ನೀವು ಕಲ್ಲು ಬಿಸಾಡಿದರೂ ವಿಪಕ್ಷಗಳು ಹೂವನ್ನೇ ಬಿಸಾಡಬೇಕಾ ಸಿದ್ದುಜಿ!
ಕಾಂಗ್ರೆಸ್ ಮುಖಂಡರು ಸಂಸದ ಅನಂತಕುಮಾರ್ ಹೆಗ್ಡೆ ಮೇಲೆ ಉರಿದು ಬಿದ್ದಿದ್ದಾರೆ. ಅನಂತ್ ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಿದ್ದು ಅವರ ಮಾನಸಿಕತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿದ್ದು ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಇರುವ ವಿಪರೀತ ಓಲೈಕೆ ಮನಸ್ಥಿತಿಯ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ಮಾತನಾಡುತ್ತಿರುವಾಗ ಸಿದ್ದುಜಿ ಬಗ್ಗೆ ಏಕವಚನವನ್ನು ಬಳಸಿದ್ದಾರೆ. ಅಷ್ಟಕ್ಕೆ ಕಾಂಗ್ರೆಸ್ಸಿಗರು ಇದ್ದಬದ್ದ ಕಡೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿ ಅನಂತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತಿದ್ದಾರೆ. ಈಗ ಇರುವ ಪ್ರಶ್ನೆ ಏಕವಚನ ಮತ್ತು ಬಹುವಚನದ ಬಗ್ಗೆ ಯಾರು ಯಾರಿಗೆ ಪಾಠ ಮಾಡಬೇಕು.
ಮಾನ್ಯ ಸಿದ್ದುಜಿಯವರು ವಿಧಾನಸಭೆಯ ಹೊರಗೆ ಬಿಡಿ, ಅಧಿವೇಶನದಲ್ಲಿಯೇ ಏಕವಚನದಲ್ಲಿ ವಿಪಕ್ಷಗಳ ಶಾಸಕರ ಬಗ್ಗೆ ಮಾತನಾಡುತ್ತಾರೆ. ಇನ್ನು ಹೊರಗೆ ಮಾಧ್ಯಮಗಳು ವಿಪಕ್ಷದ ಮುಖಂಡರ ಹೇಳಿಕೆಯ ಬಗ್ಗೆ ಅಭಿಪ್ರಾಯ ಕೇಳಿದಾಗ ಏಕವಚನ ಎನ್ನುವುದು ಅವರ ಮಾತಿನಲ್ಲಿ ಸರ್ವೆ ಸಾಮಾನ್ಯ. ಇನ್ನು ಸಂಜೆ ಕತ್ತಲಾಗುತ್ತಿದ್ದಂತೆ ಅವರ ಮೂಡ್ ಹೇಗಿರುತ್ತೋ ಹೇಳೊಕೆ ಆಗಲ್ಲ. ದೇಶದ ಪ್ರಧಾನ ಮಂತ್ರಿಗಳಿಗೆನೆ ಏಕವಚನದಲ್ಲಿ ಮಾತನಾಡುತ್ತಾರೆ. ಅಂತಹ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಅದು ಯಾವುದೂ ಕಾಂಗ್ರೆಸ್ ಮುಖಂಡರಿಗೆ ಗೊತ್ತಿಲ್ವಾ ಎನ್ನುವುದೇ ಸೋಜಿಗದ ವಿಷಯ.
ಸಿದ್ದುಜಿ ಸಮಜಾಯಿಷಿಕೆ ಏನು?
ಹಾಗಂತ ಸಿದ್ದು ಯಾರನ್ನಾದರೂ ಏಕವಚನದಲ್ಲಿ ಟೀಕಿಸುತ್ತಿರುವುದರ ಬಗ್ಗೆ ಅವರ ಬಳಿಯೇ ಸಮಜಾಯಿಷಿಕೆ ಏನೆಂದು ಕೇಳಿ ನೋಡಿ. ತಕ್ಷಣ ಉತ್ತರ ಬರುತ್ತದೆ. ನಮ್ಮ ಕಡೆ ಹಾಗೆನೆ ಮಾತನಾಡುವುದು. ತಾವು ಯಾರನ್ನಾದರೂ ಏಕವಚನದಲ್ಲಿ ಟೀಕಿಸಿ, ಹಂಗಿಸಿ, ಹೀಯಾಳಿಸಿ ಕೊನೆಗೆ ಅದು ನಮ್ಮ ಕಡೆ ಹಾಗೆನೆ ಎಂದು ಹೇಳಿ ತಪ್ಪಿಸಿಕೊಳ್ಳಬಹುದು ಎಂದು ಅವರು ಅಂದುಕೊಂಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಆದಾಗ ಮಾಧ್ಯಮದವರು ಸಿದ್ದು ಅಭಿಪ್ರಾಯ ಕೇಳಿದಾಗ ಇವರು ಏಕವಚನದಲ್ಲಿ ಮೋದಿಯವರನ್ನು ಟೀಕಿಸಿದ್ದರು. ಅದೇ ಇವರ ಬಗ್ಗೆ ಭಾರತೀಯ ಜನತಾ ಪಾರ್ಟಿಯ ಮುಖಂಡರು ಏಕವಚನದಲ್ಲಿ ಟೀಕಿಸಿದರೆ ತಕ್ಷಣ ಕಾಂಗ್ರೆಸ್ಸಿಗರು ” ಮುಖ್ಯಮಂತ್ರಿಯವರ ಬಗ್ಗೆ ಹೀಗಾ ಮಾತನಾಡೋದು, ಅಷ್ಟೂ ಗೊತ್ತಾಗುವುದಿಲ್ವಾ, ಇದು ಸರಿಯಲ್ಲ” ಹೀಗೆ ಸರಣಿಯಲ್ಲಿ ನಿಂತು ಕಲ್ಲು ಬಿಸಾಡುತ್ತಾರೆ. ಹಾಗಾದರೆ ಸಿದ್ದು ಮೋದಿಯವರನ್ನು ಏಕವಚನದಲ್ಲಿ ಮಾತನಾಡಿಸಿದರೆ ಆಗುತ್ತಾ? ಮೋದಿಯವರು ಪ್ರಧಾನ ಮಂತ್ರಿಯಲ್ವಾ? ಪ್ರಧಾನ ಮಂತ್ರಿಯವರ ಬಗ್ಗೆ ಏಕವಚನದಲ್ಲಿ ಮಾತನಾಡಬಹುದಾ?
ಯಾರು ಮೊದಲು ಸರಿಯಾಗಬೇಕು?
ಹಿಂದೊಮ್ಮೆ ಸಿದ್ದು ಅಧಿವೇಶನದಲ್ಲಿ ಬೇರೆ ಪಕ್ಷದ ಮುಖಂಡರನ್ನು ಏಕವಚನದಲ್ಲಿ ಟೀಕಿಸುತ್ತಾ ಇದ್ದಾಗ ಅದು ದೊಡ್ಡ ವಿಷಯವಾಗಿತ್ತು. ಆಗ ಸಿದ್ದು ತಾವು ತುಂಬಾ ಹಳೆಸ್ನೇಹದಿಂದ ಹಾಗೆ ಏಕವಚನದಿಂದ ಉಲ್ಲೇಖಿಸಿರುವುದಾಗಿ ಹೇಳಿದ್ದರು. ನಮ್ಮ ಕಡೆ ಪ್ರೀತಿಯಿಂದ ಏಕವಚನವನ್ನು ಬಳಸುತ್ತಾರೆ ಎಂದು ಸಮುಜಾಯಿಷಿಕೆ ನೀಡಿದ್ದರು. ಹಾಗಾದರೆ ಪ್ರೀತಿಯೇ ಇದ್ದರೆ ಇದೇ ಸಿದ್ದು ರಾಹುಲ್ ಗಾಂಧಿಯವರನ್ನು ಕೂಡ ಏಕವಚನದಲ್ಲಿ ಮಾತನಾಡಿಸಬಹುದಲ್ಲ ಅಥವಾ ಮಾಧ್ಯಮದಲ್ಲಿ ಮಾತನಾಡುವಾಗ “ರಾಹುಲ್ ನೆ ಹಮ್ಕೋ ಬುಲಾಯಾಹೇ. ರಾಹುಲ್ ಕೋ ಹಂನೆ ಬೋಲಾ ಹೇ. ರಾಹುಲ್ ನೆ ಹಮಾರಾ ಬಾತ್ ಸುನಾ ಹೇ. ವೋ ಅಚ್ಚಾ ಡಿಶಿಷನ್ ಲೇಗಾ” ಎನ್ನಬಹುದಲ್ಲ. ಆದರೆ ಹಾಗೆ ಹೇಳಲ್ವೇ. ಅಲ್ಲಿ “ರಾಹುಲ್ ಜಿನೆ, ರಾಹುಲ್ ಜಿ ಕೋ, ರಾಹುಲ್ ಜಿ ಅಚ್ಚಾ ಡಿಶಿಷನ್ ಲೆಂಗೆ” ಹೀಗೆ ಬಹುವಚನ ಯಾಕೆ? ತುಂಬಾ ಪ್ರೀತಿಯಿದ್ದರೆ ಏಕವಚನ ಬಳಸಬಹುದಲ್ಲಾ. ಹೇಗೂ ಸಿದ್ದು ಅವರು ರಾಹುಲ್ ಅವರಿಗಿಂತ ವಯಸ್ಸಿನಲ್ಲಿಯೂ ದೊಡ್ಡವರು. ಇಲ್ಲಾ, ಅಲ್ಲಿ ಹಾಗೆ ಮಾತನಾಡುವಾಗ ಜಾಗ್ರತೆಯಿಂದ ಶಬ್ದಗಳನ್ನು ಬಳಸುತ್ತಾರೆ.
ಇನ್ನು ಸಿದ್ದುಜಿ ಪರ ಬ್ಯಾಟ್ ಬೀಸುವವರು ಕೂಡ ತಾವು ಈ ಹಿಂದೆ ಯಾರ ಬಗ್ಗೆ ಎಂತೆಂತಹ ಶಬ್ದಗಳನ್ನು ಬಳಸಿದ್ದು ಎನ್ನುವುದನ್ನು ನೋಡಬೇಕಾಗಿದೆ. ಇದೇ ದಿನೇಶ್ ಗುಂಡುರಾವ್ ಹಿಂದೊಮ್ಮೆ ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಹೇಳಿದ್ರು. ಸಾಮಾನ್ಯವಾಗಿ ಇಂತಹ ಹೇಳಿಕೆಯನ್ನು ಯಾರಾದರೂ ಹೀಗೆ ಕೆಳಮಟ್ಟದಲ್ಲಿ ನೀಡುವಾಗ ಎರಡು ರೀತಿಯ ರಿಯಾಕ್ಷನ್ ಬರುತ್ತೆ. ಒಂದೋ ಇದು ರಾಜಕೀಯದಲ್ಲಿ ಸಾಮಾನ್ಯ ಎಂದುಕೊಂಡು ಮುಂದೆ ಹೋಗೋದು. ಇನ್ನೊಂದು ಬೆಂಬಲಿಗರ ಒತ್ತಾಯಕ್ಕೆ ಮಣಿದು ಕೇಸುಗೀಸು ಹಾಕಲು ಮೌನ ಸಮ್ಮತಿ ನೀಡುವುದು. ಎರಡರಿಂದಲೂ ರಾಜಕೀಯದಲ್ಲಿ ಏನೂ ಬದಲಾವಣೆ ಆಗಲ್ಲ. ಅದರ ಬದಲು ಹೇಳಿಕೆಗಳನ್ನು ಕೊಡುವಾಗ ಎಲ್ಲರೂ ಒಂದಿಷ್ಟು ಸಂಯಮದಿಂದ ವರ್ತಿಸಿದರೆ ಆಗ ಮುಂದಿನ ಪೀಳಿಗೆಗೆ ಅದು ದಾರಿದೀಪವಾಗುತ್ತದೆ. ಇಲ್ಲದೇ ಹೋದರೆ ರಾಜಕೀಯದ ಬಗ್ಗೆ ಇನ್ನಷ್ಟು ಅಸಹ್ಯ ಹೆಚ್ಚಾಗುತ್ತದೆ. ಇನ್ನು ಮಾಧ್ಯಮಗಳು ಕೂಡ ಈ ಚಿಲ್ಲರೆ ವಿಷಯವನ್ನೇ ಹಿಡಿದು ದೊಡ್ಡದು ಮಾಡುವುದರಿಂದ ಮತ್ತು ಜನರಿಗೂ ಇಂತಹ ವಿಷಯಗಳೇ ಮನೋರಂಜನೆ ನೀಡುತ್ತಿರುವುದರಿಂದ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ನೋಡಬೇಕಾಗಿದೆ.
Leave A Reply