ಮೀಸಲಾತಿಯನ್ನು ತ್ರಿವಳಿ ತಲಾಖ್ ಜೊತೆ ಹೋಲಿಸಬೇಡಿ ರಾಹುಲ್!!
ಮಹಿಳೆಗೆ ಏನು ಬೇಕು, ಅವಳು ಸರಕಾರದಿಂದ ಏನು ನಿರೀಕ್ಷೆ ಮಾಡುತ್ತಾಳೆ, ಅವಳಿಗೆ ಏನು ದೊರಕಿದರೆ ಅವಳು ಸ್ವಾಭಿಮಾನಿ ಬದುಕನ್ನು ಕಾಣುತ್ತಾಳೆ ಎನ್ನುವುದು ಯಾವಾಗ ನಮ್ಮನ್ನು ಆಳುತ್ತೇವೆ ಎಂದು ಅಂದುಕೊಂಡವರಿಗೆ ಗೊತ್ತಾಗುವುದಿಲ್ಲವೋ ಆಗ ಮಹಿಳೆಯೊಬ್ಬಳ ಸ್ವಾಭಿಮಾನದ ಮಹತ್ವ ಯಾರಿಗೂ ಅರ್ಥವಾಗುವುದಿಲ್ಲ. ರಾಹುಲ್ ಗಾಂಧಿ ಮತ್ತು ಅವರ ಪಕ್ಷದವರ ವಿಷಯದಲ್ಲಿ ಹೀಗೆ ಆಗಿದೆ. ಅವರಿಗೆ ಅತ್ತ ಮುಸ್ಲಿಮ್ ಮತಗಳನ್ನು ಹಿಡಿದಿಟ್ಟುಕೊಳ್ಳಲಾಗದೇ ಇತ್ತ ಹಿಂದೂ ಮತಗಳ ಮೇಲೆ ಕಂಟ್ರೋಲ್ ಇಲ್ಲದೆ ನಡುದಾರಿಯಲ್ಲಿ ಬಿದ್ದ ಹಾಗೆ ಆಗಿದೆ. ಆದ್ದರಿಂದ ನಿಖಾ ಹಲಾಲ್ ಎನ್ನುವ ಅನಿಷ್ಟ ಪದ್ಧತಿ ಅವರಿಗೆ ಮುಸ್ಲಿಂ ಮಹಿಳೆಯ ಆತ್ಮಾಭಿಮಾನದ ಪ್ರಶ್ನೆ ತರಹ ಕಾಣಿಸಿಲ್ಲ. ಅವರು ಇನ್ನು ಕೂಡ ಮುಸ್ಲಿಂ ಮತದಾರರು ತಮ್ಮ ಮತ ಬ್ಯಾಂಕ್ ಎಂದೇ ಅಂದುಕೊಂಡಿದ್ದಾರೆ. ಅಷ್ಟಕ್ಕೂ ಮುಸ್ಲಿಂ ಮಹಿಳೆಯೊಬ್ಬಳಿಗೆ ಸ್ವತಂತ್ರವಾಗಿ ಯೋಚಿಸುವ ಮನಸ್ಸೊಂದಿದೆ ಎಂದು ಕಾಂಗ್ರೆಸ್ ಮತ್ತು ಅದರೊಂದಿಗೆ ವೇದಿಕೆ ಹಂಚಿಕೊಂಡು ನಿಲ್ಲುವ ಯಾವ ಪಕ್ಷಕ್ಕೂ ಗೊತ್ತೆ ಇಲ್ಲ.
ಎರಡಕ್ಕೂ ವ್ಯತ್ಯಾಸವಿದೆ…
ಇಲ್ಲದೇ ಹೋದರೆ ಯಾಕೆ ರಾಹುಲ್ ಗಾಂಧಿ ಅಥವಾ ಅವರ ತಾಯಿ ಸೋನಿಯಾ ಗಾಂಧಿಯವರು ಇಲ್ಲಿಯ ತನಕ ತ್ರಿವಳಿ ತಲಾಖ್ ನಿಷೇಧ ಮಾಡೋಣ ಎಂದು ರಾಜ್ಯಸಭೆಯಲ್ಲಿ ತಮ್ಮ ಪಕ್ಷದ ಸದಸ್ಯರಿಂದ ಹೇಳಿಸಿಲ್ಲ. ಲೋಕಸಭೆಯಲ್ಲಿ ಇದು ಪಾಸ್ ಆದರೂ ರಾಜ್ಯಸಭೆಯಲ್ಲಿ ಪಾಸ್ ಆಗಿಲ್ಲ. ಹಾಗಂತ ರಾಹುಲ್ ಗಾಂಧಿಯವರಿಗೆ ಇದೆಲ್ಲಾ ಗೊತ್ತಿಲ್ಲ ಎಂದಲ್ಲ. ಅವರು ಏನು ಮಾಡುತ್ತಿದ್ದಾರೆ ಎಂದರೆ ಮತ್ತೊಂದು ರೀತಿಯಲ್ಲಿ ಮಹಿಳೆಯರನ್ನು ಸೆಳೆಯಲು ಹೊರಟಿದ್ದಾರೆ. ಅದಕ್ಕಾಗಿ ಹೋದ ಕಡೆಯಲ್ಲೆಲ್ಲ 33 ಶೇಕಡಾ ಮೀಸಲಾತಿಯ ಬಗ್ಗೆ ಮಾತನಾಡುತ್ತಿದ್ದಾರೆ. ತಮ್ಮ ಪಕ್ಷ ಮಹಿಳೆಯರಿಗೆ ವಿಧಾನಸಭೆ, ಲೋಕಸಭೆಯಲ್ಲಿ ಮೂರನೇ ಒಂದು ಮೀಸಲಾತಿಯನ್ನು ಕೊಡಲು ಬದ್ಧವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಮೂವತ್ತಮೂರು ಶೇಕಡಾ ಮೀಸಲಾತಿಗೂ ತ್ರಿವಳಿ ತಲಾಖ್ ಗೂ ಸಾಕಷ್ಟು ವ್ಯತ್ಯಾಸವಿದೆ. ಓರ್ವ ಮಹಿಳೆ ವಿಧಾನಸಭೆಯನ್ನು ಪ್ರವೇಶಿಸುವುದು ಮತ್ತು ಅದೇ ಕಾಲದಲ್ಲಿ ದೇಶದ ಅಸಂಖ್ಯಾತ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಂದ ಕಣ್ಣೀರು ಸುರಿಸುವುದಕ್ಕೂ ಸಮನಾಗುತ್ತಾ? ಒಂದು ಮಹಿಳೆಯನ್ನು ಜನಪ್ರತಿನಿಧಿ ಮಾಡಿದ ಕೂಡಲೇ ತಾವು ಮಹಿಳೆಯರ ಅಭಿವೃದ್ಧಿಯ ಹರಿಕಾರರು ಎಂದು ಹೇಳುವುದು ಕಾಂಗ್ರೆಸ್ ಸ್ಟೈಲ್.
ಮಹಿಳೆಯರ ಮನಸ್ಸು ಅರಿಯಿರಿ…
ರಾಹುಲ್ ಗಾಂಧಿ ಏನು ಮಾಡಬೇಕು ಎಂದರೆ ನಾಲ್ಕು ಜನ ಹೆಂಗಸರನ್ನು ಕೂರಿಸಿ ನಾವು ಶಾಸನಸಭೆಯಲ್ಲಿ 33% ಮೀಸಲಾತಿ ಕೊಡುವುದು ಎಂದು ನಿರ್ಧರಿಸಿಬಿಟ್ಟಿದ್ದೆವೆ. ಬಿಜೆಪಿಯವರು ಮೊದಲು ತ್ರಿವಳಿ ತಲಾಖ್ ನಿಷೇಧಿಸೋಣ ಎನ್ನುತ್ತಿದ್ದಾರೆ. ಇದರಿಂದ ನಿಖಾ ಹಲಾಲ್ ಎನ್ನುವ ಅನಿಷ್ಟ ಕೂಡ ನಿವಾರಣೆಯಾಗುತ್ತದೆ ಎನ್ನುತ್ತಿದ್ದಾರೆ. ಮೊದಲು ಯಾವುದು ಜಾರಿಗೆ ತರಬೇಕು ಎಂದು ಕೇಳಿ ನೋಡಲಿ. ಬೇಕಾದರೆ ಸಭೆಯಲ್ಲಿರುವ ನಾಲ್ಕು ಮಹಿಳೆಯರೂ ಕೂಡ ವಿವಿಧ ಧರ್ಮದವರಾಗಿದ್ದರೆ ತುಂಬಾ ಒಳ್ಳೆಯದು. ನಾಲ್ಕು ಮಹಿಳೆಯರಲ್ಲಿ ಒಬ್ಬಳು ಮುಸ್ಲಿಂ ಮಹಿಳೆ ಇದ್ದರಂತೂ ಅವಳು ಗ್ಯಾರಂಟಿಯಾಗಿ ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲ್ ರದ್ದಾಗಬೇಕು ಎಂದೇ ಹೇಳುತ್ತಾರೆ. ಇನ್ನು ಹಿಂದೂ, ಕ್ರೈಸ್ತ ಮಹಿಳೆಯರೂ ಕೂಡ ನಿಖಾ ಹಲಾಲ್ ಬಗ್ಗೆ ತಿಳಿದರೆ ಯಾವತ್ತೂ ಇಂತಹ ಸಂಪ್ರದಾಯ ಒಪ್ಪುವುದಿಲ್ಲ. ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಶಾಸನಸಭೆಗಳನ್ನು ಪ್ರವೇಶಿಸಿದರೆ ಹೆಚ್ಚೆಂದರೆ ಆ ಮಹಿಳೆಯರ ಜೀವನ ಅಭಿವೃದ್ಧಿಯಾಗಬಹುದು. ಅವಳು ವಿಧಾನಸಭೆಯಲ್ಲಿ ಅಥವಾ ಲೋಕಸಭೆಯಲ್ಲಿ ನಿಂತು ಮಹಿಳೆಯ ಬಗ್ಗೆ ಹೋರಾಡುತ್ತೇನೆ ಎಂದುಕೊಂಡು ಗೆದ್ದರೂ ಅಲ್ಲಿ ಒಳಗೆ ಹೋದ ಮೇಲೆ ಎಲ್ಲವೂ ನಿಂತಿರುವುದು ತಮ್ಮ ಪಕ್ಷದ ಸಿದ್ಧಾಂತದ ಮೇಲೆ, ದೊಡ್ಡವರು ಏನು ಹೇಳುತ್ತಾರೋ ಹಾಗೆ ಕೇಳಬೇಕು, ತನ್ನ ಭಾಷಣ ಕ್ಷೇತ್ರದಲ್ಲಿ ಮಾತ್ರ ಎನ್ನುವ ವಾಸ್ತವದ ಅರಿವಾಗುತ್ತದೆ. ಆದ್ದರಿಂದ ಮಹಿಳೆ ಶಾಸನಸಭೆಗೆ ಆಯ್ಕೆಯಾಗುವುದರಿಂದ ಎಲ್ಲವೂ ಸರಿಯಾಗಲ್ಲ. ಅದೇ ತ್ರಿವಳಿ ತಲಾಖ್ ನಿಷೇಧ ಮಾಡಿದರೆ ಭಾರತದ ಕೋಟ್ಯಾಂತರ ಮಹಿಳೆಯರ ಜೀವನ ಒಳ್ಳೆಯದಾಗುತ್ತದೆ. ಸುಮ್ಮ ಸುಮ್ಮನೆ ಮುಸ್ಲಿಂ ಪುರುಷರು ತಮ್ಮ ಪ್ರಬಲ ಅಸ್ತ್ರವನ್ನು ಬಳಸುವುದು ನಿಲ್ಲುತ್ತದೆ. ಆ ಮಹಿಳೆಯ ಕಣ್ಣೀರು ನಿಲ್ಲುತ್ತದೆ. ಅವಳ ತಾಯಿ ಮನೆಯ ಕಣ್ಣೀರು ನಿಲ್ಲುತ್ತದೆ. ಮುಸ್ಲಿಂ ಪುರುಷರು ಮಹಿಳೆಯರನ್ನು ಭೋಗದ ವಸ್ತುಗಳನ್ನಾಗಿ ಬಳಸುವುದನ್ನು ತಡೆಯಬಹುದು.
ಮೀಸಲಾತಿಯಿಂದ ಕೇವಲ ಹಕ್ಕಿನ ಸ್ಥಾಪನೆಯಾಗುತ್ತದೆ. ಸ್ವಾಭಿಮಾನದ ಅಸ್ಮಿತೆ ಉಳಿಯಬೇಕಾದರೆ ತ್ರಿವಳಿ ತಲಾಖ್ ನಿಷೇಧಿಸಬೇಕು. ರಾಜ್ಯಸಭೆಯಲ್ಲಿ ಬಹುಮತದಲ್ಲಿರುವ ವಿಪಕ್ಷಗಳು ಹೆಣ್ಣಿನ ಸ್ವಾಭಿಮಾನವನ್ನು ಕಡೆಗಣಿಸಿರುವುದು ಸ್ವಷ್ಟವಾಗಿದೆ!
Leave A Reply