ಸಿಎಂ ಆಯ್ಕೆ ಮಾಡಲು ನಮಗೆ ಒಂದೇ ದಿನ ಸಾಕು – ಸಚಿನ್ ಪೈಲೆಟ್
ಮಹಾರಾಷ್ಟ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎರಡೂ ಮೈತ್ರಿಕೂಟದ ಪಕ್ಷಗಳಿಗೆ ತಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭಾರಿ ನಿರೀಕ್ಷೆ ಇದೆ. ಅದಕ್ಕೆ ಸರಿಯಾಗಿ ಸಮೀಕ್ಷೆಗಳಲ್ಲಿ ಕೆಲವು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತೆ ಎನ್ನುವ ಊಹೆ ಮಾಡಿದ್ದರೆ ಕೆಲವು ಭಾಜಪಾ ನೇತೃತ್ವದ ಮೈತ್ರಿಕೂಟ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ಹೇಳಿದೆ. ಹೀಗಿರುವಾಗ ಒಂದು ವೇಳೆ ಭಾಜಪಾ ಮೈತ್ರಿಕೂಟ ಅಧಿಕಾರಕ್ಕೆ ಮರಳಿದರೆ ಏಕನಾಥ್ ಶಿಂಧೆ ತಾವು ಮುಖ್ಯಮಂತ್ರಿ ರೇಸ್ ನಲ್ಲಿ ಇಲ್ಲ ಎಂದಿದ್ದಾರೆ. ಹಾಗಾದರೆ ಅಲ್ಲಿ ಯಾರು ಸಿಎಂ ಆಗುತ್ತಾರೆ ಎನ್ನುವ ಪ್ರಶ್ನೆಯ ನಡುವೆ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನಾವು ಒಂದೇ ದಿನದಲ್ಲಿ ಸಿಎಂ ಯಾರೆಂದು ನಿರ್ಧರಿಸುತ್ತೇವೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಸಚಿನ್ ಪೈಲೆಟ್ ಹೇಳಿದ್ದಾರೆ.
ಆದರೆ ಪೈಲೆಟ್ ಹೇಳಿದಷ್ಟು ಈ ಲೆಕ್ಕಾಚಾರಗಳು ಸುಲಭವಾಗಿಲ್ಲ ಎನ್ನುವುದು ನಿಜ. ಕಾಂಗ್ರೆಸ್ ಮೈತ್ರಿಕೂಟದಲ್ಲಿ ಇರುವ ಮೂರು ಪಕ್ಷಗಳಲ್ಲಿ ಹಿರಿಯಣ್ಣ ಅಂದರೆ ಎನ್ ಸಿಪಿ ನಾಯಕ ಶರದ್ ಪವಾರ್. ಅವರು ಯಾರನ್ನು ಸಿಎಂ ಎಂದು ಕರೆಯುತ್ತಾರೆಯೋ ಅವರೇ ಈ ಮೈತ್ರಿಕೂಟದ ಸಿಎಂ ಎನ್ನುವುದು ಅಲಿಖಿತ ನಿಯಮ. ಇನ್ನು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಕೂಡ ತಕ್ಷಣ ಯಾರನ್ನೋ ಸಿಎಂ ಎಂದು ಒಪ್ಪಿಕೊಳ್ಳುವುದಿಲ್ಲ. ಇನ್ನು ಅದರಲ್ಲಿ ಕಾಂಗ್ರೆಸ್ ಎಷ್ಟು ಶಾಸಕರನ್ನು ಗೆಲ್ಲಿಸಿಕೊಳ್ಳಲಿದೆ ಎನ್ನುವುದು ಕೂಡ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ಈ ಎಲ್ಲದರ ಮಧ್ಯದಲ್ಲಿ ಒಂದು ವೇಳೆ ಒಂದಿಷ್ಟು ಸ್ಥಾನಗಳು ಯಾವುದೇ ಮೈತ್ರಿಕೂಟಕ್ಕೆ ಬರದೇ ಹೋದರೆ ಆಗ ಪರಸ್ಪರ ಕುದುರೆ ವ್ಯಾಪಾರ, ಕತ್ತೆ ವ್ಯಾಪಾರ ನಡೆಯಲಿದೆ. ಆದ್ದರಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಮೈತ್ರಿಕೂಟಗಳು ಸರಳ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಾಗ ಆಯ್ಕೆ ಮಾಡುವುದು ಅಷ್ಟು ಸುಲಭವೂ ಅಲ್ಲ, ಸಾಧ್ಯವೂ ಅಲ್ಲ. ಆದರೆ ರಾಜಕೀಯದಲ್ಲಿ ಮಿಂದು ಎದ್ದಿರುವ ಶರದ್ ಪವಾರ್ ನಂತಹ ಮುತ್ಸದ್ದಿಗಳು ಮನಸ್ಸು ಮಾಡಿದರೆ ಅದು ಕಷ್ಟವೂ ಅಲ್ಲ.
Leave A Reply