ಜನ್ಮಾಷ್ಟಮಿಯ ವೇಳೆ ವೇಷ ಧರಿಸುವ ಈ ವ್ಯಕ್ತಿ ಬಡಮಕ್ಕಳ ಪಾಲಿನ ಆಶಾಕಿರಣ
ಉಡುಪಿ: ಜಿಲ್ಲೆಯ ಅದೆಷ್ಟೋ ಬಡ ಕುಟುಂಬಗಳ ಪಾಲಿಗೆ ಈತ ದೇವರ ಸಮ. ಈತನಿಂದ ಬದುಕುಳಿದ ಜೀವಗಳು ಇವರ ಒಳ್ಳೆಯದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಉಡುಪಿ ಸೇರಿದಂತೆ ಕರಾವಳಿಯ ಭಾಗದ ಜನರಿಗೆ ರವಿ ಕಟಪಾಡಿ ಎಂಬ ಹೆಸರು ಕೇಳುವಾಗ ನೆನಪಿಗೆ ಬರುವುದು ಬಡವರ ಬಂಧು, ಆಪದ್ಬಾಂಧವ. ಈ ಬಾರಿ ಉಡುಪಿಯ ಬಡವರ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಬಡ ಮಕ್ಕಳ ಪಾಲಿಗೆ ಆಶಾಕಿರಣ ಮೂಡಿಸುವ ಸಲುವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ಈ ಬಾರಿ ಅಷ್ಟಮಿಯ ಸೆ. 2 ಮತ್ತು ಸೆ.3ರಂದು ಅಮೇಜಿಂಗ್ ಮಾನ್‌ಸ್ಟರ್ ವೇಷ ಧರಿಸಿ ದೇಣಿಗೆ ಸಂಗ್ರಹ ಮಾಡಲಿದ್ದಾರೆ.
ವಾರಂಬಳ್ಳಿಯ ಉಪ್ಪಿನಕೋಟೆ ರಿಕ್ಷಾ ಚಾಲಕ ಉಮೇಶ್ ಕುಂದರ್ ಮಗಳಾದ ನಾಲ್ಕು ವರ್ಷ ಪ್ರಾಯದ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ದೀಕ್ಷಾ ಕುಂದರ್, ಕುಂದಾಪುರ ಕೋಡಿಯ ಹಂಝ ಅವರ ಪುತ್ರ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ 13 ವರ್ಷದ ಝುಲ್ಫಿನ್, ಉಡುಪಿಯ ಜಗದೀಶ್ ಎಂಬವರ ತಲಸೀಮಿಯದಿಂದ ಬಳಲುತ್ತಿರುವ ಪನ್ವಿಕಾ ಎಂಬ 2 ವರ್ಷ 8 ತಿಂಗಳ ಬಾಲೆ… ಕುಂದಾಪುರ ತಾಲೂಕಿನ ಆನಗಳ್ಳಿಯ ರವಿರಾಜ್ ಮಗ ಎರಡೂ ಕಾಲಿನ ಬಲ ಸ್ವಾಧೀನ ಕಳಕೊಂಡಿರುವ 10 ವರ್ಷದ ರಜತ್ ಇಂತಹ 4 ಬಡಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶವನ್ನು ತಂಡ ಹೊಂದಿದೆ.
ತಾನು ವೇಷ ಧರಿಸಿ ಸಂಗ್ರಹವಾದ ಮೊತ್ತವನ್ನು ಸೆ.9ರಂದು ಮಲ್ಪೆ ಕೊಳದ ಹನುಮಾನ್ ವಿಠೋಭ ಭಜನ ಮಂದಿರದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಸ್.ಪಿ. ಲಕ್ಷ್ಮಣ ನಿಂಬರಗಿ, ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಸಮಕ್ಷಮದಲ್ಲಿ ಬಡಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ರವಿ ಕಟಪಾಡಿ ಹೇಳಿದ್ದಾರೆ.
ಪ್ರತಿ ವರ್ಷ ಅಷ್ಟಮಿಯಂದು ವೈವಿಧ್ಯಮಯವಾದ ವೇಷವನ್ನು ಧರಿಸುವ ರವಿ, ಒಂದೊಂದು ಬಾರಿಯೂ ಒಂದೊಂದು ಯೋಜನೆಗಳನ್ನು ಇಟ್ಟುಕೊಂಡಿರುತ್ತಾರೆ. ಕಳೆದ ಬಾರಿ ಕೂಡ ಬಡ ಮಕ್ಕಳ ಪಾಲಿಗೆ ರವಿ ದೇವರಾಗಿದ್ದಾರೆ. ತನ್ನ ವೇಷದ ಮೂಲಕ ಜನರಿಗೆ ಮನರಂಜನೆ ನೀಡುವ ರವಿ ಕಟಪಾಡಿ, ಸಾಮಾಜಿಕವಾಗಿ ಜನರಿಗೆ ಸಹಾಯ ಮಾಡುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Leave A Reply