ಹಾಗಾದರೆ ಸಹಿಷ್ಣುತೆ ಎಂದರೆ ಏನು?
ಒಬ್ಬರು ಪಾದ್ರಿ ಶಬರಿಮಲೆಗೆ ಹೋದರೆ ಅದರಲ್ಲಿ ತಪ್ಪೇನು? ಬಹಳ ಸಿಂಪಲ್ ಪ್ರಶ್ನೆ. ಎಲ್ಲಾ ಧರ್ಮವನ್ನು ಅರಿತು ಬಾಳಿದರೆ ಸ್ವರ್ಗ ಎನ್ನುವ ಅರ್ಥದ ಮಾತನ್ನು ಆ ಪಾದ್ರಿ ಹೇಳಿ ಒಂದು ವೇಳೆ ಶಬರಿಮಲೆಗೆ ಹೋದರೆ ಕ್ರೈಸ್ತ ಮತ ಕಳೆದುಕೊಳ್ಳುವಂತದ್ದು ಏನಿದೆ? ಆದರೆ ನಿಮ್ಮ ನೆರೆಮನೆಯವರನ್ನು ಪ್ರೀತಿಸಿ ಎಂದು ಬೋಧಿಸಿದವರೇ ಆ ಪಾದ್ರಿ ರೆವರೆಂಡ್ ಫಾ. ಡಾ. ಮನೋಜ್ ಅವರ ಲೈಸೆನ್ಸ್ ಹಾಗೂ ಐಡಿ ಕಾರ್ಡ್ ರದ್ದುಗೊಳಿಸುವ ನಿರ್ಧಾರ ಮಾಡಿದ್ದಾರೆ. ಮನೋಜ್ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ನಂತರ ಆಧ್ಯಾತ್ಮದ ಸೆಳೆತದಿಂದ ಫುಲ್ ಟೈಮ್ ಪಾದ್ರಿ ಆಗಿ ನಿಯುಕ್ತಿಗೊಂಡಿದ್ದರು. ಆದರೆ ಈ ವರ್ಷ ಅವರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಬೇಕೆಂಬ ಆಸೆ ಮೂಡಿದೆ. ಅದಕ್ಕಾಗಿ ಅವರು ಅಯ್ಯಪ್ಪವ್ರತಧಾರಿಗಳಂತೆ ಕಠಿಣ ವ್ರತಗಳನ್ನು ಆಚರಿಸುತ್ತಿದ್ದಾರೆ. ತಾವು ವಾಸ ಇದ್ದ ಸ್ಥಳದ ಸನಿಹದಲ್ಲಿರುವ ದೇವಸ್ಥಾನದಲ್ಲಿ ವ್ರತದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ಇದೇ ಸೆಪ್ಟೆಂಬರ್ 20 ರಂದು ಅವರು ಪುಣ್ಯಕ್ಷೇತ್ರಕ್ಕೆ ಹೋಗುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಅಲ್ಲಿ ಹೋದರೆ ತಾವು ಪಾದ್ರಿಯಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಅವರಿಗೆ “ಮೇಲಿನಿಂದ” ಆದೇಶ ಬಂದಿದೆ. ಅವರ ಲೈಸೆನ್ಸ್ ಕೂಡ ರದ್ದು ಮಾಡುವ ಪ್ರಕ್ರಿಯೆ ಶುರುವಾಗಿದೆ.
ಹಾಗಾದರೆ ಸಹಿಷ್ಣುತೆ ಎಂದರೆ ಏನು?
ಎಲ್ಲರೂ ಎಲ್ಲಾ ಧರ್ಮಗಳನ್ನು ಅರಿತುಕೊಳ್ಳಬೇಕು ಎಂದು ವೇದಿಕೆಯಲ್ಲಿ ಹೇಳುವುದು ಬರೀ ಬೂಟಾಟಿಕೆನಾ? ಅಷ್ಟಕ್ಕೂ ಒಬ್ಬರು ಪಾದ್ರಿ ಬೇರೆ ಧರ್ಮದ ಸಾರವನ್ನು ಅರಿಯಲು ಸ್ವತ: ಅಲ್ಲಿ ಭೇಟಿ ನೀಡಿದರೆ ಅವರು ಪಾದ್ರಿಯಾಗಿ ಮುಂದುವರೆಯಲು ಸಾದ್ಯವಿಲ್ಲವಾ? ಈ ಎಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ. ಯಾಕೆಂದರೆ ಮತಾಂತರ ಶಬ್ದವನ್ನು ಯಾವುದಾದರೂ ಹಿಂದೂ ಸಂಘಟನೆಗಳು ತೆಗೆದಾಗ ನಾವು ಏನೂ ಮತಾಂತರ ಮಾಡಲ್ಲ, ಅದು ಬರಿ ಸುಳ್ಳು ಆರೋಪ ಎಂದು ಬೊಬ್ಬೆ ಹೊಡೆಯುವವರು ಇದ್ದಾರೆ. ಆದರೆ ಎಷ್ಟೋ ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದೂಗಳೇ ಸದ್ದಿಲ್ಲದೇ ಕ್ರೈಸ್ತ ಮತಕ್ಕೆ ಮತಾಂತರ ಆಗುತ್ತಿರುವುದು ದೊಡ್ಡ ರಹಸ್ಯವಲ್ಲ. ಆದರೆ ಒಬ್ಬ ಪಾದ್ರಿ ಮತಾಂತರ ಬಿಡಿ, ಅವರ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದರೆ ಅದಕ್ಕೆ ಯಾಕೆ ಇಷ್ಟು ಅಪಸವ್ಯ. ಅವರು ಅಯ್ಯಪ್ರ ವ್ರತ ಪಾಲಿಸುವುದು ನಿಮಗೆ ಜೀರ್ಣ ಮಾಡಿಕೊಳ್ಳಲು ಆಗಲ್ವಾ? ಅಷ್ಟಕ್ಕೂ ಅವರೇನೂ ಈಗ ಯಾವುದೋ ನಿಗದಿತ ಚರ್ಚಿನ ಪಾದ್ರಿ ಆಗಿ ಸೇವೆ ಸಲ್ಲಿಸುತ್ತಿಲ್ಲ. ಅವರೀಗ ಜನರ ಮಧ್ಯಕ್ಕೆ ಹೋಗಿ ಆಧ್ಯಾತ್ಮವನ್ನು ಪಸರಿಸುತ್ತಿದ್ದಾರೆ. ಅಂತವರು ಕೂಡ ಎಲ್ಲಿಯೋ ಬೇರೆ ಧರ್ಮದ ಸಾರವನ್ನು ಅರಿಯುತ್ತಿದ್ದಾರೆ ಎಂದರೆ ಅದಕ್ಕೆ ವಿರೋಧಗಳು ಯಾಕೆ ಬರಬೇಕು.
ದೇವನೊಬ್ಬ ನಾಮ ಹಲವು!
ಎಲ್ಲಾ ಧರ್ಮದಲ್ಲಿಯೂ ಶಾಂತಿ, ಸಹಬಾಳ್ವೆಯನ್ನು ಬೋಧಿಸಲಾಗುತ್ತದೆ. ದೇವನೊಬ್ಬ ನಾಮ ಹಲವು ಎನ್ನುವುದು ಶಾಂತಿದೂತರ ಶಾಶ್ವತ ವಾಕ್ಯ. ಅದನ್ನು ಒಪ್ಪಿಕೊಳ್ಳೋಣ. ಹಿಂದೂಗಳಲ್ಲಿಯೇ ಎಷ್ಟೋ ಮಂದಿ ಚರ್ಚ್ ಗಳಿಗೆ ಹೋಗುತ್ತಾರೆ. ಎಷ್ಟೋ ಮಂದಿ ಅಜ್ಮೇರ್ ದರ್ಗಾಕ್ಕೆ ಹೋಗಿ ಅಲ್ಲಿ ಸೇವೆ ಸಲ್ಲಿಸುತ್ತಾರೆ. ಹಾಗೇ ಮುಸ್ಲಿಂ, ಕ್ರೈಸ್ತರಲ್ಲಿಯೂ ಅನೇಕರು ಜ್ಯೋತಿಷಿಗಳ ಬಳಿ ಪ್ರಶ್ನೆ ಕೇಳಿ ಪರಿಹಾರ ಮಾಡಿಸಿಕೊಳ್ಳುತ್ತಿಲ್ಲವೇ? ಹೀಗಿರುವಾಗ ವಿರೋಧ ಯಾಕೆ? ಯಾವಾಗ ಧರ್ಮದ ಮುಖಂಡರು ಸಂಕುಚಿತ ಮನೋಭಾವನೆ ಹೊಂದಿದಾಗಲೇ ಈ ಲೈಸೆನ್ಸ್ ರದ್ದು, ಐಡಿ ಕಾರ್ಡ್ ಹಿಂದಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುವುದು. ಅದೇ ಹಿಂದೂಗಳಲ್ಲಿ ನೋಡಿ ಉನ್ನತ ಸ್ಥಾನ, ಅಂತಸ್ತಿನಲ್ಲಿರುವವರು ಚರ್ಚ್ ಗೆ ಹೋಗುತ್ತಾರೆ. ಯಾರೂ ಏನೂ ಮಾತನಾಡಲ್ಲ. ಯಾಕೆಂದರೆ ಅಸಹಿಷ್ಣುತೆ ನಮ್ಮಲ್ಲಿಲ್ಲ. ಈಗ ಜವಾನ್ ಸಿನೆಮಾದ ಬಿಡುಗಡೆಯ ಮೊದಲು ಶಾರುಖ್ ಖಾನ್ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥಿಸಿ ಬಂದರು. ನಾವು ಕೂಡ ಇದನ್ನೇ ಬಯಸುವುದು. ಎಲ್ಲರೂ ಎಲ್ಲಾ ಧರ್ಮವನ್ನು ಪ್ರೀತಿಸೋಣ. ಕೂಡಿ ಬಾಳೋಣ. ಒಂದಂತೂ ನೆನಪಿರಲಿ. ಇಲ್ಲಿರುವ ಯಾವ ಕ್ರೈಸ್ತ ಕೂಡ ವ್ಯಾಟಿಕನ್ ನಿಂದ ಬಂದು ಇಷ್ಟು ಜನಸಂಖ್ಯೆ ಆದದ್ದಲ್ಲ. ಇಲ್ಲಿನವರೇ ಡಿಸೋಜಾ, ಡಿಸಿಲ್ವಾ, ಫೆರ್ನಾಂಡಿಸ್ ಆದದ್ದು. ಅಂತವರು ಒಮ್ಮೆ ವ್ರತ ಆಚರಿಸಿ ನಮ್ಮ ದೇವಸ್ಥಾನಗಳಿಗೆ ಬಂದರೆ ಉರಿದು ಬೀಳುವಂತದ್ದು ಏನೂ ಇಲ್ಲ!
Leave A Reply