ಡಿಕೆಶಿ ಬಂದರೆ ಮಿಥುನ್ ಸೋಲುವ ಅಂತರ ಜಾಸ್ತಿಯಾಗಲಿದೆ!!
ಕುರಿಗಳನ್ನು ಕಾಯಲು ತೋಳವನ್ನು ನೇಮಿಸುವುದು ಎನ್ನುವ ಗಾದೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆ ಆಗುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಪಾಳಯಕ್ಕೆ ಈ ಮಾತು ಚೆನ್ನಾಗಿ ಒಪ್ಪುತ್ತದೆ. ಹಾಗಂತ ಕುರಿ ಯಾರು, ತೋಳ ಯಾರು ಎಂದು ಕೇಳಬೇಡಿ. ಎಪ್ರಿಲ್ ಒಂದರಂದು ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಉಸ್ತುವಾರಿಯಾಗಿರುವ ಡಿಕೆಶಿವಕುಮಾರ್ ಅವರು ಮಂಗಳೂರಿಗೆ ಬರಲಿದ್ದಾರೆ. ಇದನ್ನು ಹೇಳುವುದಕ್ಕೆ ಮೇಲಿನ ಗಾದೆಯನ್ನು ಬಳಸಬೇಕಾಯಿತು. ಅಷ್ಟಕ್ಕೂ ಡಿಕೆಶಿಯವರೇ ಯಾಕೆ, ಇದೇ ಜಿಲ್ಲೆಯ ಅಥವಾ ಅಕ್ಕಪಕ್ಕದ ಜಿಲ್ಲೆಯ ಯಾವ ಹಿರಿಯ ಕಾಂಗ್ರೆಸ್ಸಿಗರೂ ಸಿಗಲಿಲ್ಲವೇ ಎಂದು ನೀವು ಕೇಳಬಹುದು. ಇಲ್ಲ, ಸಿಗಲು ಛಾನ್ಸ್ ಇಲ್ಲ. ಯಾಕೆಂದರೆ ಇದು ಡಿಕೆಶಿ ಕೋಟಾದ ಸೀಟು. ಆದ್ದರಿಂದ ಅವರೇ ಗೆಲ್ಲಿಸಲಿ ಎಂದು ಇಲ್ಲಿನ ಕಾಂಗ್ರೆಸ್ಸಿಗರು ಅಂದುಕೊಂಡಿದ್ದಾರೆ. ಸಾಮಾನ್ಯವಾಗಿ ಆ ಜಿಲ್ಲೆಯ ಉಸ್ತುವಾರಿ ಸಚಿವರನ್ನೋ ಅಥವಾ ಮಾಜಿ ಉಸ್ತುವಾರಿ ಸಚಿವರನ್ನೋ ಆ ಕ್ಷೇತ್ರದ ತಮ್ಮ ಲೋಕಸಭಾ ಅಭ್ಯರ್ಥಿಯ ಗೆಲುವಿಗೆ ಉಸ್ತುವಾರಿಯನ್ನಾಗಿ ನೇಮಿಸುವುದು ವಾಡಿಕೆ. ಇಲ್ಲದಿದ್ದರೆ ಯಾವುದೋ ರಾಜಕೀಯ ನಿವೃತ್ತಿಯ ಅಂಚಿನಲ್ಲಿರುವ ಕಾಂಗ್ರೆಸ್ಸಿಗರನ್ನೋ ಅಲ್ಲಿ ಹೋಗಿ ಜಿಲ್ಲಾ ಕಚೇರಿಯ ಎಸಿ ಕೋಣೆಯಲ್ಲಿ ಕೂತು ಛೇರ್ ಬಿಸಿ ಮಾಡಿ ಬನ್ನಿ ಎಂದು ಕಳುಹಿಸುವುದು ಸಂಪ್ರದಾಯ. ಅದನ್ನೆಲ್ಲಾ ಬಿಟ್ಟು ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರದಂತಹ ಡೂ ಔರ್ ಡೈ ಸೀಟುಗಳ ಜವಾಬ್ದಾರಿಗಳನ್ನು ಹೊಂದಿರುವ ಡಿಕೆಶಿ ಯಕಶ್ಚಿತ್ ಒಂದು ಸೋಲುವ ಕ್ಷೇತ್ರಕ್ಕೆ ಬಂದು ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಆದರೆ ಇಲ್ಲಿನ ನಿರ್ಜೀವ ಕಾಂಗ್ರೆಸ್ ಪಕ್ಷಕ್ಕೆ ಒಂದಿಷ್ಟು “ವಿಟಾಮಿನ್” ಕೊಡಲು ಡಿಕೆಶಿ ಬರುವಿಕೆಯನ್ನು ಸಣ್ಣ ರೈ ಮಿಥುನ್ ಕಾಯುವಂತಾಗಿದೆ.
ಡಿಕೆಶಿ ಹಿನ್ನಲೆ ರೈಗೆ ಮೈನಸ್…
ಅಷ್ಟಕ್ಕೂ ಡಿಕೆಶಿ ಬಂದ ಕೂಡಲೇ ಮಿಥುನ್ ಅದೃಷ್ಟ ಬದಲಾಗಿ ಗೆದ್ದು ಬಿಡ್ತಾರಾ ಎಂದು ನೋಡಿದರೆ ಖಂಡಿತಾ ಇಲ್ಲ. ನಮ್ಮ ಕರಾವಳಿಯ ಜನ ಹೇಗೆ ಎಂದರೆ ಘಟ್ಟದ ಮೇಲಿನವರಾಗೇ ಅಲ್ಲ. ಇಲ್ಲಿ ಒಬ್ಬ ಅಭ್ಯರ್ಥಿಯ ಬಗ್ಗೆ ಹೊಗಳಿ ಮಾತನಾಡುವವನ ಹಿನ್ನಲೆ ಕೂಡ ಗಮನಿಸುತ್ತಾರೆ. ಡಿಕೆಶಿ ಹಿನ್ನಲೆ ಇಲ್ಲಿನ ಪ್ರಜ್ಞಾವಂತ ಮತದಾರನಿಗೆ ಗೊತ್ತಿದೆ. ಅವರ ಕೋಟಿ ಕೋಟಿ ಹಣದ ಕಂತೆಗಳನ್ನು ಇಲ್ಲಿನ ಜನ ಟಿವಿ ಮಾಧ್ಯಮಗಳಲ್ಲಿ ನೋಡಿದ್ದಾರೆ. ಅವರು ಗಣಿ ಮಾಫಿಯಾ, ತೋಳ್ಬಲ, ಜಾತಿ ಲೆಕ್ಕಾಚಾರವನ್ನು ಹಿಡಿದು ರಾಜಕೀಯ ಮಾಡುವುದು ಇಲ್ಲಿನವರಿಗೆ ಗೊತ್ತಿದೆ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಅವರು ಒದ್ದಾಡಿದ್ದು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಏಕೈಕ ಉದ್ದೇಶದಿಂದ ಎನ್ನುವುದು ಕೂಡ ಜನರಿಗೆ ಗೊತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮ ಭ್ರಷ್ಟಾಚಾರ ಬಯಲಾಗುತ್ತದೆ ಎಂದು ಹೆದರಿ 37 ಸೀಟಿನವರ ಮುಂದೆ ಮಂಡಿಯೂರಿ ಅವರನ್ನು ರಾಜ್ಯದ ಸಿಂಹಾಸನದ ಮೇಲೆ ಕೂರಿಸಿದ್ದು ಇದೇ ಡಿಕೆಶಿವಕುಮಾರ್. ಬಿಜೆಪಿಗೆ 104 ಸೀಟು ಬಂದರೂ ಅಧಿಕಾರ ಸಿಗಬಾರದು ಎಂದು ಷಡ್ಯಂತ್ರ ರೂಪಿಸಿ ಕುಮಾರಸ್ವಾಮಿ-ರೇವಣ್ಣ-ದೇವೇಗೌಡರ ಕೈಯಲ್ಲಿ ಅಧಿಕಾರದ ದಂಡ ನೀಡಿ ಇಡೀ ಕಾಂಗ್ರೆಸ್ಸನ್ನು ನಿರ್ವೀಯವನ್ನಾಗಿ ಮಾಡಿದ್ದ ಶ್ರೇಯಸ್ಸು ಡಿಕೆಶಿಯವರಿಗೆ ಸಲ್ಲುತ್ತದೆ. ಇವತ್ತು ಮಂಡ್ಯದಲ್ಲಿ ಸುಮಲತಾ ಗೆಲ್ಲಲು ಅಡ್ಡಗೋಡೆಯಂತೆ ನಿಂತಿರುವ ಡಿಕೆಶಿ ಅಲ್ಲಿ ಹೋರಾಟ ಮಾಡುತ್ತಿರುವುದು ಕುಮಾರಸ್ವಾಮಿಯವರ ಮಗನನ್ನು ಗೆಲ್ಲಿಸುವುದಕ್ಕಾಗಿ ವಿನ: ಆ ಕ್ಷೇತ್ರದ ಅಭಿವೃದ್ಧಿಗೆ ಅಲ್ಲ. ಹಾಸನದಲ್ಲಿ, ತುಮಕೂರಿನಲ್ಲಿ, ಶಿವಮೊಗ್ಗದಲ್ಲಿ ಅಲ್ಲಿನ ಜೆಡಿಎಸ್ ಅಭ್ಯರ್ಥಿಗಳು ನಂಬಿರುವುದು ಡಿಕೆಶಿಯನ್ನೇ. ಹಾಗಾದರೆ ಡಿಕೆಶಿವಕುಮಾರ್ ಕಾಂಗ್ರೆಸ್ಸಿನವರಾ, ಜೆಡಿಎಸ್ ನವರಾ ಎನ್ನುವ ಡೌಟು ಕೈ ಪಾಳಯದಲ್ಲಿದೆ.
ಪೂಜಾರಿ ಕಾಲದಲ್ಲಿಯೂ ಬಂದಿದ್ದರು…
ಡಿಕೆಶಿ ಹೆಚ್ಚೆಂದರೆ ಎರಡು ದಿನ ಇಲ್ಲಿ ಇರಬಹುದು. ಜನಾರ್ದನ ಪೂಜಾರಿಯವರು ನಿಂತಿದ್ದ ಸಮಯದಲ್ಲಿಯೂ ಡಿಕೆಶಿ ಸುಳ್ಯ, ಪುತ್ತೂರಿನಲ್ಲಿ ಬಂದು ಭಾಷಣ ಮಾಡಿ ಹೋಗಿದ್ದರು. ಒಂದಿಷ್ಟು ಒಕ್ಕಲಿಗ ಮತಗಳನ್ನು ಸೆಳೆಯುವುದಕ್ಕಾಗಿ ಅವರನ್ನು ಕಾಂಗ್ರೆಸ್ ಕರೆಸುತ್ತದೆ ಎನ್ನುವುದಕ್ಕಿಂತ ಅಭ್ಯರ್ಥಿಗಳು ಕರೆಸುತ್ತಾರೆ ಎನ್ನುವುದು ನಿಜ. ಆದರೆ ಅದರಿಂದ ಏನೂ ಪ್ರಯೋಜನ ಆಗಿಲ್ಲ. ಡಿಕೆಶಿ ಈ ಬಾರಿ ಬರುತ್ತಿರುವುದು ನೇರವಾಗಿ ತಮ್ಮ ಶಿಷ್ಯನ ಪ್ರಚಾರಕ್ಕಾಗಿ. ಅವರ ಭಾಷಣಕ್ಕಾಗಿ ಬಿಜೆಪಿಯವರು ಕಾಯುತ್ತಾ ಇದ್ದಾರೆ. ಯಾಕೆಂದರೆ ಡಿಕೆಶಿ ಎಸೆಯುವ ಇಟ್ಟಿಗೆಗಳು ಬಿಜೆಪಿ ಗೆಲುವಿಗೆ ಗೋಡೆಯಾಗಲಿವೆ. ಇಲ್ಲಿ ಶಿವಕುಮಾರ್ ಇದ್ದಷ್ಟು ದಿನ ಅದು ಮಿಥುನ್ ಸೋಲಿನ ಅಂತರವನ್ನು ಹೆಚ್ಚಿಸಲಿದೆ!
Leave A Reply