ರಣರಂಗಕ್ಕೆ ಇಳಿಯುವ ಮೊದಲು ಸೇನಾಧಿಪತಿ ಶಸ್ತ್ರಾಗಾರ ಚೆಕ್ ಮಾಡಬೇಕು!
ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿಯ ಶಾಸಕರು ಎಡಬಿಡಂಗಗಳ ತರಹ ವರ್ತಿಸದೇ ನೆಟ್ಟಗೆ ಒಗ್ಗಟ್ಟಾಗಿ ಸರಕಾರದ ವಿರುದ್ಧ ಹೋರಾಡಿದರೆ ಕನಿಷ್ಟ ಮುಂದಿನ ಸಲವಾದರೂ ಅಧಿಕಾರಕ್ಕೆ ಬರಬಹುದು. ಅದು ಬಿಟ್ಟು ಮನೆಯೊಂದು ಅರವತ್ತು ಬಾಗಿಲು ಎಂದು ಹೊರಟರೆ ಮುಂದಿನ ಐದು ವರ್ಷಗಳ ಬಳಿಕ ಮೋದಿಯವರು ಬಿಡಿ, ಸ್ವತ: ದೇವರೇ ಬಂದರೂ ಕರ್ನಾಟಕದಲ್ಲಿ ಬಿಜೆಪಿಯವರನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಇವರು ಆಡುತ್ತಿರುವ ಆಟವನ್ನು ಯಡ್ಡಿ ನೋಡಿಯೂ ಸುಮ್ಮನೆ ಕುಳಿತುಕೊಂಡರೆ ಮುಂದೆ ಮಗನಿಗೆ ಸಿಂಹಾಸನ ಕಟ್ಟುವುದು ಬಿಡಿ, ತುಂಡು ಜಾಗ ಕೂಡ ಉಳಿಯುವುದು ಕಷ್ಟ. ಇದಕ್ಕೆ ಸಿಗುತ್ತಿರುವ ಉದಾಹರಣೆಗಳು ಒಂದಾ, ಎರಡಾ?
ಒಂದು ವಿಪಕ್ಷ ಎಂದರೆ ಅಲ್ಲೊಂದು ಪ್ರಬಲ ನಾಯಕ ಮುಂಚೂಣಿಯಲ್ಲಿ ನಿಲ್ಲಬೇಕು. ಆತ ವರದಿಗಾರನಂತೆ ಅಲ್ಲ. ಇಡೀ ಪತ್ರಿಕೆಯ ಸಂಪಾದಕನಂತೆ ಇರಬೇಕು. ಅವನ ಒಂದು ಇಶಾರೆಯನ್ನು ವಿಪಕ್ಷದ ಅಷ್ಟೂ ಶಾಸಕರು ಕಣ್ಣಿಗೆ ಎಣ್ಣೆ ಬಿಟ್ಟಂತೆ ಎಚ್ಚರಿಕೆಯಿಂದ ಕಾದು ಕುಳಿತು ಪಾಲಿಸಬೇಕು. ಸದನದ ಒಳಗೆ ವಿಪಕ್ಷದ ಸದಸ್ಯರಿಗೆ ಆ ನಾಯಕನೇ ಸುಪ್ರೀಂ. ಆ ಸ್ಥಾನಕ್ಕೆ ವಿದೇಶಗಳಲ್ಲಿ ಶ್ಯಾಡೋ ಸರಕಾರ ಎನ್ನುತ್ತಾರೆ. ಆದರೆ ಕರ್ನಾಟಕದಲ್ಲಿ ವಿಪಕ್ಷ ಮುಖಂಡ ಅಶೋಕ್ ಮತ್ತು ವಿಪಕ್ಷ ಶಾಸಕರಿಗೆ ತಾಳಮೇಳವೇ ಇಲ್ಲ. ಅಶೋಕ ಚಕ್ರವರ್ತಿ ಆಡಳಿತ ಪಕ್ಷದ ವಿರುದ್ಧ ಸಭಾತ್ಯಾಗ ಮಾಡೋಣ ಎಂದರೆ ಅರ್ಧದಷ್ಟು ಶಾಸಕರು ಸದನದ ಬಾವಿಗೆ ಇಳಿಯೋಣ ಎನ್ನುತ್ತಾರೆ. ಇವರು ಅಧಿವೇಶನದಿಂದ ಹೊರಗೆ ಹೊರಟರೆ ಶಾಸಕ ಸೋಮಶೇಖರ್ ಎದ್ದೇಳುವುದೇ ಇಲ್ಲ. ಹೊರಗೆ ಬಂದ ಮೇಲೆಯಾದರೂ ಸರಿಯಾಗುತ್ತಾ? ನಾವು ಸಭಾತ್ಯಾಗ ಬೇಡಾ, ಅಲ್ಲೇ ಹೋರಾಟ ಮಾಡಬೇಕಿತ್ತು ಎಂದು ಅವರೊಳಗೆನೆ ಮಾತಿನ ಚಕಮಕಿ.
ಯಡ್ಡಿಗೆ ಮಾತ್ರ ಮಗನ ಚರಿಷ್ಮಾ ಉಳಿಸುವ ಹಟ!
ಸರಿ, ಈಗ ಬೆಳಿಗ್ಗೆ ಶಾಸಕಾಂಗ ಸಭೆ ಕರೆದು ಅಲ್ಲಿಯೇ ಸರಕಾರದ ವಿರುದ್ಧ ಏನು ಮಾಡಬೇಕು ಎಂದು ನಿರ್ಧಾರ ಮಾಡೋಣ ಎಂದರೆ ಎಸ್ ಆರ್ ವಿಶ್ವನಾಥ್ ಅವರಂತಹ ಹಿರಿಯ ಶಾಸಕರು “ನಾನು ಅಶೋಕ್ ವಿಪಕ್ಷ ನಾಯಕನಾಗಿರುವ ತನಕ ಅವರ ಚೇಂಬರಿಗೆ ಹೋಗಲ್ಲ” ಎಂದು ಹಟ ಹಿಡಿದು ಕುಳಿತುಕೊಂಡುಬಿಡುತ್ತಾರೆ. ಇತ್ತ ಬಸವನಗೌಡ ಪಾಟೀಲ್ ಯತ್ನಾಳ್ “ನಮ್ಮ ಮನೆಗೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬರುವುದು ಬೇಡಾ” ಎನ್ನುತ್ತಾರೆ. ಅತ್ತ ಬೆಲ್ಲದ, ಅಶ್ವಥ್ ನಾರಾಯಣ್, ರಮೇಶ್ ಜಾರಕಿಹೊಳಿ ತರದವರು ಯಾವ ಗುಂಪಿನಲ್ಲಿ ಇಲ್ಲದೆ ತಮ್ಮದೇ ಲೋಕದಲ್ಲಿದ್ದಾರೆ. ಇನ್ನು ಸೋತಿರುವವರಲ್ಲಿ ಸಿಟಿ ರವಿ, ಸೋಮಣ್ಣ, ಸುಧಾಕರ್ ತರದವರು ಆಗಾಗ ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಬಿಟ್ಟರೆ ಪಕ್ಷ ಮತ್ತೆ ಎದ್ದೇಳಲು ಏನಾದರೂ ಮಾಡುತ್ತಾರಾ ಎನ್ನುವುದು ಡೌಟು. ಈ ಎಲ್ಲದರ ಮಧ್ಯೆ ಯಡ್ಡಿ ಮಾತ್ರ ಮಗನ ಚರಿಷ್ಮಾ ಮೇ ನಂತರವೂ ಮುಸುಕಾಗಬಾರದು ಎನ್ನುವ ಏಕೈಕ ಕಾರಣಕ್ಕೆ ಏನಾದರೂ ಮಾಡಲೇಬೇಕು ಎನ್ನುವ ಉತ್ಸಾಹದಲ್ಲಿದ್ದಾರೆ. ಆದರೆ ಒಬ್ಬ ರೇಣುಕಾ, ಒಬ್ಬ ಬೊಮ್ಮಾಯಿಯನ್ನು ಹಿಡಿದು ಅವರು ಕೂಡ ಏನೂ ಮಾಡುವುದು ಕಷ್ಟ. ಯಾಕೆಂದರೆ ಪಕ್ಷದ ಒಳಗೆ ಇರುವ ತೂತುಗಳಿಗೆ ಸಿಮೆಂಟ್ ಹಾಕದೇ ಹೊರಗೆ ಪೇಂಟ್ ಹೊಡೆದರೆ ಕಟ್ಟಡ ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಅದಕ್ಕಾಗಿ ಅವರು ಮೊದಲು ಮಾಡಬೇಕಾಗಿರುವುದು ಸರಿಯಾಗಿ ಸಿಮೆಂಟು, ಮರಳು, ನೀರು ಹದವಾಗಿ ಮಿಶ್ರಣವಾಗಿದೆಯಾ ಎಂದು ನೋಡುವುದು.
ಅಸ್ತ್ರಗಳು ಇವೆ, ಆದರೆ ಶಸ್ತ್ರಾಗಾರದ ಕೀ ಮಿಸ್ ಆಗಿದೆ!
ಹಾಗೆ ನೋಡಿದರೆ ಬಿಜೆಪಿಗೆ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಮುಗಿಬೀಳಲು ಸಾಕಷ್ಟು ವಿಷಯಗಳಿವೆ. ಆರು ತಿಂಗಳಿನಿಂದ ಅಭಿವೃದ್ಧಿ ನಿಂತು ಹೋಗಿದೆ. ಅವರದ್ದೇ ಪಕ್ಷದ ಶಾಸಕರಿಗೂ ಅನುದಾನ ಕೊಡದ ಸ್ಥಿತಿ ಸರಕಾರದ್ದು. ಕೇಳಿದ್ರೆ ಎಲ್ಲಾ ಹಣ ಗ್ಯಾರಂಟಿಗೆ ಹೋಯಿತು ಎನ್ನುತ್ತಾರೆ. ಗ್ಯಾರಂಟಿ ಆದ್ರೂ ಸರಿಯಾಗಿ ಕೊಡುತ್ತಿದ್ದಾರಾ? ಅದು ಕೂಡ ಇಲ್ಲ. ಹಾಗಂತ ಹೊಸ 36 ಕಾರುಗಳನ್ನು ಸಚಿವರಿಗಾಗಿ ಖರೀದಿಸಲಾಗಿದೆ. ಅದಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳನ್ನು ವ್ಯಯಮಾಡಲಾಗಿದೆ. ಸರಕಾರದಲ್ಲಿ ಭ್ರಷ್ಟಾಚಾರದ ವಿರುದ್ಧ ಕುಮ್ಮಿ ಹೋರಾಡಿದಷ್ಟು ಬಿಜೆಪಿ ತುಟಿ ಬಿಚ್ಚುತ್ತಿಲ್ಲ. ಸರಕಾರದ ಮೈಮೇಲೆ ಬಿದ್ದು ಪರಚುವ ಕೆಲಸವನ್ನು ಕುಮ್ಮಿಗೆ ಹೊರಗುತ್ತಿಗೆಗೆ ಕೊಟ್ಟಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ಈಗಂತೂ ಕುಮ್ಮಿ ಜೈಶ್ರೀರಾಮ್ ಹೇಳಿ ಆಗಿದೆ. ಇನ್ನು ಬಿಜೆಪಿಯವರು ಎಲ್ಲಾ ಹೊದ್ದು ಮಲಗಿ ಎಲ್ಲಾ ಅವರೇ ನೋಡಿಕೊಳ್ಳಲಿ ಎಂದು ಹೇಳದಿದ್ದರೆ ಸಾಕು. ಬಿಜೆಪಿಯ ಪುಕ್ಕಲುತನ ಕಾಂಗ್ರೆಸ್ಸಿಗೆ ವರವಾಗಿದೆ. ಅಲ್ಲಿ ಎಷ್ಟೇ ಗುಂಪುಗಾರಿಕೆ ಇದೆ ಎಂದುಕೊಂಡರೂ ಬಿಜೆಪಿಯವರು ಹೀಗೆ ಹಗಲು ಕಾಣುವ ಬಾವಿಗೆ ರಾತ್ರಿ ಹೋಗಿ ಬೀಳುವಷ್ಟು ಕೆಟ್ಟ ಪರಿಸ್ಥಿತಿ ಕಾಂಗ್ರೆಸ್ಸಿನಲ್ಲಿ ಇಲ್ಲ. ಸಿದ್ದು, ಡಿಕೆಶಿ, ಎಂಬಿ ಪಾಟೀಲ್, ಜಮೀರ್, ಪ್ರಿಯಾಂಕ್, ಕೃಷ್ಣಭೈರೇಗೌಡ ಹೀಗೆ ಒಬ್ಬೊಬ್ಬರು ರಥ ಏರಿ ಬಾಣ ಹೂಡುತ್ತಿದ್ದರೆ ಎದುರಿಗೆ ಬಿಜೆಪಿ ಸೈನ್ಯ ಬಾಲಕ್ಕೆ ಬೆಂಕಿ ಬಿದ್ದಂತೆ ದಿಕ್ಕುಪಾಲಾಗಿ ಓಡುತ್ತಿದೆ. ಯಡ್ಡಿ ಕೋಟಾದಲ್ಲಿ ವಿಪಕ್ಷ ಸ್ಥಾನ ಪಡೆದಿರುವ ಅಶೋಕ್ ಅಂತ:ಪುರದಲ್ಲಿ ಹೂಂಗುಟ್ಟುವ ದೊರೆಯಂತೆ ಕಾಣುತ್ತಿದ್ದಾರೆ ವಿನ: ರಣರಂಗದಲ್ಲಿ ಅವರಿಗೆ ಮೊನಚಾದ ಬಾಣ, ಗದೆ, ಚಕ್ರ ಏನೂ ಇಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಅವರು ಜೆಡಿಎಸ್ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎನ್ನುವುದು ಸದ್ಯ ಪ್ಲಸ್ ಆಗಿದ್ದರೂ ಕಾಂಗ್ರೆಸ್ ಜೊತೆಗೂ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎನ್ನುವುದು ಪಕ್ಷಕ್ಕೆ ಮೈನಸ್!
Leave A Reply