ಸರ್ಕಾರಿ ಶಾಲೆಗಳಲ್ಲಿನ್ನು ಯೆಸ್ ಸರ್/ಮೇಡಮ್ ಬದಲಿ ಜೈಹಿಂದ್ ಎನ್ನಬೇಕು, ಎಲ್ಲಿ ಗೊತ್ತಾ?
ಭೋಪಾಲ್: ಮೊದಲಿನಿಂದಲೂ ಸರ್ಕಾರಿ ಶಾಲೆಗಳಲ್ಲಿ ತರಗತಿಯ ಶಿಕ್ಷಕ/ಶಿಕ್ಷಕಿಯರು ಹಾಜರಾತಿ ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳು ಯೆಸ್ ಸರ್/ಯೆಸ್ ಮೇಡಂ ಎಂದು ತಾವು ಬಂದಿರುವುದನ್ನು ಖಾತರಿಪಡಿಸುತ್ತಿದ್ದರು. ಆದರೆ ಇನ್ನು ಮುಂದೆ ವಿದ್ಯಾರ್ಥಿಗಳು ಯೆಸ್ ಸರ್/ಮೇಡಂ ಎನ್ನುವ ಬದಲಿ ಜೈಹಿಂದ್ ಎನ್ನಲಿದ್ದಾರೆ.
ಹೌದು, ಮಧ್ಯಪ್ರದೇಶ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಪ್ರಸಕ್ತ ಸಾಲಿನ ಜೂನ್ ಒಂದರಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಜರಾತಿ ತೆಗೆದುಕೊಳ್ಳುವಾಗ ಶಿಕ್ಷಕರಿಗೆ ಯೆಸ್ ಮೇಡಂ/ಸರ್ ಬದಲಿಗೆ ಜೈಹಿಂದ್ ಎನ್ನಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಈ ಕುರಿತು ಸರ್ಕಾರಿ ಶಾಲೆಗಳ ಇಲಾಖೆಯ ಉಪಕಾರ್ಯದರ್ಶಿ ಪ್ರಮೋದ್ ಸಿಂಗ್ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ಫೂರ್ತಿ ತುಂಬುವ ದಿಸೆಯಲ್ಲಿ ರಾಜ್ಯ ಸರ್ಕಾರ ಯೆಸ್ ಸರ್/ಮೇಡಂ ಎನ್ನುವ ಬದಲು ಜೈಹಿಂದ್ ಎನ್ನುವಂತೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿರುವ ಸುಮಾರು 1.22 ಲಕ್ಷ ಶಾಲೆಗಳಲ್ಲಿ ಇನ್ನು ಮುಂದೆ ಮಕ್ಕಳು ಜೈಹಿಂದ್ ಎನ್ನುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಆದೇಶ ಖಾಸಗಿ ಶಾಲೆಗಳಿಗೆ ಅನ್ವಯಿಸುವುದಿಲ್ಲ. ಜೈ ಹಿಂದ್ ಎನ್ನುವುದು ವ್ಯಕ್ತಿಯಲ್ಲಿ ಸ್ಫೂರ್ತಿಯ ಕಿಡಿ ಹೊತ್ತಿಸುವುದರಿಂದ ಹಾಗೂ ಮಕ್ಕಳಲ್ಲಿ ಚಿಕ್ಕವರಿರುವಾಗಲೇ ದೇಶಪ್ರೇಮ ಬೆಳೆಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ವಿವರಿಸಿದ್ದಾರೆ.
Leave A Reply