ಅತ್ತು ಕರೆದು ಸಚಿವರಾಗಿ ಔತಣ ಉಣ್ಣುವ ದರ್ದು ಕರಾವಳಿಗೆ ಬರಬಾರದು!!
ಅತ್ತು ಕರೆದು ಔತಣ ಮಾಡಿಸಿಕೊಂಡರು ಎನ್ನುವ ಮಾತಿದೆ. ಕರ್ನಾಟಕ ರಾಜ್ಯದಲ್ಲಿ ಈಗ ಇರುವ ಸರಕಾರದಲ್ಲಿ ಯಡಿಯೂರಪ್ಪನವರು ಅತ್ತು ಕರೆದು ಔತಣ ಮಾಡಿಸಿಕೊಂಡರೋ ಅಥವಾ ಬಿಜೆಪಿ ಸರಕಾರ ಬರಲು ಕಾರಣರಾದ ಅನರ್ಹ ಶಾಸಕರು ಮಂತ್ರಿಯಾಗಲು ಅತ್ತು ಕರೆದು ಔತಣ ಮಾಡಿಸಿಕೊಂಡರೋ ಎನ್ನುವುದೇ ಈಗ ಉಳಿದಿರುವ ಪ್ರಶ್ನೆ.
ಯಡಿಯೂರಪ್ಪನವರಿಗೆ ಸಿಎಂ ಆಗಬೇಕಿತ್ತು. ಅದಕ್ಕೆ ಅತ್ತು ಕರೆದು ಅನರ್ಹ ಶಾಸಕರನ್ನು ಒಳಗೆ ಸೇರಿಸಿಕೊಂಡರು. ಇನ್ನು ಅನರ್ಹ ಶಾಸಕರಾಗಿದ್ದವರಿಗೆ ಮಂತ್ರಿಯಾಗಬೇಕಿತ್ತು, ಅದಕ್ಕೆ ಗೆದ್ದು ಎಂಭತ್ತು ದಿನಗಳ ಬಳಿಕ ಅತ್ತು ಕರೆದು ಮಂತ್ರಿಯಾದರು. ಈ ನಡುವೆ ವಿಪಕ್ಷದವರು ಅಧಿಕಾರ ಹೋಗಿರುವ ದು:ಖದಲ್ಲಿ ಅತ್ತು ಕರೆದು ತಮ್ಮೊಳಗಿನ ಗುಂಪುಗಾರಿಕೆ, ನಾಯಕತ್ವ ಗೊಂದಲಕ್ಕೆ ಅಂತ್ಯ ಸಿಗದೇ ಹೈರಾಣಾಗಿ ವಿವಾದ ಎನ್ನುವ ಔತಣ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಇನ್ನು ಭಾರತೀಯ ಜನತಾ ಪಾರ್ಟಿಯ ಮೂಲ ಶಾಸಕರು ಸಚಿವರಾಗದೇ ಇದ್ದದ್ದಕ್ಕೆ ಅತ್ತು ಕರೆದು ಮಂತ್ರಿ ಎನ್ನುವ ಔತಣ ಯಾವಾಗ ಸಿಗುತ್ತದೋ ಎಂದು ಕಾಯುವಂತಹ ಪರಿಸ್ಥಿತಿ ಇದೆ. ಇನ್ನು ಬಿಜೆಪಿ ಅಧಿಕಾರದ ಹೊಸ್ತಿಲು ತುಳಿಯಲು ಕಾರಣಿಕೃತರಾಗಿರುವ ಸವದಿ ಹಾಗೂ ಯೋಗೀಶ್ವರ್ ಮತ್ತು ಅವರೊಂದಿಗೆ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಉಮೇಶ್ ಕತ್ತಿ ಅತ್ತು ಕರೆದು ಔತಣ ಸಿಗುತ್ತದೆಯಾ ಇಲ್ಲವಾ ಎನ್ನುವ ಹಂತಕ್ಕೆ ಬಂದು ಮುಟ್ಟಿದ್ದಾರೆ. ಸವದಿ ಉಪಮುಖ್ಯಮಂತ್ರಿಯಾಗಿರಬಹುದು. ಆದರೆ ಅವರು ಚುನಾವಣೆಯಲ್ಲಿ ಸೋತಿರುವುದರಿಂದ ಅವರು ಎಂಎಲ್ ಸಿ ಆಗುವ ತನಕ ಅವರಿಗೂ ಕಿರಿಕಿರಿಯೇ. ಈ ಎಲ್ಲ ಅತ್ತು ಕರೆದು ಔತಣ ಮಾಡಿಸಿಕೊಳ್ಳುವವರ ನಡುವೆ ನಿಜಕ್ಕೂ ಅತ್ತು ಕರೆದು ಔತಣ ಅಂದರೆ ಅಭಿವೃದ್ಧಿ ಮಾಡಿಸಿಕೊಳ್ಳುವ ಪರಿಸ್ಥಿತಿ ಈ ರಾಜ್ಯದ ಮತದಾರರದ್ದು.
ಯಾವಾಗೆಲ್ಲ ರಾಜಕೀಯ ಅತಂತ್ರ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬಂದಿದ್ದೆಯೋ ಆವಾಗೆಲ್ಲ ಕೆಲವರು ಅತ್ತಿದ್ದಾರೆ, ಕೆಲವರು ಕರೆದಿದ್ದಾರೆ, ಇನ್ನು ಕೆಲವು ಔತಣ ಮಾಡಿಸಿಕೊಂಡಿದ್ದಾರೆ. ಆದರೆ ಆಡಳಿತ ಮಾತ್ರ ಸತ್ತುಹೋಗಿದೆ. ನಾನು ಈಗ ವಿನಂತಿಸುವುದೇನೆಂದರೆ ಮೊದಲ ಎರಡು ವರ್ಷ ಹೇಗೋ ನಡೆದುಹೋಗಿದೆ. ಇನ್ನು ಭರ್ತಿ ಮೂರು ವರ್ಷ ಉಳಿದುಕೊಂಡಿದೆ. ಜನ ಕೊನೆಗೆ ಲೆಕ್ಕ ಹಾಕುವುದು ಯಡಿಯೂರಪ್ಪ ಆಗಲಿ ಇನ್ನೊಬ್ಬರಾಗಲಿ ಎಷ್ಟು ದಿನ ಸಿಎಂ ಆಗಿದ್ರು ಎಂದಲ್ಲ, ಎಷ್ಟು ಅಭಿವೃದ್ಧಿ ಮಾಡಿದ್ರು ಎನ್ನುವುದು ಮಾತ್ರ. ಆದ್ದರಿಂದ ಬಿಜೆಪಿಯ ಮೂಲ ಶಾಸಕರು ಒಂದಿಷ್ಟು ತಾಳ್ಮೆ ಇಟ್ಟುಕೊಂಡು ಕಾಯುವುದು ಒಳ್ಳೆಯದು. ಯಾರೂ ಹುಟ್ಟುವಾಗ ಸಚಿವರಾಗಿಯೇ ಹುಟ್ಟಿರುವುದಿಲ್ಲ. ಸಚಿವರಾಗಿಯೇ ಸತ್ತರೂ ಮೇಲೆ ಸ್ವರ್ಗ ಗ್ಯಾರಂಟಿ ಎಂದು ಭಗವಂತ ಹೇಳಿಲ್ಲ. ಹಾಗಿರುವಾಗ ನೀವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅಂಗಾರ, ಹಾಲಾಡಿಯವರಂತೆ ಐದಾರು ಬಾರಿ ಆರಾಮವಾಗಿ ಶಾಸಕರಾಗಿಯೇ ಇರಬಹುದು.
ಕರಾವಳಿಯ ಶಾಸಕರು ಸಾಮಾನ್ಯವಾಗಿ ಲಾಬಿ ಮಾಡುವುದಿಲ್ಲ. ಈ ಬಾರಿಯೂ ಮಾಡಿಲ್ಲ. ಕೋಟಾ ಶ್ರೀನಿವಾಸ ಪೂಜಾರಿಯವರಂತಹ ಭ್ರಷ್ಟಾಚಾರರಹಿತ ಸಚಿವರು ನಮಗೆ ಸಿಕ್ಕಿದ್ದಾರೆ. ಅವರಿಂದ ಕೆಲಸ ಮಾಡಿಸಿಕೊಳ್ಳುವ ಬಗ್ಗೆ ಇಲ್ಲಿನ ಶಾಸಕರು ಪ್ರಯತ್ನಿಸಬಹುದು. ಇನ್ನು ನಮ್ಮ ಕೆಲವು ಶಾಸಕರಿಗೆ ರಾಜ್ಯದ ಪ್ರಭಾವಿ ಸಚಿವರ ಕೃಪಾಕಟಾಕ್ಷ ಇದೆ. ಇನ್ನು ಕೆಲವರಿಗೆ ನಳಿನ್ ಕುಮಾರ್ ಕಟೀಲ್ ಅವರ ಬೆಂಬಲವಿದೆ. ಎಲ್ಲವೂ ಸೇರಿದರೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನುದಾನ ಹೆಚ್ಚಿಗೆ ತರಲು ಕೆಲಸ ಮಾಡಬಹುದಾಗಿದೆ. ಇನ್ನು ರಸ್ತೆ, ಚರಂಡಿ, ತಡೆಗೋಡೆ ಅಭಿವೃದ್ಧಿ ಎಲ್ಲರೂ ಮಾಡುತ್ತಲೇ ಇದ್ದೀರಿ. ಅದರೊಂದಿಗೆ ಪಚ್ಚನಾಡಿ, ತುಂಬೆ ಡ್ಯಾಂ, ಕದ್ರಿ ಪಾರ್ಕ್, ಮಂಗಳಾ ಕಾರ್ನೀಶ್ ಯೋಜನೆ ತರಹದ ದೂರದೃಷ್ಟಿ ಇರುವ ಕೆಲಸವೂ ಮಾಡಿ. ಮೂರು ವರ್ಷಗಳ ಬಳಿಕ ಜನರು ಪ್ರಶ್ನೆ ಕೇಳಲಿದ್ದಾರೆ. ಸಚಿವರಾಗಿದ್ದು ನೀವು ಏನು ಮಾಡದಿದ್ದರೂ ಮನೆಗೆ ಕಳುಹಿಸುತ್ತಾರೆ, ಕೇವಲ ಶಾಸಕರಾಗಿಯೂ ಅನೇಕ ಕೆಲಸ ಮಾಡಿದರೆ ಜೈ ಎನ್ನುತ್ತಾರೆ. ಆಯ್ಕೆ ನಿಮ್ಮ ಕೈಯಲ್ಲಿದೆ. ಜನ ಬಿಜೆಪಿ ಸರಕಾರವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ ಹಾಗೇ ವಿಪಕ್ಷವನ್ನು ಕೂಡ!
Leave A Reply