ದೇವಾಲಯಗಳ 1 ಟನ್ ಚಿನ್ನ ಕರಗಿಸಿ ಬ್ಯಾಂಕಿನಲ್ಲಿಟ್ಟ ತಮಿಳುನಾಡು ಸರಕಾರ!

ಭಕ್ತರು ದೇವಾಲಯಗಳಿಗೆ ಕಾಣಿಕೆಯಾಗಿ ನೀಡಿದ ಒಂದು ಸಾವಿರ ಕೆಜಿಗೂ ಅಧಿಕ ಚಿನ್ನವನ್ನು ಕರಗಿಸಿ 24 ಕ್ಯಾರೆಟ್ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಮಿಳುನಾಡು ಸರಕಾರದ ಮುಜರಾಯಿ ಇಲಾಖೆ ತಿಳಿಸಿದೆ.
ಹೀಗೆ ಬಿಸ್ಕತ್ ಗಳನ್ನಾಗಿ ಪರಿವರ್ತಿಸಲಾದ 1 ಟನ್ ಗೂ ಅಧಿಕ ಚಿನ್ನವನ್ನು ಬ್ಯಾಂಕುಗಳಲ್ಲಿ ಠೇವಣಿಯಾಗಿ ಹೂಡಿಕೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಚಿನ್ನದ ಠೇವಣಿಯಿಂದ ಬ್ಯಾಂಕುಗಳಿಂದ ವಾರ್ಷಿಕವಾಗಿ 17.82 ಕೋಟಿ ಬಡ್ಡಿ ಬರುತ್ತದೆ. ಈ ಬಡ್ಡಿಹಣವನ್ನು ಸಂಬಂಧಿತ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಕಳೆದ ಮಾರ್ಚ್ 31 ರಂದು ಎಲ್ಲಾ ಚಿನ್ನವನ್ನು ( 10,74,123,488 ಗ್ರಾಂಗಳು) ಠೇವಣಿ ಇಡಲಾಗಿದೆ ಎಂದು ತಮಿಳುನಾಡು ಮುಜರಾಯಿ ಸಚಿವ ಪಿ.ಕೆ.ಶೇಖರ್ ಬಾಬು ತಿಳಿಸಿದ್ದಾರೆ.
ತಮಿಳುನಾಡಿನ 21 ಹಿಂದೂ ದೇವಾಲಯಗಳಿಗೆ ಸೇರಿದ ಚಿನ್ನ ಇದಾಗಿದ್ದು, ಅದರಲ್ಲಿ ತಿರುಚಿರಾಪಳ್ಳಿ ಜಿಲ್ಲೆಯ ಸಮಯಾಪುರಂನ ಅರಳ್ಮಿಗು ಮಾರಿಯಮ್ಮನ್ ದೇವಾಲಯದ ಚಿನ್ನವೇ ಜಾಸ್ತಿ ಇದೆ. 426.26 ಕೆ.ಜಿ ಚಿನ್ನವನ್ನು ಆ ದೇವಾಲಯದವರು ನೀಡಿದ್ದಾರೆ ಎಂದು ವಿವರಿಸಿದ್ದಾರೆ.
ಭಕ್ತರು ದೇವಸ್ಥಾನಗಳಿಗೆ ಆಭರಣ ಅಥವಾ ಮತ್ತೊಂದು ರೂಪದಲ್ಲಿ ನೀಡಲಾದ ಆದರೆ, ಅವುಗಳನ್ನು ದೇವರು/ದೇವತೆಗಳಿಗೆ ಬಳಸದೇ ತೆಗೆದು ಇಟ್ಟಿದ್ದ ಚಿನ್ನವನ್ನು ಮಾತ್ರ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಶೇಖರ್ ಬಾಬು ತಿಳಿಸಿದ್ದಾರೆ.
21 ಹಿಂದೂ ದೇವಾಲಯಗಳಿಂದ ಪಡೆಯಲಾದ ಚಿನ್ನವನ್ನು ಮುಂಬೈ ಸರಕಾರಿ ಟಂಕಸಾಲೆಯಲ್ಲಿ ಕರಗಿಸಿ ಚಿನ್ನದ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Leave A Reply