ಫುಟ್ ಪಾತ್, ಚರಂಡಿ ಹೆಸರಲ್ಲಿ ಕಳೆದ ಬಾರಿ ಗೆದ್ದಿದ್ದ ಕಾಂಗ್ರೆಸ್ ನಿರ್ಮಿಸಿದ ಚರಂಡಿ, ಫುಟ್ ಪಾತ್ ಗಳೆಷ್ಟು??
ಯಡಿಯೂರಪ್ಪ ಈ ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವರ್ಷ ಮಂಗಳೂರು ಮಹಾನಗರ ಪಾಲಿಕೆಗೆ ನೂರು ಕೋಟಿ ವಿಶೇಷ ಅನುದಾನವನ್ನು ಎರಡು ವರ್ಷ ಸತತವಾಗಿ ನೀಡಿದ್ದರು. ಆ ಹಣದಿಂದಲೇ ಆಗ ಪಾಲಿಕೆಯಲ್ಲಿದ್ದ ಭಾರತೀಯ ಜನತಾ ಪಾರ್ಟಿಯ ಆಡಳಿತ ಮಂಗಳೂರಿನ ಪ್ರಮುಖ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಿತ್ತು. ಆದರೆ ಚರಂಡಿಗಳ ನಿರ್ಮಾಣ ಆಗುವ ಮೊದಲೇ ಅವಧಿ ಮುಗಿದು ಚುನಾವಣೆ ಬಂದಿತ್ತು. ಆಗ ಕಾಂಗ್ರೆಸ್ ಎತ್ತಿಕೊಂಡ ಚುನಾವಣೆಯ ವಿಷಯ ಏನೆಂದರೆ ಫುಟ್ ಪಾತ್, ಚರಂಡಿ ಮಾಡದ ಬಿಜೆಪಿಗೆ ಮತ ಕೊಡಬೇಡಿ. ಅದನ್ನೇ ಇಟ್ಟುಕೊಂಡು ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಧಿಕಾರದಲ್ಲಿದ್ದ ಐದು ವರ್ಷಗಳಲ್ಲಿ ಏನು ಮಾಡಿತ್ತು ಗೊತ್ತಾ?
ಬರೋಬ್ಬರಿ ಏಳು ಕೋಟಿ ಖರ್ಚು ಮಾಡಿ ಚೆನ್ನಾಗಿದ್ದ ಕಾಂಕ್ರೀಟ್ ರಸ್ತೆಯನ್ನು ಭರ್ತಡೇ ಕೇಕ್ ತರಹ ಕಟ್ ಮಾಡಿ ಅದರ ಒಳಗೆ ಆಪರೇಶನ್ ಮಾಡಿ ಹಣವನ್ನು ಪೋಲು ಮಾಡಿಬಿಟ್ಟರು. ಕಾಂಗ್ರೆಸ್ ಆಡಳಿತ ಮಾಡಿದ ಐದು ವರ್ಷಗಳಲ್ಲಿ ಒಂದೇ ಒಂದು ಹೊಸ ಫುಟ್ ಪಾತ್ ಮಾಡಿಲ್ಲ, ಅಷ್ಟೇ ಅಲ್ಲ ಬಿಜೆಪಿಯವರು ಫುಟ್ ಪಾತ್ ಮಾಡಿಲ್ಲ ನೋಡಿ ಎಂದು ಹೇಳಿ ಗೆದ್ದ ರಸ್ತೆಗಳನ್ನು ಕೂಡ ಇವರು ಫುಟ್ ಪಾತ್ ಮಾಡಿಲ್ಲ. ಅದಕ್ಕೆ ಮುಖ್ಯ ಉದಾಹರಣೆ ಕೆಎಎಸ್ ರಾವ್ ರೋಡ್. ಆ ರಸ್ತೆಗೆ ಬಿಜೆಪಿ ಪಾಲಿಕೆಯಲ್ಲಿ ಇದ್ದಾಗ ಕಾಂಕ್ರೀಟ್ ಮಾಡಲಾಗಿತ್ತು. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇಲ್ಲಿಯ ತನಕ ಅದಕ್ಕೆ ಫುಟ್ ಪಾತ್, ಚರಂಡಿ ಆಗಿಲ್ಲ. ಇನ್ನೊಂದು ಹಂಪನಕಟ್ಟೆ ಸಿಗ್ನಲ್ ನಿಂದ ಪಳ್ನೀರ್ ಕಡೆ ಹೋಗುವ ರಸ್ತೆಯಲ್ಲಿಯೂ ಕಾಂಕ್ರೀಟ್ ಬಿಜೆಪಿ ಇದ್ದಾಗ ಆಗಿದೆ. ಆದರೆ ಇಲ್ಲಿಯ ತನಕ ಕಾಂಗ್ರೆಸ್ ಆಡಳಿತದಲ್ಲಿ ಫುಟ್ ಪಾತ್ ಆಗಲಿ ಚರಂಡಿಯಾಗಲಿ ಏನೂ ಮಾಡಿಲ್ಲ. ಕೇಳಿದ್ರೆ ಎಡಿಬಿ ಸಾಲದಿಂದ ಮಂಗಳೂರಿನ 800 ಕಿಮೀ ಉದ್ದಕ್ಕೆ ನೀರಿನ ಪೈಪ್ ಲೈನ್ ಹಾಕಿದ್ದೇವೆ ಎಂದು ಹೇಳುತ್ತಾರೆ. ಮಂಗಳೂರನ್ನು ಚೆನ್ನಾಗಿ ಬಲ್ಲ, ಉದ್ದಗಲವನ್ನು ಅರಿತಿರುವ ಯಾರಾದರೂ ಇಂಜಿನಿಯರ್ ಅವರನ್ನು ಕೇಳಿದರೆ “ಇಡೀ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಇರುವುದು ಒಟ್ಟು 1100 ಕಿಮೀ. ಹಾಗಿರುವಾಗ ಇವರು 800 ಕಿ.ಮೀ ಹಾಕಿ ಆಗಿದೆ ಎಂದಾದರೆ ಯಾಕೆ ಇಲ್ಲಿಯ ತನಕ ಒಂದೇ ಒಂದು ರಸ್ತೆಗೂ ಸರಿಯಾಗಿ 24*7 ನೀರು ಬರಲ್ಲ” ಎಂದೇ ಕೇಳುತ್ತಾರೆ. 2002 ರ ಸಮಯದಲ್ಲಿ ಎಡಿಬಿ-1 ಸಾಲ ಬಂದಿದೆ. ಇಷ್ಟಾಗಿಯೂ ಇವರಿಗೆ ಸರಿಯಾಗಿ ಒಂದೇ ಒಂದು ವಾರ್ಡಿಗೂ ಇಡೀ ವಾರ ಒಂದು ಗಂಟೆಯೂ ತಪ್ಪದೇ ನೀರು ಕೊಡಲು ಆಗುತ್ತಿಲ್ಲವಲ್ಲ ಎನ್ನುವುದೇ ಆಶ್ಚರ್ಯ ಮತ್ತು ನಮ್ಮನ್ನು ಪಾಲಿಕೆಯಲ್ಲಿ ಆಳಿದವರ ಬಗ್ಗೆ ಇರುವ ಅಸಹ್ಯ.
ನಾನು ಹೇಳುವುದೇನೆಂದರೆ ಇನ್ನು ಮುಂದೆ ಕಾಂಕ್ರೀಟ್ ರಸ್ತೆ ಮಾಡುವುದನ್ನು ಒಂದಿಷ್ಟು ವರ್ಷ ನಿಲ್ಲಿಸಬೇಕು. ಅದಕ್ಕಿಂತ ಮೊದಲು ಯಾವ ರಸ್ತೆಗೆ ಕಾಂಕ್ರೀಟ್ ಹಾಕಲು ರೂಪುರೇಶೆ ಹಾಕಲಾಗಿದೆಯೋ ಆ ರಸ್ತೆಯ ಎರಡು ಅಂಚಿನಲ್ಲಿ ಹೊಸ ಪೈಪ್ ಲೈನ್ ಅಳವಡಿಸಬೇಕು. ಎರಡೂ ಅಂಚಿನಲ್ಲಿ ಹೊಸ ಒಳಚರಂಡಿ ಲೈನ್ ಎಳೆಯಬೇಕು. ಇವೆರಡು ಆದ ಬಳಿಕವೇ ಕಾಂಕ್ರೀಟ್ ಹಾಕುವ ಕೆಲಸ ಶುರು ಮಾಡಬೇಕು. ಅದರೊಂದಿಗೆ ಯಾವ ಗುತ್ತಿಗೆದಾರ ಕಾಂಕ್ರೀಟ್ ಗುತ್ತಿಗೆ ತೆಗೆದುಕೊಳ್ಳುತ್ತಾರೋ ಅವರೇ ಚರಂಡಿ ಮತ್ತು ಫುಟ್ ಪಾತ್ ನಿರ್ಮಿಸುವ ಒಪ್ಪಂದ ಮಾಡಬೇಕು. ಯಾಕೆಂದರೆ ರಸ್ತೆಗೆ ಕಾಂಕ್ರೀಟಿಕರಣ ಮಾಡುವುದು ಚರಂಡಿ ಮಾಡುವುದಕ್ಕಿಂತ ತುಂಬಾ ಸುಲಭ. ರಸ್ತೆಗೆ ಕಾಂಕ್ರೀಟಿಕರಣ ಮಾಡುವ ಗುತ್ತಿಗೆ ಪಡೆದುಕೊಳ್ಳುವ ಗುತ್ತಿಗೆದಾರರು ಚರಂಡಿ ಮಾಡಲು ಹಿಂದೇಟು ಹಾಕುತ್ತಾರೆ. ಯಾಕೆಂದರೆ ರಸ್ತೆಗೆ ಕಾಂಕ್ರೀಟ್ ಹಾಕಿದರೆ ಲಾಭ ಜಾಸ್ತಿ. ಶ್ರಮ ಕಡಿಮೆ. ಚರಂಡಿಯಲ್ಲಿ ಶ್ರಮ ಜಾಸ್ತಿ, ಲಾಭ ಕಡಿಮೆ. ಒಟ್ಟಿನಲ್ಲಿ ಚರಂಡಿ, ಫುಟ್ ಪಾತ್ ವಿಷಯ ಹಿಡಿದು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಅಧಿಕಾರದಲ್ಲಿದ್ದ ಐದು ವರ್ಷಗಳಲ್ಲಿ ಮಾಡಿದ್ದು ದೊಡ್ಡ ಶೂನ್ಯ!
Leave A Reply