ಬಿಜೆಪಿ ಬಯಸುವುದು ಇದನ್ನೇ, ಸಿದ್ದು ಹೇಳುವುದು ಇದನ್ನೇ!!
ಸಿದ್ದು ಕಾಂಗ್ರೆಸ್ಸನ್ನು ಮುಗಿಸಲು ಭಾರತೀಯ ಜನತಾ ಪಾರ್ಟಿಯವರಿಂದಲೇ ಸುಫಾರಿ ತೆಗೆದುಕೊಂಡ ಹಾಗೇ ಕಾಣ್ತಾ ಇದೆ. ಇಲ್ಲದೇ ಹೋದರೆ ಕಾಲು ಹಿಡಿದುಕೊಳ್ತಿನಿ. ದಯವಿಟ್ಟು ಹಿಜಾಬ್ ಬಗ್ಗೆ ಮಾತನಾಡಬೇಡಿ ಎಂದು ಡಿಕೆಶಿ ಪರಿಪರಿಯಾಗಿ ಬೇಡಿಕೊಂಡರೂ ಸಿದ್ದು ಹಟಕ್ಕೆ ಬಿದ್ದವರಂತೆ ಹೇಳಿಕೆಗಳನ್ನು ಕೊಟ್ತಾರೆ ಎಂದರೆ ಇದು ಸುಫಾರಿಯಲ್ಲದೇ ಮತ್ತೇನು? ಡಿಕೆಶಿ ಅತ್ತ ಹಿಂದೂಗಳನ್ನು ಸೆಳೆದು, ಇತ್ತ ಅಲ್ಪಸಂಖ್ಯಾತರನ್ನು ಕಂಕುಳಲ್ಲಿ ಇಟ್ಟುಕೊಂಡು ಹೋಗೋಣ ಎಂದು ರಣತಂತ್ರ ಹೆಣೆಯುತ್ತಿದ್ದರೆ ಸಿದ್ದು ಮುಸ್ಲಿಮರನ್ನು ಹೆಗಲ ಮೇಲೆ ಕೂರಿಸಿ ಹಿಂದೂಗಳ ಎದೆಯ ಮೇಲೆ ಕಾಲಿಟ್ಟು ಗೆಲುವಿನ ಹೊಸ್ತಿಲು ದಾಟಲು ಸಾಧ್ಯ ಎಂದು ಅಂದುಕೊಂಡಿದ್ದಾರೆ. ಹಾಗಂತ ಅದು ಸಾಧ್ಯವಿಲ್ಲ ಎಂದು ಡಿಕೆಶಿ ಜೋರು ಮಾಡಲು ಸಾಧ್ಯವಿಲ್ಲ. ಒಂದು ರಾಜಕೀಯ ಪಕ್ಷದ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರಲ್ಲಿ ಒಬ್ಬರು ನೀರಿಗೆ ಇಳಿದರೆ ಇನ್ನೊಬ್ಬ ಮೆಟ್ಟಲು ಹತ್ತಿದ್ದರೆ ಹರಿದು ಹೋಗುವುದು ಪಕ್ಷ. ಹಾಗಂತ ದೂರು ಕೊಡಲು ದೆಹಲಿಗೆ ಹೋಗೋಣ ಎಂದು ಅಂದುಕೊಂಡರೆ ಅಲ್ಲಿ ರಾಹುಲ್ ಎಲ್ಲಾ ಕಡೆ ಸೋತು ತಲೆಯ ಮೇಲೆ ಬಟ್ಟೆ ಹಾಕಿ ಕೂತು ಬಿಟ್ಟಿದ್ದಾರೆ. ಸೋನಿಯಾ ತಾವು ಇದನ್ನೆಲ್ಲ ನೋಡಿಕೊಳ್ಳಲು ಹರಿಪ್ರಸಾದ್ ಅವರನ್ನು ಅಲ್ಲಿಗೆ ಕಳುಹಿಸಿದ್ದು, ಅವರು ವರದಿ ಕೊಡುತ್ತಾರೆ ಬಿಡಿ ಎಂದು ಹೇಳುತ್ತಿದ್ದಾರೆ. ಇತ್ತ ಪ್ರಿಯಾಂಕಾ ಉತ್ತರ ಪ್ರದೇಶದ ಸೋಲಿನಿಂದ ಹೊರಗೆ ಬರಲು ಆರು ತಿಂಗಳಾದರೂ ಬೇಕು. ಸುರ್ಜೆವಾಲಾ, ವೇಣುಗೋಪಾಲ್ ಅವರಿಗೆ ಕರ್ನಾಟಕದ ರಾಜಕೀಯ ಅರ್ಥವಾಗುತ್ತಿಲ್ಲ. ಖರ್ಗೆ ಮತ್ತು ಕೆ ಎಚ್ ಪಟೇಲ್ ವಯಸ್ಸಿನ ಕಾರಣದಿಂದ ದೂರ ನಿಂತು ನೋಡುತ್ತಿದ್ದಾರೆ. ಈ ಹಂತದಲ್ಲಿಯೇ ಸಿದ್ದು ಹಿಜಾಬ್ ವಿಷಯದಲ್ಲಿ ಸ್ವಾಮೀಜಿಗಳನ್ನು ಎಳೆದು ತರುವ ಮೂಲಕ ಬಿಜೆಪಿಗರಿಗೆ ಎಪ್ರಿಲ್ ನಲ್ಲಿ ಮಳೆ ಬಂದ ಖುಷಿ ಮೂಡಿಸುತ್ತಿದ್ದಾರೆ.
ಯಾರಾದರೂ ಸಿದ್ದು ಬಳಿ ಹೋಗಿ “ಹಿಜಾಬ್ ಕರ್ನಾಟಕದಲ್ಲಿ ನಿಷೇಧ ಎನ್ನುವ ಕಾನೂನು ಬಂದಿಲ್ಲ” ಎಂದು ಹೇಳಿಬಿಡುವುದು ಒಳ್ಳೆಯದು. ಯಾಕೆಂದರೆ ಸಿದ್ದು ನಿತ್ಯ ಯಾವ ರೀತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಹಿಜಾಬ್ ನಿಷೇಧ ಮಾಡಿಯೇ ಬಿಟ್ಟಿದೆ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅದಕ್ಕೆ ಅವರು ಸ್ವಾಮಿಗಳು ಹಾಕಲ್ವಾ ಎನ್ನುತ್ತಿರುವುದು. ಸಿದ್ದು ಬಾಯಿಂದ ಸ್ವಾಮಿಜಿ, ಮಠ, ದೇವಸ್ಥಾನ ಬಂದರೆ ಅದು ನೆಗೆಟಿವ್ ಆಗಿಯೇ ಇರುತ್ತದೆ ಎನ್ನುವುದು ಸಿದ್ದು ಬೇಡಾ ಬೇಡಾ ಎಂದರೂ ಸಾಬೀತಾಗಿದೆ. ಯಾಕೆಂದರೆ ಉಡುಪಿ ಜಿಲ್ಲೆಗೆ ಬಂದರೆ ಯಾವ ನಾಸ್ತಿಕ ರಾಜಕಾರಣಿ ಕೂಡ ಕೃಷ್ಣ ಮಠಕ್ಕೆ ಬರದೇ ಹೋಗುವುದಿಲ್ಲ. ಆದರೆ ಸಿದ್ದು ಬರಲ್ಲ ಎನ್ನುತ್ತಾರೆ. ಧರ್ಮಸ್ಥಳದ ಕಡೆ ಬರುವವರು ನೇತ್ರಾವತಿಯಲ್ಲಿ ಮುಳುಗಿ ದೇವಳಕ್ಕೆ ಕಾಲಿಡೋಣ ಎಂದು ಯೋಚಿಸುತ್ತಿದ್ದರೆ ಸಿದ್ದು ಮೀನು ತಿಂದು ಹೋಗ್ತಿನಿ ಎನ್ನುತ್ತಾರೆ. ನವರಾತ್ರಿಯಂದು ಮಂಗಳೂರಿಗೆ ಬಂದು ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರಕ್ಕೆ ಕಾಲಿಡಲೇ ಕ್ರೈಸ್ತರೊಬ್ಬರ ಮನೆಯಲ್ಲಿ ಏನೇನೋ ತಿಂದು, ಕುಡಿದು ಅಲ್ಲಿಂದಲೇ ಎದ್ದು ಹೋಗಿಬಿಡುತ್ತಾರೆ. ಕೇಸರಿ ಶಾಲು ಯಾರೋ ಕಾರ್ಯಕರ್ತ ತಂದಾಗ ಅದನ್ನು ಎಳೆದು ಪಕ್ಕಕ್ಕೆ ಬಿಸಾಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಹಿಂದೂತ್ವಕ್ಕೆ ವಿರೋಧಿ ಎಂದು ಬೆಂಬಲಿಗರ ಮುಂದೆ ಎದೆತಟ್ಟಿ ಹೇಳುತ್ತಾರೆ. ಇಂತಹ ಸಿದ್ಧರಾಮಯ್ಯನವರನ್ನು ಕಾಂಗ್ರೆಸ್ ಆವತ್ತು ಕರೆಸಿಕೊಂಡು ರೆಡ್ ಕಾರ್ಪೆಟ್ ಹಾಕಿದಾಗ ಸಿದ್ದು ಸೋಶಿಯಲಿಸ್ಟ್ ಮನಸ್ಥಿತಿಯವರಾಗಿದ್ದದ್ದು ನಿಜ. ಆದರೆ ಅಹಿಂದ ನಾಯಕ ಈ ಪರಿ ಅರಳುಮರಳು ತರಹ ವರ್ತಿಸಿರಲಿಲ್ಲ. ಬಳ್ಳಾರಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸಿದ್ದು ಹಿಂದೆ ರೈಯವರಂತಹ ಕಟ್ಟಾ ಕಾಂಗ್ರೆಸ್ಸಿಗರಿದ್ದರು. ಆದರೆ ಇದೇ ಸಿದ್ದು ಈಗ ಮಂಗಳೂರಿಗೆ ಬಂದರೆ ನಾಯಕರು ಇರುತ್ತಾರೆ ನಿಜ, ಆದರೆ ಸಿದ್ದು ಯಾವ ಮೂಡಿನಲ್ಲಿ ಹೇಳಿಕೆ ಕೊಡುತ್ತಾರೋ ಎನ್ನುವ ಹೆದರಿಕೆ ಜೊತೆ ಇಲ್ಲಿ ಡ್ಯಾಮೇಜ್ ಆಗದೇ ಇರಲಿ ಎಂದು ದೇವರ ಹತ್ತಿರ ಬೇಡಿಕೊಂಡೇ ಒಂದೊಂದು ನಿಮಿಷ ಇಲ್ಲಿನ ಕಾಂಗ್ರೆಸ್ಸಿಗರು ತೆಗೆಯುತ್ತಾರೆ. ಯಾಕೆಂದರೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹಿಂದೂತ್ವಕ್ಕಿಂತ ಜಾತಿ ಲೆಕ್ಕಾಚಾರ ಒಂದು ಮುಷ್ಠಿ ಹೆಚ್ಚೆ ಎನ್ನುವಂತೆ ಬಿಜೆಪಿಯಲ್ಲಿ ಸಮ್ಮಿಳಿತವಾಗಿದೆ. ಆದರೆ ಕರಾವಳಿಯಲ್ಲಿ ಹಾಗಿಲ್ಲ. ಇಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ಇದ್ದರೆ ಒಂದು ವಾರ್ಡ್ ಅಧ್ಯಕ್ಷನನ್ನು ನಿಲ್ಲಿಸಿದರೂ ಗೆಲ್ಲುತ್ತಾನೆ. ಜಾತಿ ನೆಕ್ಟ್, ಹಿಂದೂತ್ವ ಫಸ್ಟ್.
ಸಿದ್ದು ಹೀಗೆ ಸ್ವಾಮೀಜಿಗಳನ್ನು ಹಿಜಾಬ್ ವಿವಾದಕ್ಕೆ ಎಳೆದು ತರುತ್ತಿದ್ದಂತೆ ಡಿಕೆಶಿಗೆ ಚಿಂತೆ ಹೆಚ್ಚಾಗಿದೆ. ಒಂದು ಕಡೆ ಬಿಜೆಪಿ ಕಾಶ್ಮೀರ್ ಫೈಲ್ಸ್, ಭಗವದ್ಗೀತೆ ಮತ್ತು ಹಿಜಾಬ್ ಹಿಡಿದು ದಡ ಸೇರುವ ಹುಮ್ಮಸ್ಸಿನಲ್ಲಿ ಇದ್ದರೆ ಸಿದ್ದು ದಡ ಸೇರುವ ಸಾಧ್ಯತೆ ಇದ್ದ ದೋಣಿಗೆ ತಾವೇ ರಂಧ್ರ ಕೊರೆದು ನೀರು ಒಳಗೆ ಬರುವಂತೆ ಮಾಡುತ್ತಿದ್ದಾರೆ. ಸಿದ್ದು ಪಕ್ಷವನ್ನು ಮುಗಿಸಿಯೇ ಹೋಗುವುದು ಎಂದು ಜನಾರ್ದನ ಪೂಜಾರಿಯವರು ಯಾವತ್ತೋ ಹೇಳಿದ ಹೇಳಿಕೆಯನ್ನು ಈಗ ಮತ್ತೆ ಯಾರೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದು ಸರಿ ಎನಿಸುತ್ತಿದೆ!
Leave A Reply