32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ಈದ್ ಕಿಟ್!

ರಂಜಾನ್ ಹಿನ್ನಲೆಯಲ್ಲಿ “ಸೌಗತ್ – ಎ – ಮೋದಿ” ಅಭಿಯಾನದಡಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಭಾರತೀಯ ಜನತಾ ಪಾರ್ಟಿ ಈದ್ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಮಂಗಳವಾರ ದೆಹಲಿಯ ನಿಜಾಮುದ್ದೀನ್ ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಬಡ ಮುಸ್ಲಿಂ ಕುಟುಂಬಗಳು ಯಾವುದೇ ತೊಂದರೆ ಇಲ್ಲದೇ ಹಬ್ಬವನ್ನು ಆಚರಿಸಬೇಕೆಂಬ ಮಹತ್ತರ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಮುಸ್ಲಿಂ ಕುಟುಂಬಗಳು ಖುಷಿಯಿಂದ, ನೆಮ್ಮದಿಯಿಂದ, ಸಂಕಷ್ಟವಿಲ್ಲದೇ ಈದ್ ಆಚರಿಸಬೇಕೆಂಬುದು ಈ ಅಭಿಯಾನದ ಗುರಿಯಾಗಿದೆ. ಇದರ ಭಾಗವಾಗಿ 32000 ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ದೇಶಾದ್ಯಂತ 3000 ಮಸೀದಿಗಳ ಸಹಕಾರದೊಂದಿಗೆ ಸಹಾಯ ಮಾಡುತ್ತಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ಧಿಕಿ ಅವರು “ಸೌಗತ್ – ಎ- ಮೋದಿ” ಅಭಿಯಾನದ ವಿಶಾಲ ದೃಷ್ಟಿಕೋನದ ಬಗ್ಗೆ ತಿಳಿಸಿದ್ದಾರೆ. ರಂಜಾನ್ ಮತ್ತು ಈದ್ ಸಮಯದಲ್ಲಿ ಮಾತ್ರವಲ್ಲದೇ ಗುಡ್ ಫ್ರೈಡೆ, ಈಸ್ಟರ್, ನೌರುಜ್ ಮತ್ತು ಹೊಸ ವರ್ಷದಂತಹ ಇತರ ಮಹತ್ವದ ಸಂದರ್ಭಗಳಲ್ಲಿಯೂ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಈದ್ ಮಿಲನ್ ಆಚರಣೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
ಸೌಗತ್ ಎ ಮೋದಿ ಅಭಿಯಾನದಡಿಯಲ್ಲಿ ವಿತರಿಸಲಾದ ಕಿಟ್ ಗಳಲ್ಲಿ ಆಹಾರ ಪದಾರ್ಥಗಳ ಜೊತೆಗೆ ಬಟ್ಟೆ, ವರ್ಮಿಸೆಲ್ಲಿ, ಖರ್ಜೂರ, ಒಣಹಣ್ಣುಗಳು ಮತ್ತು ಸಕ್ಕರೆಯನ್ನು ಒಳಗೊಂಡಿರುತ್ತವೆ, ಮಹಿಳೆಯರ ಕಿಟ್ ಗಳು ಸೂಟ್ ಗಳಿಗೆ ಬಟ್ಟೆಯನ್ನು ಒಳಗೊಂಡಿರುತ್ತವೆ. ಪುರುಷರ ಕಿಟ್ ಗಳು ಕುರ್ತಾ ಪೈಜಾಮಾಗಳನ್ನು ಒಳಗೊಂಡಿರುತ್ತವೆ. ಪ್ರತಿಯೊಂದು ಕಿಟ್ ಗೆ 500 ರೂಪಾಯಿಯಿಂದ 600 ರೂಗಳ ತನಕ ವೆಚ್ಚ ತಗಲುತ್ತದೆ ಎಂದು ಹೇಳಲಾಗಿದೆ.
ಈ ಅಭಿಯಾನವು ಬಿಜೆಪಿಗೆ ಮತ್ತು ಎನ್ ಡಿಎ ಮೈತ್ರಿಕೂಟದ ಪ್ರಮುಖ ಕಾರ್ಯಕ್ರಮವಾಗಿದ್ದು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಇದರ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
Leave A Reply