ನಾಡಿದ್ದು ಬಾಂಗ್ಲಾ ವಿರುದ್ಧ ನಾವ್ಯಾಕೆ ಆಡಬೇಕು?
ಕಾಶ್ಮೀರ ಮೆಡಿಕಲ್ ಕಾಲೇಜಿನಲ್ಲಿ ಪಾಕಿಸ್ತಾನ ಗೆದ್ದ ಸಂಭ್ರಮ ಆಚರಿಸಲಾಯಿತು. ಇಂತಹುದು ದೇಶದ ಕೆಲವು ಕಡೆ ಆಗಿದೆ. ದುಬೈ ಕ್ರೀಡಾಂಗಣದಲ್ಲಿ ಮೊನ್ನೆ ಬಾಲ್ ಮತ್ತು ಬ್ಯಾಟಿನಿಂದ ನಡೆದದ್ದು ಯುದ್ಧವಲ್ಲ. ಅದು ಕ್ರಿಕೆಟ್. ಆ ದಿನ ಉತ್ತಮ ಆಡಿದವರು ಗೆದ್ದಿರುತ್ತಾರೆ. ಒಂದು ವೇಳೆ ಭಾರತ ಗೆದ್ದಿದ್ದರೂ ಅದರಿಂದ ಭಾರತೀಯರು ಎದೆಯುಬ್ಬಿಸಿ ನಡೆಯುವಂತದ್ದು ಏನೂ ಇರಲಿಲ್ಲ. ಒಂದು ವೇಳೆ ಸೋತರೂ ಭಾರತದ ಅಂದಾಜು 130 ಕೋಟಿ ಜನಸಂಖ್ಯೆ ತಲೆ ತಗ್ಗಿಸಿ ನಡೆಯಬೇಕಾದ ಸಂಗತಿ ಏನಲ್ಲ. ಅದು ಕೇವಲ ಹನ್ನೊಂದು ಮಂದಿ ಬ್ಯಾಟಿಂಗ್ ಮತ್ತು ಬೌಲಿಂಗ್ ಚೆನ್ನಾಗಿ ಗೊತ್ತಿದೆ ಎಂದು ಪರೀಕ್ಷೆಗೆ ಒಳಪಟ್ಟು ಆಯ್ಕೆಯಾದವರ ನಡುವಿನ ಆಟ ಅಷ್ಟೇ. ಒಂದು ವೇಳೆ ಭಾರತ ಗೆದ್ದಿದ್ದರೂ ಇಮ್ರಾನ್ ಖಾನ್ ಮರುದಿನ ಬಂದು ಮೋದಿ ಕಾಲ ಕೆಳಗೆ ತನ್ನ ತಲೆ ಇಟ್ಟು ಅಳುವುದಿಲ್ಲ. ಒಂದು ವೇಳೆ ಭಾರತ ಸೋತರೂ ಅಮಿತ್ ಶಾ ಮೀಸೆ ತೆಗೆಯಬೇಕಾಗಿಲ್ಲ. ಇದೇನು ರಾಜತಾಂತ್ರಿಕ ಸಂಬಂಧ ಹೊಂದಿರುವ ಫಲಿತಾಂಶ ಅಲ್ಲ. ಭಾರತ ಒಂದಿಷ್ಟು ದುರಾದೃಷ್ಟದಿಂದ ನೋಬಾಲ್ ಗೆ ರಾಹುಲ್ ವಿಕೆಟ್ ಕಳೆದುಕೊಂಡದ್ದು ಬಿಟ್ಟರೆ ಭಾರತದ ದಾಂಡಿಗರು ಪಾಕಿಸ್ತಾನದ ಜ್ಯೂನಿಯರ್ ಅಫ್ರಿದಿಯನ್ನು ಸರಿಯಾಗಿ ಜಡ್ಜ್ ಮಾಡದೇ ಕಾಲುಜಾರಿ ಬಿದ್ದರು ಎಂದೇ ಹೇಳಬಹುದು. ಇನ್ನು ಮೊಹಮ್ಮದ್ ಶಮಿಯವರು ಹಾಕಿದ ಪಂದ್ಯದ 17 ಓವರ್ ಅತ್ಯಂತ ಕಳಪೆಯಾಗಿರಬಹುದು. ಹಾಗಂತ ಇಲ್ಲಿ ಶಮಿ ಮುಸ್ಲಿಂ ಆಗಿರುವುದರಿಂದ ಹೀಗೆ ಚೆಂಡು ಎಸೆದರು ಎಂದು ಹೇಳಬಾರದು. ಅಷ್ಟಕ್ಕೂ ಪಾಕಿಸ್ತಾನದ ಒಪನರ್ ಬಾಬರ್ ಏನೂ ಶಮಿಯ ಚಿಕ್ಕಪ್ಪನ ಮಗನಲ್ಲ. ಶಮಿಯವರ ಎಸೆತ ಇನ್ನಷ್ಟು ನಿಖರವಾಗಿ ಬಾಬರ್ ಬೋಲ್ಡ್ ಆಗಿದ್ದರೆ ಆಗ ಇದೇ ಶಮಿಯನ್ನು ನಾವು ನಮ್ಮವ ಎನ್ನುತ್ತಿರಲಿಲ್ಲವೇ. ಹೆಗಲ ಮೇಲೆ ಹೊತ್ತು ಮೆರೆಸುತ್ತಿರಲಿಲ್ಲವೆ. ಇದೇ ಶಮಿಯ ಮಗು 2016 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುವಾಗ ಇದೇ ಶಮಿ ಭಾರತಕ್ಕಾಗಿ ಆಡಿ ವಿಕೆಟ್ ಕಬಳಿಸಲಿಲ್ಲವೆ. ಇದೇನು ಆಗುತ್ತಿದೆ ಎಂದರೆ ಭಾರತ-ಪಾಕ್ ಪಂದ್ಯವನ್ನು ನಾವು ನಮ್ಮ ದೇಶಪ್ರೇಮ ತೋರಿಸಲು ವೇದಿಕೆಯನ್ನಾಗಿ ಮಾಡಿಕೊಂಡಿದ್ದೇವೆ. ಒಂದು ವೇಳೆ ನಮಗೆ ಅಷ್ಟು ದೇಶಪ್ರೇಮ ಇದ್ದರೆ ಮೊನ್ನೆ ಅದೇ ಪಂದ್ಯದ ಮೊದಲು ಆದ ಘಟನೆ ಮತ್ತೆ ಆಗುವುದಿಲ್ಲ.
ನೀವು ಮೊನ್ನೆ ಪಂದ್ಯ ಶುರುವಾಗುವ ಮೊದಲು ಭಾರತದ ಆಟಗಾರರು ಕೆಲವು ಕ್ಷಣ ಒಂದು ಮೊಣಕಾಲಿನ ಮೇಲೆ ಕುಳಿತರಲ್ಲ. ಅದು ಯಾಕೆಂದು ಯಾರಿಗಾದರೂ ಆವತ್ತು ಗೊತ್ತಾಗಿತ್ತಾ? ಯಾವುದೋ ಘಟನೆಗೆ ಸಂತಾಪ ಸೂಚಿಸಲು ಹಾಗೆ ಮಾಡಿರಬಹುದು ಎಂದು ಒಂದು ಕ್ಷಣ ಅನಿಸಿರಬಹುದು. ಆದರೆ ವಾಸ್ತವವಾಗಿ ಅವರು ಹಾಗೆ ಕುಳಿತದ್ದು ಅಮೇರಿಕಾದಲ್ಲಿ ವರ್ಣಭೇದ ನೀತಿಯಿಂದ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಪರ ಸಂತಾಪ ಸೂಚಿಸಲು ಎನ್ನುವುದು ಅನೇಕರಿಗೆ ಗೊತ್ತಿಲ್ಲ. ದುಬೈಯಲ್ಲಿ ನಡೆಯುತ್ತಿರುವ ಈ ಇಂಡೋ-ಪಾಕ್ ಕ್ರಿಕೆಟ್ ಮೂಲಕ ಐಸಿಸಿ ಏನೋ ಸಂದೇಶವನ್ನು ವಿಶ್ವಕ್ಕೆ ನೀಡಿದೆ. ಈಗ ನಾನು ಹೇಳುವುದು ಅಲ್ಲಿ ಬಾಂಗ್ಲಾ ದೇಶದಲ್ಲಿ ನಿತ್ಯ ಅಸಂಖ್ಯಾತ ಹಿಂದೂಗಳನ್ನು ಕೊಲ್ಲಲಾಗುತ್ತಿದೆಯಲ್ಲ, ಅದು ಮಾನವೀಯತೆಯ ವಿರುದ್ಧ ಅಲ್ಲವೇ. ಹಿಂದೂ ದೇವಾಲಯಗಳ ಪುರೋಹಿತರನ್ನು ಹಿಂಸಿಸಿ ಕೊಂದು ಹಾಕುತ್ತಿದ್ದಾರಲ್ಲ, ಅದರ ವಿರುದ್ಧ ಯಾಕೆ ಹೀಗೆ ಮೊಣಕಾಲಿನಲ್ಲಿ ಕುಳಿತುಕೊಳ್ಳುವ ಮೂಲಕ ಒಂದು ಮೌನ ಪ್ರತಿಭಟನೆಯನ್ನಾದರೂ ಮಾಡಬಾರದು. ಮಾಡಿದರೆ ಈ ಟೂರ್ನಿಯಲ್ಲಿರುವ ಬಾಂಗ್ಲಾ ದೇಶಕ್ಕೆ ಅವಮಾನವಾಗುತ್ತಾ? ಹೋಗಲಿ ಅವರ ಕಸಿನ್ ಪಾಕಿಸ್ತಾನಕ್ಕೇ ಶೇಮ್ ಅನಿಸುತ್ತದೆಯಾ? ಹಾಗಾದರೆ ಬಾಂಗ್ಲಾದ ಹಿಂದೂಗಳು ಮಾನವರಲ್ಲವೇ? ಹಾಗಂತ ಈ ಟೂರ್ನಿಯಲ್ಲಿ ನಮಗೆ ಬಾಂಗ್ಲಾ ಎದುರಾಳಿಯಾಗಿ ಸಿಕ್ಕರೆ ಅದನ್ನು ಚಚ್ಚಿ ಹಾಕುವ ಮೂಲಕ ಅಲ್ಲಿ ನಮ್ಮವರ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಕೂಡ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ನಾವು ಬಾಂಗ್ಲಾ ವಿರುದ್ಧ ಇಲ್ಲಿ ಗೆದ್ದರೆ ಅಲ್ಲಿ ನಮ್ಮ ಅಮಾಯಕ ಹಿಂದೂಗಳ ಹತ್ಯೆಗೆ ನ್ಯಾಯ ಸಿಕ್ಕಿದಂತೆ ಆಗುವುದಿಲ್ಲ. ಯಾಕೆಂದರೆ ಎಗೈನ್ ಇದು ಕ್ರೀಡೆ. ಆದರೆ ಕನಿಷ್ಟ ಪಂದ್ಯದ ಮೊದಲು ಮೊಣಕಾಲಿನ ಪ್ರತಿಭಟನೆ ಮಾಡಬಹುದು. ಇನ್ನು ಬಾಂಗ್ಲಾ ವಿರುದ್ಧ ಆಡುವಾಗ ನಮ್ಮವರು ಕಪ್ಪು ಪಟ್ಟಿ ಧರಿಸಬಹುದು. ಹಾಗಂತ ಬಿಸಿಸಿಐಯಲ್ಲಿ ಕುಳಿತಿರುವ ಬಾಸ್ ಗಳು ತೀರ್ಮಾನಿಸಬೇಕು. ಯಾಕೆಂದರೆ ಕಳೆದ ಬಾರಿ ಫುಲ್ವಾಮಾ ದಾಳಿಯಾದಾಗ ನಮ್ಮ ನಲ್ವತ್ತು ಯೋಧರು ವೀರಮರಣ ಹೊಂದಿದ್ದರಲ್ಲ. ಆಗ ಪಾಕ್ ಪ್ರಚೋದಿತ ಉಗ್ರಗಾಮಿಗಳ ಕೃತ್ಯ ವಿರೋಧಿಸಿ ಧೋನಿ ಕರಕವಚಕ್ಕೆ ಒಂದು ಲೋಗೋ ಧರಿಸಿದ್ದರು. ಆ ಮೂಲಕ ತಣ್ಣನೆಯ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಧೋನಿಯವರಿಗೆ ಪಂದ್ಯದ ಶುಲ್ಕದ ಮೇಲೆ ದಂಡ ವಿಧಿಸಲಾಗಿತ್ತು. ನಮ್ಮ ದೇಶದಲ್ಲಿ ಯೋಧರು ಶಹಿದ್ ಆದರೆ ನಮ್ಮ ಯಾವ ಗೆಸ್ಚರ್ ಕೂಡ ಇಲ್ಲ. ಅದೇ ಅಮೇರಿಕಾದಲ್ಲಿ ಆದರೆ ನಮಗೆ ಮಾನವೀಯತೆ ನೆನಪಿಗೆ ಬರುತ್ತದೆ. ನಾನು ಅಮೇರಿಕಾದಲ್ಲಿ ಆದದ್ದಕ್ಕೆ ನಮ್ಮವರು ಮೋಣಕಾಲು ಊರಬಾರದಿತ್ತು ಎನ್ನುವುದಿಲ್ಲ. ಏಕೆಂದರೆ ಬಿಸಿಸಿಐಗೆ ಪ್ರತಿ ಸೆಕೆಂಡ್ ಕೂಡ ರಾಜಕೀಯ ಮಾಡಬೇಕು ಎಂದು ಅನಿಸಬಹುದು. ಆದರೆ ನಮಗೆ ಅಮೇರಿಕಾದವರು ಕೂಡ ಮನುಷ್ಯರೇ ಆಗಿದ್ದಾರೆ. ಆದರೆ ಕ್ರಿಕೆಟ್ ಹಿಂದಿನ ತಲೆಗಳಿಗೆ ಮಾನವೀಯತೆ ಮುಖ್ಯವಲ್ಲ. ಸಂದೇಶ ಮುಖ್ಯ!
Leave A Reply