ಜೆಡಿಎಸ್ ನಿಂದ ಪ್ರಜ್ವಲ್ ಉಚ್ಚಾಟನೆ ಎಂದ ಎಚ್ ಡಿಕೆ
ಹಾಸನ ಸಂಸದ, ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮೊಗ ಪ್ರಜ್ವಲ್ ರೇವಣ್ಣ ಅವರನ್ನು ಜಾತ್ಯಾತೀತ ಜನತಾದಳದಿಂದ ಉಚ್ಚಾಟನೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್ ಡಿ ದೇವೆಗೌಡರು ತೀರ್ಮಾನಿಸಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು. ಪ್ರಜ್ವಲ್ ಅವರ ಉಚ್ಚಾಟನೆಯ ಬಗ್ಗೆ ಭಾನುವಾರ ರಾತ್ರಿಯೇ ದೇವೇಗೌಡರ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.
ರಾಜ್ಯದ ಹೆಣ್ಣುಮಕ್ಕಳ ಧ್ವನಿಯಾಗಿ ನಾನೂ ಧ್ವನಿ ಎತ್ತುತ್ತೇನೆ. ಪ್ರಜ್ವಲ್ ಪ್ರಕರಣದಲ್ಲಿ ಯಾವುದೇ ರಾಜಿ ಇಲ್ಲ. ವಿಶೇಷ ತನಿಖಾ ದಳ ಈ ಬಗ್ಗೆ ವಿಚಾರಣೆ ಮಾಡುತ್ತಿದೆ. ತಪ್ಪು ಆಗಿದ್ದರೆ ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕು ಎಂಬ ನನ್ನ ನಿಲುವು ಮುಂದುವರೆಯಲಿದೆ ಎಂದು ಅವರು ಹೇಳಿದರು.
ಈ ವಿಷಯದಲ್ಲಿ ಬಿಜೆಪಿ, ನರೇಂದ್ರ ಮೋದಿ, ದೇವೆಗೌಡರಿಗೆ ಹಾಗೂ ತನಗೂ ಸಂಬಂಧವಿಲ್ಲ. ಸಹೋದರ ರೇವಣ್ಣ ಕುಟುಂಬ ಬೇರೆ ಮತ್ತು ನಮ್ಮ ಕುಟುಂಬ ಬೇರೆಯಾಗಿ ವಾಸಿಸುತ್ತಿದ್ದೇವೆ. ಈ ಬಗ್ಗೆ ಯಾರಿಗೂ ಲಿಂಕ್ ಮಾಡುವುದು ಸರಿಯಲ್ಲ ಎಂದು ಹೇಳಿದರು.
Leave A Reply