ಗಾಂಜಾ ಪ್ರತೀಕಾರಕ್ಕೆ ಬಿತ್ತಾ ಇಲ್ಯಾಸ್ ಹೆಣ!
ಇಲ್ಯಾಸ್ ಎನ್ನುವ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ನಿಕಟಪೂರ್ವ ಉಪಾಧ್ಯಕ್ಷನನ್ನು ಇವತ್ತು ಅವನ ಫ್ಲಾಟಿನ ಒಳಗೆ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಅದರೊಂದಿಗೆ ಆತನ ಟಾರ್ಗೆಟ್ ಗ್ರೂಪ್ ಎನ್ನುವ ತಂಡದ ಮಹಾದಂಡನಾಯಕನ ಅಂತ್ಯವಾಗಿದೆ. ಉಳ್ಳಾಲದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯನ್ನು ಮತ್ತು ಆಕೆಯ ಗೆಳೆಯನನ್ನು ಹಿಂಸಿಸಿ ಲೈಂಗಿಕವಾಗಿ ಪೀಡಿಸಿ ಅದರ ದೃಶ್ಯವನ್ನು ಚಿತ್ರೀಕರಿಸಿ ನಂತರ ಅದನ್ನು ಬಹಿರಂಗಪಡಿಸುತ್ತೇವೆ ಎಂದು ಹೆದರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣವೊಂದು ಸಾಕಷ್ಟು ಸುದ್ದಿಯಾಗಿತ್ತಲ್ಲ, ಅದರ ಹಿಂದೆ ಇದ್ದದ್ದೇ ಟಾರ್ಗೆಟ್ ಗ್ರೂಪ್. ಆ ಟಾರ್ಗೆಟ್ ಗ್ರೂಪಿನ ಪ್ರಮುಖನೇ ಇಲ್ಯಾಸ್. ಇಲ್ಯಾಸ್ ಮೇಲೆ ಅದೆಷ್ಟೋ ಕೇಸ್ ಗಳಿವೆ. ಇತ್ತೀಚೆಗೆ ದೀಪಕ್ ರಾವ್ ಎನ್ನುವ ಬಿಜೆಪಿ ಕಾರ್ಯಕರ್ತನ ಹತ್ಯೆ ಆಯಿತಲ್ಲ. ಆ ಸಂದರ್ಭದಲ್ಲಿಯೂ ಟಾರ್ಗೆಟ್ ಗುಂಪಿನ ಹೆಸರು ಕೇಳಿ ಬಂದಿತ್ತು. ಆರೋಪಿಗಳಿಗೆ ಟಾರ್ಗೆಟ್ ಗ್ರೂಪಿನ ಸಂಪರ್ಕ ಇದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆಗಲೇ ಇಲ್ಯಾಸ್ ಹೆಸರು ಮತ್ತು ಫೋಟೋ ದೊಡ್ಡ ಮಟ್ಟದಲ್ಲಿ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಕಾಣಸಿಕ್ಕಿತ್ತು. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವ ಹಾಗೂ ಸಚಿವ ಯುಟಿ ಖಾದರ್ ಅವರೊಂದಿಗೆ ಇರುವ ಫೋಟೋಗಳಲ್ಲಿ ಇಲ್ಯಾಸ್ ಕಾಣಿಸಿದ್ದ. ಇದು ಮೊಯ್ದೀನ್ ಬಾವ ಅವರ ಮಟ್ಟಿಗೆ ದೊಡ್ಡ ಕಸಿವಿಸಿಯ ಸಂಗತಿ ಕೂಡ ಆಗಿತ್ತು. ಖಾದರ್ ಹಾಗೂ ಮೊಯ್ದೀನ್ ಬಾವ ಇಬ್ಬರೂ ಕೂಡ ತಮಗೂ ಇಲ್ಯಾಸ್ ಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವ ಮಾತನ್ನು ಹೇಳಿದ್ದರು. ಖಾದರ್ ಅದನ್ನು ಇವತ್ತು ಕೂಡ ಹೇಳಿದ್ದಾರೆ. ದೀಪಕ್ ರಾವ್ ಹತ್ಯೆ ಜನಮಾನಸದಲ್ಲಿ ಹಚ್ಚಹಸಿರಾಗಿ ಇರುವಾಗಲೇ ಇಲ್ಯಾಸ್ ಕೊಲೆಯಾಗಿ ಹೋಗಿದೆ. ಅದರೆ ಈ ಎರಡೂ ಸಾವಿಗೂ ಪರಸ್ಪರ ಯಾವುದೇ ಸಂಬಂಧ ಇಲ್ಲ ಎನ್ನುವುದು ಪೊಲೀಸ್ ಇಲಾಖೆಯ ಮಾಹಿತಿಗಳು, ಪತ್ರಕರ್ತರ ಅಭಿಪ್ರಾಯಗಳಿಂದ ಹೊರಗೆ ಬರುತ್ತಿವೆ.
ಇದೊಂದು ಗಾಂಜಾ ಪ್ರತೀಕಾರದ ಹತ್ಯೆ?
ಉಳ್ಳಾಲದಲ್ಲಿ ಟಾರ್ಗೆಟ್ ಗ್ರೂಪ್ ಇದ್ದ ಹಾಗೆ ಇನ್ನೆರಡು ತಂಡಗಳು ಕೂಡ ಇವೆ. ಇವುಗಳಲ್ಲಿ ಟಾರ್ಗೆಟ್ ಗ್ರೂಪ್ ಒಂದಿಷ್ಟು ಹೆಚ್ಚು ಪ್ರವರ್ಧಮಾನಕ್ಕೆ ಬಂದ ಪುಂಡ ಯುವಕರ ತಂಡ. ಕಳೆದ ಬಾರಿ ಜುಬೇರ್ ಹತ್ಯೆ ನಡೆದಾಗಲೂ ಇದೇ ತಂಡದ ಹೆಸರು ಕೇಳಿ ಬಂದಿತ್ತು. ಗಾಂಜಾ ಗಲಾಟೆಯಲ್ಲಿ ನಡೆಯುವ ಕೊಲೆಯತ್ನ, ಕೊಲೆ ಪ್ರಕರಣಗಳಂತೆ ಈ ಪ್ರಕರಣವನ್ನು ಕೂಡ ನೋಡಬೇಕೆ ವಿನ: ಇದಕ್ಕೆ ಯಾವ ಧರ್ಮ ಅಥವಾ ರಾಜಕೀಯದ ಲೇಪನ ಕೊಡಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಸಾಮಾನ್ಯವಾಗಿ ಗಾಂಜಾ ಪೂರೈಕೆಯಾಗುವುದು ಉಳ್ಳಾಲದ ಭಾಗದಿಂದ. ಇಲ್ಲಿ ಕೇರಳದ ಗಡಿ ತಾಗಿಕೊಂಡೇ ಇರುವುದರಿಂದ ಕರಾವಳಿ ಸಹಿತ ಬೇರೆ ಭಾಗಗಳಿಗೂ ಉಳ್ಳಾಲದ ಮೂಲಕ ಒಳಗೆ ಬರುವ ಗಾಂಜಾ ನಂತರ ಈ ಗುಂಪುಗಳ ಮೂಲಕ ಎಲ್ಲೆಡೆ ಬಟವಾಡೆ ಆಗುತ್ತದೆ. ಈ ವಿಷಯದಲ್ಲಿ ಆಗಾಗ ಬೇರೆ ಬೇರೆ ಗುಂಪುಗಳ ಮಧ್ಯದಲ್ಲಿ ಅಸಮಾಧಾನವಾಗುವುದು ಉಂಟು. ಕಳೆದ ಬಾರಿ ಫರಂಗಿಪೇಟೆಯ ಸಮೀಪ ನಡೆದ ಒಂದು ಹತ್ಯಾ ಪ್ರಕರಣ ಕೂಡ ಗಾಂಜಾ ಅವ್ಯವಹಾರದ ಸಂಬಂಧ ನಡೆದ ಅಸಮಾಧಾನದ ಪ್ರತೀಕಾರವೇ ಆಗಿರುವುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಈಗ ಯಾವ ಇನ್ನೊಂದು ಗುಂಪು ಇಲ್ಯಾಸ್ ನನ್ನು ಹತ್ಯೆ ಮಾಡಿದೆ ಎನ್ನುವುದನ್ನು ಮಾತ್ರ ನೋಡಬೇಕಿದೆ. ಇನ್ನೊಂದು ಮಾಹಿತಿಯ ಪ್ರಕಾರ ಟಾರ್ಗೆಟ್ ಗ್ರೂಪಿನಿಂದ ಹಣದ ಪಾಲುದಾರಿಕೆಯ ವಿಷಯದಲ್ಲಿ ಮನಸ್ತಾಪ ಆಗಿ ಸಿಡಿದು ಹೋದ ಕೆಲವರು ಹಗೆ ತೀರಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಇದೆ.
ರಾಜಕೀಯ ಉಳಿಸಲಿಲ್ಲ ಜೀವ!
ಸಾಮಾನ್ಯವಾಗಿ ಅಕ್ರಮಗಳಲ್ಲಿ ಹೆಚ್ಚು ತೊಡಗುವವರು ಯಾವುದಕ್ಕೂ ಇರಲಿ ಎಂದು ಯಾವುದಾದರೂ ಒಂದು ಪಕ್ಷದೊಂದಿಗೆ ಗುರುತಿಸಿ ತಮಗೆ ತೊಂದರೆಯಾಗುವಾಗ ಯಾವುದಕ್ಕೂ ಸಹಾಯಕ್ಕೆ ಬೇಕಾಗುತ್ತದೆ ಎನ್ನುವ ಆಶಾಭಾವನೆ ಇಟ್ಟುಕೊಂಡಿರುತ್ತಾರೆ. ಇಲ್ಯಾಸ್ ಕೂಡ ಹಾಗೆ ಮಾಡಿದ್ದ. ಬರೀ ಕಾರ್ಯಕರ್ತನಾಗಿದ್ದಲ್ಲಿ ಪ್ರಯೋಜನ ಆಗಲಿಕ್ಕಿಲ್ಲ ಎಂದು ನೇರವಾಗಿ ಉಳ್ಳಾಲದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ. ಅಲ್ಲಿ ಸೋತಿದ್ದ ಕಾರಣ ಆ ಪಕ್ಷದ ನಿಯಮಾವಳಿಯಂತೆ ಅಧ್ಯಕ್ಷ ಸ್ಥಾನಕ್ಕೆ ಸೋತವ ಉಪಾಧ್ಯಕ್ಷನಾಗಿದ್ದ. ಇತ್ತೀಚೆಗೆ ಅವನನ್ನು ಪಕ್ಷ ದೂರ ಇಟ್ಟಿತ್ತು ಎನ್ನುತ್ತಾರೆ.
ಜೆಪ್ಪು ಕುಟಪ್ಪಾಡಿಯ ಫ್ಲಾಟಿನಲ್ಲಿ ಕೊಲೆ!
ಉಳ್ಳಾಲದಲ್ಲಿ ವಾಸಿಸುತ್ತಿದ್ದ ಇಲ್ಯಾಸ್ ಸುರತ್ಕಲ್ ನಲ್ಲಿ ಕೂಡ ಒಂದು ಮನೆ ಮಾಡಿಕೊಂಡಿದ್ದ. ಇತ್ತೀಚೆಗೆ ಮಂಗಳೂರಿನ ನಗರಭಾಗ ಜೆಪ್ಪು ಕುಟಪ್ಪಾಡಿಯಲ್ಲಿ ಒಂದು ಫ್ಲಾಟಿನಲ್ಲಿ ವಾಸಿಸುತ್ತಿದ್ದ. ಕೆಲವು ದಿನಗಳ ಹಿಂದೆ ಕೊಲೆಯತ್ನದ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಅದರಲ್ಲಿ ಜಾಮೀನು ಸಿಕ್ಕಿದ ಕಾರಣ ಹೊರಗೆ ಬಂದಿದ್ದ. ತನ್ನ ಮೇಲೆ ಯಾರಾದರೂ ಹಲ್ಲೆ ಮಾಡಬಹುದು ಎನ್ನುವ ಸಂಶಯ ಅವನಿಗೆ ಇತ್ತು. ಅದಕ್ಕಾಗಿ ಆದಷ್ಟು ಎಚ್ಚರಿಕೆಯನ್ನು ಕೂಡ ವಹಿಸಿದ್ದ. ಬೇರೆ ಯಾವುದೇ ಜಾಗದಲ್ಲಿ ಇದ್ದರೆ ಸಮಸ್ಯೆಯಾಗಬಹುದು ಎಂದು ಜೆಪ್ಪು ಪರಿಸರದಲ್ಲಿ ಇದ್ದ. ನಗರದ ಮಧ್ಯದಲ್ಲಿರುವ ಕಾರಣದಿಂದ ಇಲ್ಲಿ ಎಟ್ಯಾಕ್ ಆಗುವ ಸಂಭವ ಕಡಿಮೆ ಎನ್ನುವ ಊಹೆ ಇತ್ತೆನೋ. ಆದರೆ ದುಷ್ಕರ್ಮಿಗಳು ಅಲ್ಲಿಯೂ ಬಿಡಲಿಲ್ಲ. ಮನೆಗೆ ಒಳಗೆ ಬೆಳಿಗ್ಗೆ 8 ರಿಂದ 8.30 ನಡುವೆ ದಾಳಿ ಮಾಡಿ ಚೂರಿಯಿಂದ ಎದೆಭಾಗಕ್ಕೆ ತಿವಿದು ಕೊಲೆ ಮಾಡಿದ್ದಾರೆ. ತಲವಾರು ಹಿಡಿದು ರಕ್ತದೊಂದಿಗೆ ಆಟವಾಡಲು ಹೊರಡುವ ಯಾವ ವ್ಯಕ್ತಿ ಕೂಡ ಆತ ಯಾವುದೇ ಧರ್ಮ, ಜಾತಿ, ಪಕ್ಷದವನು ಆಗಿರಲಿ ಅವನ ಅಂತ್ಯ ಹೆಚ್ಚು ಕಡಿಮೆ ಒಂದೇ ರೀತಿಯಾಗಿರುತ್ತದೆ. ಆತ ಯಾವಾಗ ತಾನು ಹಿಂಸಿಸಿದವರ ಕಣ್ಣಲ್ಲಿ ಇರುವ ಭಯ, ನೋವು ಎಂಜಾಯ್ ಮಾಡುತ್ತಿದ್ದನಾ ಅವನ ಅಂತ್ಯ ಕೂಡ ಅಂತಹುದೇ ಭಯ, ನೋವಿನೊಂದಿಗೆ ಸಮಾಪ್ತಗೊಳ್ಳುತ್ತದೆ. ಇಲ್ಯಾಸ್ ಒಳ್ಳೆಯವನೊ, ಅಮಾಯಕನೋ, ರೌಡಿಯೋ, ರಾಜಕೀಯ ಪಕ್ಷದ ಧುರೀಣನೋ, ಒಂದು ತಂಡದ ನಾಯಕನೋ ಎನ್ನುವುದು ಸಮಾಜಕ್ಕೆ ಗೊತ್ತಿದೆ. ಆದರೆ ಒಂದು ವಿಷಯ ನಿಜ, ಗಾಂಜಾದ ವಿಷಯದಲ್ಲಿ ಮಂಗಳೂರಿನಲ್ಲಿ ಆಗಿರುವ ಮೊದಲ ಹತ್ಯೆ ಇದಲ್ಲ, ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇದು ಕೊನೆಯ ಹತ್ಯೆಯೂ ಆಗಲಿಕ್ಕಿಲ್ಲ!!
Leave A Reply