ಗಣರಾಜ್ಯೋತ್ಸವ ಹಿನ್ನೆಲೆ ಹಿಮಾಲಯ ತುದಿಯಲ್ಲಿ ಶಿಸ್ತಿನ ನಡಿಗೆ ಮೂಲಕ ದೇಶಪ್ರೇಮ ಮೆರೆದ ಸೈನಿಕರು!
ದೆಹಲಿ: ಒಂದೆಡೆ ಗಣರಾಜ್ಯೋತ್ಸವಕ್ಕೆ ಆಸಿಯಾನ್ ದೇಶಗಳ ಮುಖಂಡರನ್ನು ಕರೆಸಿ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿಯಾದರೆ, ಮತ್ತೊಂದೆಡೆ ಹಿಮಾಲಯದ ತುದಿಯಲ್ಲಿ ಭಾರತೀಯ ಸೈನಿಕರು ಶಿಸ್ತಿನ ನಡಿಗೆ ಪ್ರದರ್ಶಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಮೆರುಗು ತಂದಿದ್ದಲ್ಲದೆ, ಅಪಾರ ದೇಶಪ್ರೇಮ ಮೆರೆದಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆ 18 ಸಾವಿರ ಅಡಿ ಎತ್ತರದ ಹಾಗೂ ಮೈನಸ್ 18 ಡಿಗ್ರಿ ಸೆಲ್ಶಿಯಸ್ ಇರುವ ಹಿಮಾಲಯದ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಿಡಿದು ಮಾರ್ಚ್ ಕೈಗೊಳ್ಳುವ ಮೂಲಕ ಅಪ್ರತಿಮ ದೇಶ ಪ್ರೇಮ ತೋರಿದ್ದಾರೆ.
ಮೈ ಜುಂ ಎನಿಸುವ ಚಳಿ, ಮೈನಸ್ 18 ಡಿಗ್ರಿಯ ವಾತಾವರಣ, ಸುತ್ತಲೂ ಮಂಜುಗಡ್ಡೆಯಿಂದ ಕೂಡಿರುವ ಪ್ರದೇಶಕ್ಕೆ ತೆರಳಿ ಮಾರ್ಚ್ ಮಾಡಿದ್ದು ಸೇನೆಯ ದಿಟ್ಟತನ ತೋರಿಸಿದ್ದಲ್ಲದೆ ಭಾರತೀಯ ಸೈನಿಕರು ಎಂಥ ಪರಿಸ್ಥಿತಿಯಲ್ಲೂ ದೇಶಪ್ರೇಮ ಮೆರೆಯುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಅಲ್ಲದೆ ದೇಶಾದ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸುತ್ತಿದ್ದು, ದೆಹಲಿಯಲ್ಲಂತೂ ಹಬ್ಬದ ವಾತಾವರಣವಿದೆ. ಇದೇ ಮೊದಲ ಬಾರಿಗೆ ಆಸಿಯಾನ್ ದೇಶಗಳ ನಾಯಕರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಐತಿಹಾಸಿಕ ಹಾಗೂ ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸುವ ನಿಟ್ಟಿನಲ್ಲಿ ಮೋದಿ ಅವರು ವೇದಿಕೆ ಸೃಷ್ಟಿಸಿದ್ದಾರೆ.
Leave A Reply