ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!

ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದಕ್ಕೆ ಪ್ರತಿಭಟನೆ!
ಕಾಠ್ಮಂಡುವಿನಲ್ಲಿ ಯುವಕರು, ಯುವತಿಯರು ದೊಡ್ಡಮಟ್ಟದಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ನೇಪಾಳ ಸರಕಾರ ಯೂಟ್ಯೂಬ್, ಫೇಸ್ ಬುಕ್ ಸಹಿತ ಒಟ್ಟು 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲಿನ ಸರಕಾರದ ಪ್ರಕಾರ ಯಾವುದೇ ಸಾಮಾಜಿಕ ಜಾಲತಾಣಗಳು ನೇಪಾಳದಲ್ಲಿ ಕಾರ್ಯಾಚರಿಸಬೇಕಾದರೆ ಮೊದಲು ಅಲ್ಲಿ ನೊಂದಾವಣೆ ಮಾಡಬೇಕು. ಅದರ ಪ್ರತಿನಿಧಿ ನೇಪಾಳದಲ್ಲಿ ಇರಬೇಕು. ಆದರೆ ಯಾವುದೆಲ್ಲಾ ಸಾಮಾಜಿಕ ಜಾಲತಾಣಗಳು ಈ ನಿಯಮಗಳನ್ನು ಪಾಲಿಸಲಿಲ್ಲವೋ ಅಂತಹ ಸೋಶಿಯಲ್ ಮೀಡಿಯಾಗಳನ್ನು ಅಲ್ಲಿನ ಸರಕಾರ ಬ್ಯಾನ್ ಮಾಡಲಾಗಿದೆ. ಇದನ್ನು ವಿರೋಧಿಸಿ ಯುವಜನಾಂಗ ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದೆ. ನೇಪಾಳದ ಸಂಸತ್ ಕಟ್ಟಡಕ್ಕೆ ಬೆಂಕಿ ಹಾಕಿದ ಘಟನೆಯೂ ನಡೆದಿದೆ. ಇದನ್ನು ಹತ್ತಿಕ್ಕಲು ಅಲ್ಲಿನ ಸರಕಾರ ಕಂಡಲ್ಲಿ ಗುಂಡು ಆದೇಶವನ್ನು ನೀಡಿದೆ. ಇದರ ಪರಿಣಾಮವಾಗಿ 20 ಜನರು ಮೃತಪಟ್ಟಿದ್ದಾರೆ. ಮೂನ್ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.
ಈ ಮಧ್ಯೆ ಅಲ್ಲಿನ ಪ್ರಧಾನ ಮಂತ್ರಿ ಒಲಿ ಸರಕಾರಕ್ಕೆ ನೀಡಿದ ಬೆಂಬಲವನ್ನು ನೇಪಾಳಿ ಕಾಂಗ್ರೆಸ್ ಹಿಂಪಡೆದಿದ್ದು, ಆ ಪಕ್ಷದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಇನ್ನು ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಕೂಡ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಠಾಚಾರವನ್ನು ಸಾಮಾಜಿಕ ಜಾಲತಾಣಗಳು ಬಯಲಿಗೆ ಎಳೆಯುತ್ತವೆ ಎನ್ನುವ ಕಾರಣಕ್ಕೆ ಅವುಗಳನ್ನು ನಿಷೇಧಿಸಲಾಗಿದೆ ಎನ್ನುವುದು ಯುವ ಸಮೂಹದ ಆಕ್ರೋಶಕ್ಕೆ ಕಾರಣವಾಗಿದೆ. ನಾಗರಿಕರು ಬಯಸುವುದಾದರೆ ತಾವು ರಾಜೀನಾಮೆ ನೀಡಲು ಹಿಂಜರಿಯುವುದಿಲ್ಲ ಎಂದು ಹೇಳಿರುವ ಓಲಿ ರಾಜೀನಾಮೆ ನೀಡಿದ್ದಾರೆ. ಇನ್ನು ಮಾಜಿ ಪ್ರಧಾನಿ ಹಾಗೂ ನೇಪಾಳಿ ಕಾಂಗ್ರೆಸ್ ಮುಖಂಡ ಶೇರ್ ಬಹಾದ್ದೂರ್ ಡೆವೂಬಾ ಹಾಗೂ ಅವರ ಪತ್ನಿ ಸರಕಾರದಲ್ಲಿ ವಿದೇಶಾಂಗ ಸಚಿವೆಯಾಗಿರುವ ಅರ್ಜು ರಾನಾ ಡೆವೂಬಾ ಅವರನ್ನು ಅವರ ಮನೆಯ ಒಳಗೆ ಹಲ್ಲೆ ಮಾಡಲಾಗಿದೆ. ಸದ್ಯ ಕಾಠ್ಮಂಡುವಿನಲ್ಲಿರುವ ತ್ರಿಭುವನ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಪ್ರಧಾನಿ ಹಾಗೂ ಇತರ ಸಚಿವರು ಕಾಠ್ಮಂಡುವಿನಿಂದ ಪಲಾಯನ ಮಾಡುವ ಸಾಧ್ಯತೆ ಇದೆ ಎಂದು ವದಂತಿ ಹಬ್ಬಿದ ಹಿನ್ನಲೆಯಲ್ಲಿ ನಾಗರಿಕರು ಅವರನ್ನು ಸುತ್ತುವರೆಯಲು ವಿಮಾನ ನಿಲ್ದಾಣಕ್ಕೆ ಧಾವಿಸಿದ ಕಾರಣ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ನಿನ್ನೆಯಷ್ಟೇ ಪ್ರಧಾನಿ ಒಲಿ ಸರ್ವ ಪಕ್ಷ ಸಭೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮಾಡಬೇಕಾದ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಪ್ರತಿಭಟನಾಕಾರರು ಬಾಲ್ಕೋಟ್ ನಲ್ಲಿರುವ ಪ್ರಧಾನಿ ನಿವಾಸ, ಅಧ್ಯಕ್ಷ ರಾಮ ಚಂದ್ರ ಪೌಡೆಲ್ ನಿವಾಸ, ಗೃಹ ಸಚಿವ ರಮೇಶ್ ಲೇಖಕ್ ಅವರ ನಿವಾಸಗಳಿಗೆ ಬೆಂಕಿ ನೀಡಿದ್ದಾರೆ. ಇದೆಲ್ಲದರ ಬಳಿಕ ನೇಪಾಲ ಸರಕಾರ ಸಾಮಾಜಿಕ ಜಾಲತಾಣಗಳ ಮೇಲೆ ಹಾಕಿರುವ ನಿಷೇಧವನ್ನು ಹಿಂದಕ್ಕೆ ಪಡೆದುಕೊಂಡಿದೆ.
ಈ ನಡುವೆ ಭಾರತ ಸರಕಾರದಿಂದ ಹೇಳಿಕೆಯೊಂದು ಬಿಡುಗಡೆಯಾಗಿದ್ದು ” ನೇಪಾಳದಲ್ಲಿರುವ ಭಾರತೀಯರು ಆದಷ್ಟು ಎಚ್ಚರಿಕೆಯಿಂದ ಇರುವಂತೆ ಮತ್ತು ನೇಪಾಳ ಆಡಳಿತ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವಂತೆ” ಕರೆ ನೀಡಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲಿ ಪರಿಸ್ಥಿತಿ ಕೈ ಮೀರದಂತೆ ಕರ್ಫೂ ಜಾರಿಗೆ ತರಲಾಗಿದ್ದು, ಭಾರತ – ನೇಪಾಳದ ನಡುವಿನ 1751 ಕಿ.ಮೀ ಉದ್ದದ ಗಡಿಯಲ್ಲಿ ಹೆಚ್ಚಿನ ಸುರಕ್ಷತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.