ಜಾತಿ ಯಾವತ್ತೂ ಮುನ್ನಲೆಗೆ ಬಂದಿಲ್ಲ!
ಇಲ್ಲಿ ಜಾತಿ ವಿಷಯ ಎತ್ತಿದರೆ ಗೆಲ್ಲಲ್ಲ!
ಕರ್ನಾಟಕದ ಬೇರೆ ಯಾವುದೇ ಭಾಗದಲ್ಲಿ ಯಾವುದೇ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲಲು ಜಾತಿ ಬಹಳ ಮುಖ್ಯವಾದ ಅಸ್ತ್ರವಾಗಿರಬಹುದು. ಆದರೆ ಕರಾವಳಿಯ ವಿಷಯ ಬಂದಾಗ ಇಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯ ಜಾತಿ ಮುಖ್ಯವಾಗಿಯೇ ಇಲ್ಲ. ಹಾಗೆ ನೋಡಿದರೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರ ನಂತರದ ಸ್ಥಾನದಲ್ಲಿ ಬಂಟರು ಬರುತ್ತಾರೆ. ಆದರೂ ಅಲ್ಪಸಂಖ್ಯಾತ ಸಮುದಾಯ ಜೈನ ಸಮಾಜದ ಧನಂಜಯ ಕುಮಾರ್ ಅವರು ಇಲ್ಲಿ ನಾಲ್ಕು ಬಾರಿ ಗೆದ್ದು ಸಂಸದರೂ, ಕೇಂದ್ರ ಸಚಿವರೂ ಆಗಿದ್ದಾರೆ. ಇನ್ನು ಒಕ್ಕಲಿಗರು ಕಡಿಮೆ ಸಂಖ್ಯೆಯಲ್ಲಿದ್ದರೂ ದಕ್ಷಿಣ ಕನ್ನಡದ ಜನ ಆತ ಒಕ್ಕಲಿಗ ಎನ್ನುವ ಕಾರಣಕ್ಕೆ ಕೈಬಿಡದೆ ಗೆಲ್ಲಿಸಿಕೊಂಡು ಬಂದಿದ್ದಾರೆ. ಅದು ಡಿವಿ ಸದಾನಂದ ಗೌಡರು. ಅವರು ನಂತರ ಇಲ್ಲಿಂದ ಗುಳೆ ಎದ್ದು ಹೋದರು. ಆದರೂ ಎರಡೂ ಜಿಲ್ಲೆಗಳ ಜನ ಅವರಿಗೆ ಸೋಲು ಉಣ್ಣಿಸಲಿಲ್ಲ. ಇನ್ನು ಬಂಟರು ಎನ್ನುವ ಕಾರಣಕ್ಕೆ ಆವತ್ತು ಕೆ.ಕೆ.ಶೆಟ್ಟಿಯವರನ್ನು ಕೂಡ ಇಲ್ಲಿನವರು ಸೋಲಿಸಲಿಲ್ಲ, ನಂತರ ಮೂರು ಬಾರಿ ನಳಿನ್ ಕುಮಾರ್ ಕಟೀಲ್ ಅವರ ಜಯದ ಓಟಕ್ಕೆ ಜಾತಿ ಅಡ್ಡಗಾಲು ಹಾಕಿಲ್ಲ. ಹಾಗೆ ನೋಡಿದರೆ ಶೋಭಾ ಕರಂದ್ಲಾಜೆ ಒಕ್ಕಲಿಗರಾದರೂ ಉಡುಪಿಯಲ್ಲಿ ಸಂಸದರಾಗಿದ್ದರು. ಈ ಬಾರಿ ಬೇರೆ ಕಡೆ ಹೋಗಿದ್ದಾರೆ, ಅದು ಬೇರೆ ವಿಷಯ.
ಪೂಜಾರಿ ಸೋಲುವ ಚಾನ್ಸೆ ಇರಲಿಲ್ಲ!
ಇಂತಹ ವಿಷಯ ಇರುವಾಗ, ಬಿಲ್ಲವರು ಬಹುಸಂಖ್ಯಾತರಿರುವ ಈ ಜಿಲ್ಲೆಯಲ್ಲಿ ಈ ಬಾರಿ ಬಿಲ್ಲವ ಅಭ್ಯರ್ಥಿಯನ್ನು ಜನ ಗೆಲ್ಲಿಸಬೇಕು ಎಂದು ಕಾಂಗ್ರೆಸ್ಸಿಗರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಪ್ರಚಾರದ ರಣತಂತ್ರ ಹೂಡುತ್ತಿದ್ದಾರೆ. ತಪ್ಪಿಲ್ಲ, ಅದು ಅವರ ಸ್ಟ್ಯಾಟರ್ಜಿಯ ಒಂದು ಭಾಗ. ಅದರೆ ಕಾಂಗ್ರೆಸ್ಸಿಗರಿಗೆ ಗೊತ್ತಿರಬೇಕು, ಏನೆಂದರೆ ಇಲ್ಲಿನ ಬಿಲ್ಲವ ಮತದಾರರು ಯಾವತ್ತೂ ತಮ್ಮ ಜಾತಿಯವನು ಎನ್ನುವ ಕಾರಣಕ್ಕೆ ಪ್ರತಿ ಬಾರಿ ಬಿಲ್ಲವ ಅಭ್ಯರ್ಥಿಯನ್ನೇ ಗೆಲ್ಲಿಸಿಕೊಂಡು ಬಂದಿಲ್ಲ. ಹಾಗೆ ನೋಡಿದರೆ 1991 ರಿಂದ 2014 ರ ತನಕ ನಡೆದ ಅಷ್ಟೂ ಲೋಕಸಭಾ ಚುನಾವಣೆಯಲ್ಲಿಯೂ ಜನಾರ್ಧನ ಪೂಜಾರಿಯವರು ಸೋಲಬಾರದಿತ್ತು. ಪೂಜಾರಿಯವರಿಗೆ ಜಾತಿಬಲ ಇತ್ತು, ಕೇಂದ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದರು, ಅವರು ಕರೆದರೆ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಪ್ರಚಾರಕ್ಕೆ ಬರುತ್ತಿದ್ದರು, ಅವರು ಚುನಾವಣೆಗೆ ನಿಂತರೆ ಸಾಕು, ಶ್ರೀಮಂತ ಉದ್ಯಮಿಗಳು ಖರ್ಚು ನೋಡಿಕೊಳ್ಳಲು ತಯಾರಾಗುತ್ತಿದ್ದರು, ಎಲ್ಲಕ್ಕಿಂತ ಮಿಗಿಲಾಗಿ ಪೂಜಾರಿಯವರಿಗೆ ಬಡವರ ಬಗ್ಗೆ ಅಪಾರ ಕರುಣೆ ಇತ್ತು. ಅವರ ವರ್ಚಸ್ಸಿನ ಎದುರು ನಿಲ್ಲುವಂತಹ ಅಭ್ಯರ್ಥಿ ಬಿಜೆಪಿಯಲ್ಲಿ ಯಾರೂ ಇರುತ್ತಿರಲಿಲ್ಲ. ಆದರೂ 1991 ರಿಂದ ಫಲಿತಾಂಶ ಏನಾಗಿದೆ ಎಂದು ಕಾಂಗ್ರೆಸ್ಸಿಗರು ಆತ್ಮವಿಮರ್ಶೆ ಮಾಡಬೇಕು.
ಜಾತಿ ಯಾವತ್ತೂ ಮುನ್ನಲೆಗೆ ಬಂದಿಲ್ಲ!
1991 ರಲ್ಲಿ ಧನಂಜಯ್ ಕುಮಾರ್ ಅವರಿಂದ ಶುರುವಾದ ವಿಜಯದ ಯಾತ್ರೆ ಇಲ್ಲಿಯ ತನಕವೂ ಹಾಗೆ ಇದೆ. ಬಹುಸಂಖ್ಯಾತ ಬಿಲ್ಲವರು ಮನಸ್ಸು ಮಾಡಿದರೆ ಪೂಜಾರಿಯವರು ಸೋಲಬೇಕಾಗಿಯೇ ಇರಲಿಲ್ಲ. ಆದರೆ ಹಾಗೆ ಆಗಲಿಲ್ಲ. ಯಾಕೆಂದರೆ ಕರಾವಳಿಯಲ್ಲಿ ಯಾವತ್ತೂ ಜನ ಪಕ್ಷವನ್ನು ಮೊದಲು ನೋಡಿದ್ದಾರೆ. ಯಾವತ್ತೂ ಜಾತಿಗೆ ಮಣೆ ಹಾಕಿಲ್ಲ. ಎಲ್ಲಿಯ ತನಕ ಎಂದರೆ ನಳಿನ್ ಕುಮಾರ್ ಕಟೀಲ್ ಅವರು ಬಂಟ ಸಮುದಾಯಕ್ಕೆ ಸೇರಿದ್ದಾರೆ, ಅವರು ಶೆಟ್ಟಿ ಎಂದು ಪ್ರಚಾರ ಮಾಡಿದ್ದೇ ಕಾಂಗ್ರೆಸ್ಸಿಗರು. ಅಲ್ಲಿಯ ತನಕ ನಳಿನ್ ಸರ್ ನೇಮ್ ಹಾಕುತ್ತಿಲ್ಲದ ಕಾರಣ ಹೆಚ್ಚಿನವರಿಗೆ ಅವರ ಜಾತಿ ಗೊತ್ತಿರಲಿಲ್ಲ. ಆದ್ದರಿಂದ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಯಾವ ಪಕ್ಷವನ್ನು ಗೆಲ್ಲಿಸಬೇಕು ಎಂದು ಜನ ತೀರ್ಮಾನಮಾಡುತ್ತಾರೆಯೇ ವಿನ: ಜಾತಿಯನ್ನಲ್ಲ. ಆದ್ದರಿಂದ ಬಿಜೆಪಿಯ ಹೈಕಮಾಂಡ್ ಕೂಡ ಇಲ್ಲಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಮೂರು ಅವಧಿ ಮುಗಿಸಿದ್ದಾರೆ ಎನ್ನುವ ಕಾರಣಕ್ಕೆ ಬದಲಾಯಿಸಿತು. ಅದೇ ನಾಲ್ಕೈದು ಅವಧಿಗೆ ಸಂಸದರಾಗಿರುವ ಬಾಕಿ ಎಷ್ಟೋ ಜನ ಜಾತಿಯ ಕಾರಣಕ್ಕೆ ಮತ್ತೊಮ್ಮೆ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ!!
Leave A Reply