ಸಿಎಸ್ ಐ ಚರ್ಚ್ ನವರಿಗೆ ಮೋಸ ಮಾಡಿದ್ದು ಸರಿಯಾ ಲೋಬೋ ಅವರೇ?
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನೇಕ ಮೈದಾನಗಳಿವೆ. ಅಲ್ಲಿ ನಿಮಗೆ ಕ್ರೀಡಾಕೂಟ ಆಯೋಜಿಸಬೇಕಾಗಿದ್ದಲ್ಲಿ ಹಿಂದೆ ಯಾವ ರೀತಿಯ ನಿಯಮ ಇತ್ತು ಎಂದರೆ ನಿಮಗೆ ಶಾಸಕರ, ಕಾರ್ಪೋರೇಟರ್ ಗಳ ಆರ್ಶೀವಾದ ಎಷ್ಟಿತ್ತೋ ಅದರ ಮೇಲೆ ನಿಮಗೆ ಕಾರ್ಯಕ್ರಮ ಮಾಡಲು ಮೈದಾನ ಸಿಗುತ್ತದೋ ಇಲ್ವೋ ಎನ್ನುವುದು ನಿರ್ಧಾರವಾಗುತ್ತಿತ್ತು. ನಿಮ್ಮ ತೋಳ್ಬಲ, ಧನಬಲ, ಸಂಘಟನೆ ಬಲ ಎಲ್ಲವನ್ನು ಆದರಿಸಿ ಗ್ರೌಂಡ್ ಸಿಗುತ್ತಿತ್ತು. ನಿಮಗೆ ಯಾವುದೇ ರೀತಿಯ ಬಲ ಅಥವಾ ಯಾರದ್ದೂ ಆರ್ಶೀವಾದ ಇಲ್ಲದೆ ಹೋದಲ್ಲಿ ನಿಮಗೆ ಮೈದಾನ ಸಿಗುತ್ತಾ, ಇಲ್ವಾ ಎನ್ನುವುದು ನಿಮ್ಮ ಅದೃಷ್ಟದ ಮೇಲೆ ನಿಲ್ಲುತ್ತಿತ್ತು. ನೀವು ಎಪ್ರಿಲ್ 1 ಕ್ಕೆ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದೇವೆ ಎಂದು ಫೆಬ್ರವರಿ 8 ಕ್ಕೆ ಪಾಲಿಕೆಗೆ ಮನವಿ ಪತ್ರ ಕೊಟ್ಟು ಗ್ರೌಂಡ್ ಬುಕ್ ಮಾಡಿದ್ದರೂ ಮಾರ್ಚ್ 29 ಕ್ಕೆ ನಿಮಗಿಂತ ಎಲ್ಲದರಲ್ಲಿಯೂ ಗಟ್ಟಿ ಇದ್ದವ ಬಂದು ಎಪ್ರಿಲ್ 1 ಕ್ಕೆ ಮೈದಾನ ನಮಗೆ ಬೇಕು, ಮ್ಯಾಚ್ ಇದೆ ಎಂದರೆ ನಿಮಗೆ ಕೊನೆಗೆ ಚಿಪ್ಪೆ ಗತಿಯಾಗುತ್ತಿತ್ತು. ಅಂದರೆ ವಸೂಲಿಬಾಜಿ ಮಾಡುವ ಸಾಮರ್ಥ್ಯ ಇದ್ದವರಿಗೆ ಮಾತ್ರ ಗ್ರೌಂಡ್ ಸಿಗುತ್ತದೆ ಎನ್ನುವ ವಾತಾವರಣ ಇತ್ತು.
ಕೋರ್ಟ್ ಮೆಟ್ಟಲೇರಿದ್ದ ಪ್ರಕರಣ…
ಒಂದು ಸಲ ಏನಾಯಿತು ಎಂದರೆ ಎನ್ ಎಂ ಕ್ರಿಕೆಟರ್ಸ್ ಸಂಘಟನೆಯ ಯುವಕರು ಮೊದಲು ಅರ್ಜಿ ಕೊಟ್ಟು ಮಂಗಳೂರಿನ ಪ್ರಮುಖ ಕ್ರಿಕೆಟ್ ಆಟದ ಮೈದಾನವಾಗಿರುವ ಉರ್ವಾ ಮೈದಾನವನ್ನು ಬುಕ್ ಮಾಡಿದ್ದರು. ಆದರೆ ಪಾಲಿಕೆ ಕೊನೆಕ್ಷಣದಲ್ಲಿ ಇವರಿಗಿಂತ ನಂತರ ಬಂದ ಬೇರೆಯವರಿಗೆ ಮೈದಾನ ಬಿಟ್ಟು ಕೊಟ್ಟುಬಿಟ್ಟಿತ್ತು. ಪಾಲಿಕೆಯವರ ಗ್ರಹಚಾರಕ್ಕೆ ಮೊದಲ ಬಾರಿ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು. ಅಲ್ಲಿಯವರೆಗೆ ಮೈದಾನ ಸಿಗದವರು ತಮ್ಮೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು ಬಿಟ್ಟರೆ ಬೇರೆ ಏನೂ ಆಗಿರಲಿಲ್ಲ. ಅದರಿಂದ ಪಾಲಿಕೆಯವರಿಗೆ ಈ ವಿಷಯದಲ್ಲಿ ಕ್ಯಾರೇ ಇರಲಿಲ್ಲ. ಯಾರು ತಮಗೆ ಬೇಕೋ ಅವರು ತಮ್ಮ ಮಾವನ ಆಸ್ತಿಯಂತೆ ಬೇಕಾದಾಗ ಬಂದು ಮೈದಾನ ಉಪಯೋಗಿಸುತ್ತಿದ್ದರು. ಆದರೆ ಎನ್ ಎಂ ಕ್ರಿಕೆಟರ್ಸ್ ಕೋರ್ಟಿಗೆ ಹೋದ ಮೇಲೆ ಪಾಲಿಕೆಗೆ ಬಿಸಿ ಮುಟ್ಟಿತು.
ಕರ್ನಾಟಕ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಮೈದಾನಗಳನ್ನು ಸಾರ್ವಜನಿಕ ಉಪಯೋಗಕ್ಕೆ ಕೊಡುವಾಗ ಒಂದು ನೀತಿ ನಿಯಮ ಮಾಡಬೇಕು. ಅದರ ಪ್ರತಿಯನ್ನು ಎರಡು ತಿಂಗಳೊಳಗೆ ಹೈಕೋರ್ಟಿಗೆ ಸಲ್ಲಿಸಬೇಕು ಎಂದು ಹೇಳಿತು. ಅದರ ನಂತರವೇ ಒಂದು ರೂಲ್ಸ್ ಬಂದದ್ದು. ರೂಲ್ಸ್ ಪ್ರಕಾರ ಪಾಲಿಕೆ ವ್ಯಾಪ್ತಿಯ ಯಾವುದೇ ಮೈದಾನ ಅಥವಾ ಪುರಭವನ 60 ದಿನಗಳ ಮೊದಲು ಬುಕ್ ಮಾಡಲು
ಅರ್ಜಿ ಕೊಡಬೇಕು. ಯಾರು ಮೊದಲು ಬರುತ್ತಾರೋ ಅವರಿಗೆ ಕೊಡಲಾಗುವುದು ಎಂದು ನಿಯಮ ತರಲಾಯಿತು.
ಲೋಬೋ ಐಡಿಯಾ ಹೇಗಿತ್ತು?
ಮೊನ್ನೆ ಏನಾಯಿತು ಎಂದರೆ ಎಪ್ರಿಲ್ 7 ಮತ್ತು 8 ರಂದು ಕ್ರಿಕೆಟ್ ಟೂರ್ನಮೆಂಟ್ ಮಾಡಲು ಸಿಎಸ್ ಐ ಚರ್ಚ್ ನವರು ಪಾಲಿಕೆಗೆ ಅರ್ಜಿ ಕೊಟ್ಟಿದ್ದರು. ಅದು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ. ಅದರ ನಂತರ ಪಾಲಿಕೆಯ ಕಾರ್ಪೋರೇಟರ್ ಒಬ್ಬರು ಎಪ್ರಿಲ್ 7 ರಂದು ಅಂದರೆ ಅದೇ ದಿನ ಉರ್ವಾ ಮೈದಾನದಲ್ಲಿ ಯಕ್ಷಗಾನ ಆಡಿಸಲು ಇದೆ, ಗ್ರೌಂಡ್ ಬೇಕು ಎಂದರು. ಆದರೆ ಈ ಮೊದಲೇ ಸಿಎಸ್ ಐ ಚರ್ಚ್ ನವರು ಮೈದಾನ ಬುಕ್ ಮಾಡಿದ್ದಾರೆ, ಕೊಡಲು ಆಗುವುದಿಲ್ಲ ಎಂದು ಪಾಲಿಕೆಯಿಂದ ಉತ್ತರ ಬಂತು. ವಿಷಯ ಜೆ ಆರ್ ಲೋಬೋ ಅವರ ಬಳಿ ಹೋಯಿತು. ಅವರು ಎಂತಹ ಐಡಿಯಾ ಮಾಡಿದ್ರು ಎಂದರೆ ನ್ಯಾಯಯುತ ದಾರಿಯಲ್ಲಿ ನಡೆಯುವವರು ತಲೆತಗ್ಗಿಸಬೇಕು.
ಲೋಬೋ ಅವರು ಯಕ್ಷಗಾನದವರಿಗೆ ಏನು ಐಡಿಯಾ ಕೊಟ್ಟರು ಎಂದರೆ ನೀವು ಸಿಎಸ್ ಐ ಚರ್ಚಿನವರು ಕೊಟ್ಟ ಅರ್ಜಿಗಿಂತ ಹಿಂದೆನೆ ಅರ್ಜಿ ಕೊಟ್ಟಿದ್ದೀರಿ ಎನ್ನುವ ಭಾವನೆ ಬರಬೇಕು. ಆ ರೀತಿಯಲ್ಲಿ ಬರೆಯಿರಿ ಎಂದರು. ಅದಕ್ಕೆ ಸರಿಯಾಗಿ ಸಿಎಸ್ ಐ ಚರ್ಚಿನವರು ಕೊಟ್ಟ ಅರ್ಜಿಗಿಂತ ಹಿಂದಿನ ಯಾವುದೋ ದಿನದ ಸೀಲ್ ಯಕ್ಷಗಾನದವರ ಅರ್ಜಿಗೆ ಹೊಡೆದು ಮೇಲ್ನೋಟಕ್ಕೆ ಯಕ್ಷಗಾನದವರು ಮೊದಲು ಅರ್ಜಿ ಕೊಟ್ಟದ್ದು, ನಂತರ ಸಿಎಸ್ ಐ ಚರ್ಚಿನವರು ಅರ್ಜಿ ಕೊಟ್ಟಿದ್ದು ಎನ್ನುವ ಭಾವನೆ ಬರುವಂತೆ ಮಾಡಿದರು. ಸೀಲ್ ನಲ್ಲಿ ದಿನವನ್ನೇ ಚೆಂಜ್ ಮಾಡಿ ಹೊಡೆಸಿದ ಸಾಧನೆ ಲೋಬೋ ಅವರದ್ದು. ಇದರಿಂದ ಯಕ್ಷಗಾನವನ್ನು ಆಯೋಜಿಸುವವರಿಗೆನೆ ಉರ್ವಾ ಗ್ರೌಂಡ್ ನಿಯಮ ಪ್ರಕಾರ ಕೊಡಬೇಕು ಎನ್ನುವ ವಿಷಯ ಮೇಲ್ನೋಟ ಬರುವಂತೆ ಮಾಡಿದರು. ಇಂತಹ ಐಡಿಯಾ ಬರುವುದು ಒಬ್ಬ ಸರಕಾರಿ ಅಧಿಕಾರಿಯಾಗಿದ್ದರೆ ಮಾತ್ರ. ಲೋಬೋ ಅವರಿಂದ ಅನುಮತಿ ಪಡೆದುಕೊಂಡ ಯಕ್ಷಗಾನದ ಆಯೋಜಕರು ತಮ್ಮ ಕಾರ್ಯಕ್ರಮ ಮಾಡಲು ಮುಂದಾದರು. ಇದರಿಂದ ಮೈದಾನ ಸಿಎಸ್ ಐ ಚರ್ಚ್ ನವರಿಗೆ ಸಿಗದ ಹಾಗೆ ಆಯಿತು. ಅವರು ನನ್ನ ಹತ್ತಿರ ಬಂದರು. ನಾನು ಎಲ್ಲಾ ವಿಷಯ ಕೇಳಿದೆ. ಇದರಲ್ಲಿ ಗೋಲ್ ಮಾಲ್ ಇರುವುದು ನನಗೆ ಸ್ಪಷ್ಟವಾಯಿತು. ನಾನು ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಹಾಕಿದೆ. ವಾಸ್ತವ ಹೊರಗೆ ಬಂತು. ಅಷ್ಟಕ್ಕೂ ಶಾಸಕರು, ಕಾರ್ಪೋರೇಟರ್ ಗೋಲ್ ಮಾಲ್ ಮಾಡಿದ್ದು ಗೊತ್ತಾದದ್ದು ಹೇಗೆ? ಅದರ ನಂತರ ಏನಾಯಿತು? ಸಿಎಸ್ ಐ ಚರ್ಚಿನವರಿಗೆ ಮೈದಾನ ಸಿಕ್ಕಿತಾ? ಯಕ್ಷಗಾನ ಆಯೋಜಕರು ಏನು ಮಾಡಿದ್ರು? ಚುನಾವಣೆ ಘೋಷಣೆ ಆದ ನಂತರ ಈ ಮಹಾಡ್ರಾಮಕ್ಕೆ ಸಿಕ್ಕಿದ ಕ್ಲೈಮಾಕ್ಸ್ ಏನು? ಎಲ್ಲವನ್ನು ನಾಳೆ ಹೇಳಿ ಮುಗಿಸುತ್ತೇನೆ
Leave A Reply