ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
ಮೈಸೂರು ನಗರದ ಕೆ. ಆರ್. ರಸ್ತೆಯ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ವೃತ್ತದಿಂದ ಮೇಟಗಳ್ಳಿ ರಾಯಲ್ ಇನ್ ಜಂಕ್ಷನ್ ವರೆಗೆ ” ಸಿದ್ಧರಾಮಯ್ಯ ಆರೋಗ್ಯ ಮಾರ್ಗ” ಎಂದು ನಾಮಕರಣ ಮಾಡಲು ನವೆಂಬರ್ 22, 2024 ರಂದು ನಡೆದ ಮೈಸೂರು ನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ತೀರ್ಮಾನವಾಗಿತ್ತು. ಈ ಸಂಬಂಧ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳಿದ್ದರೆ ಮೈಸೂರು ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರವರ ಕಚೇರಿಗೆ 30 ದಿನಗಳೊಳಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 13 ರಂದು ನಗರಪಾಲಿಕೆ ಸಾರ್ವಜನಿಕ ಪ್ರಕಟನೆಯನ್ನು ದಿನಪತ್ರಿಕೆಗಳಲ್ಲಿ ಹೊರಡಿಸಿತ್ತು.
ಕೆ ಆರ್ ಎಸ್ ರಸ್ತೆಗೆ ನಾಮಕರಣ ಮಾಡಲು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ವಿರೋಧ ವ್ಯಕ್ತಪಡಿಸಿದ್ದು, ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಹಲವು ಸೆಕ್ಷನ್ ನಡಿ ಭ್ರಷ್ಟಾಚಾರದ ದೂರು ದಾಖಲಾಗಿದೆ. ಅದ್ದರಿಂದ ಈ ಹಂತದಲ್ಲಿ ಅವರ ಹೆಸರನ್ನು ರಸ್ತೆಗೆ ಇಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಗಂಭೀರ ಆರೋಪ ಹೊತ್ತಿರುವ ವ್ಯಕ್ತಿಯ ಹೆಸರನ್ನು ರಸ್ತೆಗೆ ಇಡುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ನೀಡುವುದು ಸರಿಯಾ ಎನ್ನುವುದು ಅವರ ಪ್ರಶ್ನೆ.
ಸಿದ್ಧರಾಮಯ್ಯ ವಿರುದ್ಧದ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ವಿಚಾರಣೆ ಮುಗಿದು ನ್ಯಾಯಾಲಯದ ತೀರ್ಪು ಬರುವವರೆಗೆ ಸಿದ್ಧರಾಮಯ್ಯನವರ ಹೆಸರು ರಸ್ತೆಗೆ ಇಡಬಾರದು ಎಂದು ಮನವಿ ಮಾಡಿದ್ದಾರೆ. ನ್ಯಾಯಾಲಯದ ತೀರ್ಪಿನ ಬಳಿಕ ಸಿದ್ಧರಾಮಯ್ಯ ದೋಷಮುಕ್ತರಾದರೆ ಆಗ ಅವರ ಹೆಸರು ಇಡಬೇಕೋ, ಬೇಡವೋ ಎಂದು ತೀರ್ಮಾನವಾಗಲಿ ಎಂದು ಅವರು ಆಗ್ರಹಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಮುಖಂಡರು ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯನವರ ಹೆಸರು ಇಡುವ ಪ್ರಕ್ರಿಯೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ, ಮಾಜಿ ಸಂಸದ ಪ್ರತಾಪ್ ಸಿಂಹ ಈ ವಿಷಯದಲ್ಲಿ ವಿರೋಧಿಸುವ ಸಣ್ಣತನ ಬೇಡಾ ಎಂದಿದ್ದಾರೆ.
Leave A Reply