ಬಜೆಟ್ ನಲ್ಲಿ ಅರುಣ್ ಜೇಟ್ಲಿ ಘೋಷಿಸಿದ ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಯಾವುದು ಗೊತ್ತಾ?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದು, ರೈಲು, ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಅಪಾರ ಹಣ ಘೋಷಿಸಿದ್ದಾರೆ. ಆ ಮೂಲಕ ಜಿಎಸ್ಟಿ ಬಳಿಕದ ಮೊದಲ ಬಜೆಟ್ ಅನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ.
ಕಳೆದ ಬಾರಿ ರೈಲ್ವೆ ಬಜೆಟ್ ಅನ್ನು ಸಹ ಸಮಗ್ರ ಬಜೆಟ್ ಜತೆಯಾಗಿಯೇ ಮಂಡಿಸಿ ಯಶಸ್ವಿಯಾಗಿದ್ದ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಮತ್ತೊಂದು ಅಚ್ಚರಿ ಮೂಡಿಸಿದೆ.
ಈ ಬಾರಿಯ ಬಜೆಟ್ಟಿನಲ್ಲಿ ಸರ್ಕಾರ ಸಾರ್ವಜನಿಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯನ್ನು ಘೋಷಿಸಿದ್ದು, ಇದು ವಿಶ್ವದ ಅತಿ ದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಎನಿಸಲಿದೆ ಎಂದು ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಯೋಜನೆಯಡಿ ಸುಮಾರು 10 ಕೋಟಿ ಬಡ ಹಾಗೂ ದುರ್ಬಲ ಕುಟುಂಬಗಳು ಆರೋಗ್ಯ ರಕ್ಷಣೆ ಪಡೆಯಲಿದ್ದು, ದೇಶದ ಸುಮಾರು 50 ಕೋಟಿ ಜನ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಜೇಟ್ಲಿ ವಿವರಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಅನ್ವಯ ಯಾವುದೇ ಬಡ ಕುಟುಂಬದ ಸದಸ್ಯ ಅನಾರೋಗ್ಯಕ್ಕೀಡಾಗಿ ದ್ವಿತೀಯ ಹಾಗೂ ತೃತೀಯ ದರ್ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಸರ್ಕಾರ 5 ಲಕ್ಷ ರುಪಾಯಿವರೆಗೆ ಧನಸಹಾಯ ಮಾಡಲಿದ್ದು, ಯೋಜನೆಗೆ ಅತಿ ಹೆಚ್ಚು ಫಲಾನುಭವಿಗಳಿರುವುದರಿಂದ ಹಾಗೂ ಭಾರತದಲ್ಲಿ ಬಡವರು ಚಿಕಿತ್ಸೆ ಇಲ್ಲದೆ ಪರದಾಡುವುದರಿಂದ ಯೋಜನೆ ಪ್ರಾಮುಖ್ಯವೆನಿಸಿದೆ.
Leave A Reply