ಭ್ರಷ್ಟ ಅಧಿಕಾರಿಗಳನ್ನು ಓಡಿಸಿ ಎಂದು ಬಿಜೆಪಿ ಪ್ರತಿಭಟನೆ ಮಾಡಿ 3 ವರ್ಷ ತುಂಬುತ್ತಿದೆ, ಅವರು ಮರೆತಿರಬಹುದು, ನಾನಲ್ಲ!!
ನಾನು ನಿನ್ನೆ ಹೇಳಿದ್ದೆ. ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 25-30 ವರ್ಷಗಳಿಂದ ಬೇರು ಬಿಟ್ಟಿರುವ ಹೆಗ್ಗಣಗಳು ತಮ್ಮ ಸ್ವಅಭಿವೃದ್ಧಿ ಮಾಡುವಲ್ಲಿ ಬ್ಯುಸಿಯಾಗಿದ್ದಾವೆ ಬಿಟ್ಟರೆ ನಗರದ ಅಭಿವೃದ್ಧಿ ಅವರಿಗೆ ಏನೂ ಬಿದ್ದು ಹೋಗಿಲ್ಲ. ಇಲ್ಲದೇ ಹೋದರೆ ಸ್ಮಾರ್ಟ್ ಮೀಟರ್ ಮನೆಮನೆಗೆ ಅಳವಡಿಸಲು ಸರ್ವೇ ಮಾಡುತ್ತಿರುವ ಗುತ್ತಿಗೆದಾರರಿಗೆ ಪಾಲಿಕೆ ಕಡೆಯಿಂದ ಸೂಕ್ತ ರೀತಿಯಲ್ಲಿ ಸ್ಪಂದನೆ ಸಿಗಬೇಕಿತ್ತು, ಆದರೆ ಸಿಗುತ್ತಿಲ್ಲ ಎನ್ನುವುದು ಗೊತ್ತಾಗಿದೆ. ಯಾಕೆಂದರೆ ದಶಕಗಳಿಂದ ಅಕ್ರಮ ಸಂಪರ್ಕಗಳ ಮೂಲಕ ನೀರನ್ನು ತಮ್ಮ ಯಥೇಚ್ಚೆ ಬಳಸುತ್ತಿರುವ ದ್ರೋಹಿಗಳು ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಹಲವರಿದ್ದಾರೆ. ಈಗ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿದರೆ ಅಂತವರ ಬಂಡವಾಳ ಬೀದಿಗೆ ಬೀಳುತ್ತದೆ. ಅವರ ಹೆಸರು ಬಹಿರಂಗ ಆಗದ ರೀತಿಯಲ್ಲಿ ಪಾಲಿಕೆ ಅಧಿಕಾರಿಗಳು ಪ್ರಯತ್ನ ಮಾಡಿಯೇ ಮಾಡುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ತಮಗೆ ಇಷ್ಟಬಂದ ಹಾಗೆ ಅಂತವರು ನೀರು ಬಳಸಲಾಗುವುದಿಲ್ಲವಲ್ಲ. ಆಗ ಅಂತವರು ಈ ಅಧಿಕಾರಿಗಳಿಗೆ ಕಪ್ಪ ಕೊಡುವುದು ನಿಲ್ಲಿಸಿಬಿಡುತ್ತಾರೆ. ಇದರಿಂದ ಪಾಲಿಕೆಯ ಅಧಿಕಾರಿಗಳ ಮೋಜುಮಸ್ತಿಗೆ ಹಣ ಕಡಿಮೆಯಗುತ್ತದೆ. ಕೇವಲ ಸಂಬಳ ನಂಬಿದರೆ ಜೀವನ ಚೆನ್ನಾಗಿ ಹೋಗಬಹುದು. ಆದರೆ ಎಕ್ಸಟ್ರಾ ಬಂಗ್ಲೆ, ಐಷಾರಾಮಿ ಕಾರು ಮಾಡಬೇಕಾದರೆ ಇಂತಹ ಭ್ರಷ್ಟಾಚಾರ ಅವರಿಗೆ ಬೇಕೆ ಬೇಕು.
ಆದರೆ ಸ್ಮಾರ್ಟ್ ಮೀಟರ್ ಹಾಕಿದರೆ ಪಾಲಿಕೆ ಆದಾಯ ಹೆಚ್ಚಾಗಬಹುದು. ಅಧಿಕಾರಿಗಳು ಮಾತ್ರ ನೀರು ಕುಡಿಯುವ ಪರಿಸ್ಥಿತಿ ಬರಬಹುದು. ಇನ್ನು ಸ್ಮಾರ್ಟ್ ಮೀಟರ್ ಬಂದರೆ ಟ್ಯಾಂಕರ್ ನಲ್ಲಿ ಗೋಲ್ ಮಾಲ್ ಬಹುತೇಕ ನಿಂತುಹೋಗುತ್ತದೆ. ಈಗ ಮಳೆಗಾಲದಲ್ಲಿಯೂ ಟ್ಯಾಂಕರ್ ಓಡಿದಂತೆ ನಂತರ ಓಡಲಾಗುವುದಿಲ್ಲ. ಅನಧಿಕೃತ ಸಂಪರ್ಕ ಕಡಿಮೆಯಾದರೆ ಪಾಲಿಕೆ ವ್ಯಾಪ್ತಿಯಲ್ಲಿ ನಿಖರವಾಗಿ ಎಷ್ಟು ಸಂಪರ್ಕ ಇದೆ ಎಂದು ಪಾಲಿಕೆ ಕಚೇರಿಯಲ್ಲಿ ಲೆಕ್ಕ ಸಿಗುತ್ತದೆ. ಈಗ ಅದನ್ನು ಯಾವ ಅತೀ ಬುದ್ಧಿವಂತನೂ ಹೇಳಲಾಗುವುದಿಲ್ಲ. ಫ್ಲೆಕ್ಸ್ ಹಾಕಿ ಪ್ರಚಾರ ಪಡೆದುಕೊಳ್ಳುವುದೇ ದೊಡ್ಡ ಕೆಲಸ ಮತ್ತು ಅಧಿಕಾರಿಗಳಿಗೆ ಬೇಸರ ಆಗುತ್ತದೆ ಎಂದು ಟೆಕ್ನಿಕಲ್ ಜ್ಞಾನ ಇಲ್ಲವೆನ್ನುವಂತೆ ವರ್ತಿಸುವುದೇ ಈಗ ಕೆಲಸ ಆಗಿ ಹೋಗಬಾರದು. ಹಾಗಂತ ಸ್ಮಾರ್ಟ್ ಮೀಟರ್ ಬಂದ ಕೂಡಲೇ ಭ್ರಷ್ಟ ಅಧಿಕಾರಿಗಳಿಗೆ ಅಕ್ರಮ ಆದಾಯ ಕಡಿಮೆ ಆಗಿ ದೊಡ್ಡ ಬದಲಾವಣೆ ಆಗುತ್ತೆ ಎಂದು ಅಂದುಕೊಳ್ಳಬೇಡಿ. ಅವರಿಗೆ ಒಂದು ಮಾರ್ಗ ಬಂದ್ ಅದರೆ ಇನ್ನೊಂದು ತೆರೆಯುತ್ತದೆ. ಆದರೆ ನಾವು ಅಧಿಕಾರಕ್ಕೆ ಬಂದ ಕೂಡಲೇ ದಶಕಗಳಿಂದ ಒಂದೇ ಕಡೆ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ಓಡಿಸುತ್ತೇವೆ. ನಿವೃತ್ತರಾಗಿಯೂ ಇಲ್ಲಿಯೇ ಇರುವವರನ್ನು ಓಡಿಸುತ್ತೇವೆ, ಭ್ರಷ್ಟರನ್ನು ಓಡಿಸುತ್ತೇವೆ ಎಂದು ಮಾಧ್ಯಮಗಳಲ್ಲಿ ಪುಖಾಂನುಪುಂಖ ಹೇಳಿಕೆ ನೀಡುತ್ತಿದ್ದವರು, ಪಾಲಿಕೆ ಹೊರಗಡೆ ಟಿವಿ ಮಾಧ್ಯಮಗಳಿಗೆ ಬೈಟ್ ಕೊಟ್ಟವರು, ಪ್ರತಿಭಟನೆ ಮಾಡುತ್ತಿದ್ದವರು ಈಗ ಎಲ್ಲಿದ್ದಾರೆ? 25-30 ವರ್ಷಗಳಿಂದ ಇಲ್ಲಿಯೇ ಇರುವವರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಇಲ್ಲಿಯೇ ಇದ್ದರು. ಈಗ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಇಲ್ಲಿಯೇ ಇದ್ದಾರೆ. ಕೇವಲ ಪಕ್ಷ ಬದಲಾಗಿದೆ. ಶಾಸಕರು ಬದಲಾಗಿದ್ದಾರೆ ಬಿಟ್ಟರೆ ಅದೇ ಅಧಿಕಾರಿಗಳನ್ನು ನಾವು ಸಹಿಸಬೇಕಾಗಿದೆ. ಆ ಅಧಿಕಾರಿಗಳ ಏಜೆಂಟರಂತೆ ಇರುವವರು ಈಗಲೂ ಪಾಲಿಕೆಯಲ್ಲಿ ಸಕ್ರಿಯವಾಗಿದ್ದಾರೆ. ಇದರಿಂದ ಡಿಲೀಂಗ್ ಗಳು ಯಥಾವತ್ತಾಗಿ ನಡೆಯುತ್ತಿವೆ. ಕಳ್ಳರು ಇಲ್ಲಿಯೇ ಇದ್ದಾರೆ. ಹಿಡಿಯುವ ಕೆಲಸ ಆಗುತ್ತಿಲ್ಲ.
ಇನ್ನು ಕೊನೆಯದಾಗಿ ಅಮೃತ ಯೋಜನೆ. ಅದು ಕೂಡ ಕೇಂದ್ರ ಸರಕಾರದ ಯೋಜನೆ. ಅದಕ್ಕೂ ಕೋಟಿಗಟ್ಟಲೆ ಹಣ ಬಿಡುಗಡೆಯಾಗುತ್ತದೆ. ಹಳೆಯ ಒಳಚರಂಡಿಗಳ ಮಿಸ್ ಲಿಂಕಿಂಗ್ ಗಳನ್ನು ಜೋಡಿಸುವುದಕ್ಕೆ ಈ ಹಣವನ್ನು ಬಳಸಬಹುದು. ಆದರೆ ಈಗ ನೀರಿನ ಕಾಮಗಾರಿಗೆಂದು ಎಡಿಬಿ-2, ಅಮೃತ ಯೋಜನೆ, ಪಾಲಿಕೆ ಹಣ ಎಲ್ಲವೂ ಯಥೇಚ್ಚವಾಗಿ ಹರಿಯುವ ಸಾಧ್ಯತೆ ಇದೆ. ಅದನ್ನು ನೋಡಬೇಕಾದವರು ಜಿಲ್ಲಾಧಿಕಾರಿಯವರು. ಅವರು ಒಂದು ಉತ್ತಮ ಕೋ-ಆರ್ಡಿನೇಶನ್ ತರದೇ ಹೋದರೆ ಹಾಕಿದ ಕಡೆಗೆನೆ ಹಣ ಹೋಗುವ ಚಾನ್ಸ್ ಇದೆ. ಅದರಿಂದ ನಮ್ಮ ತೆರಿಗೆಯ ಹಣ ಪೋಲಾಗುತ್ತದೆ. ಕೇಳಿದರೆ ಟೆಕ್ನಿಕಲ್ ನಾಲೆಡ್ಜ್ ಇಲ್ಲ ಎಂದು ಹೇಳಿದರೆ ಮುಗಿಯಿತಲ್ವಾ!!
Leave A Reply