ಜನಸ್ಪಂದನಾ ಕಾರ್ಯಕ್ರಮ ಮತ್ತೆ ಶುರು ಮಾಡಿ ಶಾಸಕರೇ, ಸಚಿವರೇ!!
ಯೋಗೀಶ್ ಭಟ್ ಅವರು ಶಾಸಕರಾಗಿದ್ದಾಗ ಈ ಸಾರಿಗೆ ಪ್ರಾಧಿಕಾರ ಅಂದರೆ ಆರ್ ಟಿಒನ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಜನಸಂಪರ್ಕ ಸಭೆ ನಡೆಯುತ್ತಿತ್ತು. ಅದೇ ಪ್ರಕಾರ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕೂರಿಸಿ ಯೋಗೀಶ್ ಭಟ್ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿತ್ತು. ಅದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶುರುವಾಗಿದ್ದ ಸಂಪ್ರದಾಯ. ನಂತರ ಯೋಗೀಶ್ ಭಟ್ ಬಳಿಕ ಬಂದ ಶಾಸಕರು ಒಂದು ಸಲ ಮಾತ್ರ ಜನಸ್ಪಂದನ ತರಹದ್ದು ನಡೆಸಿದರು. ನಂತರ ಅಂತದ್ದು ನಡೆಯಲಿಲ್ಲ.
ಯೋಗೀಶ್ ಭಟ್ ಶಾಸಕರಾಗಿದ್ದ ಕಾಲದಲ್ಲಿ ನಡೆಯುತ್ತಿದ್ದ ಜನಸ್ಪಂದನದಲ್ಲಿ ಹೇಗಿತ್ತು ಎಂದರೆ ಜಿಲ್ಲಾಧಿಕಾರಿಗಳಿಂದ ಹಿಡಿದು ಪ್ರತಿಯೊಂದು ಇಲಾಖೆಗಳ ಮುಖ್ಯಾಧಿಕಾರಿ, ತಹಶೀಲ್ದಾರರು, ಸಹಾಯಕ ಕಮೀಷನರ್ ಗಳು ಎಲ್ಲಾ ವೇದಿಕೆಯ ಮೇಲೆ ಇರುತ್ತಿದ್ದರು. ಕೆಳಗೆ ನಾಗರಿಕರು ಇರುತ್ತಿದ್ದರು. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಮೈಕ್ ಕೈಯಲ್ಲಿ ಹಿಡಿದು ಹೇಳಿಬಿಡುವ ಅವಕಾಶ ಇತ್ತು. ಅದಕ್ಕೆ ನೇರವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉತ್ತರಿಸುತ್ತಿದ್ದರು. ಅನೇಕ ಸಮಸ್ಯೆಗಳು ಅಲ್ಲಿಯೇ ಪರಿಹಾರವಾಗುತ್ತಿತ್ತು. ಪತ್ರಕರ್ತರು ಕೂಡ ಅಲ್ಲಿ ಇರುತ್ತಿದ್ದ ಕಾರಣ ಅಧಿಕಾರಿಗಳು ಮೈಮರೆಯುವಂತಿರಲಿಲ್ಲ. ಹಾರಿಕೆಯ ಉತ್ತರ ಕೊಡುವಂತಿರಲಿಲ್ಲ. ಜಿಲ್ಲಾಧಿಕಾರಿಗಳು ಕೂಡ ಇರುವುದರಿಂದ ನಿರ್ಲಕ್ಷ್ಯ ಮಾಡುವಂತಿರಲಿಲ್ಲ. ಅಲ್ಲೇ ಪ್ರಶ್ನೆ, ಅಲ್ಲೆ ಉತ್ತರ ಸಿಗುತ್ತಿತ್ತು. ಎಷ್ಟೊ ಬಾರಿ ನಾಗರಿಕರಿಗೆ ಸೂಕ್ತ ಉತ್ತರ ಸಿಕ್ಕದೇ ಅಧಿಕಾರಿಗಳೊಂದಿಗೆ ವಾಗ್ವಾದ ಕೂಡ ನಡೆದಿದೆ. ಸರಕಾರಿ ಕಚೇರಿಗಳಲ್ಲಿ ಕೆಲಸ ಆಗದೇ ನಿರಾಶರಾಗುತ್ತಿದ್ದ ಜನರಿಗೆ ಅದೊಂದು ಆಶಾಭಾವನೆ ಅಂತಹ ಸಭೆಗಳಲ್ಲಿ ಕಾಣುತ್ತಿತ್ತು.
ಈಗ ಹೇಗಿದೆ..
ಈಗಲೂ ಪರಿಸ್ಥಿತಿ ಹಾಗೆ ಇದೆ. ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಉಸ್ತುವಾರಿ ಸಚಿವರುಗಳು ಬದಲಾಗಿದ್ದಾರೆ. ಶಾಸಕರು ಬದಲಾಗಿದ್ದಾರೆ. ಜನರು ಮತ್ತು ಸರಕಾರಿ ಕಚೇರಿಗಳಲ್ಲಿನ ಪರಿಸ್ಥಿತಿ ಮಾತ್ರ ಈಗಲೂ ಹಾಗೆ ಇದೆ. ಮಹಾನಗರ ಪಾಲಿಕೆಯಲ್ಲಂತೂ ಈಗ ಯಾವುದೂ ಸರಿಯಾಗಿ ನಡೆಯುವುದಿಲ್ಲ. ಉದ್ದಿಮೆ ಪರವಾನಿಗೆ ಸಿಗುವುದಿಲ್ಲ. ಇತ್ತ ಪ್ರಾಪರ್ಟಿ ಕಾರ್ಡ್ ಸಿಗುತ್ತಿಲ್ಲ. ಮಿನಿ ವಿಧಾನಸೌಧದ, ಆರ್ ಟಿಒದಲ್ಲಿ, ಸಮಸ್ಯೆಗಳು ಹಾಗೆ ಇದೆ. ಕೆಲವು ದಿನಗಳ ಹಿಂದಿನ ತನಕ ನೀರಿನ ಸಮಸ್ಯೆ ಇತ್ತು. ಯಾವುದೇ ಇದ್ದರೂ ಅಧಿಕಾರಿಗಳು ಮತ್ತು ಹೆಚ್ಚಿನ ಸಿಬ್ಬಂದಿಗಳು ಬೆಳಿಗ್ಗೆ 10.45ರ ಮೊದಲು ಬರುವುದಿಲ್ಲ. ಮೋದಿ 9.30 ಕ್ಕೆ ಬಂದರೂ ನಮ್ಮವರು ಕಚೇರಿಗೆ ತಡವಾಗಿ ಬರುವುದನ್ನು ಯಾರೂ ತಡೆಯಲು ಆಗುವುದಿಲ್ಲ. ಮಧ್ಯಾಹ್ನ ಊಟಕ್ಕೆ ಹೋದವರು 3.45 ರ ತನಕ ಬರುವುದಿಲ್ಲ. ಹೀಗೆ ಜನರಿಗೆ ಅವಕಾಶ ಸಿಕ್ಕಿದರೆ ತುಂಬಾ ಹೇಳಲು ಇರುತ್ತದೆ. ಅವಕಾಶ ಸಿಗುತ್ತಿಲ್ಲ.
ಕಾಮತ್ ಮತ್ತು ಭರತ್ ಮಾಡುತ್ತಿದ್ದಾರೆ…
ಹಾಗಂತ ನಮ್ಮ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹಾಗೂ ಉತ್ತರ ಶಾಸಕ ಡಾ|ಭರತ್ ಶೆಟ್ಟಿಯವರು ಜನರ ಸಮಸ್ಯೆಗಳನ್ನು ಕೇಳುತ್ತಿಲ್ಲ ಎಂದಲ್ಲ. ವಾರಕ್ಕೆ ಕನಿಷ್ಟ ಮೂರು ದಿನವಾದರೂ ಈ ಶಾಸಕರುಗಳು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಲೇ ಇರುತ್ತಾರೆ. ಅನೇಕ ಬಾರಿ ಸಣ್ಣಪುಟ್ಟ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಫೋನ್ ಮಾಡಿ ಪರಿಹರಿಸುತ್ತಲೂ ಇರುತ್ತಾರೆ. ಆದರೆ ಅಧಿಕಾರಿಗಳ ದಪ್ಪ ಚರ್ಮಕ್ಕೆ ಶಾಸಕರು ಕೊಡುವ ಇಂಜೆಕ್ಷನ್ ನಾಟುವುದಿಲ್ಲ. ಯಾಕೆಂದರೆ ಫೋನಿನಲ್ಲಿ ಎಷ್ಟೇ ‘ಚೆಂದ”ವಾಗಿ ಶಾಸಕರು ಗದರಿಸಿದರೂ ಮರ್ಯಾದೆ ಹೋಗುವ ಹೆದರಿಕೆ ಅಧಿಕಾರಿಗಳಿಗೆ ಇರುವುದಿಲ್ಲವಲ್ಲ. ಅದಕ್ಕೆ ಒಂದು ಕಿವಿಯಿಂದ ಕೇಳುತ್ತಾರೆ, ಮತ್ತೊಂದು ಕಿವಿಯಿಂದ ಬಿಡುತ್ತಾರೆ. ಅದರ ಬದಲು ಜನಸ್ಪಂದನ ಸಭೆ ಆಗಾಗ ಮಾಡಿದರೆ ಏನಾಗುತ್ತದೆ ಎಂದರೆ ಒಂದಿಷ್ಟು ಮಾನ, ಮರ್ಯಾದೆಯ ಕಾಳಜಿ ಇರುವ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಬೇಗ ಪರಿಹರಿಸಲು ಮುಂದಾಗಬಹುದು. ಶಾಸಕರು ಜನರ ಮತ್ತು ಅಧಿಕಾರಿಗಳ ನಡುವಿನ ಕೊಂಡಿ. ಆ ಕೊಂಡಿ ವೇದಿಕೆಯ ಮೇಲೆ ಇದ್ದರೆ ಸಾಕು. ಅಗತ್ಯವಿದ್ದಾಗ ಒಂದಷ್ಟು ಖಡಕ್ ಸೂಚನೆಗಳು ಶಾಸಕರ, ಸಚಿವರಿಂದ ಬಂದರೆ ಸಮಸ್ಯೆಗಳು ಬೆಟ್ಟಾದಾಕಾರವಾಗಿ ಉಳಿಯುವುದಿಲ್ಲ. ಆದ್ದರಿಂದ ಈಗಿನ ಶಾಸಕರುಗಳು ತಿಂಗಳಿಗೆ ಒಂದಾದರೂ ಜನಸ್ಪಂದನ ನಡೆಸಬೇಕು. ಎರಡು ಮಾಡಿದರೆ ತುಂಬಾ ಒಳ್ಳೆಯದು!
Leave A Reply