ನೆನಪಿಡಿ ಪ್ರಾಪರ್ಟಿ ಕಾರ್ಡ್ ರದ್ದಾಗಿಲ್ಲ, ಮುಂದೂಡಲಾಗಿದೆ ಅಷ್ಟೇ!!
ಆಸ್ತಿ ನೊಂದಾವಣೆ ಮಾಡುವಾಗ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಎನ್ನುವ ನಿರ್ಬಂಧ ಕನಿಷ್ಟ ಆರು ತಿಂಗಳಿಗೆ ಮುಂದೂಡಲಾಗಿದೆ. ಈ ಮೂಲಕ ಅದರ ದುರ್ಲಾಭ ಪಡೆಯುತ್ತಿದ್ದವರಿಗೆ ತಲೆ ಮೇಲೆ ಆಕಾಶ ಕಳಚಿ ಬಿದ್ದಂತೆ ಆಗಿದೆ. ಇಷ್ಟು ದಿನ ಏನು ನಡೆಯುತ್ತಿತ್ತು ಎಂದರೆ ನೀವು ಹಣ ಬಿಚ್ಚಿದರೆ ನಿಮಗೆ ಯಾವಾಗ ಬೇಕೋ ಆವಾಗ ತಕ್ಷಣ ಪ್ರಾಪರ್ಟಿ ಕೊಡುವ ವ್ಯವಸ್ಥೆ ಆಗುತ್ತಿತ್ತು. ಉದಾಹರಣೆಗೆ ನೀವು ಹದಿನೈದು ಸಾವಿರ ಕೊಟ್ಟರೆ ನಿಮಗೆ ಎರಡೇ ದಿನಗಳಲ್ಲಿ ಯಾವುದೇ ಕಿರಿಕಿರಿ ಇಲ್ಲದೆ ಪ್ರಾಪರ್ಟಿ ಕಾರ್ಡ್ ನಿಮ್ಮ ಕೈಯಲ್ಲಿ ಇರುತ್ತಿತ್ತು. ಅದೇ ನೀವು ಐದಾರು ಸಾವಿರ ಕೊಡುವವರಾದರೆ ಒಂದು ವಾರದೊಳಗೆ ಪ್ರಾಪರ್ಟಿ ಕಾರ್ಡ್ ರೆಡಿ. ಅದೇ ಏನು ಕೊಡದೇ ನ್ಯಾಯ ಮಾರ್ಗದಿಂದ ನಾನು ಹೋದಾಗ ನನಗೆ ಒಂದು ತಿಂಗಳು ಮತ್ತು ಒಂದು ವಾರ ಹಿಡಿದಿದೆ.
ಇನ್ನು ಅನೇಕ ಜನಸಾಮಾನ್ಯರಿಗೆ ಪ್ರಾಪರ್ಟಿ ಕಾರ್ಡ್ ಮಾಡಿಸಲು ಅದೆಷ್ಟು ಸಮಯ ಹಿಡಿದಿದೆ ಎನ್ನುವುದು ಅವರಿಗೆ ಮಾತ್ರ ಗೊತ್ತು. ಅಷ್ಟಕ್ಕೂ ಪ್ರಾಪರ್ಟಿ ಕಾರ್ಡ್ ಮಾಡಿಸುವ ಪ್ರಕ್ರಿಯೆ ಹೇಗಿರುತ್ತೆ ಎನ್ನುವುದನ್ನು ನಿಮಗೆ ವಿವರಿಸುತ್ತೇನೆ. ನೀವು ಪ್ರಾಪರ್ಟಿ ಕಾರ್ಡ್ ಮಾಡಿಸಲು ಅಗತ್ಯವಿರುವ ದಾಖಲೆಗಳನ್ನು ಪ್ರಾಪರ್ಟಿ ಕಾರ್ಡ್ ಕಚೇರಿಯಲ್ಲಿ ಕೊಡಬೇಕು. ಅಲ್ಲಿ ಅದನ್ನು ಪಡೆದು ಸ್ವೀಕೃತಿ ಪತ್ರ ನೀಡುತ್ತಾರೆ. ಅದರ ನಂತರ ಸರ್ವೆಯರ್ ನಿಮ್ಮ ಜಾಗಕ್ಕೆ ಬಂದು ಸರ್ವೆ ಮಾಡಿ ಸರ್ವೆ ನಂಬರ್, ಯಾರೆಲ್ಲ ಹೆಸರಿನಲ್ಲಿ ಮಾಲೀಕತ್ವ ಇದೆ ಎಂದು ಮಾಹಿತಿಯನ್ನು ಬರೆದು ಅದರ ಡ್ರಾಫ್ಟ್ ಬರೆದು ನಿಮಗೆ ಕೊಡುತ್ತಾರೆ. ಅದರಲ್ಲಿ ನೀವು ಯಾವುದೇ ಸಂಖ್ಯೆ, ಹೆಸರಿನ ಸ್ಪೆಲ್ಲಿಂಗ್ ಎಲ್ಲವೂ ಸರಿ ಇದೆಯಾ ಎಂದು ಚೆಕ್ ಮಾಡಿ ಒಕೆ ಮಾಡಿದರೆ ಪ್ರಾಪರ್ಟಿ ಕಾರ್ಡ್ ತಯಾರಾಗುತ್ತದೆ. ಇದು ನೋಡುವಾಗ ನಿಮಗೆ ಸುಲಭ ಎನಿಸಬಹುದು. ಆದರೆ ಮಾಡಿಸಿಕೊಡುವಷ್ಟರಲ್ಲಿ ನಿಮ್ಮನ್ನು ಹೈರಾಣು ಮಾಡಿಬಿಡುತ್ತಾರೆ. ಅದಕ್ಕಾಗಿ ಅನೇಕರು ಸರ್ವೆಯರ್ ಗಳನ್ನು, ತಹಶೀಲ್ದಾರರನ್ನು ಸೆಟ್ ಮಾಡಿ ಸುಲಭದಲ್ಲಿ ಪ್ರಾಪರ್ಟಿ ಕಾರ್ಡ್ ಮಾಡಿಸಿಬಿಡುತ್ತಾರೆ. ಆದರೆ ಮಧ್ಯಮ ವರ್ಗದವರಿಗೆ ಲಂಚ ಕೊಟ್ಟು ಮಾಡಿಸುವುದು ಅಥವಾ ಬ್ರೋಕರ್ ಗಳನ್ನು ಹಿಡಿದು ಮಾಡುವುದೆಂದರೆ ಪುನ: ಖರ್ಚೆ ಸರಿ. ಈಗ ಅದಕ್ಕೆಲ್ಲಾ ಅಂಕುಶ ಬಿದ್ದಿದೆ. ಮಗಳ ಮದುವೆ, ಮಗನ ಉನ್ನತ ಶಿಕ್ಷಣಕ್ಕೆ, ತಂದೆ, ತಾಯಿಯರ ಆರೋಗ್ಯದ ಚಿಕಿತ್ಸೆಗೆ ಅಗತ್ಯವಾಗಿ ಜಾಗ ಮಾರಬೇಕಾಗಿದ್ದವರು ಈ ವಿನಾಯಿತಿಯಿಂದ ಖಂಡಿತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸರಿಯಾಗಿ ನೋಡಿದರೆ ಈ ವಿನಾಯಿತಿ ಮೊದಲು ಮಂಗಳೂರಿಗೆ ಸಿಗಬೇಕಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಕರ್ಮಭೂಮಿ ಶಿವಮೊಗ್ಗಕ್ಕೆ ಆ ಅವಕಾಶ ಮಾಡಿಕೊಟ್ಟಿದ್ದರು. ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಶಾಸಕರಾಗಿ ಆಯ್ಕೆಯಾದ ಬಳಿಕದಿಂದ ಆಸ್ತಿ ನೊಂದಾವಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವನ್ನು ವಿನಾಯಿತಿಗೊಳಿಸಿ ಎಲ್ಲರದ್ದು ಪ್ರಾಪರ್ಟಿ ಕಾರ್ಡ್ ಆಗುವ ತನಕ ರಾಜ್ಯ ಸರಕಾರ ಮುಂದೂಡುವಂತೆ ಮಾಡಲು ಪ್ರಯತ್ನ ಮಾಡುತ್ತಲೇ ಇದ್ದರು. ಅಂತಿಮವಾಗಿ ದಕ್ಷಿಣ ಮತ್ತು ಉತ್ತರ ಶಾಸಕ ಇಬ್ಬರ ಪ್ರಯತ್ನದ ಫಲವಾಗಿ ಮಂಗಳೂರಿಗೆ ಮುಂದಿನ ಆದೇಶದ ತನಕದ ವಿನಾಯಿತಿ ಸಿಕ್ಕಿದೆ. ಹಾಗಂತ ಪ್ರಾಪರ್ಟಿ ಕಾರ್ಡ್ ರದ್ದಾಗಿಲ್ಲ. ಇನ್ನು ಮುಂದೆ ನೂಕುನುಗ್ಗಲು ಮಾಡಿ ಪ್ರಾಪರ್ಟಿ ಕಾರ್ಡ್ ಗೆ ಹೋರಾಡುವುದು ತಪ್ಪುತ್ತದೆ. ಜನ ಸಾವಾಕಾಶವಾಗಿ ಮುಂದಿನ ಆರು ತಿಂಗಳ ಒಳಗೆ ತಮ್ಮ ಅನುಕೂಲದ ಸಮಯ ನೋಡಿ ಪ್ರಾಪರ್ಟಿ ಕಾರ್ಡ್ ಮಾಡಿಸಲು ಹೋಗುವುದು ಒಳ್ಳೆಯದು. ಯಾಕೆಂದರೆ ನನ್ನ ಪ್ರಕಾರ ಇದು ಕೊನೆಯ ವಿನಾಯಿತಿ. ನಮ್ಮ ಜನ ಕೂಡ ಕೊನೆಯ ದಿನದ ತನಕ ಕಾಯುವುದು ಬಿಟ್ಟು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡುವುದು ಬೆಸ್ಟ್ !
Leave A Reply