ಅಯೋಧ್ಯೆಯ ರಾಮ ದರ್ಶನಕ್ಕೆ ಪಾಕಿಸ್ತಾನಿಯರು!
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದಾಗಿನಿಂದ ಲಕ್ಷಾಂತರ ಮಂದಿ ಭಕ್ತರು ದೇಶ, ವಿದೇಶದಿಂದ ಬಂದು ಇಲ್ಲಿ ಪ್ರಾರ್ಥನೆ
ಸಲ್ಲಿಸುತ್ತಿದ್ದಾರೆ. ಇದೀಗ ಇದಕ್ಕೆ ಇನ್ನೊಂದು ವಿಷಯ ಸೇರ್ಪಡೆಯಾಗಿದೆ. ಪಾಕಿಸ್ತಾನದಿಂದಲೂ ಬಾಲರಾಮನ ದರ್ಶನ ಪಡೆಯಲು ಜನರು ಬರುತ್ತಿದ್ದಾರೆ.
ಪಾಕಿಸ್ತಾನದಲ್ಲಿರುವ ಸಿಂಧಿ ಸಮುದಾಯದ 200 ಸದಸ್ಯರ ನಿಯೋಗ ಅಯೋಧ್ಯೆಗೆ ತೆರಳಿ ಬಾಲರಾಮನಿಗೆ ಪೂಜೆ ಸಲ್ಲಿಸಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಈ ನಿಯೋಗವು ಭಾರತಕ್ಕೆ ಒಂದು ತಿಂಗಳ ಧಾರ್ಮಿಕ ಪ್ರವಾಸದಲ್ಲಿದೆ. ರಸ್ತೆ ಮಾರ್ಗವಾಗಿ ಪ್ರಯಾಗ್ ರಾಜ್ ನಿಂದ ಅಯೋಧ್ಯೆಗೆ ತಲುಪಿದ ಸಿಂಧಿ ಸಮುದಾಯವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ್ ಕಿ ಪೈಡಿಯಲ್ಲಿ ಸ್ವಾಗತಿಸಿದರು. ಭಾರತದಿಂದ ಸಿಂಧಿ ಸಮುದಾಯದ 150 ಸದಸ್ಯರ ನಿಯೋಗವೂ ಇದರೊಂದಿಗೆ ಪ್ರಯಾಣಿಸಿದೆ.
ಅಯೋಧ್ಯೆಯ ಉದಾಸಿನ್ ಋಷಿ ಆಶ್ರಮ ಮತ್ತು ಶಬರಿ ರಸೋಯಿಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ನಿಯೋಗವು ಸಂಜೆ ರಾಮ್ ಕಿ ಪೈಡಿಯಲ್ಲಿ ಸರಯು ಆರತಿಯಲ್ಲಿ ಪಾಲ್ಗೊಂಡಿತ್ತು.
ಅಯೋಧ್ಯೆಯ ಸಿಂಧಿಧಾಮ್ ಆಶ್ರಮದಲ್ಲಿ ಪಾಕಿಸ್ತಾನಿ ನಿಯೋಗಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಬಂದಿರುವ ಸಿಂಧಿ ಸಂಘಗಳು ಅವರನ್ನು ಸ್ವಾಗತಿಸಿದವು. ರಾಯಪುರದ ಸಂತ ಸದಾ ರಾಮ್ ದರ್ಬಾರ್ ನ ಪೀಠದೇಶ್ವರರು, ಯುಧಿಷ್ಠರ್ ಲಾಲ್ ಸಹ ಅವರೊಂದಿಗೆ ಇದ್ದಾರೆ. ನಿಯೋಗವು ಅಯೋಧ್ಯೆಯಲ್ಲಿ ದೇವರ ದರ್ಶನ ಪಡೆದು ಅಲ್ಲಿಂದ ಲಕ್ನೋಗೆ ತೆರಳಲಿದೆ.
Leave A Reply