ರಾಜಾಹುಲಿ ಎಸ್ ಡಿಪಿಐ ಬ್ಯಾನ್ ಮಾಡುವುದು ಹೌದಾ!!
ಎಸ್ ಡಿಪಿಐ ಮತ್ತು ಅದರ ಮಾತೃ ಸಂಘಟನೆ ಪಿಎಫ್ ಐಯನ್ನು ಬ್ಯಾನ್ ಮಾಡಬೇಕು ಎಂದು ಭಾರತೀಯ ಜನತಾ ಪಾರ್ಟಿ ವಿರೋಧ ಪಕ್ಷದಲ್ಲಿದ್ದಾಗ ಆಗ್ರಹಿಸುತ್ತಲೇ ಬಂದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಇದ್ದಾಗಲೂ ಬಿಜೆಪಿ ತನ್ನ ಧೋರಣೆಯನ್ನು ಗಟ್ಟಿಯಾಗಿ ಜನರ ಮುಂದೆ ಇಟ್ಟಿತ್ತು. ಅದೇನೆಂದರೆ ಮುಸ್ಲಿಂ ಮೂಲಭೂತ ಸಂಘಟನೆಗಳನ್ನು ನಿಷೇಧ ಮಾಡದೇ ಇದ್ದರೆ ಭಾರತದ ಅಖಂಡತೆಗೆ ಅಥವಾ ಸೌಹಾರ್ದತೆಗೆ ದಕ್ಕೆ ಬರುತ್ತದೆ ಎನ್ನುವುದು ಅದರ ಪ್ರಬಲ ವಾದವಾಗಿತ್ತು. ಎಲ್ಲೆಲ್ಲಿ ಹಿಂದೂಗಳ ಹತ್ಯೆಯಾಗಿತ್ತೋ ಅದರ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ನೆರಳು ಕಂಡಕೂಡಲೇ ಬಿಜೆಪಿಯ ಹೋರಾಟಕ್ಕೆ ಹೊಸ ಕಿಚ್ಚು ಬರುತ್ತಿತ್ತು. ಇದೆಲ್ಲದ ಪರಿಣಾಮ ರಾಜ್ಯದಲ್ಲಿ 28 ರಲ್ಲಿ 25 ಬಿಜೆಪಿ ಸಂಸದರು ಆಯ್ಕೆಯಾದರು. ರಾಜ್ಯದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಿತ್ತು. ಈಗ ಅಧಿಕಾರಕ್ಕೂ ಬಂದಾಗಿದೆ. ಈಗ ಬಿಜೆಪಿಯ ಮುಂದೆ ಈ ಇಸ್ಲಾಂ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸುವ ಸವಾಲಿದೆ. ಬಹುಶ: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯ ಘಟನೆಗಳನ್ನು ನಡೆಯದಿದ್ದರೆ ಜನರಿಗೆ ಅದು ನೆನಪು ಕೂಡ ಇರುತ್ತಿರಲಿಲ್ಲವೇನೋ. ಆದರೆ ರಾಜ್ಯದ ಇತಿಹಾಸದಲ್ಲಿಯೇ ಇಷ್ಟರ ತನಕ ಆದ ಘೋರ ಕೃತ್ಯ ಪುಲಕೇಶಿ ನಗರದಲ್ಲಿ ನಡೆದುಹೋಯಿತು. ದೂರದ ರಾಜ್ಯದಲ್ಲಿರುವ ಯಾರ್ಯಾದರೂ ಪತ್ರಿಕೆ, ಟಿವಿಯಲ್ಲಿ ಈ ವಿಷಯವನ್ನು ನೋಡಿದರೆ, ಓದಿದರೆ ಏನಂದುಕೊಳ್ಳುತ್ತಾರೋ? ಕರ್ನಾಟಕದಲ್ಲಿರುವ ಸರಕಾರ ತನ್ನ ರಾಜ್ಯದ ಶಾಸಕನೊಬ್ಬನಿಗೆ ರಕ್ಷಣೆ ಕೊಡಲು ಸಾಧ್ಯವಾಗಲಿಲ್ಲವಲ್ಲ? ಎಂತಹ ಸರಕಾರ ಅಲ್ಲಿದೆ? ಅಲ್ಲಿನ ಮುಖ್ಯಮಂತ್ರಿ ಯಾರು? ತಕ್ಷಣ ಟಿವಿಯವರು ಮುಖ್ಯಮಂತ್ರಿಯವರ ಮುಖ ತೋರಿಸುತ್ತಾರೆ? ಪಶ್ಚಿಮ ಬಂಗಾಳವೋ, ಮಹಾರಾಷ್ಟ್ರವೋ, ದೆಹಲಿಯೋ ಕುಳಿತ ನಾಗರಿಕ ಏನು ಯೋಚಿಸುತ್ತಾನೆ? ನೋಡಿದರೆ ಸಿಎಂ ತುಂಬಾ ವಯಸ್ಸಾದಂತೆ ಕಾಣುತ್ತಾರಲ್ಲ ಎಂದು ಅಂದುಕೊಳ್ಳಲ್ವಾ? ಅವರಿಗೆ ಬಹುಶ: ಕಾನೂನು ಸುವ್ಯವಸ್ಥೆಯ ನಿಯಂತ್ರಣ ಮಾಡಲು ಆಗುವುದಿಲ್ಲವೇನೋ ಎಂದು ಯೋಚನೆ ಮಾಡಲ್ವಾ? ಆ ಅಭಿಪ್ರಾಯ ಈಗಾಗಲೇ ಬಂದು ಆಗಿರಬಹುದು.
ಅದಕ್ಕೆ ಏನು ಮಾಡಬೇಕು. ಒಂದೋ ರಾಜಾ ಹುಲಿ ಎಂದು ತಮ್ಮ ಹಿಂಬಾಲಕರಿಂದ ಹೊಗಳಿಸಿಕೊಳ್ಳುವ ಬಿಎಸ್ ವೈಯವರು ತಾವು ಬೋನಿನೊಳಗೆ ಆರಾಮವಾಗಿ ಇರುವ ಬೇಟೆಯಾಡಲು ಮರೆತಿರುವ ಹುಲಿ ಅಲ್ಲ ಎಂದು ತೋರಿಸಬೇಕು ಅಥವಾ ತಮಗೆ ಮುಖ್ಯಮಂತ್ರಿ ಜವಾಬ್ದಾರಿ ಸಾಕಾಗಿದೆ. ಯುವ ಹುಲಿಗಳ ಕೈಯಲ್ಲಿ ಕೊಡೋಣ ಎಂದು ನಿರ್ಧರಿಸಿಬಿಡಬೇಕು.ಇನ್ನು ಕಾಂಗ್ರೆಸ್ ಕೂಡ ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ ಮಾತನಾಡುವುದು ನಿಲ್ಲಿಸಬೇಕು. ನಿಜಕ್ಕೂ ಹೆಚ್ಚು ಗೊಂದಲದಲ್ಲಿ ಇರುವುದು ಅವರೇ. ಯಾಕೆಂದರೆ ಬ್ಯಾನ್ ಮಾಡಬೇಕು ಎನ್ನುವ ನಿಲುವನ್ನು ತಳೆದರೆ ಮುಸ್ಲಿಮರು ಬೇಜಾರು ಮಾಡಬಹುದು ಎನ್ನುವ ಆತಂಕ. ಅದರಿಂದ ಇರುವ ಒಂದೇ ಗಟ್ಟಿ ವೋಟ್ ಬ್ಯಾಂಕನ್ನು ಕಳೆದುಕೊಳ್ಳಬಹುದು ಎನ್ನುವ ಭಯ ಇದ್ದೇ ಇದೆ. ಅದೇ ಬ್ಯಾನ್ ಮಾಡಬಾರದು ಎಂದು ಹೇಳಿಕೆ ಕೊಟ್ಟರೆ ಹಿಂದೂಗಳು ಪಕ್ಷದ ಮೇಲೆ ಭ್ರಮನಿರಸನಗೊಂಡಾರು ಎನ್ನುವ ದೂರಾದೃಷ್ಟಿಯೂ ಕಾಂಗ್ರೆಸ್ಸಿಗೆ ಇದೆ. ಸರಿಯಾಗಿ ನೋಡಿದರೆ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇಬೇಕು. ಯಾಕೆಂದರೆ ಎಸ್ ಡಿಪಿಐ ಬೆಳೆದಷ್ಟು ಅದರಿಂದ ನಷ್ಟ ಕಾಂಗ್ರೆಸ್ಸಿಗೆ ಹೊರತು ಬಿಜೆಪಿಗೆ ಅಲ್ಲ. ಇದು ಕಾಂಗ್ರೆಸ್ ಈ ಮಟ್ಟಿಗೆ ಬಿಜೆಪಿಯನ್ನು ಈ ವಿಷಯದಲ್ಲಿ ಬೆಂಬಲಿಸುವುದು ಸೂಕ್ತ ಸಮಯ. ಆದರೆ ಅವರು ಮಾಡುತ್ತಾರಾ ಎನ್ನುವುದು ಪ್ರಶ್ನೆ. ಯಾಕೆಂದರೆ ಸ್ವಲ್ಪ ಹಣ ಚೆಲ್ಲಿದರೆ ಇಲೆಕ್ಷನ್ ಸಮಯದಲ್ಲಿ ಎಸ್ ಡಿಪಿಐಯನ್ನು ಕಣದಿಂದ ಹಿಂದೆ ಸರಿಸಬಹುದು ಎನ್ನುವ ಧೈರ್ಯ ಕಾಂಗ್ರೆಸ್ಸಿಗೆ ಇದೆ. ಅದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸಾಬೀತಾಗಿದೆ. ಉಳ್ಳಾಲದಲ್ಲಿ ಮತ್ತು ಬಂಟ್ವಾಳದಲ್ಲಿ ಎಸ್ ಡಿಪಿಐ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ನಂತರ ಕೊನೆ ಕ್ಷಣದಲ್ಲಿ ಹಿಂದಕ್ಕೆ ಪಡೆದುಕೊಂಡಿತ್ತು. ಅದರಿಂದ ರಮಾನಾಥ ರೈಗಳಿಗೆ ಏನೂ ಪ್ರಯೋಜನ ಆಗಿಲ್ಲ. ಖಾದರ್ ಗೆ ಪ್ರಯೋಜನವಾಯಿತೋ ಅದು ಗೊತ್ತಾಗುವುದಿಲ್ಲ. ಆದ್ದರಿಂದ ಎಸ್ ಡಿಪಿಐ ಬಿಜೆಪಿಯ ಬಿ ಟೀಮೋ ಅಥವಾ ಕಾಂಗ್ರೆಸ್ಸಿನ ಬಿ ಟಿಮೋ ಎನ್ನುವುದು ರಾಜಕೀಯ ಪಂಡಿತರಿಗೂ ಇವತ್ತಿಗೆ ಯಕ್ಷ ಪ್ರಶ್ನೆ. ಆದರೆ ಹಿಂದೂ ಮತ ಬ್ಯಾಂಕ್ ಅನ್ನು ಸಾಲಿಡ್ ಮಾಡಲು ಬಿಜೆಪಿಯ ಮುಂದೆ ಇರುವ ಏಕೈಕ ಅಸ್ತ್ರ ಅದು ಎಸ್ ಡಿಪಿಐ ಬ್ಯಾನ್. ಆದರೆ ಆ ಘೋಷಣೆ ಮಾಡುವ ದಿನ ರಾಜ್ಯವನ್ನು ಮಿಲಿಟರಿಯ ಸುಪರ್ದಿಯಲ್ಲಿ ಯಡಿಯೂರಪ್ಪ ಕೊಡಬೇಕಾಗಬಹುದಾ? ಯಾಕೆಂದರೆ ರಾಜ್ಯದ ವಿವಿಧ ಭಾಗಗಳು ಡಿಜೆ ಹಳ್ಳಿ, ಕೆಜಿ ಹಳ್ಳಿ ಆಗಬಹುದು. ರಾಜಾಹುಲಿಗೆ ಬೋನಿಯ ಒಳಗೆ ಕುಳಿತು ಸಂಭಾಳಿಸುವುದು ಕಷ್ಟವಾಗಬಹುದು!
Leave A Reply