ದೇವೇಗೌಡರಿಂದ ಕಾರ್ಯಕರ್ತರಿಗೆ ಭಾವುಕ ಪತ್ರ: ಏನಿದೆ ಪತ್ರದಲ್ಲಿ… ?
ದೇವೇಗೌಡರಿಗೆ ಈ ವಯಸ್ಸಿನಲ್ಲಿ ಹೀಗೆ ಆಗಬಾರದಿತ್ತು ಕಣ್ರೀ ಎಂದು ಹೇಳಿದವರೇ ಹೆಚ್ಚು. ಒಂದು ಕಡೆ ಪ್ರೀತಿಯ ಮೊಮ್ಮೊಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಿಲುಕಿ ಸುದ್ದಿಯಾಗಬಾರದ ವಿಷಯಕ್ಕೆ ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿಯಾಗಿದ್ದಾರೆ. ಏಪ್ರಿಲ್ 26 ರಂದು ಮತದಾನದ ದಿನ ಹಾಸನದಿಂದ ತೆರಳಿದ ಪ್ರಜ್ವಲ್ ಇಲ್ಲಿಯವರೆಗೂ ಎಲ್ಲಿದ್ದಾರೆ ಎಂದು ಕುಟುಂಬಸ್ಥರ ಬಳಿಯೂ ಸರಿಯಾದ ಮಾಹಿತಿ ಇದೆಯೋ, ಇಲ್ವೋ.
ತಮ್ಮ ರಾಜಕೀಯ ಕರ್ಮಭೂಮಿ ಹಾಸನವನ್ನು ಮೊಮ್ಮೊಗನಿಗೆ ಬಿಟ್ಟುಕೊಟ್ಟು ತಾವು ತುಮಕೂರಿನಲ್ಲಿ ಸ್ಪರ್ಧಿಸಿ ಸೋತಿದ್ದರೂ ದೇವೇಗೌಡರಿಗೆ ಆವತ್ತು ಅಷ್ಟು ಬೇಸರ ಆಗಿರಲಿಕ್ಕಿಲ್ಲ. ಆದರೆ ಈಗ ಮೊಮ್ಮೊಗನ ಬಗ್ಗೆ ಚಿಂತೆ ಶುರುವಾಗಿದೆ. ಅದರೊಂದಿಗೆ ಪುತ್ರ ರೇವಣ್ಣ ಕೋರ್ಟ್, ಬೇಲ್, ಜೈಲು ಎಂದು ಸುತ್ತಾಡುತ್ತಿರುವುದು ನೋಡಿ ಮನಸ್ಸಿಗೆ ಆಘಾತವಾಗಿದೆ. ಈ ಹೊತ್ತಿನಲ್ಲಿಯೇ ಎಚ್ ಡಿ ದೇವೇಗೌಡರ ಜನ್ಮದಿನವೂ ಬಂದಿರುವುದು ಕಾಕತಾಳೀಯ.
ಇದೇ ಮೇ 18 ರಂದು ದೊಡ್ಡ ಗೌಡರು 91 ವರ್ಷ ಪೂರೈಸಿ 92 ಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಅವರಿಗೆ ಜನ್ಮದಿನವನ್ನು ಆಚರಿಸಿಕೊಳ್ಳಲು ಮನಸ್ಸಿಲ್ಲ. ಹೀಗಾಗಿ ಕಾರ್ಯಕರ್ತರಿಗೆ ಪತ್ರವೊಂದನ್ನು ಬರೆದು ಅದನ್ನು ಮಾಧ್ಯಮ ಪ್ರಕಟನೆಯ ಮೂಲಕ ಬಿಡುಗಡೆಗೊಳಿಸಿದ್ದಾರೆ. ಈ ವರ್ಷ ಕಾರಣಾಂತರಗಳಿಂದ ನಾನು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಪ್ರಸ್ತಕ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ (ಎನ್ ಡಿಎ) ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಹಾಗೂ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
Leave A Reply