾಂಕ್ ತಮ್ಮದಾಗಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ಎಷ್ಟೋ ಸಾವಿರ ಜಾತಿ, ಮತ, ಭೇದವಿಲ್ಲದೆ ಸುಂದರರಾಮ ಶೆಟ್ಟಿಯವರ ಸಹಾಯದಿಂದ ಇವತ್ತು ಉನ್ನತ ಸ್ಥಾನಮಾನ ಗಳಿಸಿದವರ ಪ್ರೀತಿಗೆ ಲೋಬೋ ಪಾತ್ರರಾಗುತ್ತಿದ್ದರು. ಯಾಕೆಂದರೆ ಸುಂದರರಾಮ ಶೆಟ್ಟಿಯವರು ತಮ್ಮೆಡೆಗೆ ಬಂದ ಯಾವ ವ್ಯಕ್ತಿಯನ್ನು ಕೂಡ ಜಾತಿ, ಮತ, ಧರ್ಮ ಕೇಳದೇ ಸಹಾಯ ಮಾಡಿದವರು. ಅವರಿಂದ ಸಹಾಯ ಪಡೆದು ಅನುಕೂಲಸ್ಥರಾಗಿರುವ ಮುಸ್ಲಿಮರೂ ಇದ್ದಾರೆ, ಕ್ರೈಸ್ತರೂ ಇದ್ದಾರೆ, ಬಿಲ್ಲವರೂ ಇದ್ದಾರೆ, ಬಂಟರಂತೂ ಇದ್ದೇ ಇದ್ದಾರೆ.
ಇದು ನೆಹರೂ ಮೈದಾನ ಎಂದು ಇಟ್ಟ ಹಾಗೆ ಅಲ್ಲ..
ಒಂದು ವೇಳೆ ಪಾಲಿಕೆಯವರು ಏನೂ ಕಾನೂನು ಕ್ರಮ ಕೈಗೊಳ್ಳದೇ ಹೆಸರು ಇಟ್ಟಿದ್ದರೆ ನಾನೇ ಮುಂದೆ ನಿಂತು ವಿರೋಧಿಸಿದ್ದೆ. ಬೇಕಾದರೆ ಮಂಗಳೂರಿನಲ್ಲಿ ನೆಹರೂ ಮೈದಾನ ಎಂದು ಕರೆಯಲಾಗುವ ಮೈದಾನವೊಂದಿದೆಯಲ್ಲ, ಅದಕ್ಕೆ ನೆಹರೂ ಮೈದಾನ ಎಂದು ಹೆಸರಿಡುವಾಗ ಯಾವ ಕಾನೂನು ಕ್ರಮ ಕೈಗೊಂಡಿದ್ದೀರಿ ಎಂದು ಸ್ಥಳೀಯ ಆಡಳಿತ ವಿರುದ್ಧ ನಾನೇ ಹಿಂದೊಮ್ಮೆ ಸರಣಿ ಲೇಖನ ಬರೆದಿದ್ದೆ. ಆದರೆ ಇಲ್ಲಿ ಹಾಗೆ ಇಲ್ಲ. ವಿಜಯ ಬ್ಯಾಂಕ್ ನೌಕರರ ಸಂಘದವರು ಪಾಲಿಕೆಗೆ ಮೊದಲು ಮನವಿ ಮಾಡಿದ್ದಾರೆ. ಅದನ್ನು ಪಾಲಿಕೆ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯಲ್ಲಿ ಇಟ್ಟು ಅಲ್ಲಿ ಅವಿರೋಧವಾಗಿ ಮಂಜೂರಾತಿ ಪಡೆದಿದೆ. ನಂತರ ಪ್ರಮುಖ ಪತ್ರಿಕೆಗಳಲ್ಲಿ ಮೂವತ್ತು ದಿನಗಳ ಒಳಗೆ ಯಾರಾದರೂ ಆಕ್ಷೇಪ ಸಲ್ಲಿಸಬಹುದು ಎಂದಿದೆ. ನಂತರ ಪಾಲಿಕೆಯ ಪರಿಷತ್ ಸಭೆಯಲ್ಲಿ ಎಲ್ಲಾ ಅರವತ್ತು ಸದಸ್ಯರು ಒಪ್ಪಿಗೆ ಕೊಟ್ಟ ಬಳಿಕ ಅದನ್ನು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಅದರ ನಂತರ ರಾಜ್ಯ ಸರಕಾರ ತನ್ನ ಒಪ್ಪಿಗೆಯ ಮುದ್ರೆ ಒತ್ತಿ ಹಿಂದಕ್ಕೆ ಕಳುಹಿಸಿದ ಬಳಿಕ ತಾನೇ ಇಲ್ಲಿ ದಿನ ನಿಗದಿ ಮಾಡಿ ಉದ್ಘಾಟನೆಗೆ ಲೋಬೋ ಅವರನ್ನು ಕರೆಯಲು ಆಯೋಜಕರು ಹೋಗಿದ್ದರು. ತನ್ನನ್ನು ಕರೆಯಲು ಬಂದಿದ್ದ ವಿಜಯಾ ಬ್ಯಾಂಕಿನ ನೌಕರರ ಸಂಘದ ಮುಖಂಡರ ಬಳಿ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ, ಉದ್ಘಾಟನೆಗೆ ತಪ್ಪದೆ ಬರುತ್ತೇನೆ ಎಂದು ಲೋಬೋ ಅವರು ಹೇಳಿದ್ದು ಸುಳ್ಳಾ? ಇಷ್ಟಿದ್ದ ನಂತರ ಲೋಬೋ ಅವರು ಫಲಕ ಅನಾವರಣದ ಹಿಂದಿನ ದಿನ ಬೆಂಗಳೂರಿಗೆ ದೌಡಾಯಿಸಿ ತಡೆಯಾಜ್ಞೆ ತಂದರಲ್ಲ, ಇದನ್ನು ಸ್ವಜಾತಿ ಪ್ರೇಮದ ತುತ್ತತುದಿ ಎಂದು ಹೇಳದೆ ಇನ್ನೇನೂ ಹೇಳಲು ಸಾಧ್ಯ!
Leave A Reply