ರಾಹುಲ್ ಗಾಂಧಿ ಅವರೇ ಅಯ್ಯರ್ ಅವರಂತೆ ಪ್ರಿಯಾಂಕಾ ಗಾಂಧಿ ವಿರುದ್ಧವೂ ಇದೇ ಕ್ರಮ ಕೈಗೊಳ್ಳುವಿರಾ?
ಕಾಂಗ್ರೆಸ್ಸಿನ ಇಬ್ಬಂದಿತನ, ಅದರ ಕುತಂತ್ರಗಳೆಲ್ಲವೂ ಯಾವುದಾದರೂ ಚುನಾವಣೆ ಘೋಷಣೆಯಾಗುತ್ತಲೇ ಬಯಲಾಗುತ್ತವೆ. ಗುಜರಾತ್ ವಿಧಾನಸಭೆ ಚುನಾವಣೆಗಾಗಿ ರಾಹುಲ್ ಗಾಂಧಿ ಅವರು ತಿಲಕವಿಟ್ಟು ಹೇಗೆ ದೇವಸ್ಥಾನಗಳಿಗೆ ತೆರಳಿ ತಾನೊಬ್ಬ ಹಿಂದೂ ಎಂಬುದನ್ನು ಮತಕ್ಕಾಗಿ ಸಾಬೀತುಪಡಿಸಲು ಹೊರಟರು ಎಂಬುದು ತಿಳಿದೇ ಇದೆ.
ಈಗ ಮಣಿಶಂಕರ್ ಅಯ್ಯರ್ ವಿಷಯದಲ್ಲೂ ಇದೇ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ನೀಚ ಎಂಬ ಪದ ಬಳಸಿದ್ದನ್ನು ಖಂಡಿಸಿ ಅವರನ್ನು ಪಕ್ಷದಿಂದ ವಜಾಗೊಳಿಸಿದೆ. ಆ ಮೂಲಕ ಚುನಾವಣೆ ಹೊಸ್ತಿಲಲ್ಲಿ ಮತಬೇಟೆಯಾಡಲು ಕಾಂಗ್ರೆಸ್ ಮತ್ತೊಂದು ನಾಟಕ ಪ್ರದರ್ಶನಕ್ಕೆ ಮುಂದಾಗಿದೆ.
ಖಂಡಿತವಾಗಿಯೂ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ನರೇಂದ್ರ ಮೋದಿ ಅವರನ್ನು ಹಾಗೆ ಕರೆದಿದ್ದು ತಪ್ಪೇ. ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದೂ ಸ್ವಾಗತಾರ್ಹವೇ. ಆದರೆ ಕಾಂಗ್ರೆಸ್ಸಿನದು ಇದೇ ನೈಜ ಬಣ್ಣವಾ? ನರೇಂದ್ರ ಮೋದಿ ವಿರುದ್ಧ ಕೀಳಾಗಿ ಮಾತನಾಡುವವರ ವಿರುದ್ಧ ಇದೇ ಕ್ರಮ ಕೈಗೊಳ್ಳುತ್ತದಾ? ಮಣಿಶಂಖರ್ ಅಯ್ಯರ್ ಕ್ಷಮೆ ಕೇಳಿದರೂ ಅವರನ್ನು ಅಮಾನತು ಮಾಡಿ ಏಕೆ ಸುಬಗನಂತೆ ಪೋಸು ಕೊಡಲಾಗುತ್ತಿದೆ? ಇದರ ಹಿಂದಿರುವ ಹುನ್ನಾರವಾದರೂ ಏನು? ಹಾಗೆ ನೋಡಿದರೆ ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಧೈರ್ಯ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಛಾತಿ ರಾಹುಲ್ ಗಾಂಧಿ ಅವರಿಗಿದೆಯೇ?
ಹೌದು, ಇದೇ ಪ್ರಿಯಾಂಕಾ ಗಾಂಧಿ 2014ರಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುತ್ತ, ನರೇಂದ್ರ ಮೋದಿಯದ್ದು “ನೀಚ ರಾಜನೀತಿ” ಎಂದು ಜರಿದ್ದಿದ್ದರು. ಆ ಮೂಲಕ ನೀಚ ಜಾತಿಯಲ್ಲಿ ಹುಟ್ಟಿದವನ ರಾಜನೀತಿ ಎಂದು ಕೀಳಾಗಿ ಮಾತನಾಡಿದ್ದರು. ಆಗ ಇದೇ ಕಾಂಗ್ರೆಸ್ ಪ್ರಿಯಾಂಕಾ ವಿರುದ್ಧ ಒಂದೇ ಮಾತನಾಡಲಿಲ್ಲ? ಕ್ರಮ ಕೈಗೊಳ್ಳುವುದಿರಲಿ, ಕನಿಷ್ಠ ಖಂಡಿಸಲೂ ಇಲ್ಲ.
ಆದರೆ, ಶನಿವಾರದಿಂದ ಗುಜರಾತಿನಲ್ಲಿ ಚುನಾವಣೆ ಆರಂಭವಾಗಲಿದ್ದು, ಇದೇ ನೀಚ ಪ್ರಕರಣವನ್ನಿಟ್ಟುಕೊಂಡು ಕಾಂಗ್ರೆಸ್ ಮತಗಳಿಕೆಯ ಹುನ್ನಾರ ನಡೆಸಿದೆ. ಅದಕ್ಕಾಗಿ ಮಣಿಶಂಕರ್ ಅಯ್ಯರ್ ಅವರನ್ನು ಬಲಿಪಡೆದಿದೆ.
ಅಷ್ಟಕ್ಕೂ, ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೀಳುಮಟ್ಟದ ಪದಬಳಕೆ ಮಾಡಿದೆ ಗೊತ್ತಾ? ಇವರು ಮೋದಿಯವರನ್ನು ಯಾವ ಮಾರ್ಗದಲ್ಲಿ ಹಣಿಯಲು ಹೊರಟಿತ್ತು ತಿಳಿದಿದೆಯಾ? ಇಂದು ಯಾವ ಪಕ್ಷದಿಂದ ವಜಾಗೊಂಡಿದ್ದಾರೋ, ಅದೇ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ನರೇಂದ್ರ ಮೋದಿ ಅವರನ್ನು ಸಾವಿನ ವ್ಯಾಪಾರಿ ಎಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ದೇಶದ್ರೋಹಿ ಎಂದಿದ್ದಾರೆ. ಮಣಿಶಂಕರ್ ಅಯ್ಯರ್ ಗೆ ಕ್ಷಮೆಯಾಚಿಸುವಂತೆ ಸೂಚಿಸಿದ ರಾಹುಲ್ ಗಾಂಧಿಯವರೇ ಮೋದಿ ಅವರನ್ನು ರಕ್ತದ ದಲ್ಲಾಳಿ ಎಂದಿದ್ದಾರೆ.
ಹೀಗೆ ನರೇಂದ್ರ ಮೋದಿ ಅವರನ್ನು ಬೈಯುವುದನ್ನೇ ಕಾಯಕ ಮಾಡಿಕೊಂಡಿರುವ, ವಿಶ್ವವೇ ಮೋದಿ ಅವರನ್ನು ಹೊಗಳಿದರೂ, ಚಾಯ್ ವಾಲಾ ಎಂದು ಅವಮಾನ ಮಾಡಲು ಯತ್ನಿಸಿದ, ದೇಶದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿರುವ ಕಾಂಗ್ರೆಸ್ಸಿಗೆ ನರೇಂದ್ರ ಮೋದಿ ಅವರ ಮೇಲೆ ಎಂಥಾ ಕೋಪ ಇದೆ ಎಂಬುದು ಗೊತ್ತಿದೆ. ಅವರನ್ನು ಎಂಥ ಕೀಳು ಪದಗಳನ್ನು ಬಳಸಿದ ಕುರಿತು ಸಹ ಜನರಿಗೆ ತಿಳಿದಿದೆ. ಸುಮ್ಮನೆ ಚುನಾವಣೆ ಹೊಸ್ತಿಲಿನಲ್ಲಿ ಸುಬಗನ ಹಾಗೆ ವೇಷ ಧರಿಸಿದರೆ, ಜನ ನಂಬಿಯಾರೇ?
Leave A Reply