ಗುಜರಾತ್ ಚುನಾವಣೆ ಗೆಲ್ಲಿಸಲು ಪಣ, 6 ದಿನದಲ್ಲಿ 31 ಸಭೆ, ರ್ಯಾಲಿ ನಡೆಸಲಿರುವ ಪ್ರಧಾನಿ!
ಗಾಂಧಿನಗರ: ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸ್ಥಳೀಯ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಮೋದಿ ಅವರ ವಿಶ್ವಾಸ ದುಪ್ಪಟ್ಟಾಗಿದ್ದು, ಗುಜರಾತ್ ಚುನಾವಣೆಯಲ್ಲೂ ಮೋಡಿ ಮಾಡಲು ಭಾನುವಾರದಿಂದ ಮೋದಿ ಸಾಲು, ಸಾಲು ರ್ಯಾಲಿ, ಸಭೆ ನಡೆಸಲಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ ಮೋದಿ ಅವರು ಭಾನುವಾರ ಗುಜರಾತಿನಲ್ಲಿ ಹಲವು ರ್ಯಾಲಿ, ಸಭೆ ನಡೆಸಲಿದ್ದು, ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ. ಮುಂದಿನ ಆರು ದಿನಗಳಲ್ಲಿ ಪ್ರಧಾನಿ 31 ರ್ಯಾಲಿ ಹಾಗೂ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಿರುಸಿನ ಪ್ರಚಾರದ ಭಾಗವಾಗಿ ಭಾನುವಾರ ಮೋದಿ ಅವರು ಬರೂಚ್ ಹಾಗೂ ಸುರೇಂದ್ರ ನಗರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ ಸೋಮವಾರ ಬರೋಬ್ಬರಿ 7 ರ್ಯಾಲಿ ಹಾಗೂ ಸಭೆಗಳಲ್ಲಿ ಮಾತನಾಡಲಿದ್ದಾರೆ.
ಜತೆಗೆ ಭಾನುವಾರವೇ, ಸೌರಾಷ್ಟ್ರ, ರಾಜ್ ಕೋಟ್ ಗೆ ಭೇಟಿ ನೀಡಲಿದ್ದು, ಇದಕ್ಕೂ ಮೊದಲು ಅಹಮದಾಬಾದ್ ನಲ್ಲಿ ಆಸ್ಪತ್ರೆ ಲೋಕಾರ್ಪಣೆ ಮಾಡಲಿದ್ದಾರೆ. ಸೋಮವಾರ ಧರಂಪುರ, ಭಾವ್ ನಗರ, ಜುನಾಗಡ್, ಜಮನಗರದಲ್ಲಿ “ವಿಕಾಸ್ ರ್ಯಾಲಿ”ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಸಹ ಸೌರಾಷ್ಟ್ರದ ಹಲವು ಭಾಗಗಳಲ್ಲಿ ರ್ಯಾಲಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ ಗುಜರಾತ್ ಪ್ರಧಾನಿ ಮೋದಿ ಅವರ ತವರು ರಾಜ್ಯವಾಗಿದ್ದು, ಡಿ.14 ಹಾಗೂ 19ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಪಕ್ಷವನ್ನು ಗೆಲ್ಲಿಸಲು ಮೋದಿ ಪಣ ತೊಟ್ಟಿದ್ದಾರೆ. ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ಈ ಬಾರಿಯೂ ಬಿಜೆಪಿಯೇ ಗೆಲ್ಲಲಿದೆ ಎಂದು ಹೇಳಲಾಗಿದೆ.
Leave A Reply