ಹುಟ್ಟೂರಿನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಅಂತ್ಯಸಂಸ್ಕಾರ
ನಕ್ಸಲ್ ನಾಯಕ ವಿಕ್ರಂ ಗೌಡನ ಅಂತಿಮ ವಿಧಿವಿಧಾನ ಮತ್ತು ಅಂತ್ಯಸಂಸ್ಕಾರ ಅವನ ಹುಟ್ಟೂರಾದ ಹೆಬ್ರಿ ತಾಲೂಕಿನ ಕೂಡ್ಲೂವಿನಲ್ಲಿ ನೆರವೇರಿತು. ಪೀತಬೈಲ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಸೋಮವಾರ ರಾತ್ರಿ ವಿಕ್ರಂ ಗೌಡ ಹತನಾಗಿದ್ದ. ಸತ್ತಿರುವ ನಕ್ಸಲ್ ವಿಕ್ರಂ ಗೌಡ ಎಂದು ಪೊಲೀಸರು ಖಚಿತಪಡಿಸಿದ್ದರು.
ಅದಾದ ನಂತರ ಆರಂಭದಲ್ಲಿ ವಿಕ್ರಂ ಗೌಡನ ಮನೆಯವರು ಆತನ ಮೃತದೇಹವನ್ನು ಸ್ವೀಕರಿಸಲು ಹಿಂದೇಟು ಹಾಕಿದರು. ಏಕೆಂದರೆ ಆತ ನಕ್ಸಲ್ ಮುಖಂಡನಾಗಿದ್ದ ಕಾರಣ ಮತ್ತು ತಾವು ಮೃತದೇಹವನ್ನು ಸ್ವೀಕರಿಸಿ ಅಂತ್ಯ ಸಂಸ್ಕಾರ ಮಾಡಿದರೆ ಕಾನೂನಿನ ಕುಣಿಕೆ ತಮ್ಮನ್ನು ಹಿಂಬಾಲಿಸಬಹುದು ಎನ್ನುವ ಆತಂಕ ಇದ್ದಿರಲಿಕ್ಕೂ ಸಾಕು. ಕೊನೆಗೆ ಪೊಲೀಸರ ಮನವೊಲಿಕೆಯ ಬಳಿಕ ಮನೆಯವರು ಮೃತದೇಹವನ್ನು ಪಡೆದಿದ್ದರು. ತಂದೆ, ತಾಯಿ ತೀರಿಕೊಂಡಿರುವುದರಿಂದ ವಿಕ್ರಂ ಗೌಡನಿಗೆ ಅವನ ಕಡೆಯವರು ಎಂದು ಇರುವುದು ಸಹೋದರಿ ಹಾಗೂ ಸಹೋದರ ಮಾತ್ರ. ಅಂತ್ಯ ಸಂಸ್ಕಾರದ ವೇಳೆಯಲ್ಲಿ ಸಮೀಪದ ಬಂಧುಗಳು, ಪೊಲೀಸರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಬ್ರಿ ತಾಲ್ಲೂಕಿನ ಸೋಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಗೌಡ ಎರಡು ದಶಕಗಳಿಗಿಂತಲೂ ಹಲವು ವರ್ಷಗಳಿಂದ ನಕ್ಸಲ ತಂಡದಲ್ಲಿದ್ದ. ಹಲವು ಪ್ರಕರಣಗಳಲ್ಲಿ ಅವನ ಹೆಸರಿತ್ತು. ಸೋಮವಾರ ರಾತ್ರಿ ಸುಮಾರು ನಾಲ್ಕರಿಂದ ಆರು ಮಂದಿ ನಕ್ಸಲರ ತಂಡ ಪೀತಬೈಲಿನ ಮನೆಯೊಂದರ ಸಮೀಪ ಬಂದಿತ್ತು. ಈ ವೇಳೆ ಅವರು ಹಾಗೂ ಎಎನ್ ಎಫ್ ತಂಡದ ನಡುವೆ ಗುಂಡಿನ ಚಕಮಕಿಯಲ್ಲಿ ವಿಕ್ರಂ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Leave A Reply