ನೀನು ಏಡ್ಸ್ ಪೀಡಿತೆ ,ಇನ್ನು ನಾಲ್ಕೈದು ತಿಂಗಳು ಮಾತ್ರ ಬದುಕುವದು ಅಂದ್ರೆ ನಿಮ್ಮ ಅವಸ್ಥೆ ಏನು ?
ಬೆಳಗಾವಿಯ ನಾಗರತ್ನ ಅಕ್ಕ. ನಮ್ಮೆಲ್ಲರ ಪಾಲಿಗೆ ಸ್ಫೂರ್ತಿಯ ಕಿಡಿ. ಆಕೆಯ ಬದುಕು, ಆಕೆ ನಡೆದು ಬಂದ ಹಾದಿ ಎಲ್ಲವೂ ಆದರ್ಶವೇ. ಹೆಣ್ಣುಮಗಳೊಬ್ಬಳ ಸಾಮಥ್ರ್ಯ ಎಂಥದ್ದು ಎನ್ನುವುದನ್ನು ನಾಗರತ್ನ ಅಕ್ಕನನ್ನು ನೋಡಿ ತಿಳಿಯಬೇಕು. ತಾನು ತಾಯಾಗುತ್ತಿರುವ ಸಂತಸದ ಸುದ್ದಿ ತಿಳಿದು ವೈದ್ಯರ ಬಳಿ ಸಲಹೆಗೆಂದು ತೆರಳಿದ್ದರು ನಾಗರತ್ನ ಅಕ್ಕ. ತನಗೆ ಮತ್ತು ತನ್ನ ಪತಿಗೆ ಎಚ್.ಐ.ವಿ ಸೋಂಕು ಇರುವುದಾಗಿ ದೃಢಪಟ್ಟಾಗಿ ಬದುಕೇ ನರಕವೆನಿಸಿತ್ತು ಅವರಿಬ್ಬರಿಗೂ. ಮನೆಯಲ್ಲಿ ಯಾರಿಗೂ ವಿಷಯವನ್ನು ತಿಳಿಸದೇ ಗರ್ಭಪಾತವನ್ನೂ ಮಾಡಿಸಿದ್ದಾಯಿತು. ನೊಂದ ಇಬ್ಬರೂ ಎಲ್ಲವನ್ನೂ ತೊರೆದು ಮನೆಯಲ್ಲಿ ತಮ್ಮನ್ನು ತಾವು ಕೂಡಿಹಾಕಿಕೊಂಡರು. ಸ್ನೇಹಿತರ ಮಾತು ಕೊಂಚ ಧೈರ್ಯವನ್ನು ನೀಡಿತು.
ಐದು ವರ್ಷಗಳ ನಂತರ ಮತ್ತೊಬ್ಬ ವೈದ್ಯರನ್ನು ಭೇಟಿ ಮಾಡಿ ತಮ್ಮ ವಿಚಾರವನ್ನು ತಿಳಿಸಿದಾಗ ವೈದ್ಯರ ಸಹಾಯದಿಂದ ಹೆಚ್.ಐ.ವಿ ಇಲ್ಲದ ಮಗುವನ್ನು ಪಡೆದ ದಂಪತಿಗಳಿಗೆ ಬದುಕುವ ಹೊಸ ಆಸೆ ಚಿಮ್ಮಿತು. ಈ ಘಟನೆಯಾಗಿದ್ದು 2000 ದ ಆಸುಪಾಸಿನಲ್ಲಿ. ಆಗಿನ್ನೂ ಎಚ್.ಐ.ವಿಯ ಬಗ್ಗೆ ಜನಕ್ಕೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಮುಟ್ಟಿದರೂ ಸೋಂಕು ತಗಲುವುದೆಂಬ ಕಾಲವದು. ಮನೆಯವರೂ ಸೋಂಕು ಪೀಡಿತರನ್ನು ತಮ್ಮೊಡನೆ ಸೇರಿಸಿಕೊಳ್ಳಲು ಹಿಂಜಿರಿಯುತ್ತಿದ್ದರು. ಒಡ ಹುಟ್ಟಿದವರೂ ದೂರವಾಗುತ್ತಿದ್ದರು. ಸಮಾಜವಂತೂ ಅವರನ್ನು ಹೀನಾಯವಾಗಿ ನೋಡುತ್ತಿತ್ತು. ಇವೆಲ್ಲವುಗಳನ್ನು ಮೆಟ್ಟಿ ನಿಂತು ಆದರ್ಶವಾಗಿ ನಿಂತವರು ನಾಗರತ್ನ ಅಕ್ಕ.
ತಮಗೆ ಹೆಚ್.ಐ.ವಿ ಇದೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಲ್ಲದೇ ತಮ್ಮಂತೆ ಹೆಚ್.ಐ.ವಿ ಇರುವ ಜನರಿಗೆ ಆಶ್ರಯವಾಗಿ ನಿಂತಿದ್ದಾರೆ ಈ ತಾಯಿ. ಆಶ್ರಯ ಫೌಂಡೇಶನ್ ಎಂಬ ಸಂಸ್ಥೆಯನ್ನು ತೆರೆದು ಅಲ್ಲಿ 16 ಜನ ಹೆಚ್.ಐ.ವಿ ಸೋಂಕಿತರಿಗೆ ನೆಲೆಯಾಗಿದ್ದಾರೆ. 2014ರಲ್ಲಿ ತನ್ನ ಪತಿಯನ್ನು ಕಳೆದುಕೊಂಡರು ನಾಗರತ್ನ ಅಕ್ಕ; ಆದರೆ ಧೈರ್ಯಗೆಡಲಿಲ್ಲ. ತನ್ನ ಸಂಸ್ಥೆಯನ್ನು ತಾನೊಬ್ಬಳೇ ನೋಡಿಕೊಳ್ಳುವ ಸಾಮಥ್ರ್ಯ ತೋರಿದರು. ಸಂಸ್ಥೆಯಲ್ಲಿರುವವರನ್ನು ಸದಾ ಕ್ರಿಯಾಶೀಲವಾಗಿಡಲು ಹೊಲಿಗೆ, ಕರಕುಶಲ ವಸ್ತುಗಳ ತಯಾರಿಕೆಯ ತರಬೇತಿ ಕೊಡಿಸಿ, ಅವರಿಂದಲೇ ವಸ್ತುಗಳು ತಯಾರಾಗುವಂತೆ ಮಾಡಿ, ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ನೋಡಿಕೊಂಡಿದ್ದಾರೆ. ‘ನೀವಿನ್ನ ನಾಲ್ಕೈದು ತಿಂಗಳು ಮಾತ್ರವೇ ಬದುಕುವುದು’ ಎಂದು ವೈದ್ಯರು ಹೇಳಿ 20ವರ್ಷಕ್ಕೂ ಹೆಚ್ಚು ಕಾಲವಾಯಿತು! ಅಕ್ಕನಲ್ಲಿರುವ ಬದುಕುವ ಸ್ಫೂರ್ತಿ ಆದರ್ಶವಾದದ್ದು. ಆಕೆ ಎಂದೂ ತನಗಾಗಿ ಬದುಕಿದವರೇ ಅಲ್ಲ. ಇತರರಿಗಾಗಿಯೇ ಆಕೆಯ ಬದುಕು ಮೀಸಲಾಗಿದೆ. ‘ನಿಸ್ವಾರ್ಥಿಯಾದ ಮಾನವ ನಿಜವಾದ ವಜ್ರಾಯುಧದಂತೆ’ ಎನ್ನುವಳು ಅಕ್ಕ ನಿವೇದಿತಾ. ನಾಗರತ್ನ ಅಕ್ಕ ನಿಜವಾದ ‘ಥಂಡರ್ಬೋಲ್ಟ್’ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ!
ಆಕೆಯದ್ದು ಕಲ್ಮಶವೇ ಇಲ್ಲದ ಹೃದಯ. ಒಮ್ಮೆ ಆಕೆಯೊಡನೆ ಮಾತನಾಡಿದವರು ಅವರ ಪ್ರೀತಿಗೆ ಕಟ್ಟು ಬೀಳುವುದಂತೂ ಸತ್ಯ. ಅಷ್ಟೇ ಅಲ್ಲ. ಯಾವುದೇ ಕೆಲಸವನ್ನು ಮಾಡುವಲ್ಲಿ ಆಕೆಯ ಉತ್ಸಾಹ ಹೇಳತೀರದು. ಕೆಲಸದಿಂದಲೇ ಉತ್ತರವನ್ನು ನೀಡುತ್ತಾರೆ ಅಕ್ಕ. ತನ್ನ ಸಂಸ್ಥೆಯಷ್ಟೇ ಅಲ್ಲದೇ ಇತರ ಸಂಸ್ಥೆ ಮತ್ತು ಸಂಘಟನೆಗಳೊಡಗೂಡಿ ಸಮಾಜದ ಕೆಲಸ ಮಾಡುವಲ್ಲಿ ಆಕೆಯದು ಎತ್ತಿದ ಕೈ. ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಎಲ್ಲ ಕಾರ್ಯಗಳಲ್ಲೂ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಆಕೆಯೆಂದರೆ ಎಲ್ಲ ಸೋದರ-ಸೋದರಿಯರಿಗೂ ಅಚ್ಚು-ಮೆಚ್ಚು.
ಇಂದೇಕೆ ನಾಗರತ್ನ ಅಕ್ಕನ ಬಗ್ಗೆ ಇಷ್ಟೆಲ್ಲಾ ಎಂದು ಯೋಚಿಸುತ್ತಿರುವಿರಾ?! ಇಂದು ನಾಗರತ್ನ ಅಕ್ಕ ಹುಟ್ಟಿದ ದಿನ. ಭಗವಂತ ಆಕೆಗೆ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ದೇವರನ್ನು ಪ್ರಾರ್ಥಿಸೋಣ.
Leave A Reply