ಭಾರತದಲ್ಲಿ ಮಾತ್ರ ಸಲ್ಮಾನ್ ಅಂತವರಿಗೆ ಈ ನೆಲದ ಸನಾತನ ಧರ್ಮವನ್ನು ಹೀಯಾಳಿಸುವ ಸ್ವಾತಂತ್ರ್ಯ!
ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷೀದ್ ಏನೂ ಕೆಲಸವಿಲ್ಲದೇ ಸುಮ್ಮನೆ ಕುಳಿತಿದ್ದರು. ಇನ್ನು ಭವಿಷ್ಯದಲ್ಲಿ ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಿರುವುದರಿಂದ ಅವರಿಗೆ ಕೇಂದ್ರದಲ್ಲಿ ಮತ್ತೊಮ್ಮೆ ಸಚಿವರಾಗುವ ಆಸೆ ಇದ್ದಂತಿಲ್ಲ. ಇನ್ನು ಅಯೋಧ್ಯೆಯ ಶ್ರೀರಾಮಚಂದ್ರ ಭೂಮಿಯ ವಿವಾದದ ಪ್ರಕರಣದಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್ ಪರ ಹೋರಾಡಿ ಸೋತಿರುವುದರಿಂದ ಅಲ್ಲಿ ಕೂಡ ಮರ್ಯಾದೆ ಇದ್ದಂತೆ ಕಾಣುವುದಿಲ್ಲ. ಹೀಗಿರುವಾಗಲೇ ತಾವು ಏನಾದರೂ ಮಾಡದಿದ್ದರೆ ಜನರು ಮರೆತೇ ಹೋಗುತ್ತಾರೆ ಎನ್ನುವ ಆತಂಕದಿಂದ ಸಲ್ಮಾನ್ ಖುರ್ಷೀದ್ ಒಂದು ಪುಸ್ತಕ ಬರೆದಿದ್ದಾರೆ. ಅದಕ್ಕೆ ಸನ್ ರೈಸ್ ಇನ್ ಅಯೋಧ್ಯೆ: ಇನ್ ಅವರ್ ಟೈಮ್ಸ್ ಎಂದು ಏನೋ ಹೆಸರಿಟ್ಟಿದ್ದಾರೆ.
ಅದರಲ್ಲಿ ಒಂದು ಅಧ್ಯಾಯದಲ್ಲಿ ಹಿಂದೂತ್ವವನ್ನು ಐಸಿಸ್ ಮತ್ತು ಬೋಕೋ ಹರಾಮ್ ಉಗ್ರಗಾಮಿ ಸಂಘಟನೆಗಳಿಗೆ ಹೋಲಿಸಿದ್ದಾರೆ. ಈ ಮೂಲಕ ಹಿಂದೂತ್ವವನ್ನು ಅಣಕಿಸಿದ್ದಾರೆ. ಐಸಿಸ್ ಮತ್ತು ಬೋಕೋ ಹರಾಮ್ ಎಷ್ಟು ನೀಚ ಉಗ್ರಗಾಮಿ ಸಂಘಟನೆ ಎಂದರೆ ಅದರಲ್ಲಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಆ ಸಂಘಟನೆಗಳು ಮಾತನಾಡುವುದೇ ಬಾಂಬುಗಳ ಮೂಲಕ. ಅವರು ಮಲಗುವಾಗಲೂ ತಲವಾರು, ಗನ್ ತಲೆದಿಂಬಾಗಿ ಇಟ್ಟುಕೊಂಡೇ ಮಲಗುತ್ತಾರೆ. ಅವರಿಗೆ ಊಟಕ್ಕೆ ಉಪ್ಪಿನಕಾಯಿ ಹಾಕಿದಷ್ಟೇ ಕಿಸೆಯಲ್ಲಿ ಬುಲೆಟ್ ಗಳು ಕಾಮನ್. ಅವರು ತಮಗೆ ಆಗದವರನ್ನು ಕ್ಯಾಮೆರಾ ಎದುರಿಗೆ ಮೊಳಕಾಲಿನಲ್ಲಿ ಕುಳ್ಳಿರಿಸಿ ಮುಖಕ್ಕೆ ಬಟ್ಟೆ ಸುತ್ತಿ ತಲವಾರು ಹೀರಿದರೆಂದರೆ ಇವರು ಮನುಷ್ಯರಾ, ರಾಕ್ಷಸರಾ ಎನ್ನುವ ಸಂಶಯ ಒಂದು ಕ್ಷಣ ಬರದೇ ಇರಲು ಸಾಧ್ಯವಿಲ್ಲ. ಅವರಿಗೆ ಹೆಣ್ಣುಮಕ್ಕಳೆಂದರೆ ಕೇವಲ ಭೋಗದ ವಸ್ತು. ಕಾಫೀರರು ಎಂದು ಅವರು ಬಾಂಬ್ ಹಾಕುವುದು ಅಮಾಯಕರ ಮೇಲೆ. ಇಂತಹ ಹಿನ್ನಲೆ ಉಳ್ಳ ಐಸಿಸ್, ಬೊಕೋ ಹರಾಮ್ ಗಳು ಅಸುರರ ನೇರ ಸಂಬಂಧಿಗಳು.
ಆದರೆ ಸಲ್ಮಾನ್ ಖುರ್ಷೀದ್ ಅವರಿಗೆ ಇಂತಹ ಭಯೋತ್ಪಾದಕ ಸಂಘಟನೆಗಳು ಮತ್ತು ಹಿಂದೂತ್ವವಾದಿಗಳು ಒಂದೇ ತರಹ ಕಾಣುತ್ತಾರೆ. ಇಂತಹ ಮನುಷ್ಯನನ್ನು ಭಾರತೀಯ ಎನ್ನಲು ಸಾಧ್ಯವಿಲ್ಲ. ಯಾಕೆಂದರೆ ಐಸಿಸ್ ಮತ್ತು ಬೊಕೊ ಹರಾಮ್ ಉಗ್ರ ಸಂಘಟನೆಗಳು ಮಾಡಿರುವ ಕ್ರೌರ್ಯದ ಒಂದು ಶೇಕಡಾ ಹಿಂಸೆಯನ್ನು ಹಿಂದೂ ಸಂಘಟನೆಗಳು ಮಾಡಿದರೂ ಭಾರತ ಇಷ್ಟು ಸ್ವರ್ಗವಾಗಿ ಉಳಿಯುತ್ತಿರಲಿಲ್ಲ. ಹಿಂದೂಗಳು ಇಲ್ಲಿ ಬಹುಸಂಖ್ಯಾತರು. ಐಸಿಸ್ ಧೋರಣೆಯನ್ನು ಹೊಂದಿ ನಿಜಕ್ಕೂ ರಣರಂಗಕ್ಕೆ ಇಳಿದರೆ ಈ ಸಲ್ಮಾನ್ ಖುರ್ಷೀದ್ ಈ ದೇಶದಲ್ಲಿಯೇ ಇರಲು ಸಾಧ್ಯವಿರಲಿಲ್ಲ. ಇನ್ನು ಪುಸ್ತಕ ಬರೆಯುವ ಮಾತು ದೂರವೇ ಉಳಿಯಿತು. ಹೀಗೆ ಒಂದು ದೇಶದ ರಾಜಧಾನಿಯಲ್ಲಿ ಆರಾಮವಾಗಿ ಎಸಿ ಕೋಣೆಯಲ್ಲಿ ಕುಳಿತು ಇದೇ ದೇಶದ ಸನಾತನ ಹಿಂದೂ ಧರ್ಮದ ಬಗ್ಗೆ ಒಬ್ಬ ವಕೀಲನೂ ಆಗಿರುವ ವ್ಯಕ್ತಿ ಬರೆಯುತ್ತಾರೆ ಎಂದರೆ ಅವರೇ ಯೋಚಿಸಬೇಕು, ತಾನು ಎಲ್ಲಿ, ಎಷ್ಟು ಸ್ವಾತಂತ್ರ್ಯ ಪಡೆದಿದ್ದೇನೆ ಎನ್ನುವುದು ಗೊತ್ತಾಗುತ್ತದೆ. ಭಾರತದಲ್ಲಿ ಇಷ್ಟು ಸಹಿಷ್ಣುತೆ ಇರುವುದರಿಂದ ಇಂತವರು ಹೀಗೆ ಬರೆಯಲು ಸಾಧ್ಯ. ಅದೇ ಸೌದಿ ಅರೇಬಿಯಾದಲ್ಲಿಯೋ, ದುಬೈಯಲ್ಲಿಯೋ ಕುಳಿತು ಮುಸ್ಲಿಂ ಧರ್ಮದ ಬಗ್ಗೆ ಮತ್ತು ಐಸಿಸ್ ಬಗ್ಗೆ ಕೇವಲವಾಗಿ ಬರೆದರೆ ಇಂತವರ ಜನ್ಮ ಉಳಿಯುತ್ತಾಎನ್ನುವುದು ಈಗ ಎಲ್ಲರೂ ಕೇಳುತ್ತಿರುವ ಪ್ರಶ್ನೆ.
ಸಲ್ಮಾನ್ ಖುರ್ಷೀದ್ ಯಾವಾಗ ಅಯೋಧ್ಯೆಯ ಪ್ರಕರಣ ಸೋತರೋ ಅವರ ತಲೆ ಈಗ ಸ್ಥಿಮಿತದಲ್ಲಿಲ್ಲ. ಅವರು ಈ ಪುಸ್ತಕ ಬರೆದು ಅದು ಬಿಡುಗಡೆಗೊಂಡ ನಂತರ ಸಹಜವಾಗಿ ಅವರ ಡೆಹ್ರಾಡೂನ್ ಮನೆಗೆ ಎರಡು ಕಲ್ಲು ಬಿದ್ದಿದೆ. ಅದನ್ನೇ ಈ ಮನುಷ್ಯ ದೊಡ್ಡದು ಮಾಡಿ ತಾನು ಬರೆದದ್ದು ನಿಜವಾಯಿತು ಎಂದಿದ್ದಾನೆ. ಖುರ್ಷೀದ್ ನಿಜವಾಗಿಯೂ ಹಿಂದೂಗಳ ಕೋಪವನ್ನು ನೋಡಿದಿದ್ದರೆ ಅಥವಾ ಎಲ್ಲಾ ಹಿಂದೂಗಳು ಇವರ ವಿರುದ್ಧ ಒಟ್ಟಾಗಿದ್ದರೆ ಈ ವ್ಯಕ್ತಿ ಭವಿಷ್ಯದಲ್ಲಿ ಹಿಂದೂ ಎನ್ನುವ ಶಬ್ದ ಬರೆಯಬೇಕಾದರೆ ನೂರು ಸಲ ಯೋಚಿಸುವಂತಾಗುತ್ತಿತ್ತು. ಒಂದು ವೇಳೆ ಹಿಂದೂತ್ವವನ್ನು ಉಗ್ರ ಸಂಘಟನೆಗಳಿಗೆ ಹೋಲಿಸುವುದೇ ಆದರೆ ರಾಹುಲ್ ಗಾಂಧಿ ಯಾಕೆ ಚುನಾವಣೆ ಬಂದಾಗ ಜನಿವಾರ ಧರಿಸುತ್ತಾರೆ ಎನ್ನುವುದನ್ನು ಈ ಖುರ್ಷೀದ್ ಹೇಳಬೇಕು. ಒಂದು ವೇಳೆ ರಾಹುಲ್ ಗಾಂಧಿ ಹಾಗೆ ಮಾಡುವುದು ತಪ್ಪಾಗಿದ್ದರೆ ಅವರು ಬಹಿರಂಗವಾಗಿ ಹಾಗೆ ಮಾಡದೇ ಇರಲು ಈ ಕಾಂಗ್ರೆಸ್ ಅಲ್ಪಸಂಖ್ಯಾತ ಹಿರಿಯ ಮುಖಂಡ ಹೇಳಿಬಿಡಲಿ. ಅಯೋಧ್ಯೆ ಪ್ರಕರಣದಲ್ಲಿ ತಾವು ಗೆದ್ದೇ ಗೆಲ್ಲುತ್ತೇವೆ ಎಂದು ಅಲ್ಲಿ ವಾದಿಸಿದ್ದ ಖುರ್ಷೀದ್ ಅಂದುಕೊಂಡಿದ್ದರು. ಹಿಂದೂ ಆಸ್ತಿಕರ ಭಾವನೆಗಳಿಗೆ ದಕ್ಕೆ ತರಲೇಬೇಕೆಂಬ ವಿಷಯ ಅವರ ಮನಸ್ಸಿನಲ್ಲಿತ್ತು. ಆದರೆ ಉತ್ಖನನ ಸಮಯದಲ್ಲಿ ಸಿಕ್ಕಿರುವ ಸಾಕ್ಷ್ಯಾಧರಗಳು ಸಲ್ಮಾನ್ ಊಹೆಯನ್ನು ಮೇಲೆ ಕೆಳಗೆ ಮಾಡಿಬಿಟ್ಟವು. ಅದರ ನಂತರ ಅವರಿಗೆ ಭ್ರಮನಿರಸನವಾಯಿತು. ಏನು ಮಾಡಬೇಕೆಂದು ತಿಳಿಯದಾಯಿತು. ಅದಕ್ಕೆ ತಮ್ಮ ಕಾಲದಲ್ಲಿಯೇ ಅಯೋಧ್ಯೆ ಚೆನ್ನಾಗಿತ್ತು ಎಂದು ಅಂದುಕೊಂಡಿದ್ದಾರೆ. ಈಗ ಅಯೋಧ್ಯೆಯಲ್ಲಿ ಆಗುತ್ತಿರುವ ಉತ್ಸವ, ಜಾತ್ರೆ, ಇತ್ತೀಚೆಗೆ ನಡೆದ ದೀಪೋತ್ಸವ ಎಲ್ಲವೂ ಸಲ್ಮಾನ್ ಕಣ್ಣನ್ನು ಕುಕ್ಕಿದೆ. ಅಲ್ಲಿ ಹೀಗೆ ವೈಭವಯುತವಾಗಿ ಏನಾದರೂ ಆಗುತ್ತೆ ಎಂದು ಅವರಿಗೆ ಅಂದಾಜಿರಲಿಲ್ಲ. ಆದ್ದರಿಂದ ಉತ್ತರ ಪ್ರದೇಶದ ಚುನಾವಣೆಗೆ ಕೆಲವೇ ತಿಂಗಳಿರುವಾಗ ಈ ಪುಸ್ತಕ ಬರೆದಿದ್ದಾರೆ ಅಥವಾ ಅವರಿಗೆ ಹಣ ಕೊಟ್ಟು ಬರೆಸಲಾಗಿದೆ ಅಥವಾ ಅವರಿಗೆ ಏನಾದರೂ ಮೂಲಭೂತ ಮತಾಂಧರಿಂದ ಹೀಗೆ ಬರೆಯಲೇಬೇಕು ಎನ್ನುವ ಒತ್ತಡ ಇತ್ತೇನೋ!
Leave A Reply