ನಮ್ಮ ಆತಂಕ ನಿಜವಾಗಿದೆ, ಮಂಗಳೂರು ವಿವಿಯನ್ನು ಇನ್ನು ದೇವರೇ ಕಾಪಾಡಬೇಕು!!
ನಾವು ಅಂದುಕೊಂಡ ಹಾಗೆ ಆಗಿದೆ. ಯಾವ ಆತಂಕ ಇತ್ತೋ ಹಾಗೆ ಆಗಿದೆ. ಯಾವುದು ಆದರೆ ಮಂಗಳೂರು ವಿಶ್ವವಿದ್ಯಾನಿಲಯದ ಭ್ರಷ್ಟಾಚಾರ ಹಾಗೆ ಮುಚ್ಚಿ ಹೋಗಿ ಭ್ರಷ್ಟರ ಗೆಲ್ಲುವಾಗುತ್ತೆ ಎಂದು ಅನಿಸುತ್ತಿತ್ತೋ ಹಾಗೆ ನಡೆದಿದೆ. ಸದ್ಯಕ್ಕೆ ಭ್ರಷ್ಟರ ಪಡೆಗೆ ಜಯ ಸಿಕ್ಕಿದೆ. ಅವರು ಈ ಹಂತದಲ್ಲಿ ಗೆಲುವು ಸಾಧಿಸಿದ್ದಾರೆ. ಭೈರಪ್ಪನವರ ಲೂಟಿಗ್ಯಾಂಗಿನ ಉನ್ನತ ನಾಯಕ ಪರೀಕ್ಷಾಂಗ ಕುಲಪತಿಯಾಗಿದ್ದ ಎಎಂ ಖಾನ್ ವಿವಿಯ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿದ್ದಾರೆ. ಅಲ್ಲಿಗೆ ಕುರಿಗಳನ್ನು ಕಾಯಲು ತೋಳವನ್ನು ವಿದ್ಯುಕ್ತವಾಗಿ ನೇಮಿಸುವ ಕಾರ್ಯಕ್ಕೆ ಚಾಲನೆ ನೀಡಿದಂತೆ ಆಗಿದೆ. ಪರೀಕ್ಷಾಂಗ ಕುಲಪತಿಯಾಗಿ ಇವರದ್ದೇ ತಂಡದ ರವೀಂದ್ರ ಆಚಾರಿ ನೇಮಕವಾಗಿದ್ದಾರೆ. ಇನ್ನೇನಿದ್ದರೂ ಭ್ರಷ್ಟರಿಗೆ ಹಬ್ಬ. ಮುಂಬರುವ ದಿನಗಳಲ್ಲಿ ಮಂಗಳೂರು ವಿವಿಯ ಹಣ ಹೇಗೆ ವಿನಿಯೋಗವಾಗಲಿದೆ ಎನ್ನುವ ಆತಂಕ ವಿದ್ಯಾದೇಗುಲವನ್ನು ಪ್ರೀತಿಸುವ ಪ್ರತಿಯೊಬ್ಬರಲ್ಲಿಯೂ ಮೂಡಿದೆ.
ನಾಗೇಂದ್ರ ಪ್ರಕಾಶ್ ವರ್ಗಾವಣೆ ಆಗಿದೆ..
ಹೀಗೆ ಆಗೇ ಆಗುತ್ತೆ ಎಂದು ನಮಗೆ ಆರೇಳು ವಾರಗಳ ಮೊದಲೇ ಅನಿಸುತ್ತಿತ್ತು. ಈ ಆತಂಕವನ್ನು ನಾವು ಜುಲೈ 6 ಮತ್ತು 7 ರ ಜಾಗೃತ ಅಂಕಣದಲ್ಲಿ ಬರೆದಿದ್ದೇವು. ಭೈರಪ್ಪನವರು ತಾವು ಮಾಡಿರುವ ಹಗರಣಗಳು ಬೆಳಕಿಗೆ ಬರದ ಹಾಗೆ ಏನೇನೂ ಮಾಡಬೇಕು ಅದನ್ನೆಲ್ಲ ಮಾಡುತ್ತಿದ್ದಾರೆ ಎಂದು ಜಾಗೃತ ಮಾಧ್ಯಮವಾಗಿ ನಮಗೆ ಆಗಲೇ ಮಾಹಿತಿ ಬರುತ್ತಿತ್ತು. ಟಿವಿಯಲ್ಲಿ ವಾಹಿನಿಗಳು ಈ ಬಗ್ಗೆ ಕಾರ್ಯಕ್ರಮ ಮಾಡಿ ಸತ್ಯ ಹೊರಗೆ ಹಾಕುತ್ತಿದ್ದಾಗ ಆಗಲೇ ಭೈರಪ್ಪನವರು ಎಚ್ಚೆತ್ತಿದ್ದರು. ತಾವು ಬಿಟ್ಟು ಹೋಗುವ ಸ್ಥಾನದಲ್ಲಿ, ರಿಜಿಸ್ಟಾರ್ ಆಗಿ, ಪರೀಕ್ಷಾಂಗ ಕುಲಪತಿಯಾಗಿ ಯಾರು ಇದ್ದರೆ ತಾವು ಸೇಫ್ ಎಂದು ಅವರು ಲೆಕ್ಕಹಾಕಿ ಆಗಿತ್ತು. ಅವರಿಗೆ ದೊಡ್ಡ ಆತಂಕ ಇದ್ದದ್ದು ರಿಜಿಸ್ಟಾರ್ ಆಗಿದ್ದ ನಾಗೇಂದ್ರ ಪ್ರಕಾಶ್ ಅವರ ಮೇಲೆ. ಪ್ರಾಮಾಣಿಕ ವ್ಯಕ್ತಿಯಾಗಿರುವ ನಾಗೇಂದ್ರ ಪ್ರಕಾಶ್ ರಿಜಿಸ್ಟಾರ್ ಆಗಿಯೇ ಮುಂದುವರೆದರೆ ತಾವು ಕಣ್ಣುಮುಚ್ಚಿ ನಿದ್ದೆ ಮಾಡಿದರೂ ನಿದ್ರೆ ಬರಲಿಕ್ಕಿಲ್ಲ ಎಂದು ಭೈರಪ್ಪನವರಿಗೆ ಗೊತ್ತಿತ್ತು. ರಾಜ್ಯಪಾಲರು ತನಿಖೆಗೆ ಆದೇಶಿಸಿದರೆ ಮತ್ತು ಆ ಸಮಯಕ್ಕೆ ನಾಗೇಂದ್ರ ಪ್ರಕಾಶ್ ರಿಜಿಸ್ಟಾರ್ ಆಗಿ ಇದ್ದರೆ ತಾವು ಬಚಾವಾಗಲು ಸಾಧ್ಯವೇ ಇಲ್ಲ ಎಂದು ಭೈರಪ್ಪನವರಿಗೆ ಗ್ಯಾರಂಟಿಯಾಗಿತ್ತು. ಅದಕ್ಕಾಗಿ ಏನು ಮಾಡುವುದು ಎಂದು ಪ್ಲಾನ್ ಹಾಕಿದ ಭೈರಪ್ಪನವರು ತಮ್ಮ ಜಾತಿ ಕಾರ್ಡ್ ದುರುಪಯೋಗ ಮಾಡಿದ್ದನ್ನು ಕೂಡ ನಾವು ನಿಮಗೆ ಹಿಂದಿನ ಅಂಕಣದಲ್ಲಿ ತಿಳಿಸಿದ್ದೇವೆ. ತಮ್ಮ ಒಕ್ಕಲಿಗ ಕಾರ್ಡ್ ಬಳಸಿ ಲಿಂಗಾಯತರು ತಮಗೆ ವಿರೋಧಿ ಎಂದು ಚಿತ್ರಿಸಿ ನಾಗೇಂದ್ರ ಪ್ರಕಾಶ್ ಅವರನ್ನು ಮಂಗಳೂರು ವಿವಿಯಿಂದ ಓಡಿಸುವಲ್ಲಿ ಭೈರಪ್ಪನವರು ಸಫಲರಾಗಿರುವುದು ಸ್ಪಷ್ಟವಾಗಿದೆ. ಅದರೊಂದಿಗೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ಹಾಗೂ ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಕೂಡ ಉನ್ನತ ಶಿಕ್ಷಣ ಸಚಿವ ಜಿಟಿ ದೇವೆಗೌಡರನ್ನು ಒಲಿಸಿ ತಮ್ಮದೇ ಎಎಂ ಖಾನ್ ಅವರನ್ನು ರಿಜಿಸ್ಟಾರ್ ಆಗಿ ನೇಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಕಡೆ ಸಚಿವರ ಪ್ರಯತ್ನ, ಮತ್ತೊಂದೆಡೆ ಜಾತಿ ಲಾಬಿ ಸೇರಿ ಭ್ರಷ್ಟಾಚಾರ ಹಗರಣವೊಂದು ಹಾಗೆ ಕೊಣಾಜೆಯ ಮಣ್ಣಿನಡಿ ಹೂತು ಹೋಗಲು ದಾರಿ ಮಾಡಿಕೊಟ್ಟಂತೆ ಆಗಿದೆ.
ವಿಧಾನಪರಿಷತ್ ನಲ್ಲಿ ರವಿಕುಮಾರ್ ಆಕ್ರೋಶ ಫಲ ಕೊಟ್ಟಿಲ್ಲ..
ಇತ್ತೀಚೆಗೆ ತಾನೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ರವಿಕುಮಾರ್ ಅವರು ಅಂಕಿಸಂಖ್ಯೆಗಳ ಸಹಿತ ಮಂಗಳೂರು ವಿವಿಯ ಭ್ರಷ್ಟಾಚಾರದ ಜಾತಕ ಬಿಚ್ಚಿಟ್ಟಿದ್ದರು. ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸಚಿವ ಜಿಟಿ ದೇವೇಗೌಡರಿಗೆ ಲಿಖಿತ ಮನವಿ ಕೊಟ್ಟಿದ್ದರು. ಇತ್ತೀಚೆಗೆ ಅಖಿಲ ವಿದ್ಯಾರ್ಥಿ ಪರಿಷತ್ ನ ಸದಸ್ಯರು ರಾಜ್ಯಪಾಲ ವಜುಬಾಯ್ ಪಟೇಲ್ ಅವರನ್ನು ಭೇಟಿಯಾಗಿ ವಿಷಯ ಮನವರಿಕೆ ಮಾಡಿಕೊಟ್ಟಿದ್ದರು. ಇನ್ನೇನೂ ಮಂಗಳೂರು ವಿವಿಗೆ ಈ ಕುರಿತು ನೋಟಿಸ್ ಬಂದಂತೆ ಭೈರಪ್ಪ ಎಲ್ಲೆಲ್ಲಿಂದ ತಮಗೆ ರಿಸ್ಕ್ ಇತ್ತೋ ಅಲ್ಲೆಲ್ಲ ತಮ್ಮ ಕೈ ಆಡಿಸಿ ಸರಿಮಾಡಿಟ್ಟುಕೊಂಡಿದ್ದಾರೆ. ಭೈರಪ್ಪನವರ ಸಿಎಂ ಭೇಟಿ ಅವರಿಗೆ ಲಾಭ ತಂದುಕೊಟ್ಟಿದೆ. ಭ್ರಷ್ಟರ ಗೆಲುವು ಮಂಗಳೂರು ವಿವಿಯ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕತ್ತಲು ಕವಿಯುವ ಮೊದಲು ರಾಜ್ಯಪಾಲರು ಈ ಕುರಿತು ಗಮನ ಹರಿಸುತ್ತಾರಾ ಎಂದು ನೈಜ ಶಿಕ್ಷಣ ಪ್ರೇಮಿಗಳು ಕಾಯುತ್ತಿದ್ದಾರೆ!
Leave A Reply