ಪುತ್ತಿಲ ನೀವು ಯಾವಾಗ ಬಿಜೆಪಿಯಾಗಿದ್ರಿ ಎಂದು ಕೇಳಬಹುದೇ?
ಅರುಣ್ ಕುಮಾರ್ ಪುತ್ತಿಲ ಅವರು ತಾವು ಗೆದ್ದರೆ ಭಾರತೀಯ ಜನತಾ ಪಾರ್ಟಿಗೆ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ನಿಮ್ಮ ತತ್ವ, ಸಿದ್ಧಾಂತ ಯಾವುದು ಎಂದು ಕರೆಕ್ಟಾಗಿ ಹೇಳಬಲ್ಲಿರಾ ಪುತ್ತಿಲ? ನೀವು ಬಿಜೆಪಿಯನ್ನು ಬೆಂಬಲಿಸುತ್ತೀರಿ ಎನ್ನುವ ಹೇಳಿಕೆಯೇ ಎಷ್ಟು ಬೂಟಾಟಿಕೆಯದ್ದು ಎಂದು ಪುತ್ತೂರಿನ ಇವತ್ತಿನ ತಲೆಮಾರಿಗೆ ಗೊತ್ತಿಲ್ಲ ಎನ್ನುವ ಏಕೈಕ ಕಾರಣಕ್ಕೆ ಹೇಳಿದ್ದೇ ಸತ್ಯ ಎಂದು ಅಂದುಕೊಂಡಿದ್ದೀರಾ? ನೀವು ಬಿಜೆಪಿಯನ್ನೇ ಬೆಂಬಲಿಸುವುದಾದರೆ ಈಗಲೇ ಬೆಂಬಲಿಸಬಹುದಲ್ಲ. ಅದಕ್ಕೆ ನಿಮಗೆ ಬಿಜೆಪಿಯಿಂದಲೇ ಟಿಕೆಟ್ ಸಿಗಬೇಕು ಎನ್ನುವ ಹಟ ಯಾಕಿತ್ತು? ನಿಮಗೆ ಬಿಜೆಪಿಯಲ್ಲಿ ನಿಂತು ಸುಲಭವಾಗಿ ಗೆದ್ದು ಶಾಸಕನಾಗಬೇಕು ಎನ್ನುವ ಹಪಾಹಪಿ ಇತ್ತೇ ಹೊರತು ನೀವು ಎಷ್ಟು ನೈಜ ಬಿಜೆಪಿಗರಾಗಿದ್ರಿ ಎಂದು ಆತ್ಮಸಾಕ್ಷಿಗೆ ಕೇಳಿಕೊಂಡಿದ್ದೀರಾ? ಯಾಕೆ ನಿಮಗೆ ಟಿಕೆಟ್ ಕೊಡಬೇಕಿತ್ತು. ನೀವು ಬಿಜೆಪಿಯನ್ನು ಬಿಟ್ಟು ಶ್ರೀರಾಮಸೇನೆಗೆ ಸೇರಿದಾಗ ನಿಮ್ಮ ಸಿದ್ಧಾಂತ ಎಲ್ಲಿಗೆ ಹೋಗಿತ್ತು ಪುತ್ತಿಲ ಅವರೇ? ನೀವು ಶ್ರೀರಾಮಸೇನೆಗೆ ಹೋದದ್ದು ಸುಳ್ಳಾ? ಶ್ರೀರಾಮಸೇನೆಗೆ ಹೋಗಿ ಬಿಜೆಪಿಯ ವಿರುದ್ಧ ಹೇಳಿಕೆ ನೀಡಿದ್ದು ಸುಳ್ಳಾ? ಇನ್ನು ನೀವು ಶಕುಂತಳಾ ಶೆಟ್ಟಿಯವರ ಪರವಾಗಿ ನಿಂತು 2008 ರಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದು ಸುಳ್ಳೋ ಅಥವಾ ನಿಜವೋ? ನೀವು ನೈಜ ಬಿಜೆಪಿಗರಾಗಿದ್ದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಮಾತೃ ಸ್ಥಾನದಲ್ಲಿಟ್ಟು ಪೂಜಿಸುತ್ತೀರಿ. ಆದರೆ ನೀವು ಶಕುಂತಳಾ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಅವರ ಪರ ನಿಂತು ಪುತ್ತೂರಿನ ಸಭಾಂಗಣವೊಂದರಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಹೀಯಾಳಿಸಿದ್ದು ಯಾವ ಪುರುಷಾರ್ಥಕ್ಕೆ ಪುತ್ತಿಲ ಅವರೇ?
ಅಷ್ಟಕ್ಕೂ ಶಕುಂತಳಾ ಶೆಟ್ಟಿಯವರಿಗೆ ನಿಗಮ ಕೊಟ್ಟಿದ್ದನ್ನು ಅವರು ನನಗೆ ಗಂಜಿಕೇಂದ್ರ ಬೇಡಾ ಎಂದು ಹೇಳಿ ವ್ಯಂಗ್ಯ ಮಾಡಿದ್ದನ್ನು ಬಿಜೆಪಿ ಗೌರವಿಸಬೇಕಿತ್ತಾ? ಅವರನ್ನು ಶಾಸಕಿ ಮಾಡಿದ್ದು ಪಕ್ಷ, ಬಂಟ್ವಾಳದಲ್ಲಿ ಎರಡು ಬಾರಿ ಟಿಕೆಟ್ ನೀಡಿ ಬೆಂಬಲಿಸಿದ್ದು ಬಿಜೆಪಿ. ಅಲ್ಲಿ ಸೋತರೂ ಪುತ್ತೂರಿನಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು. ಹಾಗಿರುವಾಗ ಅವರಿಗೆ ನಿಗಮ ಕೊಟ್ಟಾಗ ಅದನ್ನು ಸ್ವೀಕರಿಸಿ ಅಲ್ಲಿ ಚೆನ್ನಾಗಿ ಕೆಲಸ ಮಾಡಿ ಅದಕ್ಕೊಂದು ಘನತೆ ತಂದುಕೊಟ್ಟು ಹಿರಿಯರಿಂದ ಭೇಷ್ ಅನಿಸಿಕೊಳ್ಳಬೇಕಿತ್ತು. ಅದು ಬಿಟ್ಟು ನೇರವಾಗಿ ಸಚಿವ ಸ್ಥಾನ ಕೊಡಬೇಕಿತ್ತು ಎಂದು ಅವರು ಹಟ ಹಿಡಿದರೆ ಅದನ್ನು ಕೇಳಿ ಸುಮ್ಮನೆ ಕುಳಿತುಕೊಳ್ಳಲು ಸಂಘವೇನು ಯಾವುದೋ ಹೆಸರಿಗೆ ಮೋಜು ಮಾಡುವ ಕ್ಲಬ್ ಅಲ್ಲ. ಸಂಘ ವ್ಯಕ್ತಿ ನಿರ್ಮಾಣ ಮಾಡುತ್ತೆ. ಅದಕ್ಕಾಗಿ ವಿವಿಧ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸುತ್ತದೆ. ಅದರಲ್ಲಿ ಯಶಸ್ವಿಯಾದರೆ ಇವತ್ತು ಪ್ರಚಾರಕರಾಗಿದ್ದವರು ಮುಂದೊಂದು ದಿನ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯೂ ಆಗಬಹುದು. ಆದರೆ ಅದೇ ಶಾಸಕಿಯಾದ ತಕ್ಷಣ ಕೊಂಬು ಬಂದರೆ ಅವರನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡಲಾಗುತ್ತದೆ. ಅದರ ನಂತರ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್ಸಿನಿಂದ ಒಂದು ಬಾರಿ ಶಾಸಕಿಯಾದರು. ಆದರೆ ಸಚಿವಗಿರಿ ಸಿಕ್ಕಿತಾ, ಇಲ್ಲವಲ್ಲ. ಅದೇ ಬಿಜೆಪಿಯಲ್ಲಿ ಇದ್ದಿದ್ರೆ ಯಾವತ್ತಾದರೂ ಅವಕಾಶ ಇದ್ದೇ ಇರುತ್ತಿತ್ತು. ಈಗ ಅವರಿಗೆ ಕಾಂಗ್ರೆಸ್ ಆ ಬಾಗಿಲನ್ನು ಕೂಡ ಮುಚ್ಚಿಬಿಟ್ಟಿದೆ. ಇನ್ನು ಯಾವ ರಾಜಕೀಯ ಮಾಡುತ್ತಾರಂತೆ. ಈಗ ಕೇಳಿದ್ರೂ ಗಂಜಿಕೇಂದ್ರ ಸಿಗುತ್ತಾ? ಅಂತಹ ಶಕುಂತಳಾ ಶೆಟ್ಟಿಯವರೊಂದಿಗೆ ನಿಂತು ಆವತ್ತು ಬಿಜೆಪಿಯನ್ನು ಸೋಲಿಸಲು ಪುತ್ತಿಲ ನೀವು ಪ್ರಯತ್ನ ಮಾಡಿಲ್ಲವೇನು? ಸಿಕ್ಕಸಿಕ್ಕವರಿಗೆ ಬೈಯಲಿಲ್ಲವೇನು? ಇವತ್ತು ಪ್ರಸಾದ್ ಭಂಡಾರಿಯಂತವರು ನಮಗೆ ಶಾಂತ, ಸೌಮ್ಯ ಪುತ್ತೂರು ಬೇಕು ಎಂದು ಹೇಳುತ್ತಾರೆ ಎಂದರೆ ನೀವು ಯಾರ ಪ್ರೀತಿಯನ್ನುಗೆದ್ದಿದ್ದೀರಿ ಪುತ್ತಿಲ?
ನೀವು ಪುತ್ತೂರಿನ ಬಿಜೆಪಿಯ ಸಂಪರ್ಕ ಬಿಟ್ಟು ಅದೆಷ್ಟು ವರ್ಷವಾಯಿತು ಪುತ್ತಿಲ ಅವರೇ? ನೀವು ಬಿಜೆಪಿ ಕಚೇರಿಗೆ ಬರದೇ ಅದೆಷ್ಟು ಕಾಲವಾಯಿತು ಪುತ್ತಿಲ ಅವರೇ? ಆವತ್ತು ನೀವು ಪುತ್ತೂರಿನ ಶನಿದೇವರ ಪೂಜೆಯನ್ನು ಮಾಡಿಸುವ ಕಾರ್ಯಕ್ರಮ ಇಟ್ಟುಕೊಂಡಾಗ ಗಲಾಟೆ ಆಗಿ ಎಷ್ಟು ಅಮಾಯಕರು ಜೈಲಿಗೆ ಹೋಗಬೇಕಾಯಿತಲ್ಲಾ ಪುತ್ತಿಲ ಅವರೇ? ನೀವು ಆವತ್ತು ಅಲ್ಲಿಂದ ಎಸ್ಕೇಪ್ ಆಗಲಿಲ್ಲವೇ? ನಿಮಗೆ ಎನ್ ಕೌಂಟರ್ ಮಾಡಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿರಲಿಲ್ಲವೇ? ನಿಮಗೆ ವೈಯಕ್ತಿಕವಾಗಿ ಆಸೆ ಆಕಾಂಕ್ಷೆಗಳಿರುವುದು ಸಹಜ. ಆದರೆ ಅದು ಈಡೇರದೇ ಹೋದಾಗ ನಿಮಗೆ ಬಂಡಾಯ ನಿಲ್ಲುವ ಅವಕಾಶವೂ ಇರುತ್ತದೆ. ಆದರೆ ನಿಮಗೆ ಈಗ ಗೆಲ್ಲದಿದ್ದರೆ ಮುಂದೇನು ಎನ್ನುವ ಹೆದರಿಕೆ ಶುರುವಾಗಿದೆ. ಅದಕ್ಕಾಗಿ ನೀವು ನಾನು ಕೂಡ ಬಿಜೆಪಿ, ಗೆದ್ದರೆ ಅದಕ್ಕೆ ಬೆಂಬಲ ಕೊಡುತ್ತೇನೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಿರಿ. ಕೆಲವು ಯುವಕರು ಜೈ ಎಂದು ಹೇಳಿದ ತಕ್ಷಣ ಅದೇ ರಾಜಕೀಯ ಎಂದು ಅಂದುಕೊಂಡು ಚುನಾವಣೆಗೆ ನಿಂತ ಅದೆಷ್ಟೋ ಮುಖಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಶಾಸಕರಾಗುವುದೇ ಪರಮ ಧ್ಯೇಯ ಎಂದುಕೊಂಡು ಹಿಂದುತ್ವದ ಶಾಲು ಹಾಕಿಸಿಕೊಳ್ಳುವುದೇ ನಿಮ್ಮ ಉದ್ದೇಶವಾಗಿದ್ದರೆ ನೀವು ಹೊಸ ಪೀಳಿಗೆಯನ್ನು ಹಾದಿ ತಪ್ಪಿಸುತ್ತಿದ್ದೀರಿ. ಒಂದು ವೇಳೆ ನಿಮ್ಮ ಹಣೆಯಲ್ಲಿ ಶಾಸಕನಾಗುವುದು ಬರೆದಿದ್ದರೆ ಅದು ನಿಮ್ಮ ಪುಣ್ಯ. ಇಲ್ಲದೇ ಹೋದರೆ ಮುಂದಿನ ಹತ್ತು ದಿನ ನೀವು ನಿಮ್ಮ ಹಾಗೆ ನೂರಾರು ಅತೃಪ್ತ ಆತ್ಮಗಳನ್ನು ಸೃಷ್ಟಿಸುತ್ತೀದ್ದಿರಿ ಎಂದು ಅಂದುಕೊಳ್ಳಿ!
Leave A Reply