ಕಾಪು ಮಾರಿಗುಡಿಗೆ ಭೇಟಿ ನೀಡಿದ ಬಳಿಕ ಖುಲಾಯಿಸಿದ ಅದೃಷ್ಟ!
ಸೂರ್ಯಕುಮಾರ್ ಯಾದವ್ ಅವರು ಟಿಟ್ವೆಂಟಿ ವಿಶ್ವಕಪ್ ಗೆದ್ದ ಬಳಿಕ ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಳಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಹೋಗಿದ್ದರು. ಅಲ್ಲಿ ಅವರೊಂದಿಗೆ ಅವರ ಪತ್ನಿ ದೀವಿಶಾ ಶೆಟ್ಟಿ ಕೂಡ ಉಪಸ್ಥಿತರಿದ್ದರು. ಅಲ್ಲಿ ದೇವರ ಆರ್ಶೀವಾದವನ್ನು ಪಡೆದುಕೊಂಡು ತೆರಳಿದ ಬಳಿಕ ಸೂರ್ಯ ಕುಮಾರ್ ಯಾದವ್ ಅವರ ಜೀವನದಲ್ಲಿ ಬಹುದೊಡ್ಡ ತಿರುವು ಸಿಕ್ಕಿದೆ.
ಭಾರತ ಟಿ20 ತಂಡದ ನಾಯಕನಾಗಿ ಸೂರ್ಯ ಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಟಿ20 ತಂಡದ ಕ್ಯಾಪ್ಟನ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಸದ್ಯ ಟಿ20 ತಜ್ಞ ಸೂರ್ಯ ಕುಮಾರ್ ಯಾದವ್ ಅವರಿಗೆ ನಾಯಕನ ಪಟ್ಟ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ. ಅದರಂತೆ ಶ್ರೀಲಂಕಾ ವಿರುದ್ಧದ ಸರಣಿಗೆ ಸೂರ್ಯ ತಂಡದ ಕಪ್ತಾನ ಆಗಿ ಮಿಂಚಲಿದ್ದಾರೆ.
ಈ ಮೊದಲು ಸೂರ್ಯ ಕುಮಾರ್ ಯಾದವ್ ಭಾರತ ತಂಡವನ್ನು ಹಂಗಾಮಿ ನಾಯಕನ ರೀತಿಯಲ್ಲಿ ಏಳು ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆ ಟೀಮ್ ಇಂಡಿಯಾದ ಸಾರಥ್ಯ ವಹಿಸಿದ್ದ ಸೂರ್ಯ ಐದು ಪಂದ್ಯಗಳಲ್ಲಿ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಇದೀಗ ಜುಲೈ 27 ರಿಂದ ಶುರುವಾಗಲಿರುವ ಟಿ20 ಸರಣಿ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಣಕ್ಕಿಳಿಯಲು ಅಣಿಯಾಗಿದ್ದಾರೆ.
ಟಿ20 ವಿಶ್ವಕಪ್ ಮುಕ್ತಾಯದ ಕೂಡಲೇ ಟಿ20 ಅಂತರಾಷ್ಟ್ರೀಯ ಕ್ರಿಕೆಟಿಗೆ ರೋಹಿತ್ ಶರ್ಮಾ ವಿದಾಯ ಹೇಳಿದ್ದರು. ಹೀಗಾಗಿ ಟಿ20 ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದ ಬಿಸಿಸಿಐ ಕೊನೆಗೂ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದೆ.
Leave A Reply