ರಾಮ ಮಂದಿರದ ಉದ್ಘಾಟನೆಯ ಹೊತ್ತಿನಲ್ಲಿಯೇ ಇಂದೆಂತಹ ಸುದ್ದಿ?
ಒಂದು ವೇಳೆ ರಾಜ್ಯ ಸರಕಾರ ಹಟ ಮಾಡಿ ಹೀರೆಮಗಳೂರು ಕಣ್ಣನ್ ಅವರಿಂದ 4 ಲಕ್ಷ 74 ಸಾವಿರ ರೂಪಾಯಿ ವಾಪಾಸು ಪಡೆಯುವಲ್ಲಿ ಯಶಸ್ವಿಯಾಯಿತು ಎಂದೇ ಇಟ್ಟುಕೊಳ್ಳೋಣ. ಅಲ್ಲಿಗೆ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ತನ್ನ ಕಾಲಿಗೆ ತಾನೇ ಗ್ರಾನೈಟ್ ಎತ್ತಿಹಾಕಿತು ಎಂದೇ ಲೆಕ್ಕ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ ವಾಸ್ತವದಲ್ಲಿ ಹಾಗೆ ಆಗುತ್ತೆ ಎಂದು ಸಾರಾಸಗಟಾಗಿ ಹೇಳಲು ಆಗಲ್ಲ. ಯಾಕೆಂದರೆ ಕರ್ನಾಟಕದಲ್ಲಿ ರಾಜಕೀಯ ಎನ್ನುವುದು ಜಾತಿಗಳ ಆಧಾರದಲ್ಲಿ ಎಷ್ಟು ಹೋಳಾಗಿ ಹೋಗಿದೆ ಎಂದರೆ ನಾವು ಅರ್ಚಕರಿಗೆ ಕಿರುಕುಳ ಕೊಟ್ಟರೂ ಇಡೀ ಹಿಂದೂ ಸಮಾಜ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಸಿದ್ದುಜಿ ನೇತೃತ್ವದ ರಾಜ್ಯ ಸರಕಾರ ದೃಢವಾಗಿ ನಂಬಿದೆ. ಇಲ್ಲದೇ ಹೋದರೆ ನಾವು ನಿಮಗೆ ಕಳೆದ ಹತ್ತು ವರ್ಷಗಳಲ್ಲಿ ಎರಡೂವರೆ ಮೂರು ಸಾವಿರ ಹೆಚ್ಚಿಗೆ ಕೊಟ್ಟಿದ್ದೇವೆ. ಅದನ್ನು ಒಟ್ಟಾಗಿ ಮಾಡಿದರೆ 4.74 ಲಕ್ಷ ರೂಪಾಯಿ ಸಂಬಳ ಆಗುತ್ತದೆ. ಅದನ್ನು ವಾಪಾಸು ಮುಜುರಾಯಿ ಇಲಾಖೆಗೆ ಕಟ್ಟಿ ಎಂದು ಲಿಖಿತ ನೋಟಿಸು ನೀಡಿದ್ದಾರೆ ಎಂದರೆ ಅದೆಷ್ಟು ಭಂಡ ಧೈರ್ಯ ಇದೆ ಎನ್ನುವುದರ ಅಂದಾಜೆ ಸಿಗುವುದಿಲ್ಲ!
ಹಿಂದಕ್ಕೆ ಕೊಡಿ ಎಂದು ಹೇಳಿದರೆ ಏನು ಕಥೆ?
ಸರಕಾರದ ಅಧೀನದಲ್ಲಿ ಬರುವ ದೇವಸ್ಥಾನಗಳಲ್ಲಿ ಅತೀ ಹೆಚ್ಚು ಆದಾಯ ಬರುವ ದೇವಸ್ಥಾನಗಳು ಒಂದು ಕಡೆಯಾದರೆ ಸಾಧಾರಣ ಆದಾಯ ಬರುವ ದೇವಸ್ಥಾನಗಳು ಇನ್ನೊಂದು ಕಡೆ ಮತ್ತು ಏನೂ ಆದಾಯ ಇಲ್ಲದ ದೇವಸ್ಥಾನಗಳು ಮತ್ತೊಂದೆಡೆ ನಮ್ಮ ರಾಜ್ಯದಲ್ಲಿವೆ. ಯಾವ ದೇವಸ್ಥಾನವನ್ನು ನೋಡಿದರೂ ಅವುಗಳು ಅಭಿವೃದ್ಧಿ ದೃಷ್ಟಿಯಲ್ಲಿ ಗಮನಿಸಿದರೆ ಸಾಕಷ್ಟು ಹಿಂದುಳಿದಿರುವುದು ಎದ್ದುಕಾಣುತ್ತದೆ. ಇನ್ನು ಉತ್ತಮ ಆದಾಯ ಇರುವ ದೇವಸ್ಥಾಗಳಲ್ಲಿ ಅಲ್ಲಿನ ಅರ್ಚಕರಿಗೆ ಉತ್ತಮ ಆದಾಯ ಇದ್ದೇ ಇರುತ್ತದೆ. ಇನ್ನು ಉಳಿದ ದೇವಸ್ಥಾನಗಳಲ್ಲಿ ಸರಕಾರ ಕೊಡುವ ಸಂಬಳಗಳಲ್ಲಿ ದೇವಸ್ಥಾನದ ಎಣ್ಣೆ, ಬತ್ತಿ, ಹೂವಿನಿಂದ ಹಿಡಿದು ನೆಲ ತೊಳೆಯಲು ಫಿನಾಯಿಲ್ ತನಕ ಎಲ್ಲವನ್ನು ಅರ್ಚಕರೇ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಹಾಗಿರುವಾಗ ಬಿ ಅಥವಾ ಸಿ ಗ್ರೇಡ್ ದೇವಸ್ಥಾನಗಳಲ್ಲಿ ಅರ್ಚಕರಿಗೆ ಸಿಗುವ ಸಂಬಳದಲ್ಲಿ ಉಳಿಯುವ ಹಣ ಎಷ್ಟು? ಈಗ ಅದನ್ನು ಹಿಂದಕ್ಕೆ ಕೊಡಿ ಎಂದು ಹೇಳಿದರೆ ಏನು ಕಥೆ?
ಇದಕ್ಕೆ ಸರಕಾರ ಕೊಟ್ಟಿರುವ ಕಾರಣ ಏನು?
ಹೀರೆಮಗಳೂರು ಕಣ್ಣನ್ ಅವರಿಗೆ ಕೊಟ್ಟಿರುವ ನೋಟಿಸಿನಲ್ಲಿ “ನಿಮ್ಮ ದೇವಸ್ಥಾನದಲ್ಲಿ ಆದಾಯ ಕಡಿಮೆ ಇದೆ. ಅದಕ್ಕಾಗಿ ಅಷ್ಟು ಸಂಬಳ ಕೊಡಲು ಆಗುವುದಿಲ್ಲ” ಎಂದು ಸರಕಾರದ ಕೊಟ್ಟಿರುವ ಕಾರಣವಾಗಿದೆ. ಒಟ್ಟಿನಲ್ಲಿ ಇಲ್ಲಿಯ ತನಕ ನಾವು ಕೊಡುತ್ತಿರುವ ಸಂಬಳವೇ ಜಾಸ್ತಿಯಾಗಿದೆ ಎನ್ನುವ ಅರ್ಥದ ಕಾರಣವನ್ನು ರಾಜ್ಯ ಸರಕಾರ ನೀಡಿದೆ. ಈಗ ಇರುವ ಪ್ರಶ್ನೆ ನಾವು ನಮ್ಮ ತೆರಿಗೆಯಿಂದ ನಾವು ಜನಪ್ರತಿನಿಧಿಗಳಿಗೆ ಅಂದರೆ ಶಾಸಕ, ಸಚಿವರಿಗೆ ಸಂಬಳವನ್ನು ಕೊಡುತ್ತಿದ್ದೇವೆ. ಈಗ ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರಾ, ಇಲ್ವಾ ಎನ್ನುವುದು ನೋಡಿದರೆ ಆ ಸಂಬಳಕ್ಕೆ ಅವರು ಖಂಡಿತ ಅರ್ಹರಾಗಿರುವುದಿಲ್ಲ. ಅದರೊಂದಿಗೆ ಅವರಿಗೆ ಭತ್ತೆ, ಸೌಲಭ್ಯ ಎಲ್ಲವೂ ಸೇರಿದರೆ ಅದು ಇನ್ನಷ್ಟು ಜಾಸ್ತಿಯಾಗುತ್ತದೆ. ಹೇಗೂ ಅವರು ಮಾಡುವುದು ಜನಸೇವೆ. ಹಾಗಂತ ಅವರಿಂದ ಹಣ ವಾಪಾಸು ಪಡೆಯಿರಿ ಎಂದು ಯಾರಾದರೂ ಅಭಿಯಾನ ಆರಂಭಿಸಿದರೆ? ಇನ್ನು ಸಚಿವರಿಗೆ ಹೊಸ ಗಾಡಿ ಸರಕಾರದಿಂದ ಖರೀದಿಸಲಾಗಿದೆ. ಅದಕ್ಕೆ 10 ಕೋಟಿ ರೂಪಾಯಿ ವ್ಯಯವಾಗಿದೆ. ಅದು ಬೇಕಿತ್ತಾ ಎನ್ನುವುದು ಈಗಿರುವ ಪ್ರಶ್ನೆ. ಹೀಗೆ ಉಳಿದ ಎಲ್ಲವೂ ಗೌಣವಾಗಿರುವಾಗ ಕೇವಲ ಅರ್ಚಕರ ಸಂಬಳದ ಮೇಲೆ ಸರಕಾರಕ್ಕೆ ಯಾಕೆ ಕಣ್ಣು ಬಿತ್ತು. ಅತ್ತ ಮಸೀದಿಗಳ ಇಮಾಮುಗಳಿಗೆ ಸಂಬಳ, ಭತ್ತೆ ನಿಗದಿ ಮಾಡಲು ಉತ್ಸಾಹ ತೋರಿಸುವ ಸರಕಾರ ಅರ್ಚಕರ ಮೇಲೆ ಯಾಕಿಷ್ಟು ತಾತ್ಸಾರ ತೋರಿಸುತ್ತದೆ ಎನ್ನುವುದೇ ಈಗಿರುವ ಪ್ರಶ್ನೆ!
Leave A Reply