ಕಾಶ್ಮೀರ ಅಸೆಂಬ್ಲಿಯಲ್ಲಿ ಆರ್ಟಿಕಲ್ 370 ಮರುಸ್ಥಾಪನೆಗೆ ಒತ್ತಾಯ!
ಹತ್ತು ವರುಷಗಳ ಬಳಿಕ ಚುನಾವಣೆಯನ್ನು ಕಂಡಿರುವ ಕಣಿವೆ ರಾಜ್ಯ ಜಮ್ಮು – ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಅಧಿಕಾರವನ್ನು ಹಿಡಿದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಾವು ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಮರುಸ್ಥಾಪಿಸುವುದಾಗಿ ಭಾರತೀಯ ಜನತಾ ಪಾರ್ಟಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದವು.
ಈಗ ಚುನಾವಣೆ ಮುಗಿದು ಮೊದಲ ಅಧಿವೇಶನ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಮೊದಲ ದಿನವೇ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಮರುಸ್ಥಾಪಿಸಬೇಕಾಗಿ ಒತ್ತಾಯ ಪಿಡಿಪಿ ಶಾಸಕರಿಂದ ಕೇಳಿಬಂದಿದೆ. ಪಿಡಿಪಿ ಶಾಸಕ ವಾಹಿದ್ ಪರ್ಯಾ 370 ನೇ ವಿಧಿ ಮರುಸ್ಥಾಪನೆಗೆ ನಿರ್ಣಯ ಮಂಡಿಸಿದರು. ಈ ಗೊತ್ತುವಳಿಯನ್ನು ಬಿಜೆಪಿ ಶಾಸಕರು ವಿರೋಧಿಸಿ ಪರ್ಯಾ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ ಘಟನೆಯೂ ನಡೆದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಹೀಮ್ ರಾಥರ್ ಈ ಗೊತ್ತುವಳಿಯನ್ನು ಚರ್ಚೆಗೆ ಅಂಗೀಕರಿಸಿಲ್ಲ ಎಂದರು. ಬಳಿಕ ಮಾತನಾಡಿದ ಸಿಎಂ ಒಮರ್ ಅಬ್ದುಲ್ಲಾ ” 370 ನೇ ವಿಧಿ ರದ್ದತಿಯನ್ನು ಜನ ಒಪ್ಪಿಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ತಿಳಿದುಬಂದಿದೆ. ಆದರೆ ಪಿಡಿಪಿ ಮಂಡಿಸಿದ ಗೊತ್ತುವಳಿಗೆ ಅರ್ಥವಿಲ್ಲ. ಆ ಪಕ್ಷ ಕೇವಲ ಪ್ರಚಾರಕ್ಕೋಸ್ಕರ ನಿರ್ಣಯ ಮಂಡಿಸಿದೆ. ಮಂಡಿಸುವ ಉದ್ದೇಶ ಇದ್ದರೆ ನಮ್ಮ ಜತೆ ಚರ್ಚಿಸಬೇಕಿತ್ತು ಎಂದರು. ಒಟ್ಟಿನಲ್ಲಿ ನಿರೀಕ್ಷೆಯಂತೆ 370 ನೇ ವಿಧಿ ಮತ್ತೆ ಜಾರಿಗೆ ತರುವ ವಿಷಯದಲ್ಲಿ ಮೈಲೇಜ್ ತೆಗೆದುಕೊಳ್ಳಲು ಪಿಡಿಪಿ ಪ್ರಯತ್ನಪಡುತ್ತಿದ್ದರೆ, ಇತ್ತ ಬೂದಿ ಮುಚ್ಚಿದ ಕೆಂಡವನ್ನು ಕೈಯಲ್ಲಿ ಹಿಡಿಯಲು ಆಡಳಿತರೂಢ ನ್ಯಾಶನಲ್ ಕಾನ್ಪರೆನ್ಸ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
Leave A Reply