ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸೇರುವುದಿಲ್ಲ ಎಂದ ಗಾಣಿಗ ಸಂಘ, “ಪ್ರತ್ಯೇಕತಾವಾದಿ”ಗಳಿಗಿದು ಹಿನ್ನಡೆ!
ಬೆಂಗಳೂರು: ರಾಜ್ಯ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತದೆ ಎಂಬುದು ಗೊತ್ತಾಯಿತೋ, ಅಲ್ಲಿಂದ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ನೀಡಬೇಕು ಎಂಬ ಕೂಗು ಜೋರಾಯಿತು. ಕೆಲವು “ಪ್ರತ್ಯೇಕತಾವಾದಿ” ಮನಸ್ಸುಗಳು ಒಂದಾಗಿ ಈ ಕೂಗನ್ನು ಮತ್ತಷ್ಟು ಜೋರು ಮಾಡಿದವು. ತಾನಿರುವುದೇ ಒಡೆದು ಆಳುವುದಕ್ಕೆ ಎಂದು ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತ್ಯೇಕ ಧರ್ಮದ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು.
ಆದರೆ ಇದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಸಿದ್ದರಾಮಯ್ಯನವರನ್ನು ಒಡೆದು ಆಳುವ ಮುಖ್ಯಮಂತ್ರಿ ಎಂದೇ ಸಂಬೋಧಿಸಲಾಗುತ್ತಿದೆ. ಆದಾಗ್ಯೂ ವೀರಶೈವ ಮಹಾಸಭಾ, ಡಾ.ಶಿವಕುಮಾರ ಸ್ವಾಮೀಜಿ ಅವರು ಪ್ರತ್ಯೇಕ ಧರ್ಮ ಸ್ಥಾಪನೆಗೆ ವಿರೋಧಿಸಿದ್ದಾರೆ. ಆ ಮೂಲಕ ಪ್ರತ್ಯೇಕತಾವಾದಿಗಳಿಗೆ ತಿರುಗೇಟು ನೀಡಿದ್ದಾರೆ.
ಈಗ ಪ್ರತ್ಯೇಕ ಧರ್ಮದ ಕೂಗು ಎಬ್ಬಿಸಿದವರಿಗೆ ಈಗ ಮತ್ತೊಂದು ಹಿನ್ನಡೆಯಾಗಿದ್ದು, ನಾವು ಯಾವುದೇ ಕಾರಣಕ್ಕು ಪ್ರತ್ಯೇಕ ಲಿಂಗಾಯತ ಧರ್ಮದಲ್ಲಿ ಸೇರುವುದಿಲ್ಲ ಎಂದು ಕರ್ನಾಟಕ ರಾಜ್ಯ ಯುವ ಗಾಣಿಗ ಕ್ಷೇಮಾಭಿವೃದ್ಧಿ ಸಂಘ ಘೊಷಿಸಿದೆ.
ಈ ಕುರಿತು ಮಾಹಿತಿ ಆಯೋಗದ ಮಾಜಿ ಆಯುಕ್ತರೂ ಆದ ಸಂಘದ ಮುಖಂಡ ಡಾ.ಶೇಖರ್ ಸಜ್ಜನ್ ಮಾತನಾಡಿದ್ದು, ನಾವು ಪ್ರತ್ಯೇಕ ಧರ್ಮದ ಪರ ಎಂದಿಗೂ ಬೇಡಿಕೆ ಇಟ್ಟಿಲ್ಲ. ಹಾಗಾಗಿ ಯಾವುದೇ ಪ್ರತ್ಯೇಕ ಧರ್ಮಕ್ಕೂ ನಾವು ಸೇರಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹವನೂರ್ ಸಮಿತಿ ಶಿಫಾರಸಿನ ಪ್ರಕಾರ ಗಾಣಿಗ ಸಮುದಾಯ 2 ಎ ವರ್ಗಕ್ಕೆ ಬರುತ್ತದೆ ಎಂದು ಗುರುತಿಸಲಾಗಿದೆ. ಈಗಾಗಲೇ ನಾವು ಸರ್ಕಾರದಿಂದ ಮೀಸಲು ಸೌಲಭ್ಯ ಪಡೆಯುತ್ತಿದ್ದೇವೆ. ಹೀಗಿರುವಾಗ ಪ್ರತ್ಯೇಕ ಧರ್ಮದ ಜತೆ ಹೋಗಿ ಇರುವ ಸೌಲಭ್ಯ ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಗಾಣಿಗ ಸಮುದಾಯದವರನ್ನೂ ಲಿಂಗಾಯತ ಪ್ರತ್ಯೇಕ ಧರ್ಮದೊಳಗೆ ಸೇರಿಸಲು ಪ್ರತ್ಯೇಕತಾವಾದಿಗಳು ಇಚ್ಛಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು. ಈಗ ಗಾಣಿಗ ಸಮುದಾಯದ ಮುಖಂಡರೇ ನಾವು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸೇರುವುದಿಲ್ಲ ಎಂದಿರುವುದು ಪ್ರತ್ಯೇಕತಾವಾದಿಗಳಿಗೆ ಹಿನ್ನಡೆಯಾದಂತಾಗಿದೆ.
Leave A Reply