ಮೊತ್ತಮೊದಲನೆಯದಾಗಿ ಕುಮಾರಸ್ವಾಮಿಯವರು ತವರು ಮನೆಗೆ ಬಂದ ಹಾಗೆ ಮಂಗಳೂರಿಗೆ ಬರುವುದನ್ನು ಬಿಡಬೇಕು. ಅವರು ಕಾಲು ಮೇಲೆ ತಲೆ ಕೆಳಗೆ ಮಾಡಿ ನಿಂತರೂ ಅವರಿಗೆ ಇಲ್ಲಿ ಡೆಪಾಸಿಟ್ ಕೂಡ ಸಿಗುವುದಿಲ್ಲ. ಇನ್ನು ಯಾವುದಾದರೂ ಕಾಂಗ್ರೆಸ್ ನಾಯಕನನ್ನು ಗೆಲ್ಲಿಸಲು ಪರೋಕ್ಷವಾಗಿ ಅಸಂಬದ್ಧ ಹೇಳಿಕೆ ಕೊಟ್ಟು ಹೋದರೆ ಅವರು ಯಾರನ್ನು ಗೆಲ್ಲಿಸಲು ಬರುತ್ತಿದ್ದಾರೋ ಆ ವ್ಯಕ್ತಿಗೂ ಮುಂದಿನ ಬಾರಿ ಡೆಪಾಸಿಟ್ ಉಳಿಯಲ್ಲ.
ಮಂಗಳೂರುಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದದ್ದು ಪೊಲೀಸರ ಅಣಕು ಕಾರ್ಯಾಚರಣೆ ಎನ್ನುವ ಹೇಳಿಕೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ಅದು ಕೂಡ ಮಂಗಳೂರಿನಲ್ಲಿಯೇ ನಿಂತು. ಅದರೊಂದಿಗೆ ಮಂಗಳೂರು ಪೊಲೀಸ್ ಕಮೀಷನರ್ ಹರ್ಷಾ ಅವರನ್ನು ಪರೋಕ್ಷವಾಗಿ ಹಂಗಿಸಿದ್ದಾರೆ.
ಇದೇ ಕುಮಾರಸ್ವಾಮಿ ಘಟ್ಟದ ಮೇಲೆ ಹೋಗುತ್ತಿದ್ದಂತೆ ಬಾಂಬ್ ಇಟ್ಟಿದ್ದು ಬಿಜೆಪಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಬಾಂಬ್ ಇಟ್ಟು ಬಿಜೆಪಿಯವರು ರಾಜ್ಯದಲ್ಲಿ ಹೆದರಿಕೆಯ ವಾತಾವರಣ ಉಂಟು ಮಾಡುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ. ಕುಮಾರಸ್ವಾಮಿಯವರನ್ನು ಕರೆದು ಬುದ್ಧಿ ಹೇಳಲು ದೇವೆಗೌಡರು ತಡ ಮಾಡಿದಷ್ಟು ಅವರ ಪಾರ್ಟಿಗೆ ಅದು ಡ್ಯಾಮೇಜ್ ಉಂಟು ಮಾಡಲಿದೆ. ತಂದೆ ಮತ್ತು ತಮ್ಮ ಮಗ ಸೋತು ಆರು ತಿಂಗಳು ಆಗಿದ್ದರೂ ಕುಮಾರಸ್ವಾಮಿಗೆ ಆ ದು:ಖ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅತ್ತ ಪ್ರಜ್ವಲ್ ತಾನು ರಾಜೀನಾಮೆ ಕೊಟ್ಟು ಅಜ್ಜನನ್ನು ಹಾಸನದಿಂದ ಸಂಸತ್ತಿಗೆ ಕಳುಹಿಸುತ್ತೇನೆ ಎಂದು ಡ್ರಾಮ ಮಾಡಿದ ಕೂಡಲೇ “ಅಂತ ಕೆಲಸಗಿಲಸ ಮಾಡೋಕೆ ಹೋಗಬೇಡಾ, ನೀನು ಗೆದ್ದದ್ದೇ ದೊಡ್ಡ ಪುಣ್ಯ” ಎಂದು ಅವರ ಮನೆಯಲ್ಲಿಯೇ ಪ್ರಜ್ವಲ್ ಗೆ ಮಂಗಳಾರತಿ ಆಗಿದೆ. ಸೋತಿರುವ ಮಗನನ್ನು ಎಂಎಲ್ ಸಿ ಮಾಡಿ ವಿಧಾನಪರಿಷತ್ ಗೆ ಕಳುಹಿಸೋಣ ಎಂದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆ ಇಲ್ಲ ಎಂದು ಯಾರೋ ಅಪರಾತ್ರಿಯಲ್ಲಿ ಗುಂಡು ಹಾಕುವಾಗ ಹೇಳಿರುವುದರಿಂದ ಆ ಐಡಿಯಾ ಬಿಟ್ಟಂತೆ ಕಾಣುತ್ತದೆ. ಆದ್ದರಿಂದ ಸದ್ಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟವನಿಗಿಂತ ಇಂತವರೇ ಡೇಂಜರ್ ತರಹ ಕಾಣುತ್ತಾರೆ. ಇನ್ನು ಬಾಂಬ್ ಇಡಲು ಬಂದ ಮನುಷ್ಯ ಮಣಿಪಾಲದವನು ಎಂದು ಟಿವಿ ವಾಹಿನಿಯೊಂದು ಹೇಳುತ್ತಿತ್ತು. ಅವನ ಹೆಸರು ವರುಣ್ ರಾವ್ ಎಂದು ಅದೇ ಟಿವಿಯವರಿಗೆ ಸಿಕ್ಕಿದ ಎಕ್ಸಕ್ಲೂಸಿವ್ ಮಾಹಿತಿ. ಇನ್ನು ಆ ವ್ಯಕ್ತಿ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಹುದ್ದೆಗೆ ಇಂಟರ್ ವ್ಯೂ ಕೊಟ್ಟಿದ್ದ. ದಾಖಲೆಗಳು ಸರಿ ಇಲ್ಲದೇ ಇದ್ದ ಕಾರಣ ಕೆಲಸ ಕೊಟ್ಟಿರಲಿಲ್ಲ.
ಆ ಸೆಕ್ಯೂರಿಟಿಯವರಿಗೆ ಬುದ್ಧಿ ಕಲಿಸಲು ಇಂತಹ ಟ್ರಿಕ್ ಮಾಡಿದ್ದಾನೆ ಎನ್ನುತ್ತದೆ ಇನ್ನೊಂದು ಟಿವಿ. ಇನ್ನು ಹುಸಿ ಬಾಂಬ್ ಇಡುವುದೇ ಅವನ ಕಾಯಕ. ಹಿಂದೆ ಎರಡು ಸಲ ಹುಸಿ ಬಾಂಬ್ ಕರೆ ಮಾಡಿ ಒಟ್ಟು ಆರು ತಿಂಗಳು ಜೈಲಿನಲ್ಲಿ ಊಟ ಮಾಡಿ ಬಂದಿದ್ದಾನೆ ಎನ್ನುವುದು ಮತ್ತೊಂದು ವಾಹಿನಿಯ ಕಲ್ಪನೆ. ಕಳೆದ ಅಕ್ಟೋಬರ್ ನಲ್ಲಿ ಜೈಲಿನಿಂದ ಹೊರಗೆ ಬಂದ ಇವನಿಗೆ ಅದೇ ಕೆಲಸ ಎಂದು ಹೇಳಲಾಗುತ್ತದೆ. ಇನ್ನು ಯಾವುದೋ ಮಾಧ್ಯಮ ಆತ ಬಜ್ಪೆಯಲ್ಲಿ ಕದ್ರಿ ದೇವಸ್ಥಾನದ ವಿಳಾಸ ಕೇಳುತ್ತಿದ್ದ. ಅಲ್ಲಿ ಜಾತ್ರೆ ನಡೆಯುತ್ತಿದೆ. ಅವನ ಬಳಿ ಇನ್ನೊಂದು ಬ್ಯಾಗ್ ಇದೆಯಲ್ಲ ಎಂದು ಜನರಲ್ಲಿ ಆತಂಕವನ್ನು ಉಂಟು ಮಾಡುತ್ತಿದೆ. ಒಟ್ಟಿನಲ್ಲಿ ಮಾಧ್ಯಮಗಳ ಕೈಯಲ್ಲಿ ಸಿಕ್ಕಿ ಬಿದ್ದ ಬಾಂಬ್ ಶೂರ ಯಾವ ಮನೆಯಲ್ಲಿ ಕುಳಿತು ಗುಂಡು ಹಾಕುತ್ತಾ, ಚಿಪ್ಸ್ ತಿನ್ನುತ್ತಾ ಟಿವಿ ನೋಡುತ್ತಾ ನಗುತ್ತಿದ್ದಾನೋ ಯಾರಿಗೆ ಗೊತ್ತು.
ಆದರೆ ಈ ವಿಷಯವನ್ನು ನಾವು ಲೈಟ್ ಆಗಿ ತೆಗೆದುಕೊಳ್ಳಲೇಬಾರದು. ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದು ಕಚ್ಚಾ ಬಾಂಬ್. ಆಧುನಿಕ ಸಂಸ್ಕೃರಣಾ ಬಾಂಬ್ ಅಲ್ಲ ಎಂದು ಹೇಳುವವರು ಇದ್ದಾರೆ. ಆದರೆ ಇವತ್ತು ಮೆಂಟಲ್ ಎಂದೋ, ಸೆಕ್ಯೂರಿಟಿಯವರ ಸಾಮರ್ತ್ಯ ಓರೆಗಚ್ಚಲು ಅಥವಾ ತನಗೆ ಕೆಲಸ ಕೊಡದವರಿಗೆ ಅವರ ಮುಖ ಕನ್ನಡಿಯಲ್ಲಿ ತೋರಿಸುತ್ತೇನೆ ಎಂದು ಆ ಮನುಷ್ಯ ಏನೋ ಮಾಡಿರಬಹುದು. ದಿ ವೆಡ್ನಸ್ ಡೇ ಎನ್ನುವ ಸಿನೆಮಾ ಬಂದಿತ್ತು. ಅದಕ್ಕೆ ಈ ಕಥೆ ಹೋಲಿಕೆಯಾಗುತ್ತದೆ. ಆದರೆ ಇವತ್ತು ಆ ಮನುಷ್ಯ ಉಗ್ರ ಅಲ್ಲ ಎಂದು ಹಾಗೆ ಬಿಟ್ಟರೆ ನಾಳೆ ನಿಜವಾದ ಭಯೋತ್ಪಾದಕನಿಗೆ ಒಂದು ಐಡಿಯಾ ಕೊಟ್ಟ ಹಾಗೆ ಆಗುತ್ತದೆ. ಅದರೊಂದಿಗೆ ಕುಮಾರಸ್ವಾಮಿಯವರು ಸುಮ್ಮನೆ ಹಗುರವಾಗಿ ಮಾತನಾಡುವುದು ಬಿಡಬೇಕು. ಏಕೆಂದರೆ ಇವತ್ತಲ್ಲ ನಾಳೆ ನೀವು ಮತ್ತೊಮ್ಮೆ ಮಂಗಳೂರಿಗೆ ಅದೇ ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕು. ಆಗ ನಿಮ್ಮ ಪಕ್ಕದಲ್ಲಿ ಇದೇ ವ್ಯಕ್ತಿ ಬಂದು ” ಹಾಯ್, ಕುಮಾರಣ್ಣ, ಬಾಂಬ್ ತಂದಿದ್ದೇನೆ. ಇಡ್ಲಾ ನಿಮ್ಮ ಕಾಲ ಕೆಳಗೆ” ಎಂದರೆ ಆಗ ನೀವು ಕರೆಯಬೇಕಾಗಿರುವುದು ಇದೇ ಮಂಗಳೂರು ಪೊಲೀಸರನ್ನ, ನೆನಪಿರಲಿ!!
Leave A Reply