ಅಗಸ್ಟ್ ನಲ್ಲಿ ಮಂಗಳೂರು ಸೆಂಟ್ರಲ್ ನಲ್ಲಿ ಫ್ಲಾಟ್ ಫಾರಂ ನಿರ್ಮಾಣಕ್ಕೆ ಶಿಲಾನ್ಯಾಸ!!
- ನಾನು ನಮ್ಮ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ರೈಲ್ವೆ ಸಹಾಯಕ ಸಚಿವರಾಗಿರುವ ನಮ್ಮದೇ ರಾಜ್ಯದವರಾದ ಸುರೇಶ್ ಅಂಗಡಿಯವರನ್ನು ಭೇಟಿಯಾದ ವಿಚಾರ ನಿಮಗೆ ನಿನ್ನೆ ತಿಳಿಸಿದ್ದೆ. ನಾನು ಕೊಟ್ಟ ಮನವಿ ಪತ್ರದಲ್ಲಿ ಬರೆದಿರುವ ಪ್ರಮುಖ ವಿಚಾರಗಳಲ್ಲಿ ಒನ್ ಬೈ ಒನ್ ಇವತ್ತು ನಿಮ್ಮ ಮುಂದೆ ಇಡುತ್ತಿದ್ದೇನೆ. ನಮಗೆ ಮಂಗಳೂರು-ಬೆಂಗಳೂರು ರೈಲು ಶುರುವಾದಾಗ ಸಹಜವಾಗಿ ತುಂಬಾ ಖುಷಿಯಾಗಿತ್ತು. ಆದರೆ ಅದು ಮೈಸೂರು ಮಾರ್ಗವಾಗಿ ಹೋಗುತ್ತೆ ಎಂದಾಗ ಆ ರೈಲು ತೆಗೆದುಕೊಳ್ಳುವ ಅವಧಿಯ ಬಗ್ಗೆ ಒಂದಿಷ್ಟು ಅಸಮಾಧಾನ ಇತ್ತು. ಅದರ ನಂತರ ಮತ್ತೊಂದು ರೈಲು ಪ್ರಾರಂಭವಾಗಿ ಅದು ಶ್ರವಣಬೆಳಗೊಳದ ಮೂಲಕ ಬೆಂಗಳೂರಿಗೆ ಹೋಗಿ ಬರುತ್ತದೆ ಎಂದು ಗೊತ್ತಾದಾಗ ಅದು ಹೊಸ ಉತ್ಸಾಹವನ್ನು ನೀಡಿತ್ತು. ಯಾಕೆಂದರೆ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಹೋಗುವ ರಾತ್ರಿ ರೈಲು ತೆಗೆದುಕೊಳ್ಳುವುದಕ್ಕಿಂತ ಕಡಿಮೆ ಅವಧಿಯನ್ನು ಸುಮಾರು ಒಂದೂವರೆ ಗಂಟೆಯಷ್ಟು ಕಡಿಮೆ ಅವಧಿಯನ್ನು ಶ್ರವಣಬೆಳಗೊಳ ಮಾರ್ಗವಾಗಿ ಹೋಗುವ ರೈಲು ತೆಗೆದುಕೊಳ್ಳುತ್ತದೆ. ಇದರಿಂದ ಜನರ ಸಮಯ ಉಳಿತಾಯವಾಗಲಿದೆ. ಜನರು ಈ ರೈಲು ಅಂದರೆ 16511\16513 ಇದರ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಆದರೆ ವಿಚಾರ ಏನೆಂದರೆ ಈ ಶ್ರವಣಬೆಳಗೊಳ ಮಾರ್ಗದ ಬೆಂಗಳೂರು-ಮಂಗಳೂರು ರೈಲು ವಾರದಲ್ಲಿ ಮೂರು ದಿನ ಮಾತ್ರ ಸಂಚಾರ ಮಾಡುತ್ತದೆ. ಉಳಿದ ಮೂರು ದಿನ ಮೈಸೂರು ಮಾರ್ಗದಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಜನ ಬೆಂಗಳೂರಿಗೆ ಹೋಗಬೇಕು. ನಾನು ಸುರೇಶ್ ಅಂಗಡಿಯವರ ಬಳಿ ವಿನಂತಿ ಮಾಡಿದ್ದು ಏನೆಂದರೆ ಪ್ರತಿನಿತ್ಯ ಮಂಗಳೂರಿನಿಂದ ಬೆಂಗಳೂರಿಗೆ ಶ್ರವಣಬೆಳಗೊಳ ಮಾರ್ಗವಾಗಿಯೇ ರೈಲು ಸಂಚರಿಸಲಿ. ಇದರಿಂದ ಜನರ ಸಮಯ ಉಳಿತಾಯ ಮಾತ್ರವಲ್ಲ, ರೈಲ್ವೆ ಇಲಾಖೆಗೆ ಕೂಡ ಇಂಧನ ಉಳಿತಾಯವಾಗಲಿದೆ ಎಂದೆ.
ನಂತರ ನಾನು ವಿನಂತಿ ಮಾಡಿದ್ದು ಮಂಗಳೂರಿನಿಂದ ಬೆಂಗಳೂರಿಗೆ ಕಾರವಾರದ ತನಕ ಬಂದು ಹೋಗುವ ಹಗಲು ರೈಲಿನ ಬಗ್ಗೆ. ಅದು ಪ್ರತಿನಿತ್ಯ ಹೋಗಬೇಕಾಗಿದ್ದದ್ದು ಈಗ ವಾರದಲ್ಲಿ ಮೂರು ದಿನ ಮಾತ್ರ ಓಡುತ್ತಿದೆ. ಹಿಂದೆ ಅದೇ ರೈಲು ಹಗಲಿನ ಹೊತ್ತಿನಲ್ಲಿ ಮಂಗಳೂರು-ಬೆಂಗಳೂರು ನಡುವೆ ನಿತ್ಯ ಓಡಾಡಿಕೊಂಡಿತ್ತು. ಈಗ ಯಾಕೆ ಇಳಿಸಲಾಗಿದೆಯೋ?
ಅದರ ನಂತರ ನನ್ನ ಕಳಕಳಿ ಇದ್ದದ್ದು ನಮ್ಮ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಗ್ಗೆ. ನನ್ನ ಹಿತೈಷಿಗಳಿಗೆ ಒಂದು ವಿಷಯ ಗೊತ್ತಿರುತ್ತೆ, ಅದೇನೆಂದರೆ ನೀವು ಗೋವಾದಿಂದ ಮಂಗಳೂರಿಗೆ ಬರುವವರಾಗಿದ್ದರೆ ನೀವು ಪ್ರಯಾಣಿಸುವ ರೈಲು ಮಂಗಳೂರು ಹೊರವಲಯದ ತೋಕೂರಿನಲ್ಲಿ ಇಳಿಸಂಜೆ ಸುಮಾರು ಏಳು-ಏಳುವರೆ ಗಂಟೆಗೆ ಬಂದು ಮುಟ್ಟಿದರೂ ಅದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಂದು ನಿಲ್ಲುವಾಗ ಒಂಭತ್ತೂವರೆಯೋ ಹತ್ತು ಗಂಟೆಯೋ ಆಗುತ್ತದೆ. ಇದು ಯಾಕೆಂದರೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಫ್ಲಾಟ್ ಫಾರಂ ಕೊರತೆ ಎನ್ನುವ ಉತ್ತರ. ಹಾಗಾದರೆ ಈ ಸಮಸ್ಯೆಯನ್ನು ನಮ್ಮ ನಾಗರಿಕರು ಯಾವತ್ತೂ ಅನುಭವಿಸಲೇಬೇಕಾ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ ಯಾವತ್ತೋ ಬಂದಾಗಿದೆ. ಮೂರು ವರ್ಷಗಳ ಹಿಂದೆನೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ 4 ನೇ ಮತ್ತು 5 ನೇ ಫ್ಲಾಟ್ ಫಾರಂ ನಿರ್ಮಾಣಕ್ಕೆ 14 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದಕ್ಕೆ ನಾನೇ ಸಾಕ್ಷಿ. ನಾನು ಆಗ ರೈಲ್ವೆಯ ಡಿಆರ್ ಸಿಸಿ ಸದಸ್ಯನಾಗಿದ್ದೇನೆ. ಅನುದಾನ ಸ್ಯಾಂಕ್ಷನ್ ಆಗಿ ಮೂರು ವರ್ಷವಾದರೂ ಒಂದು ಇಟ್ಟಿಗೆ ಇಲ್ಲಿ ಸರಿಸುವ ಕೆಲಸ ರೈಲ್ವೆ ಬೋರ್ಡ್ ನವರು ಮಾಡಿಲ್ಲ. ನಾನು ಈ ವಿಷಯವನ್ನು ಸುರೇಶ್ ಅಂಗಡಿಯವರಿಗೆ ಮನವರಿಕೆ ಮಾಡಿದ ತಕ್ಷಣ ಅವರು ಮೊದಲು ಮಾಡಿದ್ದೇನು ಗೊತ್ತೆ?
ತಮ್ಮ ಪಿಎಯವರನ್ನು ಕರೆದರು. ಶ್ರವಣಬೆಳಗೊಳ ಮಾರ್ಗದ ರೈಲು ನಿತ್ಯ ಸಂಚರಿಸಬೇಕು ಎಂದರು. ಮಂಗಳೂರು-ಬೆಂಗಳೂರು ಕಾರವಾರ ತನಕದ ರೈಲು ಕೂಡ ನಿತ್ಯ ಬೆಳಿಗ್ಗೆ ಓಡಾಡಬೇಕು ಎಂದರು. ಇನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 4 ಮತ್ತು 5 ನೇ ಫ್ಲಾಟ್ ಫಾರಂ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಅಗಸ್ಟ್ 20 ರ ಒಳಗೆ ನಿಗದಿಪಡಿಸಿ ಎಂದರು. ಅಲ್ಲಿಗೆ ನನ್ನ ಊರಿನ ನಾಗರಿಕರ ಬಹುದಿನಗಳ ಕನಸು ಈಡೇರುವ ಲಕ್ಷಣ ಕಾಣಿಸಿದೆ. ಇಷ್ಟು ಶೀಘ್ರದಲ್ಲಿ ಒಬ್ಬ ಜನಸಾಮಾನ್ಯನ ಮನವಿಗೆ ಓಗೊಟ್ಟ ಸರಕಾರವನ್ನು ನಾನು ನೋಡಿಲ್ಲ, ಇನ್ನೂ ಇದೆ. ನಾಳೆ ಸಿಗೋಣ!
Leave A Reply