ರೌಡಿಗಳನ್ನು ರಾಜಕಾರಣಿಗಳು ಎಲ್ಲಿಡಬೇಕೋ ಅಲ್ಲಿಯೇ ಬಿಡಬೇಕು!!
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೆಂದ್ರ ಪಡ್ನವೀಸ್ ಒಂದು ನುಡಿಮುತ್ತನ್ನು ತಮ್ಮ ಟ್ವಿಟರ್ ನಲ್ಲಿ ಬರೆದಿದ್ದಾರೆ. ಅದೇನೆಂದರೆ “ನಾನು ಕೆಸರಿನಲ್ಲಿ ಹಂದಿಗಳೊಂದಿಗೆ ಕಾಳಗಕ್ಕೆ ಇಳಿಯುವುದಿಲ್ಲ. ಅದರಿಂದ ನನಗೆ ಯಾವ ಉಪಯೋಗವೂ ಇಲ್ಲ. ಆದರೆ ಹಂದಿಗಳು ಅದನ್ನೇ ಬಯಸುತ್ತಿವೆ” ಎನ್ನುವ ಅರ್ಥದ ಮಾತುಗಳನ್ನು ಬರೆದಿದ್ದಾರೆ. ಅವರು ಹಂದಿ ಎಂದು ಯಾರನ್ನು ಉದ್ದೇಶಿಸಿ ಬರೆದಿದ್ದಾರೆ ಎನ್ನುವುದು ಇಡೀ ಮಹಾರಾಷ್ಟ್ರಕ್ಕೆ ಗೊತ್ತು. ಅದನ್ನು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಹೀಗೆ ಅವರು ಬರೆಯುವ ಹಿಂದಿನ ದಿನ ಅವರಿಗೂ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರಿಗೂ ಸಾಕಷ್ಟು ಮಾತಿನ ಕದನ ಆಗಿರುವುದನ್ನು ಇಡೀ ರಾಷ್ಟ್ರ ಗಮನಿಸಿದೆ. ಯಾವಾಗ ತನ್ನ ಅಳಿಯನನ್ನು ಎನ್ ಸಿಬಿ ಮುಂಬೈ ಘಟಕದ ಮುಖ್ಯಸ್ಥ ಸಮೀರ್ ವಾಖಂಡೆ ಬಂಧಿಸಿದ್ದರೋ ಅದರ ಬಳಿಕ ಮಲಿಕ್ ನಿರಂತರವಾಗಿ ಸಮೀರ್ ವಿರುದ್ಧ ನಿತ್ಯ ಬೆಳಗ್ಗಿನಿಂದ ರಾತ್ರಿಯ ತನಕ ಬಾಣಗಳನ್ನು ಬಿಡುತ್ತಿದ್ದಾರೆ. ಇದು ಅವರಿಗೆ ಅನಿವಾರ್ಯವೂ ಹೌದು. ಅವರ ಅಳಿಯ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರಬಹುದು. ಆದರೆ ಒಬ್ಬ ಎನ್ ಸಿಪಿ ಪಕ್ಷದ ಪ್ರಬಲ ನಾಯಕ ಹಾಗೂ ಸಚಿವರೂ ಆಗಿರುವ ವ್ಯಕ್ತಿಯ ಅಳಿಯನನ್ನು ಒಬ್ಬ ಎನ್ ಸಿಬಿ ಅಧಿಕಾರಿ ವಾರಗಟ್ಟಲೆ ಸೆಲ್ ನಲ್ಲಿ ಕೂರಿಸುವುದೆಂದರೆ ಸಚಿವರ ಮಾನ ಮರ್ಯಾದೆ ಏನಾಗಬೇಡಾ? ಸಚಿವರು ಕೈಲಾಗದವರು ಎಂದು ಅವರ ಕ್ಷೇತ್ರದ ಜನ ಅಂದುಕೊಳ್ಳುವುದಿಲ್ಲವೋ. ಹಾಗೆ ಇಲ್ಲಿ ಮಲಿಕ್ ಏನು ಶಪಥಗೈದಿದ್ದಾರೆ ಎಂದರೆ ಸಮೀರ್ ಅವರನ್ನು ಜೈಲಿನ ಒಳಗೆ ಕೂರಿಸುವ ತನಕ ವಿರಮಿಸುವುದಿಲ್ಲ. ಆದರೆ ಅವರಿಗೆ ಏನು ಮಾಡಿದರೂ ಅವರದ್ದೇ ಸರಕಾರ ಇದ್ದರೂ ಸಮೀರ್ ಅವರನ್ನು ಶಾರೂಖ್ ಮಗನ ಪ್ರಕರಣದಿಂದ ಸರಿಯುವಂತೆ ಮಾಡಲಾಯಿತೇ ವಿನ: ಜೈಲಿನೊಳಗೆ ಕೂರಿಸಲು ಆಗಲಿಲ್ಲ. ಯಾವಾಗ ಮಲಿಕ್ ತಮ್ಮ ಅಷ್ಟೂ ಶಕ್ತಿಯನ್ನು ಸಮೀರ್ ವಿರುದ್ಧ ಪ್ರಯೋಗಿಸುತ್ತಿದ್ದಾರೆ ಮತ್ತು ಅದನ್ನು ನೋಡಿಯೂ ಶಿವಸೇನೆ ಕಣ್ಣುಮುಚ್ಚಿ ಕುಳಿತಿದೆ ಎಂದಾಗ ಸಮೀರ್ ಪತ್ನಿ ಕ್ರಾಂತಿ ತಮ್ಮ ಪತಿ ಅಪ್ಪಟ ಮರಾಠಿ ಮನುಷ್ಯ, ಅವರನ್ನು ಬೆಂಬಲಿಸಬೇಕು ಎಂದು ಮಹಾರಾಷ್ಟ್ರ ಸಿಎಂ ಉದ್ಭವ್ ಠಾಕ್ರೆಗೆ ಪತ್ರ ಬರೆದುಬಿಟ್ಟರು. ಉದ್ಭವ್ ಗೆ ಏನೂ ಮಾಡುವಂತಿಲ್ಲ. ಅವರದ್ದೇ ಸಚಿವ ಸಂಪುಟದ ಸಚಿವನ ಮರ್ಯಾದೆ ಪ್ರಶ್ನೆ. ಆದ್ದರಿಂದ ಶಿವಸೇನೆ ಹುಟ್ಟಿನಿಂದ ಇಲ್ಲಿಯ ತನಕ ನಂಬಿಕೊಂಡು ಬಂದಿದ್ದ ಮರಾಠಿ ಅಸ್ಮಿತೆಯನ್ನು ಕೂಡ ಕುರ್ಚಿಯ ಆಸೆಗೆ ಉದ್ಭವ್ ನಳ್ಳಿ ನೀರಿನಲ್ಲಿ ಬಿಡಬೇಕಾಗಿ ಬಂತು. ಯಾವಾಗ ಶಿವಸೇನೆಯ ಈಗಿನ ಪರಮೋಚ್ಚ ನಾಯಕರೂ ಆಗಿರುವ ಉದ್ಭವ್ ಮರಾಠಿ ಅಸ್ಮಿತೆಗೆ ಎಳ್ಳು ನೀರು ಬಿಟ್ಟರೋ ಮೊದಲು ಎದ್ದದ್ದು ಭಾರತೀಯ ಜನತಾ ಪಾರ್ಟಿಯ ನಾಯಕ, ಮಾಜಿ ಮುಖ್ಯಮಂತ್ರಿ ಪಡ್ನವೀಸ್. ಅವರು ಸಮೀರ್ ಬೆಂಬಲಕ್ಕೆ ನಿಂತರು. ಅವರು ನೇರವಾಗಿ ಬಾಣ ಬಿಟ್ಟಿರುವುದು ಮಲಿಕ್ ಮೇಲೆ.
“ನವಾಬ್ ಮಲಿಕ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ, 1993 ರಲ್ಲಿ ನಡೆದ ಮುಂಬೈ ದಾಳಿ ಪ್ರಕರಣದ ಅಪರಾಧಿ ಸಲೀಂ ಪಟೇಲ್ ಅವರ ಜೊತೆ ಆಸ್ತಿ ನಂಟು ಹೊಂದಿದ್ದಾರೆ” ಎಂದು ಪಡ್ನವೀಸ್ ಆರೋಪಿಸಿದ್ದಾರೆ. ಬಾಂಬ್ ದಾಳಿ ಪ್ರಕರಣದ ಅಪರಾಧಿಗಳಿಂದ ಕಡಿಮೆ ಬೆಲೆಗೆ ನೀವು ಭೂಮಿ ಖರೀದಿಸಿದ್ದಿರಿ, ನಿಮ್ಮದೇ ಕಂಪೆನಿಯಲ್ಲಿ ಆರೋಪಿ ಸಲೀಂ ಪಟೇಲ್ ಕೆಲಸಕ್ಕೆ ಇದ್ದರು ಎಂದು ಕೂಡ ಸೇರಿಸಿದ್ದಾರೆ. ಇದಕ್ಕೆ ತೀಕ್ಣವಾಗಿ ಪ್ರತಿಕ್ರಿಯಿಸಿರುವ ಮಲಿಕ್ “ಮುನ್ನಾ ಯಾದವ್ ಮತ್ತು ಹೈದರ್ ಅಜಂ ಎನ್ನುವ ಇಬ್ಬರು ಕುಖ್ಯಾತ ಕ್ರಿಮಿನಲ್ ಗಳು ಬಿಜೆಪಿ ಸರಕಾರ ಇರುವಾಗ ಪಡ್ನವೀಸ್ ಕೃಪಾಪೋಷಣೆಯಿಂದ ಸರಕಾರದ ಸಂಸ್ಥೆಗಳಲ್ಲಿ ಹುದ್ದೆ ಪಡೆದುಕೊಂಡಿದ್ದರು” ಎಂದು ಬಾಂಬ್ ಸಿಡಿಸಿದ್ದಾರೆ. ಹೀಗೆ ಇಬ್ಬರು ನಾಯಕರು ಪರಸ್ಪರರ ಮೇಲೆ ಯುದ್ಧ ಕಾಲದಲ್ಲಿ ಬಾಣಗಳ ಸುರಿಮಳೆಯನ್ನು ಬಿಡುತ್ತಿದ್ದಾರೆ.
ಇಲ್ಲಿ ಈಗ ಇರುವ ವಿಷಯ ಏನೆಂದರೆ ರಾಜಕಾರಣಿಯಾದವರು ಒಂದಲ್ಲ ಒಂದು ಕಾರಣಕ್ಕೆ ಭೂಗತ ಹಿನ್ನಲೆಯ ಕೆಲವು ಕುಖ್ಯಾತರ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತಾರೆ. ಯಾಕೆಂದರೆ ರಾಜಕಾರಣ ಎಂದರೆ ಹಾಗೆ. ಸದಾ ಸುತ್ತಮುತ್ತಲೂ ಬರಿ ಬಿಳಿ ಶರ್ಟ್ ಹಾಕಿ, ಜೈಕಾರ ಹಾಕುವವರನ್ನು, ವಾಟ್ಸಪ್ ಗ್ರೂಪಿಗೆ ನ್ಯೂಸ್ ಸೆಂಟ್ ಮಾಡುವವರನ್ನು ಇಟ್ಟುಕೊಂಡರೆ ಸಾಕಾಗುವುದಿಲ್ಲ. ಯಾವುದೇ ಸಮಯದಲ್ಲಿಯೂ ಯಾವುದೇ ಕೆಲಸಕ್ಕೂ ಹೇಸದ, ಕೆಸರಿನಲ್ಲಿ ಇಳಿದು ಹಂದಿಯಾಗಲೂ ಕೂಡ ತಯಾರಿರುವ ಕೆಲವರನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅಂತವರು ಯಾವತ್ತಾದರೂ ಅಗತ್ಯ ಬಿದ್ದರೂ ಬೀಳಬಹುದು. ಹಾಗಂತ ಅಂತವರನ್ನು ಕುತ್ತಿಗೆಗೆ ಕಟ್ಟಿ ತಿರುಗಾಡಬಾರದು. ಹೆಚ್ಚೆಂದರೆ ಅಂತವರ ಗನ್ ಲೈಸೆನ್ಸ್ ನವೀಕರಿಸುವುದೋ ಅಥವಾ ರೌಡಿ ಶೀಟರ್ ತೆಗೆಸುವುದೋ ಮಾಡಿದರೆ ಪರವಾಗಿಲ್ಲ. ಅದು ಬಿಟ್ಟು ಅಂತವರನ್ನು ಎಡಬಲ ಕುಳ್ಳಿರಿಸಿ ಕಾಫಿ, ಊಟಕ್ಕೆ ಹೊರಟರೆ ಅದು ಡೇಂಜರ್. ಸದ್ಯ ನವಾಬ್ ಮಲಿಕ್, ದೇವೆಂದ್ರ ಪಡ್ನವೀಸ್ ತಮ್ಮ ಸಂಪರ್ಕದಲ್ಲಿದ್ದ ರೌಡಿ ಎಲಿಮೆಂಟ್ ಗಳನ್ನು ಎಲ್ಲಿಯ ತನಕ ಬಿಟ್ಟುಕೊಂಡಿದ್ದರು ಎನ್ನುವುದನ್ನು ಅವರೇ ನಿರ್ಧರಿಸಬೇಕು. ಚಪ್ಪಲಿ ಬಿಡುವ ಜಾಗದಲ್ಲಿ ಬಿಡದೇ ಬೆಡ್ ರೂಂ ತನಕ ಕರೆದುಕೊಂಡು ಬಂದರೆ ಮುಂದೊಂದು ಅದು ಉರುಳಾಗಬಹುದು. ಸದ್ಯ ಪಡ್ನವೀಸ್ ದಾವೂದ್ ಇಬ್ರಾಹಿಂ ಆಪ್ತನಿಗೂ ಮಲಿಕ್ ಗೂ ಸಂಬಂಧವಿತ್ತು ಎನ್ನುವುದೇ ಆದರೆ ಅವರು ಮುಖ್ಯಮಂತ್ರಿಯಾಗಿದ್ದಾಗ ತನಿಖೆ ಮಾಡಬಹುದಿತ್ತಲ್ಲ. ಇನ್ನು ಮಲಿಕ್ ಅದ್ಯಾವುದೋ ಕೆಲವರ ಹೆಸರು ಹೇಳಿ ಅವರಿಗೂ ಪಡ್ನವೀಸ್ ಗೂ ಸಂಬಂಧ ಇದೆ ಎನ್ನುವುದಾದರೆ ಅದನ್ನು ಕೂಡ ಈಗಲೇ ತನಿಖೆ ಮಾಡಿಬಿಡಲಿ. ಅದು ಬಿಟ್ಟು ಹಂದಿಯೊಂದಿಗೆ ಸರಸ, ಮನೆಯೆಲ್ಲ ಕೆಸರು ಎಂದರೆ ಆಗುತ್ತಾ!
Leave A Reply