ರಜಪೂತರ ಹೋರಾಟಕ್ಕೆ ತಾತ್ಕಾಲಿಕ ಮುನ್ನಡೆ, ಪದ್ಮಾವತಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಕಾರ!
ಮುಂಬೈ: ಪದ್ಮಾವತಿ ಚಿತ್ರ ಬಿಡುಗಡೆ ವಿರೋಧಿಸಿ ರಜಪೂತರು ನಡೆಸಿದ ಹೋರಾಟಕ್ಕೆ ತಾತ್ಕಾಲಿಕ ಮುನ್ನಡೆ ಸಿಕ್ಕಿದ್ದು, ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿದೆ.
ಯಾವುದೇ ಒಂದು ಚಿತ್ರವನ್ನು ಸೆನ್ಸಾರ್ ಮಂಡಳಿ ಪ್ರಾಮಾಣೀಕರಿಸಲು ಅದರದ್ದೇ ಆದ ನಿಯಮಗಳಿವೆ. ಆದರೆ ಪದ್ಮಾವತಿ ಚಿತ್ರದ ಪ್ರಮಾಣಪತ್ರಕ್ಕೆ ಸಲ್ಲಿಸಿದ ಅರ್ಜಿ ಅಪೂರ್ಣವಾಗಿದೆ. ಹಾಗಾಗಿ ಪ್ರಮಾಣಪತ್ರ ನೀಡಲು ಆಗುವುದಿಲ್ಲ ಎಂದು ಮಂಡಳಿ ಚಿತ್ರತಂಡಕ್ಕೆ ತಿಳಿಸಿದೆ.
ಆದಾಗ್ಯೂ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಹಾಗೂ ದೀಪಿಕಾ ಪಡುಕೋಣೆ ನಿರ್ದೇಶನದ ಚಿತ್ರ ಬಿಡುಗಡೆಗೊಳಿಸಬಾರದು. ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಎಂಬ ರಜಪೂತ ಸಂಘಟನೆಗಳ ಆಗ್ರಹ ಪರಿಗಣಿಸಿರುವ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಸೆನ್ಸಾರ್ ನೀಡಲು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ. ಅದೇ ಕಾರಣಕ್ಕಾಗಿ ಅರ್ಜಿಯಲ್ಲಿ ತಾಂತ್ರಿಕ ಕಾರಣಗಳ ದೋಷ ಹಿನ್ನೆಲೆಯಲ್ಲಿ ಪ್ರಮಾಣ ಪತ್ರ ನೀಡದಿರುವುದಾಗಿ ತೀರ್ಮಾನಿಸಿದೆ ಎನ್ನಲಾಗುತ್ತಿದೆ.
ಅಲ್ಲಾವುದ್ದೀನ್ ಖಿಲ್ಜಿ ಹಾಗೂ ರಾಣಿ ಪದ್ಮಾವತಿಯನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ರಜಪೂತರು ಹೋರಾಟ ನಡೆಸಿದ್ದು, ಚಿತ್ರ ಬಿಡುಗಡೆಯ ದಿನವೇ, ಅಂದರೆ ಡಿ.1ರಂದು ಭಾರತ ಬಂದ್ ಗೆ ಕರೆ ನೀಡಿವೆ.
Leave A Reply