ಉಗ್ರ ಪೋಷಕ ಪಟ್ಟ ಕಳಚಿಕೊಳ್ಳಲು ಪಾಕ್ ನಿರ್ಧಾರ?: ಉಗ್ರ ಸಂಘಟನೆಗಳ ನಿಷೇಧಕ್ಕೆ ಸಿದ್ಧತೆ
ಇಸ್ಲಾಮಾಬಾದ್: ಭಯೋತ್ಪಾದಕರನ್ನು ಸಲಹುತ್ತಿರುವ ಆರೋಪ ಹೊತ್ತಿರುವ ಪಾಕಿಸ್ತಾನ, ಭಯೋತ್ಪಾದನೆ ಪೋಷಕ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಹಲವು ಬಾರಿ ನಾಟಕಗಳನ್ನು ಮಾಡಿದೆ. ಆದರೆ ಇದೀಗ ಮತ್ತೊಮ್ಮೆ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳನ್ನು ಶಾಶ್ವತವಾಗಿ ನಿಷೇಧಿಸುವ ನಿಟ್ಟಿನಲ್ಲಿ ಕರಡು ವಿಧೇಯಕ ರೂಪಿಸುತ್ತಿದೆ ಎನ್ನಲಾಗಿದೆ.
ಗೃಹಸಚಿವಾಲಯದ ನಿಗಾ ಪಟ್ಟಿಯಲ್ಲಿರುವ ಕೆಲವು ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ನಿಷೇಧಿಸಿದ ಅಧ್ಯಕ್ಷರ ಸುಗ್ರೀವಾಜ್ಞೆಯ ಬದಲಿಗೆ ಈ ವಿಧೇಯಕ ತರಲಾಗುತ್ತಿದೆ. ಭಯೋತ್ಪಾದನಾ ನಿಗ್ರಹ ದಳ 1997ರ ತಿದ್ದುಪಡಿ ಕರಡು ವಿಧೇಯಕವನ್ನು ಏ.9ರಿಂದ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲು ಕಾನೂನು ಸಚಿವಾಲಯ ಸಿದ್ಧತೆ ನಡೆಸಿದೆ ಎಂದು ಪಾಕಿಸ್ತಾನ ಪ್ರಮುಖ ಪತ್ರಿಕೆ ಡಾನ್ ವರದಿ ಮಾಡಿದೆ. ಪ್ರಸ್ತಾವಿತ ಕರಡು ವಿಧೇಯಕವನ್ನು ಪರಿಶೀಲಿಸಲು ಕಾನೂನು ಸಚಿವಾಲಯ ಮತ್ತು ಪಾಕ್ ಸೇನೆಯ ಆಡಳಿತ ಮಂಡಳಿ ಕೂಡ ವಿಧೇಯಕ ರಚನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರನ್ನು ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಹಾಗೂ ಜರ್ಮನಿಯ ಜಂಟಿ ಪ್ರಸ್ತಾಪಕ್ಕೆ ಹಣಕಾಸು ಕಾರ್ಯಪಡೆ ಅನುಮೋದನೆ ನೀಡಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸಿಗೆ ಆಗುವ ಧಕ್ಕೆಯನ್ನು ತಡೆಯುವ ಉದ್ದೇಶದಿಂದ ಭಯೋತ್ಪಾದಕ ನಿಗ್ರಹ ಕಾಯಿದೆಗೆ ತಿದ್ದುಪಡೆ ಕರಡು ವಿಧೇಯಕ ಮಂಡಿಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ. ಆದರೆ ಅದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎಂಬ ಅನುಮಾನಗಳು ವಿಶ್ವಸಮುದಾಯಕ್ಕಿದೆ.
Leave A Reply